ಸಾಂಖ್ಯಿಕ ಚಟುವಟಿಕೆಗಳಿಂದ ಮಾಹಿತಿ ಸಂಗ್ರಹಿಸಲು ಸಾಧ್ಯ
ಕೋಲಾರ: ಎಲ್ಲಾ ಸಂಸ್ಥೆಗಳ ನಿಯೋಜಕರು ಇಲಾಖೆಯ ಸಾಂಖ್ಯಿಕ ಯೋಜನೆಯಡಿಯಲ್ಲಿ ಸಮಗ್ರ ಮಾಹಿತಿ ಒದಗಿಸುವುದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನಾ ಆಯೋಗಗಳು ವಿವಿಧ ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸಲು ಸಹಕಾರಿಯಾಗುತ್ತದೆ ಎಂದು ಉದ್ಯೋಗ ಮತ್ತು ತರಬೇತಿ ಇಲಾಖೆಯ ನಿರ್ದೇಶನಾಲಯದ ಉಪ ನಿರ್ದೇಶಕ ರಮೇಶ್ ಬಾಬು ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ಉದ್ಯೋಗ ಮತ್ತು ತರಬೇತಿ ಇಲಾಖೆ ಹಾಗೂ ಕರ್ನಾಟಕ ಸಾಂಖ್ಯಿಕ ವ್ಯವಸ್ಥೆ ಅಭಿವೃದ್ಧಿ ಸಂಸ್ಥೆ ಸಹಯೋಗದಲ್ಲಿ ಜಿಲ್ಲೆಯ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳ ನಿಯೋಜಕರಿಗೆ ಸಾಂಖ್ಯಿಕ ಚಟುವಟಿಕೆಗಳ ಗುಣಮಟ್ಟ ವೃದ್ಧಿಸುವ ಕುರಿತು ಹಮ್ಮಿಕೊಂಡಿದ್ದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿ, ಜಿಲ್ಲೆಯ ವಿವಿಧ ನಿಯೋಜಕರು ಇಲಾಖೆಯ ಸಾಂಖ್ಯಿಕ ಯೋಜನೆಯಡಿ ಸ್ಥಳೀಯ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಗೆ ಸಲ್ಲಿಸಬೇಕಾದ ವರದಿಗಳು, ಅವುಗಳ ಕಾಲಾವಧಿ, ಸಲ್ಲಿಸುವ ವಿಧಾನ ಮುಂತಾದ ವಿಷಯಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದ ಅವರು ಜಿಲ್ಲೆಯ ನಿಯೋಜಕರು ನೂತನ ವಿಧಾನಗಳಾದ ಇ.ಮೇಲ್ ಮೂಲಕ ವರದಿಗಳನ್ನು ಸಲ್ಲಿಸಬಹುದೆಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ವಿ.ಟಿ. ವೆಂಕಟೇಶ್, ಕೈಗಾರಿಕೆಗಳು ಕೇವಲ ಕಾನೂನಿನ ದೃಷ್ಟಿಯಲ್ಲದೆ ಮಾನವೀಯ ದೃಷ್ಟಿಯಿಂದಲೂ ಕಾರ್ಯನಿರ್ವಹಿಸುವುದರಿಂದ ಹಲವಾರು ಬಡ ಜನರಿಗೆ ನೆರವಾಗುವ ಯೋಜನೆಗಳನ್ನು ರೂಪಿಸಬಹುದೆಂದು ಅಭಿಪ್ರಾಯಪಟ್ಟರು.
ಜಿಲ್ಲೆಯಲ್ಲಿರುವ ನಿರುದ್ಯೋಗಿಗಳಿಗೆ ಸ್ಥಳೀಯ ಕಾರ್ಖಾನೆಗಳಲ್ಲಿ ಉದ್ಯೋಗ ಒದಗಿಸುವಾಗ ಆದ್ಯತೆ ನೀಡಬೇಕೆಂದು ಕೋರಿದ ಅವರು, ಉದ್ಯೋಗ ನೀಡುವಾಗ ಅವರ ವಿದ್ಯಾರ್ಹತೆ, ಅರ್ಹತೆಗೆ ತಕ್ಕಂತೆ ವೇತನ, ಭದ್ರತೆಯನ್ನು ಒದಗಿಸಬೇಕೆಂದರು. ಜಿಲ್ಲೆಯ ಮುಖ್ಯ ಸಾಂಖ್ಯಿಕ ಅಧಿಕಾರಿ ಶಂಕರ್ ನಾರಾಯಣ, ಜಿಲ್ಲಾ ಕೈಗಾರಿಕಾ ಸಂಘದ ಅಧ್ಯಕ್ಷ ಷಫೀಉಲ್ಲಾ ಹಾಗೂ ಮಾಲೂರು ಕೈಗಾರಿಕಾ ಪ್ರದೇಶದ ಅಧ್ಯಕ್ಷ ಪ್ರಕಾಶ್ ಮಾತನಾಡಿದರು.
ಜಿಲ್ಲಾ ಉದ್ಯೋಗಾಧಿಕಾರಿ ಕೆ. ಶ್ರೀನಿವಾಸ್, ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯ ಎಲ್ಲಾ ನಿಯೋಜಕರು ಉದ್ಯೋಗ ವಿನಿಮಯ ಕಚೇರಿಗೆ ಸಲ್ಲಿಸಬೇಕಾದ ವರದಿಗಳನ್ನು ನಿಗದಿತ ಅವಧಿಯಲ್ಲಿ ಸಲ್ಲಿಸುವಂತೆ ಕೋರಿ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲೆಯ ವಿವಿಧ ಕೈಗಾರಿಕಾ ಸಂಸ್ಥೆಗಳ ಪ್ರತಿನಿಧಿಗಳು ಕಾರ್ಯಕ್ರಮದ ನಂತರ ನಡೆದ ಸಂವಾದದಲ್ಲಿ ಪಾಲ್ಗೊಂಡು ತಮ್ಮ ಅಭಿಪ್ರಾಯಗಳನ್ನು ತಿಳಿಸಿದರು.