ಗಣಿಗಾರಿಕೆ ತಡೆಗೆ ಒತ್ತಾಯಿಸಿ ಗ್ರಾಮಸ್ಥರ ಅನಿರ್ದಿಷ್ಟ ಧರಣಿ
ಮುಳಬಾಗಲು: ರಾಷ್ಚ್ರೀಯ ಹೆದ್ದಾರಿ-4ರ ಸುಂಕ ವಸೂಲಾತಿ ಕೇಂದ್ರ ಸಮೀಪದ ಹನುಮನಹಳ್ಳಿ ಸರ್ಕಾರಿ ಬಂಡೆ ಮೇಲೆ ಆಕ್ರಮ ಕಲ್ಲು ಗಣಿಗಾರಿಕೆಯಿಂದಾಗಿ ಸುತ್ತಲಿನ ಕೆರೆ-ಕುಂಟೆಗಳಿಗೆ ನೀರು ಬರದಂತಾಗಿದೆ.
ಹಲವು ವರ್ಷಗಳಿಂದ ಬಂಡೆ ಹೊಡೆದು ಕಲ್ಲುಗಳನ್ನು ಮಾರಾಟ ಮಾಡುತ್ತಿರುವುದರಿಂದ ಇಲ್ಲಿನ ಬಂಡೆ ಪೂರ್ಣ ಸವೆದಿದ್ದು, ನೀರಿನ ಅಸರೆಗಳು ಮುಚ್ಚಿಹೋಗಿದೆ ಎಂದು ತಾಲೂಕಿನ ಭೀಮಾಪುರ, ಹನುಮನಹಳ್ಳಿ, ನಲ್ಲೂರು ಗ್ರಾಮಸ್ಧರು ಬಂಡೆಯ ತಪ್ಪಲಿನಲ್ಲಿ ಅನಿರ್ದಿಷ್ಟ ಧರಣಿ ಕೈಗೊಂಡಿದ್ದಾರೆ.
ಅಕ್ರಮ ಗಣಿಗಾರಿಕೆ ಮತ್ತು ಸಾಗಾಣೆಕೆ ನಿಲ್ಲಿಸಬೇಕು, ಹನುಮನಹಳ್ಳಿ ಗ್ರಾಮಕ್ಕೆ ಸೇರಿದ ಪ್ರದೇಶದಲ್ಲಿ ಸರ್ಕಾರಿ ಬಂಡೆ ಖರಾಬು ಬಂಡೆ ಎಂದು ನಮೂದಿಸಲಾಗಿದ್ದು, ಸರ್ಕಾರಕ್ಕೆ ಅದು ಸೇರಿದುದಾಗಿದೆ. ಈ ಬಂಡೆ ಕೆರೆಗಳಿಗೆ ನೀರು ಸಂಗ್ರಹಿಸುವ ಸೆಲೆಯಾಗಿದ್ದು ಹನುಮನಹಳ್ಳಿ ಬಂಡೆ ಅಚ್ಚುಕಟ್ಟಿನಲ್ಲಿ 120 ಎಕರೆ ಜಮೀನಿನ ಗದ್ದೆಗಳಿಗೆ ಕೃಷಿ ಆಶ್ರಯವಾಗಿದ್ದು, ಹನುಮನಹಳ್ಳಿ ಬಂಡೆ ಅಚ್ಚುಕಟ್ಟಿನಲ್ಲಿ 120 ಎಕರೆ ಜಮೀನಿನ ಗದ್ದೆಗಳಲ್ಲಿ ಕೃಷಿ ಆಸರೆಯಾಗಿದ್ದು, ಗಣೆಗಾರಿಕೆಯಿಂದಾಗಿ ಪರಿಸ್ಥಿತಿ ಬಿಗಡಾಯಿಸಿದೆ ಗ್ರಾಮಸ್ಥರು ಆರೋಪಿಸಿದರು. ಹನುಮನಹಳ್ಳಿ ಗ್ರಾಪಂ ಅಧ್ಯಕ್ಷೆ ಜ್ಯೋತಿಲಕ್ಷ್ಮಿ, ತಾಪಂ ಮಾಜಿ ಅಧ್ಯಕ್ಷ ವಿ.ರಘುಪತಿರೆಡ್ಡಿ, ಪೋತುಲಪ್ಪ, ಎಂ.ನಂಜುಂ, ಸೀನಪ್ಪ, ಮಾದಿಗ ದಂಡೋರ ಮುಖಂಡ ಮುನಿಯಪ್ಪ ಮತ್ತಿತರರು ಧರಣಿ ನೇತೃತ್ವ ವಹಿಸಿದ್ದಾರೆ.
ತಹಸೀಲ್ದಾರ್ ಭೇಟಿ: ತಹಸೀಲ್ದಾರ್ ಸೋಮಶೇಖರಯ್ಯ, ಸರ್ಕಲ್ ಇನ್ಸ್‌ಪೆಕ್ಟಕ್ ಕೃಷ್ಣಪ್ಪ ಸ್ಥಳಕ್ಕೆ ಭೇಟಿ ನೀಡಿ, ಬಂಡೆಯ ಬಳಿ ಲಾರಿಗಳು ಬಾರದಂತೆ ಕ್ರಮ ತೆಗೆದುಕೊಳ್ಳಲಾಗುವುದು. ಪೊಲೀಸ್ ನಿಯೋಜಿಸಿ ಕಲ್ಲು ಬಂಡೆ ಗಣೆಗಾರಿಕೆ ನಿಲ್ಲಿಸುವುದಾಗಿ ಭರವಸೆ ನೀಡಿದರು.