ಕೇಜ್ರಿವಾಲ್ ಹುಚ್ಚನಂತೆ ವರ್ತಿಸುತ್ತಿದ್ದಾರೆ'
ಚಿಕ್ಕಬಳ್ಳಾಪುರ: ಅಧಿಕಾರ ಕೈಗೆ ದೊರೆತರೂ ಸಹ ಸರಿಯಾಗಿ ಆಡಳಿತ ನಡೆಸಲು ಬಾರದ ಅನನುಭವಿ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹುಚ್ಚನಂತೆ ನನ್ನ ವಿರುದ್ಧ ಭ್ರಷ್ಟಾಚಾರದ ಸುಳ್ಳು ಆರೋಪ ಮಾಡಿದ್ದಾರೆ ಎಂದು ಕೇಂದ್ರ ಸಚಿವ ಎಂ.ವೀರಪ್ಪ ಮೊಯ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ದೆಹಲಿಯಲ್ಲಿ ಉತ್ತಮ ಜನಪರ ಆಡಳಿತ ನೀಡುತ್ತೇವೆ ಎಂಬ ಭರವಸೆಯನ್ನು ಜನರಲ್ಲಿ ಮೂಡಿಸಿ ಅಧಿಕಾರವನ್ನು ಪಡೆದುಕೊಂಡವರ ತುಘಲಕ್ ದರ್ಬಾರ್ ಕೊನೆಗೆ ಮುಕ್ತಾಯಗೊಂಡಿದೆ. ಜನರ ನಿರೀಕ್ಷೆಗಳು ಹುಸಿಯಾಗಿ ದೆಹಲಿಯಲ್ಲಿ ಅರಾಜಕತೆ ಸೃಷ್ಟಿಯಾಗಲು ಕೇಜ್ರಿವಾಲ್ ನೇರ ಕಾರಣ. ಉತ್ತಮ ಆಡಳಿತ ನಡೆಸಲು ಅವರ ಕೈಯಲ್ಲಾಗಿಲ್ಲ. ಕುಣಿಯಲು ಬಾರದವಳು ನೆಲ ಡೊಂಕು ಎನ್ನುವಂತೆ ತಮ್ಮ ಅನನುಭವದಿಂದ ಸಂವಿಧಾನ ವಿರೋಧಿ ಆಡಳಿತ ನಡೆಸಿ ಜನರ ಟೀಕೆಗೆ ಗುರಿಯಾಗಿದ್ದಾರೆ. ಕೊಟ್ಟ ಭರವಸೆ ಈಡೇರಿಸಲು ಸಾಧ್ಯವಾಗದೇ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಅವರ ಆಡಳಿತಕ್ಕಿಂತ ತುಘುಲಕ್ ದರ್ಬಾರೇ ಮೇಲು ಎಂದರು.
ಅರವಿಂದ ಕೇಜ್ರಿವಾಲ್ ತಮ್ಮ ತಪ್ಪು ಆಡಳಿತದಿಂದ ನುಣುಚಿಕೊಳ್ಳಲು, ರಾಜಕೀಯ ಲಾಭಕ್ಕಾಗಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಹುಚ್ಚುಚ್ಚಾಗಿ ಮನಸ್ಸಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಕೇವಲ ಸ್ವಾರ್ಥ ಲಾಭಕ್ಕಾಗಿಯೇ ನನ್ನ ವಿರುದ್ಧ ಸುಳ್ಳು ಆರೋಪವನ್ನು ಮಾಡುತ್ತಿದ್ದಾರೆ. ಒಂದು ಜವಾಬ್ದಾರಿಯುತ ಸ್ಥಾನದಲ್ಲಿರುವವರು ಯೋಚಿಸಿ ಮಾತನಾಡಬೇಕು. ನಿಜಾಂಶ ಮರೆಮಾಚಿ ಸುಳ್ಳು ಆರೋಪಗಳನ್ನು ಮಾಡಬಾರದು. ಅದು ಅವರಿಗೆ ಶೋಭೆ ತರುವುದಿಲ್ಲ ಎಂದರು.
ಸದ್ಯ ದೆಹಲಿಯಲ್ಲಿ ಅರಾಜಕತೆ ವಾತಾವರಣ ನಿರ್ಮಾಣವಾಗಿದ್ದರೂ ಸಹ ರಾಷ್ಟ್ರಪತಿಗಳು ಮತ್ತು ಕೇಂದ್ರ ಸರ್ಕಾರ ಸಂವಿಧಾನ ಬದ್ಧವಾಗಿ ನಡೆದುಕೊಂಡು ಪರಿಸ್ಥಿತಿಯನ್ನು ನಿಭಾಯಿಸಲಿದೆ. ಮುಂದಿನ ಬೆಳವಣಿಗೆಗಳಿಗೆ ಕಾದು ನೋಡಬೇಕು. ಎತ್ತಿನಹೊಳೆ ಯೋಜನೆ ಅನುಷ್ಠಾನ ರಾಜ್ಯ ಸರ್ಕಾರದ ನಿರ್ಧಾರ. ಈ ಯೋಜನೆ ಮೂಲಕ ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಕುಡಿಯುವ ನೀರನ್ನು ಒದಗಿಸಲು ಬದ್ಧವಾಗಿದ್ದು ಈಗಾಗಲೇ ಮೊದಲ ಹಂತದ ಯೋಜನೆಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ. ಆದಷ್ಟು ಬೇಗ ಕಾಮಗಾರಿ ಕೆಲಸ ಮುಗಿದು ಈ ಭಾಗದ ಜನರಿಗೆ ಕುಡಿಯುವ ನೀರು ಸಿಗಲಿದೆ ಎಂದರು.
ಎಚ್ಎನ್ ಆದರ್ಶ ಪಾಲಿಸಿ: ವೀರಪ್ಪ ಮೊಯ್ಲಿ
ಬಾಗೇಪಲ್ಲಿ: ಶಿಕ್ಷಣ ತಜ್ಞ ಡಾ.ಎಚ್. ನರಸಿಂಹಯ್ಯರವರ ಆದರ್ಶಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕೆಂದು ಕೇಂದ್ರ ಸಚಿವ ಡಾ.ಎಂ. ವೀರಪ್ಪಮೊಯ್ಲಿ ಕರೆ ನೀಡಿದರು.
ಪಟ್ಟಣದ ನ್ಯಾಷನಲ್ ಕಾಲೇಜಿನ ಆವರಣದಲ್ಲಿ ಸುಮಾರು 5 ಕೋಟಿ ರು.ಗಳ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಡಾ.ಪಿ. ಸದಾನಂದಮಯ್ಯ ಪಿಯು ಬ್ಲಾಕ್ನ ಕಟ್ಟಡ ಉದ್ಘಾಟಿಸಿ ಮಾತನಾಡಿ, ಡಾ.ಎಚ್. ನರಸಿಂಹಯ್ಯರವರು ಕಷ್ಟಪಟ್ಟು ಓದಿ ಶಿಕ್ಷಣ ತಜ್ಞರಾಗಿ ಅವರು ಓದಿದ ವಿದ್ಯಾಸಂಸ್ಥೆಗೆ ಅಧ್ಯಕ್ಷರಾಗಿ ಕೆಲಸ ನಿರ್ವಹಿಸಿದರೆಂದರೆ ಸುಲಭದ ಮಾತಲ್ಲ. ಇಚ್ಚಾಶಕ್ತಿ ಮತ್ತು ಸಂಕಲ್ಪ ಶಕ್ತಿಯಿಂದ ಒಬ್ಬ ಮನುಷ್ಯ ಮನಸು ಮಾಡಿದರೆ ಎಷ್ಟು ಎತ್ತರಕ್ಕಾದರೂ ಬೆಳೆಯಬಹುದು ಎಂಬುದನ್ನು ಅವರ ಬದುಕಿನಿಂದ ತಿಳಿಯುತ್ತದೆ ಎಂದರು.
ಆಸಕ್ತಿಯಿಂದ ಕಲಿತು ವಿದ್ಯಾವಂತರಾಗಿ ಸಮಾಜಕ್ಕೆ ಏನಾದರೂ ಕೊಡಗೆ ನೀಡಬೇಕೆಂಬ ಛಲ ವಿದ್ಯಾರ್ಥಿಗಳಲ್ಲಿರಬೇಕೆಂದ ಅವರು, ಯಾವುದೇ ರೀತಿಯ ಸಂಕೋಚವಿಲ್ಲದೆ ಯಾವುದೇ ವಿಷಯದ ಬಗ್ಗೆ ಪ್ರಶ್ನಿಸುವ ಹಾಗೂ ಶೋಧನೆ ಮಾಡಿದಾಗ ಮಾತ್ರ ಉತ್ತುಂಗ ಸ್ಥಾನವನ್ನು ತಲುಪಲು ಸಾಧ್ಯವಾಗುತ್ತದೆ ಎಂಬ ಡಾ.ಎಚ್.ಎನ್. ರವರ ಮಾತು ನಿಜಕ್ಕೂ ಮಾರ್ಗದರ್ಶಕ ಎಂದರು.
ಸುಮಾರು 5 ಕೋಟಿ ರು.ಗಳ ವೆಚ್ಚದಲ್ಲಿ ಪ್ರಾರಂಭಿಸುತ್ತಿರುವ ಡಾ.ಪಿ. ಸದಾನಂದಮಯ್ಯ ಪಿಯು ಬ್ಲಾಕ್ನ ನೂತನ ಕಟ್ಟಡ ನಿರ್ಮಾಣಕ್ಕೆ ಒಂದು ಕೋಟಿ ರು. ನೀಡಿದ ಡಾ.ಪಿ. ಸದಾನಂದ ಮಯ್ಯ ಮತ್ತು ಸನಂದ ಮಯ್ಯ ದಂಪತಿಗಳಿಗೆ ನ್ಯಾಷನಲ್ ಎಜುಕೇಶನ್ ಸೊಸೈಟಿ ವತಿಯಿಂದ ಸನ್ಮಾನಿಸಲಾಯಿತು.
ವಿಧಾನ ಸಭಾ ಉಪಾಧ್ಯಕ್ಷ ಎನ್.ಎಚ್. ಶಿವಶಂಕರರೆಡ್ಡಿ, ಜಿಪಂ ಅಧ್ಯಕ್ಷ ಚಿನ್ನಪ್ಪ, ಶಾಸಕರಾದ ಎಸ್.ಎನ್. ಸುಬ್ಬಾರೆಡ್ಡಿ, ಡಾ.ಕೆ. ಸುಧಾಕರ್, ವಿಧಾನಪರಿಷತ್ ಸದಸ್ಯ ವೈ.ಎ. ನಾರಾಯಣಸ್ವಾಮಿ, ಜಿಲ್ಲಾಧಿಕಾರಿ ಆರ್. ವಿಶಾಲ್, ಭಾರತೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಪದ್ಮಭೂಷಣ ಪುರಸ್ಕೃತ ಡಾ.ಪಿ.ಬಲರಾಮ್, ಎನ್ಇಎಸ್ ಅಧ್ಯಕ್ಷ ಡಾ.ಎ.ಎಚ್. ರಾಮರಾವ್, ಪದವಿ ಕಾಲೇಜು ಪ್ರಾಂಶುಪಾಲ ಎನ್. ನಂಜುಂಡಪ್ಪ, ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಪಿ. ವೆಂಕಟರಾಮ್, ಎನ್ಇಎಸ್ ಕಾರ್ಯದರ್ಶಿ ಎಸ್.ಎಸ್. ನಾಗರಾಜರೆಡ್ಡಿ, ಅಧ್ಯಕ್ಷ ವಿ. ವೆಂಕಟಶಿವಾರೆಡ್ಡಿ ಇದ್ದರು.