ವಿದ್ಯಾರ್ಥಿನಿ ಮೇಲೆ ಅತ್ಯಾಚಾರ: ಆರೋಪಿ ಪರಾರಿ
ಗುಡಿಬಂಡೆ: ದೊಡ್ಡಹಳ್ಳಿ ಗ್ರಾಮದ ಯುವತಿ ಮೇಲೆ ಮೇಲೆ ಅತ್ಯಾಚಾರ ಎಸೆಗಿ ಗರ್ಭಿಣಿಯಾಗಲು ಕಾರಣನಾದ ವ್ಯಕ್ತಿ ವಿರುದ್ಧ ಪೋಷಕರು ಪೊಲೀಸರಿಗೆ ದೂರು ನೀಡಿರುವ ಘಟನೆ ಮಂಗಳವಾರ ನಡೆದಿದೆ. ದೊಡ್ಡಹಳ್ಳಿ ಗ್ರಾಮದ ಶ್ರೀನಿವಾಸ (35) ಎಂಬಾತ ಅತ್ಯಾಚಾರ ಎಸಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈಕೆ ಪಿಯುಸಿ ವ್ಯಾಸಂಗ ಮಾಡುತ್ತಿದ್ದು, ದೊಡ್ಡಹಳ್ಳಿಯಿಂದ ಸಮೀಪದ ಮಂಡಿಕಲ್ಲಿನಲ್ಲಿರುವ ಕಾಲೇಜಿಗೆ ಕಾಲ್ನಡಿಗೆಯಲ್ಲಿ ಹೋಗುತ್ತಿದ್ದಳು. ಈ ಸಂದರ್ಭ ಬಳಸಿಕೊಂಡ ಶ್ರೀನಿವಾಸ ದಾರಿ ಮಧ್ಯೆ ಆಕೆಯನ್ನು ಅಡ್ಡಗಟ್ಟಿ ಕೊಲೆ ಮಾಡುವುದಾಗಿ ಬೆದರಿಸಿ ಅತ್ಯಾಚಾರ ನಡೆಸಿದ್ದಾನೆ. ಯಾರಿಗೂ ವಿಷಯ ತಿಳಿಸದಂತೆ ಎಚ್ಚರಿಕೆಯನ್ನೂ ನೀಡಿದ್ದಾನೆ ಎಂದು ವಿದ್ಯಾರ್ಥಿನಿ ತಂದೆ ನರಸಿಂಹಪ್ಪ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಈಗ ಈಕೆ 6 ತಿಂಗಳ ಗರ್ಭಿಣಿಯಾಗಿದ್ದು, ಆರೋಪಿ ಶ್ರೀನಿವಾಸ ಪರಾರಿಯಾಗಿದ್ದಾನೆ. ಈತನಿಗೆ ಈಗಾಗಲೇ ಮದುವೆಯಾಗಿದ್ದು, ಪತ್ನಿ, ಒಂದು ಗಂಡು ಹಾಗೂ ಎರಡು ಹೆಣ್ಣು ಮಕ್ಕಳಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.
ಕುಡಿಯುವ ನೀರಿಗೆ ಆಗ್ರಹಿಸಿ ಪ್ರತಿಭಟನೆ
ಚಿಕ್ಕಬಳ್ಳಾಪುರ: ಅಸಮರ್ಪಕವಾಗಿ ಕುಡಿವ ನೀರು ಸರಬರಾಜು ಮಾಡುತ್ತಿರುವುದನ್ನು ಖಂಡಿಸಿ ಅಜ್ಜವಾರ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿ,ಪ್ರತಿಭಟನೆ ನಡೆಸಿದರು. ಇಲ್ಲಿನ ಗ್ರಾಪಂ ಕಚೇರಿ ಎದುರು ಗ್ರಾಮದ ಮಹಿಳೆಯರು ಖಾಲಿ ಬಿಂದಿಗೆ ಪ್ರದರ್ಶಿಸಿ ಗ್ರಾಪಂ ವಿರುದ್ಧ ಧಿಕ್ಕಾರ ಕೂಗಿದರು. ಈ ಬಗ್ಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಳ್ಳದೇ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿ ಕಚೇರಿಗೆ ಬೀಗ ಜಡಿದರು. ಪಿಡಿಒ ಹಾಗೂ ಕಾರ್ಯದರ್ಶಿ ಸಮಾಧಾನಪಡಿಸಿದರು.
ಹಳಗನ್ನಡ ಕಾವ್ಯ ಅರ್ಥೈಸುವಿಕೆ
ಗೌರಿಬಿದನೂರು: ವಾಗ್ದೇವಿ ಗಮಕಕಲಾ ಪ್ರತಿಷ್ಠಾನ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸಹಯೋಗದೊಂದಿಗೆ, ಗೌರಿಬಿದನೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಳಗನ್ನಡ ಕಾವ್ಯಗಳ ಓದುವಿಕೆ ಮತ್ತು ಅರ್ಥೈಸುವಿಕೆ ಕಾರ್ಯಕ್ರಮ ಹಮ್ಮಿಕೊಂಡಿತ್ತು.
ಕಾರ್ಯಗಾರ ಉದ್ಘಾಟಿಸಿ ಮಾತನಾಡಿದ ಗಮಕಿ ಸಿ.ವಿ. ಶ್ರೀಮತಿ, ಗಮಕ ಕಲೆಯ ಇತಿಹಾಸ ಕುರಿತು ಶಿಬಿರಾರ್ಥಿಗಳಿಗೆ ಮಾಹಿತಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ, ಪ್ರಾಂಶುಪಾಲರ ಹನುಮಂತರೆಡ್ಡಿ, ಪಠ್ಯಾಧಾರಿತ ಕಾರ್ಯಾಗಾರದ ಮಹತ್ವ ಹಾಗೂ ಅವಶ್ಯಕತೆ ಕುರಿತು ಮಾತನಾಡಿದರು.ಕನ್ನಡ ಪ್ರಾದ್ಯಾಪಕ ಡಾ. ರಮೇಶ್ಚಂದ್ರ ದತ್ತ ಯುವ ಪೀಳಿಗೆಗೆ ಗಮಕ ಕಲೆ ಪರಿಚಯಿಸಬೇಕಾದ ಅವಶ್ಯಕತೆ ಕುರಿತು ತಿಳಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಶಾಂತಾಗೋಪಾಲ್, ಸಿ.ವಿ. ಶ್ರೀಮತಿ, ಹಾಗೂ ಬೇ.ಗೊ ರಮೇಶ್ ಭಾಗವಹಿಸಿದ್ದರು. ಪ್ರಾಧ್ಯಾಪಕರಾದ ಕಮಲಮ್ಮ, ಚನ್ನನರಸಿಂಹಪ್ಪ, ಗಂಗಾಧರಯ್ಯ ಹಾಗೂ ರಾಘವೇಂದ್ರ ರಾಜು ಇದ್ದರು.
ಯುವತಿ ಆತ್ಮಹತ್ಯೆ
ಕೆಜಿಎಫ್: ಜೀವನದಲ್ಲಿ ಜಿಗುಪ್ಸೆಗೊಂಡು ಯುವತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಬರ್ಟ್ಸನ್ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇರುದಯಪುರಂ ನಿವಾಸಿ ಜಯದೀಪಾ(30) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟ ದುರ್ದೈವಿ. ಜಯದೀಪಾ ಯುವಕನೊಬ್ಬನ್ನನ್ನು ಪ್ರೀತಿಸುತ್ತಿದ್ದ ವಿಷಯ ತಿಳಿದ ಪೋಷಕರು ಪ್ರೀತಿಗೆ ಅಡ್ಡಿಪಡಿಸಿದ ಕಾರಣ ಜೀವನದಲ್ಲಿ ಜಿಗುಪ್ಸೆಗೊಂಡು ತಮ್ಮ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ರಾಬರ್ಟ್ಸನ್ಪೇಟೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
15 ರಂದು ಜಿಲ್ಲಾ
ಯುವಜನ ಮೇಳ
ಚಿಕ್ಕಬಳ್ಳಾಪುರ: ಚಿಂತಾಮಣಿಯ ವಿದ್ಯಾಗಣಪತಿ ರಂಗಮಂದಿರದಲ್ಲಿ ಫೆ.15 ರಂದು ಬೆಳಗ್ಗೆ 10 ಗಂಟೆಗೆ ಜಿಲ್ಲಾ ಮಟ್ಟದ ಯುವಜನ ಮೇಳಆಯೋಜಿಸಲಾಗಿದೆ. ಈಗಾಗಲೇ ಜಿಲ್ಲೆಯ 6 ತಾಲೂಕುಗಳಲ್ಲಿ ನಡೆದ ತಾಲೂಕು ಮಟ್ಟದ ಯುವಜನ ಮೇಳದ ವೈಯಕ್ತಿಕ ಸ್ಪರ್ಧೆಯಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ, ಗುಂಪು ಸ್ಪರ್ಧೆಯಲ್ಲಿ ಪ್ರಥಮ ಸ್ದಾನ ಪಡೆದ ಯುವಕ ಯುವತಿಯರು ಜಿಲ್ಲಾ ಯುವಜನ ಮೇಳದಲ್ಲಿ ಭಾಗವಹಿಸಬಹುದಾಗಿದೆ. ಮೇಳದಲ್ಲಿ ಭಾಗವಹಿಸಿ ವಿಜೇತರಾದವರಿಗೆ ಪ್ರಮಾಣಪತ್ರ, ಬಹುಮಾನ ಮತ್ತು ಪ್ರಯಾಣ ಭತ್ಯೆ ಮತ್ತು ದಿನಭತ್ಯೆಯನ್ನು ಇಲಾಖೆ ವತಿಯಿಂದ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಸರ್.ಎಂ.ವಿ. ಜಿಲ್ಲಾ ಕ್ರೀಡಾಂಗಣ, ಚಿಕ್ಕಬಳ್ಳಾಪುರ. ಈ ವಿಳಾಸ ಸಂಪರ್ಕಿಸಬಹುದಾಗಿದೆ.
ಹೊಟ್ಟೆ ನೋವು ತಾಳದೆ ಯುವತಿ ಆತ್ಮಹತ್ಯೆ
ಕೆಜಿಎಫ್: ಹೊಟ್ಟೆ ನೋವು ತಾಳಲಾರದೆ ಯುವತಿಯೊಬ್ಬರು ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಂಡ್ರಸನ್ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಆಂಡ್ರಸನ್ಪೇಟೆ ನಿವಾಸಿ ದೀಪಾ(25) ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುವ ದುರ್ದೈವಿ. ಈಕೆಗೆ ಆಗಾಗ ಹೊಟ್ಟೆನೋವು ಕಾಣಿಸಿಕೊಳ್ಳುತ್ತಿದ್ದು ಹಲವಾರು ವೈದ್ಯರ ಹತ್ತಿರ ಚಿಕಿತ್ಸೆ ನೀಡಿದರೂ ವಾಸಿಯಾಗದ ಕಾರಣ ಬೆಸೆತ್ತು ತಮ್ಮ ಮನೆಯಲ್ಲಿ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಆಂಡ್ರಸನ್ಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.