ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಜಿಲ್ಲಾ ಸಾಹಿತ್ಯ ಜಾತ್ರೆಗೆ ಕ್ಷಣಗಣನೆ

Srinivasa Murthy VN
Updated On : 12 Feb 2014, 12:52 pm

ಕೋಲಾರ: ನಗರದ ಟಿ. ಚನ್ನಯ್ಯರಂಗ ಮಂದಿರದಲ್ಲಿ ಫೆ.12 ಮತ್ತು 13 ರಂದು ನಡೆಯಲಿರುವ 13ನೇ ಕೋಲಾರ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಕ್ಷಣಗಣನೆ ಆರಂಭವಾಗಿದೆ.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಸಮ್ಮೇಳನ ಆಯೋಜಿಸಲಾಗಿದೆ. ಎರಡು ದಿನಗಳ ಕಾರ್ಯಕ್ರಮ ಯಶಸ್ವಿಗೊಳಿಸಲು ಕಸಾಪ ಜಿಲ್ಲಾಧ್ಯಕ್ಷ ಜೆ.ಜಿ. ನಾಗರಾಜ ಮತ್ತವರ ತಂಡ ಸಂಘಟಿತ ಪ್ರಯತ್ನ ನಡೆಸುತ್ತಿದೆ.
ಸಮ್ಮೇಳನಕ್ಕೆ ಮೊದಲ ದಿನ ಜಿಲ್ಲೆಯಿಂದ ಸುಮಾರು 2 ಸಾವಿರ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆ ಇದೆ. ಶಿಕ್ಷಕರು ಮತ್ತು ಸರ್ಕಾರಿ ನೌಕರರು ಎರಡು ದಿನಗಳ ಸಮ್ಮೇಳನದಲ್ಲಿ ಭಾಗವಹಿಸಲು ಸಾಂದರ್ಭಿಕ ರಜೆಯ ಸೌಲಭ್ಯವನ್ನು ಕಲ್ಪಿಸಲಾಗಿದೆ.
13ನೇ ಸಮ್ಮೇಳನದ ಸರ್ವಾಧ್ಯಕ್ಷರಾದ ಸಾಹಿತಿ, ವಿಮರ್ಶಕ ಡಾ.ವಿ. ಚಂದ್ರಶೇಖರ ನಂಗಲಿ ಅವರು ಪರಿಸರ ಪ್ರೇಮಿಯೂ ಆಗಿದ್ದಾರೆ. ಚಾರಣಪಟುವೂ ಆಗಿರುವುದರಿಂದ ಫೆ.12ರಂದು ನಡೆಯುವ ಮೆರವಣಿಗೆಯಲ್ಲಿ ಅವರು ಅಲಂಕೃತ ತೆರೆದ ವಾಹನದಲ್ಲಿ ಕುಳಿತು ಸಮ್ಮೇಳನಾ ಸ್ಥಳಕ್ಕೆ ಪ್ರವೇಶ ಮಾಡುವ ಬದಲಿಗೆ ಭೂಮಿತತ್ವದಡಿ ಕಾಲ್ನಡಿಗೆಯಲ್ಲಿ ಬರುವ ಮೂಲಕ ಇತರರಿಗೆ ಹೊಸ ವಿಭಿನ್ನ ಸಂದೇಶ ಹಾಗೂ ಆದರ್ಶವನ್ನು ರವಾನಿಸುತ್ತಿದ್ದಾರೆ.
ಕಾರ್ಯಕ್ರಮದ ಪಕ್ಷಿ ನೋಟ: ಫೆ.12 ರಂದು ಬೆಳಿಗ್ಗೆ 9 ಗಂಟೆಗೆ ಕೋಲಾರ ತಹಸೀಲ್ದಾರ್ ಜಿ.ಆರ್. ನಾಗರಾಜು ಅವರು ಟಿ. ಚನ್ನಯ್ಯರಂಗ ಮಂದಿರದ ಆವರಣದಲ್ಲಿ ರಾಷ್ಟ್ರಧ್ವಜಾರೋಹಣ ಮಾಡಲಿದ್ದು, ಪರಿಷತ್ತಿನ ಧ್ವಜವನ್ನು ಜಿಲ್ಲಾ ಕಸಾಪ ಅಧ್ಯಕ್ಷ ಜೆ.ಜಿ. ನಾಗರಾಜ ಹಾರಿಸಲಿದ್ದಾರೆ.
ಬೆಳಿಗ್ಗೆ 9.30ಕ್ಕೆ ಸಮ್ಮೇಳನಾಧ್ಯಕ್ಷರ ಮೆರವಣಿಗೆಯನ್ನು ಮಾಜಿ ಸಚಿವ ಹಾಗೂ ಶಾಸಕ ವರ್ತೂರ್ ಆರ್.ಪ್ರಕಾಶ್ ಉದ್ಘಾಟಿಸಲಿದ್ದಾರೆ. 11.30ಕ್ಕೆ ಚಿಂತಕ ಪ್ರೊ.ಜಿ.ಕೆ.ಗೋವಿಂದರಾವ್ ಸಮ್ಮೇಳನವನ್ನು ಉದ್ಘಾಟಿಸಲಿದ್ದು ವಾರ್ತಾ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಕೆ.ಆರ್. ನಿರಂಜನ್, ಕಸಾಪ ರಾಜ್ಯಾಧ್ಯಕ್ಷ ಪುಂಡಲೀಕ ಹಾಲಂಬಿ ಭಾಗವಹಿಸಲಿದ್ದಾರೆ. ನಿಕಟಪೂರ್ವ ಅಧ್ಯಕ್ಷ ಸ. ರಘುನಾಥ, ಶಾಸಕ ರಮೇಶ್ ಕುಮಾರ್ ಮಂಜು ಕನ್ನಿಕರವರ ಕೃತಿಗಳನ್ನು ಬಿಡುಗಡೆ ಮಾಡಲಿದ್ದಾರೆ. ಜಿಲ್ಲಾಧಿಕಾರಿ ಡಿ.ಕೆ. ರವಿ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದು, ಜಿ.ಪಂ ಸದಸ್ಯ ಜಿ.ಎಸ್. ಅಮರನಾಥ್ ಪುಸ್ತಕ ಮಳಿಗೆಗಳ ಉದ್ಘಾಟನೆ ನೆರವೇರಿಸುವರು.
ಚಿತ್ರ ನಿರ್ದೇಶಕ ಟಿ.ಎಸ್. ನಾಗಾಭರಣ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡುವರು, ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್. ಸುದರ್ಶನ್ ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಡಿ.ಜಿ. ಮಲ್ಲಿಕಾರ್ಜುನ ಅವರ ಛಾಯಾಚಿತ್ರಗಳ ಪ್ರದರ್ಶನವನ್ನು ಅನಾವರಣಗೊಳಿಸಲಿದ್ದಾರೆ.
ಗೋಷ್ಠಿಗಳ ವಿವರ: ಮಧ್ಯಾಹ್ನ 2 ಗಂಟೆಗೆ ಬರಗಾಲ ಮತ್ತು ಕೃಷಿ ನಿರ್ವಹಣೆ ಕುರಿತು ವಿಚಾರಗೋಷ್ಠಿ ನಡೆಯಲಿದೆ. ಕೃಷಿ ಮತ್ತು ಆಹಾರದ ನಿರ್ವಹಣೆಯ ಸವಾಲುಗಳು ವಿಷಯದ ಬಗ್ಗೆ ಸಂಸ್ಕೃತಿ ಚಿಂತಕ ಡಾ.ಕೆ.ಸಿ. ರಘು, ಮಣ್ಣಿನ ಫಲವತ್ತತೆ ಮತ್ತು ಪುನರ್ ನವೀಕರಣದ ಸವಾಲುಗಳು ಬಗ್ಗೆ ಕೃಷಿ ತಜ್ಞ ಚನ್ನೇಶ್ ಹೊನ್ನಾಳಿ ಮಾತನಾಡಲಿದ್ದು ಜಲತಜ್ಞ ಪ್ರೊ.ಕೆ. ನಾರಾಯಣಸ್ವಾಮಿ ಗೋಷ್ಠಿಯ ಅಧ್ಯಕ್ಷತೆ ವಹಿಸುವರು. ಗೋಷ್ಠಿ-2 ಮಧಾಹ್ನ 3.30ಕ್ಕೆ. ಸಮ್ಮೇಳನಾಧ್ಯಕ್ಷರ ಕೃತಿಗಳ ಅವಲೋಕನದ ಬಗ್ಗೆ ಸಾಹಿತಿ ಡಾ.ಕಾ.ವೆಂ.ಶ್ರೀನಿವಾಸಮೂರ್ತಿ ಆಶಯ ನುಡಿ, ಕೆ. ನರಸಿಂಹಮೂರ್ತಿ ಹಾಗೂ ಹೆಚ್.ಎಸ್. ಸತ್ಯನಾರಾಯಣ ಕೃತಿಗಳ ಬಗ್ಗೆ ಮಾತನಾಡಲಿದ್ದು, ಡಾ. ಚಂದ್ರಶೇಖರ ನಂಗಲಿ ಅವರ ತೇಪೆಗಳು ಮತ್ತು ಚಿನ್ನಿಮುತ್ತು ಮಾತುಕತೆ ಕೃತಿಗಳ ಬಿಡುಗಡೆ ಆಗಲಿದೆ. ಪ್ರೊ.ಎನ್.ಬಿ. ಚಂದ್ರಶೇಖರ್ ಕೃತಿಗಳ ಬಿಡುಗಡೆ ಮಾಡಲಿದ್ದಾರೆ.
ಸಾಧಕರಿಗೆ ಸನ್ಮಾನ: ಜೀವಮಾನ ಸಾಧನೆಗಾಗಿ ಎನ್. ಜಗನ್ನಾಥ್ ಪ್ರಕಾಶ್, ಭಕ್ತರಹಳ್ಳಿ ನಾರಾಯಣಸ್ವಾಮಿ ರವರ ಜೀವಮಾನ ಸಾಧನೆಗಾಗಿ ಗೌರವಾರ್ಪಣೆ ಹಮ್ಮಿಕೊಳ್ಳಲಾಗಿದೆ. ಸಂಜೆ 5 ಗಂಟೆಗೆ ಸ್ಥಳೀಯ ಕಲಾವಿದರಿಂದ ನೃತ್ಯ ಮತ್ತು ಹಾಡು. ಸಂಜೆ 6.30ಕ್ಕೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕಲಿಗಳಾದ ಕುವೆಂಪು ಮತ್ತು ಬೇಂದ್ರೆಯವರ ಸಾಕ್ಷ್ಯ ಚಿತ್ರಗಳ ಪ್ರದರ್ಶನ ವಾರ್ತಾ ಇಲಾಖೆ ಮತ್ತು ಕರ್ನಾಟಕ ಚಲನಚಿತ್ರ ಅಕಾಡೆಮಿ ಸಹಕಾರದಿಂದ ನಡೆಯಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement