ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಶಾಲೆಗಳ ಅಭಿವೃದ್ಧಿಗೆ ಸಹಕಾರ ಅಗತ್ಯ

Srinivasa Murthy VN
Updated On : 11 Feb 2014, 12:11 pm

ಕೆಜಿಎಫ್: ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಇಲಾಖೆಯೊಂದಿಗೆ ಸಮುದಾಯದ ಸಹಕಾರ ಅಗತ್ಯ ಎಂದು ಶಾಸಕಿ ವೈ. ರಾಮಕ್ಕ ತಿಳಿಸಿದರು.
ಸಮೀಪದ ಪಾರಂಡಹಳ್ಳಿ ಸರ್ಕಾರಿ ಹಿರಿಯ ಪ್ರಾಥಾಮಿಕ ಶಾಲೆಯಲ್ಲಿ 8 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿದ ಎರಡು ಶಾಲಾ ಕೊಠಡಿಗಳನ್ನು ಉದ್ಘಾಟಿಸಿ ಸೈಕಲ್ ವಿತರಿಸಿ ಮಾತನಾಡಿ, ಶಿಕ್ಷಣ ಪ್ರಸ್ತುತ ಸಮಾಜದಲ್ಲಿ ಬದಲಾವಣೆಗೆ ಹರಿಕಾರವಾಗಿದೆ. ಈ ಹಿನ್ನಲೆಯಲ್ಲಿ ಪೋಷಕರು ಸರ್ಕಾರದಿಂದ ನೀಡುವ ವಿವಿಧ ಸೌಲತ್ತುಗಳನ್ನು ಸದ್ಬಳಕೆ ಮಾಡಿಕೊಳ್ಳುವುದರೊಂದಿಗೆ ವಿದ್ಯಾರ್ಥಿಗಳ ಮುಂದಿನ ಉತ್ತಮ ಜೀವನವನ್ನು ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು. ಮಾಜಿ ಶಾಸಕ ವೈ. ಸಂಪಂಗಿ, ತಾಪಂ ಸದಸ್ಯ ರಮೇಶ್, ಗ್ರಾಪಂ ಅಧ್ಯಕ್ಷೆ ಭಾರತಮ್ಮ, ಉಪಾಧ್ಯಕ್ಷ ಮಹೇಶ್, ಸುಬ್ಬಾರೆಡ್ಡಿ, ಗಂಗಾ ವೆಂಕಟೇಶ್‌ಮೂರ್ತಿ, ರಾಮಚಂದ್ರ, ಕಲೈವಾಣಿ, ಶ್ರೀನಿವಾಸ್, ಲಕ್ಷ್ಮಮ್ಮ, ಕಾಂತಮ್ಮ ಹಾಗೂ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಆರ್. ಶ್ರೀನಿವಾಸ್ ಹಾಜರಿದ್ದರು.

ರೇಣುಕಾ ಯಲ್ಲಮ್ಮದೇವಿ ಜಾತ್ರೆ
ಟೇಕಲ್: ಬಂಡೂರು ಅಗ್ರಹಾರ ಗ್ರಾಮದಲ್ಲಿ ಶ್ರೀಮಾತಾ ರೇಣುಕಾ ಯಲ್ಲಮ್ಮದೇವಿಯ 16ನೇ ವರ್ಷದ ಜಾತ್ರೆ ಮತ್ತು ಕರಗ ಮಹೋತ್ಸವ ನಡೆಯಲಿದೆ. ಫೆ.14 ರಂದು ಬೆಳಿಗ್ಗೆ 5 ಗಂಟೆಗೆ ಅಮ್ಮನವರಿಗೆ ವಿಶೇಷ ಅಭಿಷೇಕ ಹೂವಿನ ಅಲಂಕಾರ, ಸಂಜೆ 4 ಗಂಟೆಗೆ ಯಲ್ಲಪ್ಪ ಮತ್ತು ಸಂಗಡಿಗರಿಂದ ವಿಶೇಷ ತಮಟೆ ವಾದ್ಯ, ಕೋಲಾರದ ಗುರು ಮೆಲೋಡಿಸ್‌ರಿಂದ ಆರ್ಕೆಸ್ಟ್ರಾ ಹಾಗೂ ಅದೇ ದಿನ ರಾತ್ರಿ 8.30ಕ್ಕೆ ಗೋಪಸಂದ್ರದ ಬಿ.ಎಂ. ನಾರಾಯಣಪ್ಪನವರ ಮಂಜುನಾಥ ಡ್ರಾಮಾ ಸೀನರಿಯಲ್ಲಿ ನಾಗೋಂಡನಹಳ್ಳಿ ಲಕ್ಷ್ಮಣ್‌ರವರ ನಿರ್ದೇಶನದಲ್ಲಿ ದಾನವೀರಶೂರಕರ್ಣ ಕನ್ನಡ ಪೌರಾಣಿಕ ನಾಟಕ ಏರ್ಪಡಿಸಲಾಗಿದೆ. ಶನಿವಾರ 15ರ ಬೆಳಿಗ್ಗೆ 4 ಗಂಟೆಗೆ ಆಂಧ್ರ ಪ್ರದೇಶದ ಕರಗದ ಪೂಜಾರಿ ಕೋನೆರೂಕುಪ್ಪ ಸತೀಶ್‌ರಿಂದ ವಿಶೇಷ ಕರಗ ಮಹೋತ್ಸವ, 9 ಗಂಟೆಗೆ ಅಗ್ನಿಕುಂಡ, ದೀಪಾರಾಧನೆ ಹಾಗೂ 11 ಗಂಟೆಗೆ ಬಂಡೂರು ಅಗ್ರಹಾರದ ಸುತ್ತಮುತ್ತಲ ಗ್ರಾಮಸ್ಥರಿಂದ ವಸಂತೋತ್ಸವವನ್ನು ಏರ್ಪಡಿಸಲಾಗಿದೆ ಎಂದು ದೇವಾಲಯದ ಪ್ರಧಾನ ಅರ್ಚಕರಾಗಿ ವೀರಕಪುತ್ರದ ವಿ.ಆರ್. ಮಂಜುನಾಥಶಾಸ್ತ್ರಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಾರ್ಯಕ್ರಮಕ್ಕೆ ರಾಜ್ಯ ರಸ್ತೆ ಸಾರಿಗೆ ಬಸ್ ಉಚಿತ ವ್ಯವಸ್ಥೆ ಇದ್ದು ಭಕ್ತಾಧಿಗಳು ಇದರ ಉಪಯೋಗವನ್ನು ಪಡೆದುಕೊಳ್ಳಬೇಕೆಂದು ತಿಳಿಸಿದ್ದಾರೆ.

ಗುಂಪು ಘರ್ಷಣೆ; 10 ಮಂದಿಗೆ ಗಾಯ
ಚಿಂತಾಮಣಿ: ಜಮೀನು ಭೂವಿವಾದ ಹಿನ್ನೆಲೆಯಲ್ಲಿ 2 ಗುಂಪುಗಳ ನಡುವೆ ಘರ್ಷಣೆ ನಡೆದ ಪರಿಣಾಮ ಹಲವರು ತೀವ್ರ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ತಾಲೂಕಿನ ಮಿಟ್ಟಹಳ್ಳಿ ಗ್ರಾಮದ ಮಂಜುನಾಥ ಮತ್ತು ಮಲ್ಲಿಕಾರ್ಜುನ ಎಂಬವರಿಗೆ ಜಮೀನು ಭೂವಿವಾದ ಇದ್ದು, ಭಾನುವಾರ ರಾತ್ರಿ 2 ಗುಂಪುಗಳ ನಡುವೆ ದೊಣ್ಣೆ ಮತ್ತು ಕಲ್ಲುಗಳಿಂದ ಹೊಡೆದಾಟ ನಡೆದ ಪರಿಣಾಮ ಆದಿಲಕ್ಷ್ಮಮ್ಮ, ಮುನಿನಾರಾಯಣಪ್ಪ, ಚಿಕ್ಕಮುನಿಸ್ವಾಮಿ, ದೊಡ್ಡ ಮೇಲೂರಪ್ಪ, ಚಿಕ್ಕಮುನಿಸ್ವಾಮಿ, ಮಂಜುನಾಥ ಸೇರಿದಂತೆ 10 ಕ್ಕೂ ಹೆಚ್ಚು ಮಂದಿ ತೀವ್ರ ಗಾಯಗೊಂಡು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘರ್ಷಣೆಯಿಂದ ಗ್ರಾಮದಲ್ಲಿ ಬೂದಿ ಮುಚ್ಚಿದ ಕೆಂಡದ ಪರಿಸ್ಥಿತಿ ನಿರ್ಮಾಣಗೊಂಡಿರುವುದರಿಂದ ಕೆಂಚಾರ್ಲಹಳ್ಳಿ ಠಾಣೆಯ ಪೊಲೀಸರು ಸೂಕ್ತ ಬಂದೋಬಸ್ತ್ ಕಲ್ಪಿಸಿದ್ದಾರೆ. ಘಟನೆಗೆ ಸಂಬಂಧಿಸಿ ಪೊಲೀಸರು ಪರ-ವಿರೋಧ ದೂರು ದಾಖಲಿಸಿಕೊಂಡು ವಿಚಾರಣೆ ಮುಂದುವರೆಸಿದ್ದಾರೆ.

ಯಶಸ್ವಿ ಹನುಮಾನ ಚಾಲೀಸ್ ಗೋಷ್ಠಿ
ಗೌರಿಬಿದನೂರು: ಮಂಚೇನಹಳ್ಳಿಯಲ್ಲಿ ಜಿಪಿಎನ್ ಕುಟುಂಬದ ವತಿಂದ ಹಮ್ಮಿಕೊಂಡಿದ್ದ 48 ದಿನಗಳ ವಿಶೇಷ ಹನುಮಾನ ಚಾಲೀಸ, ಶ್ರೀ ವಾಸವಿ ಆಂಡಾಳ್ ಸದ್‌ಗೋಷ್ಠಿ ಯಶಸ್ವಿಯಾಗಿ ನಡೆಯಿತು. ಮಹಿಳಾ ಮಂಡಳಿ ಗಾಯಿತ್ರಮ್ಮ ಮುಖಂಡತ್ವದಲ್ಲಿ 48 ದಿನಗಳ ಮಂಡಲ ಪೂಜೆ, ಏಕದಶ ಹನುಮಾನ್ ಚಾಲೀಸ್ ಮಂತ್ರ ಗೋಷ್ಠಿ ಮಂಡಳಿ ವತಯಿಂದ ನೆರವೇರಿತು. ಕಾರ್ಯಕ್ರಮವನ್ನು ಜಿಪಿಎನ್ ಕುಂಟುಂಬ ಹಾಗೂ ಜಿ.ಪಿ. ಶ್ರೀನಿವಾಸ್ ಮತ್ತು ಸುಮಿತ್ರಮ್ಮ ಅವರು ಆಯೋಜಿಸಿದ್ದು, ಗೋಧಾ ದೇವಿಗೆ 30 ದಿನಗಳ ಕಾಲ ತಿರುಪ್ಪಾವೈ ಸಂಪಠನೆ,  ಮಂತ್ರಗೋಷ್ಠಿ ನಡೆಯಿತು. ದೇವಿಗೆ ಹಾಗೂ ಎಲೆ ಅಲಂಕಾರ, ಪುಷ್ಟಲಂಕಾರ, ಆಭರಣಾಲಂಕಾರ, ವಸ್ತ್ರಾಲಂಕಾರ ಮಾಡಲಾಗಿದ್ದು  ಗ್ರಾಮದ ಮಹಳೆಯರಿಂದ  ವಿಶೇಷ ಪೂಜೆ ನೆರವೇರಿತು.

ಗುರುತಿನ ಚೀಟಿ ವಿತರಣೆ
ಗೌರಿಬಿದನೂರು: ಚಿಕ್ಕಬಳ್ಳಾಪುರ ಜಿಲ್ಲಾ ವಿಕಲಚೇತನ ಮತ್ತು ಹಿರಿಯನಾಗರಿಕರ ಸಬಲೀಕರಣ ಇಲಾಖೆ ಮತ್ತು ಜ್ಞಾನೋದಯ ವಿದ್ಯಾ ಸಂಸ್ಥೆ, ಅಲಕಾಪುರ ಸಂಯುಕ್ತಾಶ್ರಯದಲ್ಲಿ ಹಿರಿಯ ನಾಗರಿಕರಿಗೆ ಗುರುತಿನ ಚೀಟಿ ನೀಡಲಾಗುವುದು. ಇದಕ್ಕೆ ಅಗತ್ಯವಿರುವ ದಾಖಲೆಗಳು, ಅರ್ಜಿ ಶುಲ್ಕ ನೀಡಿ ಗುರುತಿನ ಚೀಟಿ ಪಡೆಯಬಹುದು. ಪದ್ಮಾವತಿ ಜೆರಾಕ್ಸ್, ಹೋಟೆಲ್ ಕೃಷ್ಣ ಭವನ್ ಎದುರು, ನಾಗಯ್ಯ ರೆಡ್ಡಿ ವೃತ್ತ, ಗೌರಿಬಿದನೂರು.

ಮೊ-ಜಿಪಂ ಕೆಡಿಪಿ ಸಭೆ
ಕೋಲಾರ: ನಗರದ ಜಿಪಂ ಸಭಾಂಗಣದಲ್ಲಿ ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಜಿಪಂ ಅಧ್ಯಕ್ಷ ತೂಪಲ್ಲಿ ನಾರಾಯಣಸ್ವಾಮಿ ಅಧ್ಯಕ್ಷತೆಯಲ್ಲಿ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳಡಿ (ಕೆ.ಡಿ.ಪಿ) ಜನವರಿ-2014ರ ಮಾಹೆಯ ಅಂತ್ಯದವರೆಗೆ ಜಿಲ್ಲೆಯ ವಿವಿಧ ಇಲಾಖೆಗಳು ಸಾಧಿಸಿರುವ ಪ್ರಗತಿ ಪರಿಶೀಲನಾ ಸಭೆಯನ್ನು ಕರೆಯಲಾಗಿದೆ.96320 66968 ಸಂಪರ್ಕಿಸಿ.

ರಕ್ತ ಚಂದನ ವಶ
ಕೋಲಾರ: ಶ್ರೀನಿವಾಸಪುರ ತಾಲೂಕಿನ ರಾಯಲ್‌ಪಾಡು ಠಾಣೆ ವ್ಯಾಪ್ತಿಯಲ್ಲಿ ಪಿಎಸ್‌ಐ ಶ್ರೀಕೃಷ್ಣರವರು ತಮಗೆ ಸಿಕ್ಕಿ ಖಚಿತ ಮಾಹಿತಿ ಆಧರಿಸಿ ಮದನಪಲ್ಲಿ ಕಡೆಯಿಂದ ಬಂದ ಟೆಂಪೋ ಟ್ರಾಕ್ಸ್ ಶೋಧಿಸಿದಾಗ ಅದರಲ್ಲಿ 9 ರಕ್ತ ಚಂದನದ ಮರಗಳು ಪತ್ತೆಯಾಗಿದೆ. ಕರ್ನಾಟಕ ಅರಣ್ಯ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ರಕ್ತ ಚಂದನವನ್ನು ಅರಣ್ಯ ಇಲಾಖೆಯ ಅಧಿಕಾರಿಗಳ ವಶಕ್ಕೆ ನೀಡಿದ್ದಾರೆ. ಆರೋಪಿಗಳು ಪರಾರಿಯಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement