ಶಾಸಕರ ಅಧ್ಯಕ್ಷತೆಯಲ್ಲಿ ಟಾಸ್ಕ್‌ಫೋರ್ಸ್ ಸಭೆ
ಕೋಲಾರ: ರಾಜ್ಯ ಸರ್ಕಾರ ಯೋಜನೇತರ ಲೆಕ್ಕ ಶೀರ್ಷಿಕೆ-3054 (ನಿರ್ವಹಣಾ ಅನುದಾನ)ಅಡಿ 2013-14ನೇ ಸಾಲಿನ ಆರ್ಥಿಕ ವರ್ಷದಲ್ಲಿ ಗ್ರಾಮೀಣ ರಸ್ತೆಗಳ ನಿರ್ವಹಣೆ, ದುರಸ್ತಿ ಹಾಗೂ ನವೀಕರಣಕ್ಕಾಗಿ ಕೋಲಾರ ವಿಧಾನಸಭಾ ಕ್ಷೇತ್ರಕ್ಕೆ 35 ಲಕ್ಷ ರು.ಗಳನ್ನು ಒದಗಿಸಿದೆ.
ಈ ಹಣವನ್ನು ಜಿಪಂ ಕ್ಷೇತ್ರಗಳ ವ್ಯಾಪ್ತಿಯ ರಸ್ತೆಗಳ ಅಭಿವೃದ್ಧಿಗೆ ಹಂಚಿಕೆ ಮಾಡುವ ಸಂಬಂಧ ಕ್ಷೇತ್ರದ ಶಾಸಕರ ಅಧ್ಯಕ್ಷತೆಯಲ್ಲಿ ಕಾರ್ಯಪಡೆಯನ್ನು(ಟಾಸ್ಕ್‌ಫೋರ್ಸ್) ರಚನೆ ಮಾಡಲಾಗಿದ್ದು ಕೋಲಾರ ಕ್ಷೇತ್ರದ ಶಾಸಕ ವರ್ತೂರ್ ಆರ್. ಪ್ರಕಾಶ್ ಅಧ್ಯಕ್ಷತೆಯಲ್ಲಿ ಸೋಮವಾರ ತಾಪಂ ಸಭಾಂಗಣದಲ್ಲಿ ಸಭೆ ನಡೆಸಿ ಅನುದಾನ ಹಂಚಿಕೆಗೆ ಅನುಮೋದನೆ ಪಡೆಯಲಾಯಿತು.
ಯೋಜನೇತರ ಲೆಕ್ಕಶೀರ್ಷಿಕೆ-3054ರ ಅಡಿಯಲ್ಲಿ ಸರ್ಕಾರ ರಾಜ್ಯದ ಎಲ್ಲಾ ತಾಲೂಕುಗಳಿಗೆ ಒಟ್ಟು 11.42 ಕೋಟಿ ರು.ಅನುದಾನ ಒದಗಿಸಿದೆ. ಈ ಅನುದಾನವನ್ನು ರಸ್ತೆ ಉದ್ದಳತೆ ಆಧಾರದ ಮೇಲೆ ಡಾಂಬರು ರಸ್ತೆ, ಜಲ್ಲಿ ರಸ್ತೆ ಮತ್ತು ಮಣ್ಣಿನ ಮೇಲ್ಮೈ ಹೊಂದಿರುವ ಗ್ರಾಮೀಮ ರಸ್ತೆಗಳ ಅಭಿವೃದ್ಧಿಗೆ ಬಳಕೆ ಮಾಡಲು ಸರ್ಕಾರ ಸೂಚಿಸಿದೆ.
ಕೋಲಾರ ಜಿಲ್ಲೆಗೆ ಈ ಯೋಜನೆಯಡಿ 58 ಲಕ್ಷ ರು. ಬಿಡುಗಡೆ ಆಗಿದ್ದು, ಕೋಲಾರ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ ವಕ್ಕಲೇರಿ, ನರಸಾಪುರ, ವೇಮಗಲ್ ಹೋಬಳಿ ವ್ಯಾಪ್ತಿಯ ಹಳ್ಳಿಗಳು, ಕೋಲಾರ ತಾಲೂಕಿನ ಸುಗಟೂರು ಮತ್ತು ಹೋಳೂರು ವ್ಯಾಪ್ತಿಯ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ ಹಳ್ಳಿಗಳು ಮತ್ತು ವಡಗೂರು, ಹುತ್ತೂರು ಹೋಬಳಿಗೆ ಸೇರಿದ ಬಂಗಾರಪೇಟೆ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗಾಗಿ ಅನುದಾನ ಹಂಚಿಕೆ ಮಾಡಲಾಗಿದೆ.
ಅನುದಾನ ಹಂಚಿಕೆಯಲ್ಲಿ ಕೋಲಾರ ತಾಲೂಕಿಗೆ 35 ಲಕ್ಷ, ಶ್ರೀನಿವಾಸಪುರ ಕ್ಷೇತ್ರಕ್ಕೆ 15 ಹಾಗೂ ಬಂಗಾರಪೇಟೆಗೆ 8 ಲಕ್ಷ ರು. ಒದಗಿಸಲಾಗಿದೆ. ವಿಧಾನಸಭಾ ಕ್ಷೇತ್ರಕ್ಕೆ ಅನುದಾನ ಹಂಚಿಕೆ ಆಗಿದ್ದರೂ ಕೋಲಾರ ತಾಲೂಕಿನ 7 ಹೋಬಳಿಗೆ ಯೋಜನೇತರ ಲೆಕ್ಕ ಶೀರ್ಷಿಕೆಯ ಅನುದಾನ ವರ್ಗೀಕರಣವದಂತಾಗಿದೆ. ಅನುದಾನವನ್ನು ಸಭೆಯಲ್ಲಿ ಭಾಗವಹಿಸಿದ್ದ ಜಿಪಂ ಸದಸ್ಯರಾದ ಚೌಡೇಶ್ವರಿ, ಮಂಗಮ್ಮ ಮುನಿಸ್ವಾಮಿ,ಅಮರನಾಥ್, ಆಶಾ ಸೂಚಿಸಿದ ರಸ್ತೆಗಳ ಅಭಿವೃದ್ಧಿಗೆ ಬಳಕೆ ಮಾಡಲು ತೀರ್ಮಾನಿಸಲಾಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಸಕ ವರ್ತೂರ್ ಆರ್.ಪ್ರಕಾಶ್ ಸದಸ್ಯರು ಸೂಚಿಸುವ ಕಾಮಗಾರಿಗಳಿಗೆ ಹಣ ನೀಡುವಂತೆ ಸೂಚಿಸಿ ಸಭೆಯಿಂದ ನಿರ್ಗಮಿಸಿದರು.
ಎರಡನೇ ಅವಧಿಗೆ ಶಾಸಕರಾದ ಮೇಲೆ ಕೋಲಾರ ತಾಪಂಗೆ ಎರಡನೇ ಬಾರಿಗೆ ಭೇಟಿ ನೀಡಿದ್ದ ಶಾಸಕರು ಸರ್ಕಾರ ಕೇವಲ 58 ಲಕ್ಷ ರು. ನೀಡಿರುವುದರಿಂದ ಟಾಸ್ಕ್‌ಫೋರ್ಸ್ ಅಧ್ಯಕ್ಷನಾಗಿ ನಾನು ನಾಮಕಾವಸ್ತೆಗಾಗಿ ಸಭೆಯನ್ನು ನಡೆಸಬೇಕಾಗಿದೆ. ಜಿಪಂ ಮತ್ತು ತಾಪಂ ವ್ಯಾಪ್ತಿಯಲ್ಲಿ ಅತ್ಯವಶ್ಯಕವಾಗಿ ಆಗಬೇಕಾಗಿರುವ ರಸ್ತೆಗಳ ಅಭಿವೃದ್ಧಿಗೆ ಹಣ ಬಳಕೆ ಮಾಡಿ, ಮತ್ತಷ್ಟು ಅನುದಾನ ಬಂದಾಗ ಉಳಿದ ಕಡೆಗೆ ವಿನಿಯೋಗ ಮಾಡೋಣ ಎಂದು ಸಲಹೆ ನೀಡಿದರು.
ಜಿಪಂ ಸದಸ್ಯೆ ಮಂಗಮ್ಮ ಮುನಿಸ್ವಾಮಿ ಅವರು ತಮ್ಮ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡುವಂತೆ ಕೇಳಿದಾಗ, ಕೋಲಾರ ತಾಲೂಕು ವ್ಯಾಪ್ತಿ ಅದರಲ್ಲೂ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ ಜಿಪಂಗಳ ಗ್ರಾಮೀಣ ರಸ್ತೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ. ತಾವು ಹೆಚ್ಚಿನ ಅನುದಾನ ಬೇಕಾದರೆ ಶ್ರೀನಿವಾಸಪುರ ತಾಲೂಕಿಗೆ ನೀಡಲಾಗಿರುವ ಅನುದಾನದಲ್ಲಿ ಕೇಳಬಹುದೆಂದು ತಿಳಿಸಿದರು.
ಸಭೆಯಲ್ಲಿ ಕೋಲಾರ ಮುಖ್ಯರಸ್ತೆಯಿಂದ ವಕ್ಕಲೇರಿ ಮಾರ್ಗವಾಗಿ ಶ್ರೀ ರಾಮಕೃಷ್ಣ ವಿದ್ಯಾಲಯಕ್ಕೆ ಹೋಗುವ ರಸ್ತೆಯ ಅಭಿವೃದ್ಧಿಗೆ 5 ಲಕ್ಷ ರು., ಬೀಚಗೂಂಡನಹಳ್ಳಿಯಿಂದ ಚಿನ್ನಸಂದ್ರದ ರಸ್ತೆಗೆ 5 ಲಕ್ಷ ರು., ಉರಟಿ ಆಗ್ರಹಾರದಿಂದ ಚಿನ್ನಸಂದ್ರ ರಸ್ತೆಗೆ 5 ಲಕ್ಷ ರು., ಕ್ಯಾಲನೂರು ರಸ್ತೆಯಿಂದ ಚನ್ನಸಂದ್ರ ರಸ್ತೆಗೆ 5 ಲಕ್ಷ ರು., ದಿನ್ನೆಹೊಸಹಳ್ಳಿಯಲ್ಲಿ ಬಾಕಿ ಉಳಿದಿರುವ ಕಾಮಗಾರಿಗೆ 5 ಲಕ್ಷ, ಖಾಜಿಕಲ್ಲಹಳ್ಳಿಯಿಂದ ಅಪ್ಪಸಂದ್ರ ರಸ್ತೆಗೆ 5 ಲಕ್ಷ, ತ್ಯಾಮನಹಳ್ಳಿ ರಸ್ತೆಯಿಂದ ಹಾಲಹಳ್ಳಿಗೆ 3 ಲಕ್ಷ ಹಾಗೂ ಅಮ್ಮನಲ್ಲೂರು ರಸ್ತೆಯಿಂದ ಪಶು ವೈದ್ಯ ಆಸ್ಪತ್ರೆಯ ರಸ್ತೆಗೆ 2 ಲಕ್ಷ ರು.ನೀಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಇನ್ನುಳಿದಂತೆ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ ಕೋಲಾರ ತಾಲೂಕಿನ ಹಳ್ಳಿಗಳ ರಸ್ತೆ ಅಭಿವೃದ್ಧಿಗೆ 15 ಲಕ್ಷ ಹಾಗೂ ಇದೇ ರೀತಿ ಬಂಗಾರಪೇಟೆ ಕ್ಷೇತ್ರಕ್ಕೆ ಸೇರಿದ ಕೋಲಾರ ತಾಲೂಕಿನ ಗ್ರಾಮೀಣ ರಸ್ತೆಗಳಿಗೆ 8 ಲಕ್ಷ ರು. ನೀಡಲು ಒಪ್ಪಿಗೆ ಸೂಚಿಸಲಾಯಿತು. ತಾಪಂ ಅಧ್ಯಕ್ಷೆ ಭಾಗ್ಯಲಕ್ಷ್ಮಿ ನಾರಾಯಣಮೂರ್ತಿ, ಉಪಾಧ್ಯಕ್ಷೆ ಸರಸ್ವತಿ, ತಾಪಂ ಇಒ ಜಾನಕಿರಾಮ್, ಎಇ ಮಂಜುನಾಥ್ ಇದ್ದರು.