20 ನಿಮಿಷ 20 ಸುದ್ದಿ
ಕೋಲಾರ: 2013-14 ಸಾಲಿನ ಆಯವ್ಯಯದಲ್ಲಿ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿದ ಕ್ರೀಡಾಪಟುಗಳ ಶೈಕ್ಷಣಿಕ ಶುಲ್ಕವನ್ನು ಮರುಪಾವತಿಸುವ ಯೋಜನೆಯನ್ನು ಹೊಸದಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಆರಂಭಿಸಿದೆ. ಈ ಯೋಜನೆಯನ್ನು ಕ್ರೀಡಾಪಟುಗಳು ಸದ್ಬಳಕೆ ಮಾಡುವ ಉದ್ದೇಶದಿಂದ ಕ್ರೀಡಾ ಇಲಾಖೆಯು ಮಾರ್ಗಸೂಚಿಗಳು ಜಾರಿಗೊಳಿಸಿದೆ. ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಕ್ರೀಡೆಗಳಲ್ಲಿ ಭಾಗವಹಿಸಿ ವಿಜೇತರಾದ ಕ್ರೀಡಾಪಟುಗಳಿಗೆ ಶೈಕ್ಷಣಿಕ ಶುಲ್ಕವನ್ನು ಇಲಾಖೆಯಿಂದ ಮರುಪಾವತಿ ಮಾಡುವ ಮೂಲಕ ಪ್ರತಿಭಾವಂತ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಈ ಯೋಜನೆಯ ಪ್ರಯೋಜನವನ್ನು ಪಡೆಯುವ ಜಿಲ್ಲೆಯ ಆಸಕ್ತ ಕ್ರೀಡಾಪಟುಗಳು ವಿವರಗಳಿಗಾಗಿ ಸಹಾಯಕ ನಿರ್ದೇಶಕರ ಕಚೇರಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಶ್ರೀ ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣ, ಕೋಲಾರ ಕಚೆರಿಯನ್ನು ಸಂಪರ್ಕಿಸುವುದು. ಈ ಕಚೇರಿಗೆ ಅರ್ಜಿಯನ್ನು ಸಲ್ಲಿಸಲು ಫೆ.15 ಕೊನೆ ದಿನವಾಗಿರುತ್ತದೆ ಎಂದು ಯುವ ಸಬಲೀಕರಣ ಇಲಾಖೆಯ ಬಿ. ರುದ್ರಪ್ಪ ತಿಳಿಸಿದ್ದಾರೆ.
ಹಾಲು ಉತ್ಪಾದಕ ಸಂಘಕ್ಕೆ ಅವಿರೋಧ ಆಯ್ಕೆ
ಗುಡಿಬಂಡೆ: ತಾಲೂಕಿನ ವರ್ಲಕೊಂಡ, ಭತ್ತಲಹಳ್ಳಿ, ಚಿಕ್ಕನಂಚರ್ಲು ಗ್ರಾಮಗಳಲ್ಲಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ನಿರ್ದೇಶಕ ಮಂಡಳಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ವರ್ಲಕೊಂಡ: ಸಾಮಾನ್ಯ ಕ್ಷೇತ್ರದಿಂದ ವಿ.ಕೆ. ಲಕ್ಷ್ಮಯ್ಯ, ಆನಂದ, ದೇವರಾಜು, ಅಶ್ವತ್ಥಪ್ಪ, ಖಾದರ್ಸಾಬ್, ಎಸ್.ವೆಂಕಟೇಶಪ್ಪ, ಲಕ್ಷ್ಮಮ್ಮ, ಪ.ಜಾತಿಪ.ಪಂಗಡ ಕ್ಷೇತ್ರದಿಂದ ವೆಂಕಟರಮಣಪ್ಪ, ಹಿಂದುಳಿದ ವರ್ಗ ಕ್ಷೇತ್ರದಿಂದ ಅಲ್ಲಾಬಕಾಷ್, ಮಹಿಳಾ ಮೀಸಲು ಕ್ಷೇತ್ರದಿಂದ ಮುನಿನರಸಮ್ಮ ಮತ್ತು ವೆಂಕಟಲಕ್ಷ್ಮಮ್ಮ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಸಿ.ಹೆಚ್. ನಾಗಲಿಂಗಪ್ಪ ತಿಳಿಸಿದ್ದಾರೆ.
ಭತ್ತಲಹಳ್ಳಿ: ಸಾಮಾನ್ಯ ಕ್ಷೇತ್ರದಿಂದ ಎಂ.ಬೈರಾರೆಡ್ಡಿ, ಕಾಮಿರೆಡ್ಡಿ, ಬಿ.ಎಸ್. ಸಾಬೂಲಾಲ್, ಕಲೀಲ್ ಸಾಬ್, ಪ್ರಕಾಶ್, ಎಂ. ಸೀತಾರೆಡ್ಡಿ, ಹಿಂದುಳಿದ ವರ್ಗ ಕ್ಷೇತ್ರದಿಂದ ಎಂ. ಚನ್ನಕೇಶವರೆಡ್ಡಿ, ಮಹಿಳಾ ಮೀಸಲು ಕ್ಷೇತ್ರದಿಂದ ಅಂಜಿನಮ್ಮ ಮತ್ತು ಮಮತಾಜ್ ಆಯ್ಕೆಯಾಗಿದ್ದು, ಪ.ಜಾತಿ ಪ.ಪಂಗಡ ಕ್ಷೇತ್ರದಿಂದ ಯಾವುದೇ ಅಭ್ಯರ್ಥಿಯಿರುವುದಿಲ್ಲವೆಂದು ಚುನಾವಣಾಧಿಕಾರಿ ರಾಮಚಂದ್ರಪ್ಪ ತಿಳಿಸಿದ್ದಾರೆ.
ಉತ್ಪಾದಕರ ಸಂಘಗಳಿಗೆ ಗುಣಮಟ್ಟದ ಹಾಲನ್ನೇ ಪೂರೈಸಿ
ಚಿಕ್ಕಬಳ್ಳಾಪುರ: ಹಾಲು ಉತ್ಪಾದಕರ ಸಂಘಗಳಿಗೆ ಹಾಲು ಸರಬರಾಜು ಮಾಡುವುದರಿಂದ ರೈತರಿಗೂ ತುಂಬಾ ಅನುಕೂಲವಾಗುತ್ತದೆ ಮತ್ತು ಕರ್ನಾಟಕ ಹಾಲು ಒಕ್ಕೂಟಕ್ಕೂ ಲಾಭ ಬರುತ್ತದೆ ಎಂದು ಕೆ.ಎಂ.ಎಫ್. ನಿರ್ದೇಶಕ ಕೆ.ವಿ. ನಾಗರಾಜ್ ತಿಳಿಸಿದರು. ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿರುವ ಕೆಎಂಎಫ್ ಚಿಕ್ಕಬಳ್ಳಾಪುರ ಶಿಬಿರ ಕಚೇರಿಯಲ್ಲಿ ಹಾಲು ಉತ್ಪಾದಕರ ದತ್ತಿ ವತಿಯಿಂದ ನಡೆದ ಪರಿಹಾರ, ರಾಸುಗಳ ವಿಮೆ, ವಿದ್ಯಾರ್ಥಿ ವೇತನ ಹಾಗೂ ಆಹಾರ ಸಮತೋಲನ ಕಾರ್ಯಕರ್ತರ ವೇತನದ ಚೆಕ್ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಶಾಶ್ವತ ನೀರಾವರಿ ಮೂಲಗಳನ್ನು ಹೊಂದಿರದಿದ್ದರೂ ಚಿಕ್ಕಬಳ್ಳಾಪುರ ಜಿಲ್ಲೆ ಹೈನೋದ್ಯಮದಲ್ಲಿ ಖ್ಯಾತಿಯನ್ನು ಪಡೆದುಕೊಂಡಿದ್ದು ಕೃಷಿ ಚಟುವಟಿಕೆಗಳ ಜೊತೆಗೆ ಹೈನುಗಾರಿಕೆಯನ್ನು ಉಪ ಕಸುಬನ್ನಾಗಿ ಮಾಡಿಕೊಂಡು ರೈತರು ದುಡಿಯುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾಮಗಾರಿಗೆ ಚಾಲನೆ...
ಚಿಂತಾಮಣಿ ತಾಲೂಕಿನ ಮಲ್ಲಿಕಾಪುರ ಹಾಗೂ ವಡ್ಡಹಳ್ಳಿಯಲ್ಲಿ ಶನಿವಾರ ಶಾಸಕ ಜೆ.ಕೆ. ಕೃಷ್ಣಾರೆಡ್ಡಿ ವಿಶೇಷ ಘಟಕದ ಯೋಜನೆಯಡಿ ರು. 15.79 ಲಕ್ಷ ವೆಚ್ಚದಲ್ಲಿ ಸೀಮೆಂಟ್ ರಸ್ತೆ ಕಾಮಗಾರಿಗೆ ಚಾಲನೆ ನೀಡಿದರು. ಕೋಮುಲ್ ನಿರ್ದೇಶಕ ಟಿ.ಎನ್. ರಾಜಗೋಪಾಲ್, ಎಪಿಎಂಸಿ ಸದಸ್ಯ ಸುಬ್ಬಾರೆಡ್ಡಿ, ಎಚ್. ನಾರಾಯಣಸ್ವಾಮಿ, ಎಇಇ ನಾಗರಾಜ್ ಇದ್ದರು.
ವಿದ್ಯಾರ್ಥಿಗಳೊಂದಿಗೆ ಡಿಡಿಪಿಐ ಸಂವಾದ
ಕೋಲಾರ: ನಗರದ ಡಿಡಿಪಿಐ ಕಚೇರಿಗೆ ಬುಧವಾರ ಭೇಟಿ ನೀಡಿದ್ದ ಬೆಂಗಳೂರಿನ ಅಜೀಂ ಪ್ರೇಮ್ಜಿ ವಿವಿಯ 60 ಸ್ನಾತಕೋತ್ತರ ವಿದ್ಯಾರ್ಥಿಗಳ ತಂಡಕ್ಕೆ ಡಿಡಿಪಿಐ ಎಸ್.ವಿ. ಪದ್ಮನಾಭ್ ಜಿಲ್ಲೆಯ ಶೈಕ್ಷಣಿಕ ವ್ಯವಸ್ಥೆಯ ಮಾಹಿತಿ ಒದಗಿಸಿದರು. ವಿವಿಯ ಎಂ.ಎ ಎಜುಕೇಷನ್ ಹಾಗೂ ಎಂ.ಎ ಡೆವಲಫ್ಮೆಂಟ್ ಕೋರ್ಸನ ಈ ವಿದ್ಯಾರ್ಥಿಗಳು ಜಿಲ್ಲೆಯಲ್ಲಿನ ಶಿಕ್ಷಣ ವ್ಯವಸ್ಥೆ, ಆಡಳಿತದ ಹಂತಗಳ ಕುರಿತು ಮಾಹಿತಿ ಕೇಳಿದರು. ಡಿಡಿಪಿಐ ಪದ್ಮನಾಭ್ ಈ ಕುರಿತು ಮಾಹಿತಿ ನೀಡಿ, ಜಿಲ್ಲೆಯಲ್ಲಿ ಸರ್ಕಾರಿ, ಅನುದಾನಿತ, ಅನುದಾನ ರಹಿತ ಸೇರಿದಂತೆ ಸೇರಿದಂತೆ ಸಂವಾದ ನಡೆಸಿದರು. ಈ ಸಂದರ್ಭದಲ್ಲಿ ಶಿಕ್ಷಣಾಧಿಕಾರಿಗಳಾದ ಕೆ.ಎಂ. ಜಯರಾಮರೆಡ್ಡಿ, ನಾಗೇಂದ್ರಪ್ರಸಾದ್, ವಿಷಯ ಪರೀಕ್ಷಕರಾದ ವೆಂಕಟಸ್ವಾಮಿ, ಸಿ.ಆರ್. ಅಶೋಕ್, ಮಲ್ಲಿಕಾರ್ಜುನಾಚಾರಿ, ಎನ್. ರಾಜಣ್ಣ, ದೈಹಿಕ ಶಿಕ್ಷಣಾಧಿಕಾರಿ ಬಸವರಾಜ ಚಿಲಕಾಂತಮಠ್ ಮತ್ತಿತರರು ಇದ್ದರು. ಇದಾದ ನಂತರ ಈ ತಂಡ ನಗರದ ಡಯಟ್ ಹಾಗೂ ಜಿಲ್ಲೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಶಾಲೆಗಳಿಗೆ ಭೇಟಿ ನೀಡಿತ್ತು. ವಿದ್ಯಾರ್ಥಿಗಳ ತಂಡದ ನೇತೃತ್ವವನ್ನು ಸಂಶೋಧಕ ನಾಗೇಂದ್ರಪ್ರಸಾದ್ ವಹಿಸಿದ್ದ್ದರು.
ದೀನದಯಾಳ್ ಉಪಾಧ್ಯಾಯರ ಸ್ಮರಣೆ
ಶಿಡ್ಲಘಟ್ಟ: ದೀನದಯಾಳ್ ಉಪಾಧ್ಯಾಯರು ದೇಶದ ಒಳಿತಿಗಾಗಿ ಜನ್ಮತಾಳಿದ ಧ್ರುವತಾರೆ ಎಂದು ತಾಲೂಕು ಬಿಜೆಪಿ ಅಧ್ಯಕ್ಷ ಕಂಬದಹಳ್ಳಿ ಸುರೇಂದ್ರಗೌಡ ಹೇಳಿದರು. ಪಟ್ಟಣದ ಕರ್ಣಶ್ರೀ ಚಾರಿಟೆಬಲ್ ಟ್ರಸ್ಟಿನ ಕಚೇರಿಯಲ್ಲಿ ಏರ್ಪಡಿಸಿದ್ದ ದೀನದಯಾಳ್ ಉಪಾಧ್ಯಾಯರ ಸ್ಮರಣ ದಿನಾಚರಣೆಯಲ್ಲಿ ದೀಪವನ್ನು ಬೆಳಗಿಸಿ ಮಾತನಾಡಿ, ದೇಶದಲ್ಲಿ ಜನಸಂಘ ಸ್ಥಾಪಿಸಿ, ದೇಶದ ಆಂತರಿಕ ಬದಲಾವಣೆಯಲ್ಲಿ ತೊಡಗಿದ್ದ ಉಪಾಧ್ಯಾಯರು ಬಿಜೆಪಿ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರಿಗೂ ಮಾದರಿಯಾಗಬೇಕು, ಯಾವುದೇ ಸಾಧನಗಳಿಲ್ಲದ ಪರಿಸ್ಥಿತಿಯಲ್ಲಿ ಎದೆಗುಂದದೆ ಅವರು ಮಾಡುತ್ತಿದ್ದ ಸಮಾಜಸೇವಾ ಕಾರ್ಯಗಳು ದೇಶದ ಇಂದಿನ ಯುವಜನತೆಯಲ್ಲಿ ಆತ್ಮಸ್ಥೈರ್ಯವನ್ನು ಹೆಚ್ಚಿಸಿದೆ ಎಂದರು. ಕರ್ಣಶ್ರೀ ಚಾರಿಟೆಬಲ್ ಟ್ರಸ್ಟಿನ ಅಧ್ಯಕ್ಷ ಡಿ.ಆರ್. ಶಿವಕುಮಾರಗೌಡ ಮಾತನಾಡಿ, ಉಪಾಧ್ಯಾಯರ ಸರಳ ಜೀವನ ಶೈಲಿಯನ್ನು ಪ್ರತಿಯೊಬ್ಬ ಕಾರ್ಯಕರ್ತ ಅನುಕರಿಸಬೇಕಾಗಿದೆ ಎಂದರು. ಇದೇ ಸಂದರ್ಭದಲ್ಲಿ ಪಕ್ಷದ ಕಾರ್ಯಚಟುವಟಿಕೆಗಳಿಗಾಗಿ ಕಾರ್ಯಕರ್ತರು ನಿಧಿಯನ್ನು ದೀನದಯಾಳ್ ಉಪಾಧ್ಯಾಯರ ಭಾವಚಿತ್ರದ ಮುಂದಿಟ್ಟರು. ಬಿಜೆಪಿ ಪಕ್ಷದ ಕೋಲಾರದ ಉಸ್ತುವಾರಿ ಶಂಕರನಾರಾಯಣರೆಡ್ಡಿ ಇದ್ದರು.
ಶಿಡ್ಲಘಟ್ಟದಲ್ಲಿ ಕಾನೂನು ಅರಿವು ಕಾರ್ಯಕ್ರಮ
ಶಿಡ್ಲಘಟ್ಟ: ಮಕ್ಕಳು ಕೇವಲ ಪಾಠ ಪ್ರವಚನಗಳಿಗೆ ಸೀಮಿತವಾಗದೆ ಸಮಾಜದ ಆಗು ಹೋಗುಗಳ ಬಗ್ಗೆ ಗಮನಹರಿಸಬೇಕು ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಎಸ್. ಮಹೇಶ್ ಅಭಿಪ್ರಾಯಪಟ್ಟರು. ಪಟ್ಟಣದ ಅಜಾದ್ನಗರದ ಸರ್ಕಾರಿ ಉರ್ದು ಪ್ರೌಢಶಾಲೆಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಶಿಕ್ಷಣ ಇಲಾಖೆ ಹಾಗೂ ಪೊಲೀಸ್ ಇಲಾಖೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮದಲ್ಲಿ ಮಾತನಾಡಿ, ಯಾರು ಕಾನೂನನ್ನು ಪಾಲಿಸುತ್ತಾರೋ ಅವರು ಜೀವನದಲ್ಲಿ ಕಷ್ಟಗಳಿಗೆ ಗುರಿಯಾಗುವುದಿಲ್ಲ ಎಂದರು. ವಕೀಲ ನೌತಾಜ್, ಬಾಲ್ಯ ವಿವಾಹ ನಿಷೇದ ಕಾಯ್ದೆ ಕುರಿತು ಉಪನ್ಯಾಸ ನೀಡಿದರು. ಮುಖ್ಯೋಪಾದ್ಯಾಯಿನಿ ನಯೀ ಉನ್ನೀಸಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹೆಚ್ಚುವರಿ ಸಿವಿಲ್ನ್ಯಾಯಾಧೀಶರಾದ ವಿಜಯ ದೇವರಾಜ್ ಅರಸ್, ಸರ್ಕಾರಿ ಸಹಾಯಕ ಅಭಿಯೋಜಕ ಈ.ಡಿ. ಶ್ರೀನಿವಾಸ್ ಇದ್ದರು.
ವಿದ್ಯಾರ್ಥಿಗಳಿಗೆ ಏಕಲವ್ಯ ಮಾದರಿಯಾಗಲಿ
ಮಾಲೂರು: ವಿದ್ಯಾರ್ಥಿಗಳು ವ್ಯಾಸಂಗವನ್ನು ಎಕಲವ್ಯನ ರೀತಿಯಲ್ಲಿ ನಿರ್ವಹಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಶಂಕರ್ ಹೇಳಿದರು. ಸ್ಥಳೀಯ ಲಲಿತಾ ಕಲಾ ಅಕಾಡಮಿ ಪಟ್ಟಣದ ಶ್ರೀ ಸುಬ್ರಮಣ್ಯ ದೇವಾಲಯದಲ್ಲಿ ಆಯೋಜಿಸಿದ್ದ ಸಂಗೀತ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಬಿಲ್ವಿದ್ಯೆಯಲ್ಲಿ ಸ್ವತಃ ಗುರುಗಳಿಂದ ಪಾಠ ಕಲಿತ ಅರ್ಜುನಕ್ಕಿಂತ ಮಿಗಿಲಾದವ ಏಕಲವ್ಯ. ಅತನ ಶ್ರದ್ಧೆ, ಭಕ್ತಿ-ಗೌರವಗಳು ಕಲೆಯನ್ನು ಪೂರ್ಣಗೊಳಿಸಿಕೊಳ್ಳಲು ಸಾಧ್ಯವಾಯಿತು. ಇಂತಹ ಏಕಲವ್ಯನ ಮಾದರಿಯನ್ನು ವಿದ್ಯಾರ್ಥಿಗಳು ಅನುಸರಿಸಬೇಕು ಎಂದರು. ದೇವಾಲಯ ಸಮಿತಿ ಅಧ್ಯಕ್ಷ ಎಂ.ಆರ್. ದೇವರಾಜ್ ಮಾತನಾಡಿದರು. ಇದೇಸಂಧರ್ಭದಲ್ಲಿ ಲಲಿತಾ ಅಕಾಡೆಮಿಯ ಜಿ.ಎನ್. ಅರುಣಾ ಮತ್ತು ತಂಡದವರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ದೇವಾಲಯದ ಪ್ರಧಾನ ಆರ್ಚಕ ಬಾಲಸುಬ್ರಮಣ್ಯ ದೀಕ್ಷಿತ್, ಅಕಾಡಮಿಯ ಕಾರ್ಯದರ್ಶಿ ಕೆ. ಉಮೇಶ್, ಭಾಗ್ಯ ಲಕ್ಷ್ಮಿ, ಎಸ್. ಮಹೇಶ್, ಪೋಷಕರು ಇದ್ದರು.
ದೇವಾಲಯ ನಿರ್ಮಾಣ ಪುಣ್ಯದ ಕೆಲಸ: ಗುರೂಜಿ
ಮಾಲೂರು: ಮಾನಸಿಕ ಶಾಂತಿ ನೀಡುವ ದೇವಾಲಯಗಳನ್ನು ನಿರ್ಮಿಸುವುದು ಪುಣ್ಯದ ಕೆಲಸವಾಗಿದೆ ಎಂದು ಸೇಲಂ ಶಿರಡಿ ಸಾಯಿ ಸೇವಾ ಟ್ರಸ್ಟ್ನ ಮೋಹನ್ ಗುರೂಜಿ ಹೇಳಿದರು. ಪಟ್ಟಣದ ತಾಲೂಕು ಕಚೇರಿ ರಸ್ತೆಯಲ್ಲಿ ನೂತನವಾಗಿ ನಿರ್ಮಿಸಣು ಉದ್ದೇಶಿಸಿರುವ ಶ್ರೀ ಶಿರಡಿ ಸಾಯಿಬಾಬಾ ದೇವಾಲಯದ ಶಂಕು ಸ್ಥಾಪನಾ ಕಾರ್ಯಕ್ರಮದಲ್ಲಿ ಮಾತನಾಡಿ, ದೇವಾಲಯದ ನಿರ್ಮಾಣ ಕಾರ್ಯಕ್ಕೆ ಪ್ರತಿಯೊಬ್ಬರು ಸಹಕರಿಸಬೇಕು ಎಂದರು. ಗಳಿಸಿದ ಹಣವನ್ನು ಉತ್ತಮ ಕಾರ್ಯಕ್ಕೆ ದಾನ ಮಾಡಿದಾಗ ಸಿಗುವ ನೆಮ್ಮದಿ -ತೃಪ್ತಿ ಮನೆಯಲ್ಲಿಟ್ಟಾಗ ಸಿಗುವುದಿಲ್ಲ ಎಂಬುಂದನ್ನು ಅರಿಯಬೇಕು ಎಂದರು. ಶ್ರೀ ಶಿರಡಿ ಸಾಯಿಬಾಬಾ ದೇವಾಲಯ ಟ್ರಸ್ಟ್ನ ಅಧ್ಯಕ್ಷ ಶ್ರೀನಿವಾಸ್ರೆಡ್ಡಿ ಮಾತನಾಡಿ, ಶಿರಡಿ ಸಾಯಿಬಾಬಾ ಪ್ರೇರೇಣೆಯಿಂದ 40 ಲಕ್ಷ ರು.ಗಳಲ್ಲಿ ಶಿರಡಿಯಲ್ಲಿರುವಂತೆ ಸಾಯಿಬಾಬಾ ದೇವಾಲಯ ನಿರ್ಮಿಸಲು ಉದ್ದೇಶಿಸಲಾಗಿದೆ. ಈಗಾಗಲೇ ಶಾಸಕ ಮಂಜುನಾಥ್ಗೌಡ ರವರು ದೇವಾಲಯದ ನಿರ್ಮಾಣ ಮಾಡಿಕೊಡುವ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಪುರಸಭೆ ಸದಸ್ಯರು ಸೇರಿದಂತೆ ಬಹಳಷ್ಟು ದಾನಿಗಳು ದೇವಾಲಯ ನಿಮಾರ್ಣಕ್ಕೆ ಮುಂದೆ ಬಂದಿದ್ದಾರೆ ಎಂದರು.
ಜಾದು ಪ್ರದರ್ಶನ...
ಗುಡಿಬಂಡೆಯಲ್ಲಿ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿ, ತಾಲೂಕಿನ ಐಸಿಟಿಸಿ ಕೇಂದ್ರ, ಎಸ್ಎಸ್ಎಸ್, ನಿಸರ್ಗ ಸಂಸ್ಥೆ ಸಹಯೋಗದಲ್ಲಿ ತಾಲೂಕಿನಲ್ಲಿ ಎಚ್ಐವಿ ಏಡ್ಸ್ ನಿಯಂತ್ರಣ ಮತ್ತು ಎಚ್ಐವಿ ಏಡ್ಸ್ ರೋಗಿಗಳಿಗೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳ ಕುರಿತ ಜಾಗೃತಿ ಆಂದೋಲನವನ್ನು ಜಾದು ಮೂಲಕ ಪ್ರದರ್ಶಿಸಲಾಯಿತು.
ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ಪ್ರತಿಭಟನೆ
ಬಾಗೇಪಲ್ಲಿ: ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರು ಬೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಕಾರ್ಯದರ್ಶಿ ಪಿ. ಮಂಜುನಾಥರೆಡ್ಡಿ, ಕಳೆದ ಹಲವು ವರ್ಷಗಳಿಂದ ಈ ಭಾಗದಲ್ಲಿ ಸಮರ್ಪಕ ಮಳೆಯಿಲ್ಲದೆ ಅಂತರ್ಜಲ ಮಟ್ಟ ಕುಸಿದಿದೆ. ಇರುವ ಅಲ್ಪಸ್ವಲ್ಪ ನೀರನ್ನು ಉಪಯೋಗಿಸಿ ವ್ಯವಸಾಯ ಮಾಡಲು ಬೆಸ್ಕಾಂ ಇಲಾಖೆಯ ಅಧಿಕಾರಿಗಳು ಸಮರ್ಪಪಕ ವಿದ್ಯುತ್ ಪೂರೈಕೆ ಮಾಡುತ್ತಿಲ್ಲ. ಇದರಿಂದ ಬೆಳೆಗಳಿಗೆ ಸರಿಯಾದ ಸಮಯಕ್ಕೆ ನೀರು ಹಾಯಿಸಲು ಸಾಧ್ಯವಾಗದೇ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ರೈತರು ಸಾಲ ತೀರಿಸಲು ಸಾಧ್ಯವಾಗದೆ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಎಂದರು. ಈ ಸಂದರ್ಭದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಅಧ್ಯಕ್ಷ ಎಚ್.ಎ. ರಾಮಲಿಂಗಪ್ಪ, ಚನ್ನರಾಯಪ್ಪ ಇದ್ದರು.
ಕೋಲಾರ-ಕೆಜಿಎಫ್ ಸರ್ಕಾರಿ ಆಸ್ಪತ್ರೆ ಮೇಲ್ದರ್ಜೆಗೆ
ಕೋಲಾರ: ಜಿಲ್ಲೆಯ ಕೇಂದ್ರ ಸ್ಥಾನವಾದ ಕೋಲಾರ ನಗರದ ಶ್ರೀನರಸಿಂಹರಾಜ ಜಿಲ್ಲಾ ಆಸ್ಪತ್ರೆಯಲ್ಲಿ ಹೆರಿಗೆ ಮತ್ತು ಮಕ್ಕಳ ವಿಭಾಗಕ್ಕೆ 100 ಹಾಸಿಗೆ ಸೌಲಭ್ಯದ ಮೂಲಕ ಮೇಲ್ದರ್ಜೆಗೆ ಏರಿಸಬೇಕು ಹಾಗೂ ಕೆಜಿಎಫ್ ಸಿವಿಲ್ ಆಸ್ಪತ್ರೆಯಲ್ಲೂ ಇದೇ ರೀತಿ 60 ಹಾಸಿಗೆ ವಿಭಾಗಕ್ಕೆ ಅನುಕೂಲ ಮಾಡುವಂತೆ ಕೋರಿ ಕೇಂದ್ರ ಸಚಿವ ಕೆ.ಹೆಚ್. ಮುನಿಯಪ್ಪ ಹಾಗೂ ಕರ್ನಾಟಕ ರಾಜ್ಯ ಆರೋಗ್ಯ ಸಚಿವ ಯು.ಟಿ. ಖಾದರ್ ಕೇಂದ್ರ ಆರೋಗ್ಯ ಸಚಿವ ಗುಲಾಬ್ ನಬೀ ಆಜಾದ್ ಅವರಿಗೆ ಮನವಿ ಸಲ್ಲಿಸಿದ್ದಾರೆ. ಬುಧವಾರ ದೆಹಲಿಯಲ್ಲಿ ಕೋಲಾರ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಮುನಿಯಪ್ಪ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಖಾದರ್ ಅವರು ಕೇಂದ್ರ ಆರೋಗ್ಯ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು. ಇದಕ್ಕೆ ಸ್ಪಂಧಿಸಿದ ಸಚಿವ ಗುಲಾಬ್ ನಬೀ ಆಜಾದ್ ಅವರು ರಾಜ್ಯ ಸರ್ಕಾರದಿಂದ ಪ್ರಸ್ತಾವನೆಯನ್ನು ಕೂಡಲೇ ಕಳುಹಿಸಿದಲ್ಲಿ ಆಸ್ಪತ್ರೆಗಳ ಮೇಲ್ದರ್ಜೆಗೆ ಅನುಮೋದನೆ ನೀಡುವುದಾಗಿ ಭರವಸೆ ನೀಡಿದ್ದಾರೆ.
'ಭ್ರಷ್ಟಾಚಾರ ಮುಕ್ತ ಭಾರತ ನಮೋ ಕನಸು'
ಗುಡಿಬಂಡೆ: ದೇಶದಲ್ಲಿ ಭ್ರಷ್ಟಾಚಾರ, ನಿರುದ್ಯೋಗ, ಬಡತನ ಕಾಡುತ್ತಿದ್ದು, ದೇಶವನ್ನು ಶ್ರೀಮಂತ ಮಾಡುವುದು ಭಾವಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯವರಿಂದ ಮಾತ್ರ ಸಾಧ್ಯವೆಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚೌಡರೆಡ್ಡಿ ತಿಳಿಸಿದರು. ತಾಲೂಕಿನ ಹಂಪಸಂದ್ರ ಗ್ರಾಮದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ದೇಶದಲ್ಲಿ ತಾಂಡವವಾಡುತ್ತಿರುವ ಅಧರ್ಮ, ಅಶಾಂತಿ, ಭ್ರಷ್ಟಾಚಾರ ನಿರ್ಮೂಲನೆ ಮಾಡಲು ಅವತರಿಸಿರುವ ಮಹಾನ್ ಪುರುಷನೇ ನರೇಂದ್ರ ಮೋದಿ ಎಂದರು.
ಪ್ರಸ್ತಾವಿಕ ನುಡಿಗಳನ್ನಾಡಿದ ತಾಲೂಕು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಜಿ.ಎ. ಅಮರೇಶ್, ದೇಶವನ್ನು 5 ದಶಕಗಳಿಗೂ ಹೆಚ್ಚು ಕಾಲ ಆಳಿದ ಕಾಂಗ್ರೆಸ್ ನಾಯಕರು ಸ್ವಹಿತಕ್ಕೋಸ್ಕರ ಶ್ರಮವಹಿಸಿರುವುದು ದೇಶದ ದೌಭಾಗ್ಯ. ಸ್ವಕ್ಷೇತ್ರದಲ್ಲಿ ಗೆಲ್ಲಲಾರದ ವೀರಪ್ಪ ಮೊಯ್ಲಿಯನ್ನು ಚಿಕ್ಕಬಳ್ಳಾಪುರ ಜನತೆ ಸಚಿವರನ್ನಾಗಿ ಮಾಡಿದರು. ಆದರೆ ಆತ ಮಾಡಿದ ಅಭಿವೃದ್ಧಿ ಶೂನ್ಯ ಎಂದರು.
ಕಾಲುಬಾಯಿಂದ ಸತ್ತಿರುವ ಹಸುಗಳಿಗೆ ಜಿಲ್ಲೆಗೆ ರು. 3.05ಕೋಟಿ
ಕೋಲಾರ: ಜಿಲ್ಲೆಯಲ್ಲಿ ಫೆ.15 ರಿಂದ ಒಂದು ತಿಂಗಳ ಕಾಲ ಜಾನುವಾರುಗಳಲ್ಲಿ ಕಂಡು ಬರುವ ಕಾಲುಬಾಯಿ ಜ್ವರ ರೋಗದ ವಿರುದ್ಧ ಲಸಿಕೆ ಹಾಕುವ ಕಾರ್ಯಕ್ರಮವನ್ನು ಪಶುಪಾಲನಾ ಇಲಾಖೆ ಮತ್ತು ಕೋಲಾರ ಚಿಕ್ಕಬಳ್ಳಾಪುರ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದೆ ಎಂದು ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಬಿ.ಎನ್. ಶಿವರಾಂ ತಿಳಿಸಿದರು. ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಇಲಾಖೆಯ ಸಿಬ್ಬಂದಿ ಪ್ರತಿ ಹಳ್ಳಿಗೂ ಭೇಟಿ ನೀಡಿ ಲಸಿಕೆ ಹಾಕುವ ದಿನವನ್ನು ಮತ್ತು ಲಸಿಕೆ ಹಾಕುವ ಅಗತ್ಯವನ್ನು ರೈತರಿಗೆ ಮನವರಿಕೆ ಮಾಡಿಕೊಡಲಿದ್ದಾರೆ ಎಂದರು. ಲಸಿಕೆ ಹಾಕಿಸುವ ಬಗ್ಗೆ ಗ್ರಾಮಗಳಲ್ಲಿ ಧ್ವನಿವರ್ಧಕಗಳ ಮೂಲಕ ಪ್ರಚಾರ ಮಾಡಲು ಕ್ರಮ ಕೈಗೊಂಡಿದ್ದು ಲಸಿಕೆ ಹಾಕಲು ಜಿಲ್ಲೆಯಲ್ಲಿ ಒಟ್ಟು 20 ತಂಡಗಳನ್ನು ರಚಿಸಲಾಗಿದೆ.
ಸಮರ್ಪಕ ವಿದ್ಯುತ್ ಗೌರಿಬಿದನೂರಿನಲ್ಲಿ ಪ್ರತಿಭಟನೆ
ಗೌರಿಬಿದನೂರು: ಚುನಾವಣೆಗೆ ಮುನ್ನ ರೈತರ ಪಂಪ್ ಸೆಟ್ಗೆ ನಿರಂತರ ವಿದ್ಯುತ್ ನೀಡುವ ಬರವಸೆ ನೀಡಿ ನಂತರ ರೈತ ವಿರೋಧಿ ನೀತಿ ಅನುಸರಿಸುತ್ತಿವೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಪ್ರಧಾನ ಕಾರ್ಯದರ್ಶಿ ರವಿಚಂದ್ರ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು. ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ಪ್ರಾಂತ ಕೃಷಿ ಕೂಲಿಕಾರರ ಸಂಘದ ಆಶ್ರಯದಲ್ಲಿ ಬೆಸ್ಕಾಂ ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ ಧರಣಿಯಲ್ಲಿ ಮಾತನಾಡಿ, ರಾಜ್ಯ ಸರ್ಕಾರ ರೈತರಿಗೆ ನಿರಂತರ ವಿದ್ಯುತ್ ನೀಡುವುದರಲ್ಲಿ ಸಂಪೂರ್ಣ ವಿಫಲಗೊಂಡಿದ್ದು ಜೊತೆಗೆ ಅಕ್ರಮ ಸಕ್ರಮ ಯೋಜನೆ ಸಂಪೂರ್ಣ ಜಾರಿಯಾಗದೆ ವಿದ್ಯುತ್ ಪೋಲಾಗುತ್ತಿದೆ ರೈತರನ್ನು ಸಾಲಗಾರನ್ನಾಗಿ ಮಾಡುತ್ತಿದೆ. ರೈತರ ಸಮಸ್ಯೆಗಳಿಗೆ ಇಲಾಖೆ ಅಧಿಕಾರಿಗಲು ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು. ಸಿಪಿಎಂ ಮುಖಂಡ ಸಿ.ಸಿ. ಅಶ್ವತ್ಥಪ್ಪ ಮಾತನಾಡಿ, ರಾಜ್ಯ ಸರ್ಕಾರ ರೈತರ ಬಾಯಿಗೆ ಸುಣ್ಣ ನೀಡುತ್ತಿದೆ. ಎಂದು ಆಕ್ರೋಶ ವ್ಯಕ್ತಪಡಿಸಿ ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ರೈತರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಆರೋಪಿಸಿದರು. ಪ್ರತಿಭಟನೆಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ ಎ.ಎನ್. ರಾಜು, ಅನ್ವರ್ ಪಾಷ, ಚಿಕ್ಕನಾಯ್ಡು ಇದ್ದರು.
ಏಡ್ಸ್ ನಿಯಂತ್ರಣ ಕುರಿತು ಜಾಗೃತಿ
ಗುಡಿಬಂಡೆ: ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿ, ತಾಲೂಕಿನ ಐಸಿಟಿಸಿ ಕೇಂದ್ರ, ಎಸ್ಎಸ್ಎಸ್, ನಿಸರ್ಗ ಸಂಸ್ಥೆ ಸಹಯೋಗದಲ್ಲಿ ತಾಲೂಕಿನಲ್ಲಿ ಎಚ್ಐವಿ ಏಡ್ಸ್ ನಿಯಂತ್ರಣ ಮತ್ತು ಎಚ್ಐವಿ ಏಡ್ಸ್ ರೋಗಿಗಳಿಗೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳ ಕುರಿತ ಜಾಗೃತಿ ಆಂದೋಲನ ಜಾದು ಮೂಲಕ ಪ್ರದರ್ಶಿಸಲಾಯಿತು. ಈ ವೇಳೆ ಮಾತನಾಡಿದ ಪಪಂ ಸದಸ್ಯ ರಮೇಶ್, ಎಚ್ಐವಿ ಸೋಂಕಿನ ಬಗ್ಗೆ ಯುವಜನತೆ ಎಚ್ಚರ ವಹಿಸಬೇಕು. ಹಾಗೆಯೇ ಏಡ್ಸ್ನಂತಹ ಮಾರಕ ರೋಗಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು ಎಂದರು. ಐಸಿಟಿಸಿ ಕೇಂದ್ರದ ಆಪ್ತ ಸಮಾಲೋಚಕ ಸುದರ್ಶನ್ ಮಾತನಾಡಿ, ಗ್ರಾಮೀಣ ಜನತೆಯಲ್ಲಿ ಎಚ್ಐವಿ ಏಡ್ಸ್ ಕುರಿತು ಮಾಹಿತಿ ಕೊರತೆ ಇದ್ದು, ಕಾರ್ಯಕ್ರಮ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು. ಫೆ.16 ರಂದು ಪೋಲಂಪಲ್ಲಿ, ಅಪ್ಪಿರೆಡ್ಡಿಹಳ್ಳಿ ಗ್ರಾಮಗಳಲ್ಲಿ, ಫೆ.17 ರಂದು ಚಿನ್ನಪ್ಪನಹಳ್ಳಿ, ಕಂಬಾಲಹಳ್ಳಿ, ಫೆ.18 ರಂದು ಯರ್ರಹಳ್ಳಿ, ಕಡೇಹಳ್ಳಿ ಗ್ರಾಮಗಳಲ್ಲಿ ಕಾರ್ಯಕ್ರಮ ಆಯೋಜಿಸಲಾಗುವುದು ಎಂದರು.
ಅಧಿಕಾರಿಗಳ ನಿರ್ಲಕ್ಷ್ಯ; ಸಾರ್ವಜನಿಕರ ಆರೋಪ
ಶಿಡ್ಲಘಟ್ಟ: ನಾಗರಿಕರ ಕೆಲಸಗಳನ್ನು ತ್ವರಿತಗತಿಯಲ್ಲಿ ಮಾಡಿಕೊಡಲು ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ತಾಲೂಕಿನ ವಿವಿಧ ಭಾಗಗಳಿಂದ ಬರುವ ನಾಗರಿಕರು ಬಂದ ದಾರಿಗೆ ಸುಂಕವಿಲ್ಲವೆಂಬಂತೆ ವಾಪಸ್ಸಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ತಾಪಂ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಹಾಯಕ ಲೆಕ್ಕಾಧಿಕಾರಿ ಶಾರದಮ್ಮ ಸಮಯಕ್ಕೆ ಸರಿಯಾಗಿ ಕಚೇರಿಗೆ ಹಾಜರಾಗುತ್ತಿಲ್ಲ. ಹಾಜರಾದರೂ ಮಧ್ಯಾಹ್ನ 12 ಘಂಟೆಗೆ ಬರುತ್ತಾರೆ, ಉಳಿದ ಅಧಿಕಾರಿಗಳು ಸಭೆಯಿದೆ ಎಂದು ಸಬೂಬು ಹೇಳಿ ಕಚೇರಿಗೆ ಬರುತ್ತಿಲ್ಲ ಎಂದು ಆರೋಪಿಸಲಾಗಿದೆ. ತಾಪಂ ಕಚೇರಿಯಲ್ಲಿ ಸಿಬ್ಬಂದಿ ಕೊರತೆಯಿಂದಾಗಿ ನಾಗರಿಕರ ಕೆಲಸಗಳು ವಿಳಂಬವಾಗುತ್ತಿದ್ದರೆ ಮತ್ತೊಂದಡೆ ಕಚೇರಿ ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಕಚೇರಿಗೆ ಹಾಜರಾಗದೆ ನಾಗರಿಕರ ಕೆಲಸ ವಿಳಂಬವಾಗುತ್ತಿವೆ. ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಈ ಸಂಬಂಧ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದು, ಕಚೇರಿಗೆ ಕಾಟಾಚಾರಕ್ಕೆ ಬರುವ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರಿಗಿಸಬೇಕೆಂದು ಮನವಿ ಮಾಡಿದ್ದಾರೆ.
ಹೊದಿಕೆ ವಿತರಣೆ...
ವಿ.ಆರ್. ಸುದರ್ಶನ್ ಅವರ 57 ನೇ ಹುಟ್ಟು ಹಬ್ಬದ ಅಂಗವಾಗಿ ಕೋಲಾರದ ಅಂತರಗಂಗೆ ಅಂಗವಿಕಲ ವಿದ್ಯಾಸಂಸ್ಥೆಯ ಮಕ್ಕಳಿಗೆ ಹೊದಿಕೆಗಳನ್ನು ವಿತರಿಸಲಾಯಿತು.
ಹುಟ್ಟುಹಬ್ಬದ ಪ್ರಯುಕ್ತ ಹೊದಿಕೆ ವಿತರಣೆ
ಕೋಲಾರ: ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್. ಸುದರ್ಶನ್ ಅವರ 57ನೇ ಹುಟ್ಟು ಹಬ್ಬದ ಅಂಗವಾಗಿ ಅವರ ಬೆಂಬಲಿಗರು ದೇವಾಲಯಗಳಲ್ಲಿ ವಿಶೇಷ ಪೂಜೆ, ಅಂತರಗಂಗಾ ಬುದ್ಧಿ ಮಾಂದ್ಯ ಮಕ್ಕಳ ಶಾಲೆಯ ಮಕ್ಕಳಿಗೆ ಹೊದಿಕೆಗಳ ವಿತರಣೆ ಮಾಡುವ ಮೂಲಕ ವಿಶಿಷ್ಟವಾಗಿ ಆಚರಿಸಿದರು. ಶಿಕ್ಷಕ ವೆಂಕಟಮುನಿ, ಮುಖಂಡ ಕಿಶೋರ್ ಕುಮಾರ್,ನಗರಸಭಾ ಸದಸ್ಯ ಪ್ರಸಾದ್ ಬಾಬು, ಡಿಸಿಸಿ ಪ್ರಧಾನ ಕಾರ್ಯದರ್ಶಿ ಷಫಿಉಲ್ಲಾ ಸುದರ್ಶನ್ ಅವರ ಸೇವಾ ಮನೋಭಾವನೆ ಹಾಗೂ ಅದರ ಹಿನ್ನಲೆಯ ಬಗ್ಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ವಕ್ಕಲೇರಿ ಗ್ರಾಪಂ ಮಾಜಿ ಉಪಾಧ್ಯಕ್ಷ ಚಲಪತಿ ಹೊದಿಕೆಗಳನ್ನು ಕೊಡುಗೆಯಾಗಿ ನೀಡಿದ್ದು, ಗ್ರಾಪಂ ಅಧ್ಯಕ್ಷ ರಾಜಣ್ಣ, ಶ್ರೀರಾಂ, ವಿ.ಎಲ್. ಮುನಿರಾಜ್, ಅಪ್ಪಯ್ಯಶೆಟ್ಟಿ, ವಕ್ಕಲೇರಿ ಮಂಜುನಾಥ್, ಟೈಲರ್ ನಾರಾಯಣಪ್ಪ, ಗಾಣಿಗ ಸಮುದಾಯದ ರಾಮಚಂದ್ರಪ್ಪ, ಪ್ಲವರ್ ಕೃಷ್ಣ, ಮೇಸ್ತ್ರಿ ನಾರಾಯಣಸ್ವಾಮಿ, ಪಿಳ್ಳಪ್ಪ, ರಾಜೇಶ್, ಭತ್ತೆಪ್ಪ, ಎನ್.ವಿ. ವೆಂಕಟಸ್ವಾಮಿ, ಎನ್.ಕೆ. ಪ್ರಕಾಶ್ಸ್ವಾಮಿ, ಅರುಣ್ ಇದ್ದರು.