ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಬಾಕಿ ವೇತನಕ್ಕೆ ಒತ್ತಾಯಿಸಿ ಪ್ರತಿಭಟನೆ

Srinivasa Murthy VN
Updated On : 15 Feb 2014, 11:43 am

ಕೋಲಾರ: ಶಿಕ್ಷಕರ ಮೂರು ತಿಂಗಳ ವೇತನ ಹಾಗೂ ಗಳಿಕೆ ರಜೆ ನಗದೀಕರಣಕ್ಕಾಗಿ ಅಗತ್ಯವಿರುವ ಭಾಗದೇಯ(ಅಲಾಟ್ಮೆಂಟ್) ಬಿಡುಗಡೆಗೆ ಆಗ್ರಹಿಸಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಶನಿವಾರ ಕೋಲಾರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮುಂದೆ ಧರಣಿ ನಡೆಯಿತು.
ಜಿಲ್ಲಾ ಸರ್ಕಾರಿ ನೌಕರರ ಸಂಘದ ಬೆಂಬಲದಿಂದ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಶಿಕ್ಷಕರನ್ನು ಉದ್ದೇಶಿಸಿ ಮಾತನಾಡಿದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ವೆಂಕಟಶಿವಪ್ಪ, ಶಿಕ್ಷಕರ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಶಿಕ್ಷಕರ ಸಂಘ ಹಾಗೂ ಸರ್ಕಾರಿ ನೌಕರರ ಸಂಘದ ಪ್ರತಿನಿಧಿಗಳು ಡಿಡಿಪಿಐ ಹಾಗೂ ಬಿಇಒ ಅವರಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಬೇಡಿಕೆ ಈಡೇರಿಸಿಲ್ಲ ಎಂದು ದೂರಿದರು.
ಕಳೆದ ಮೂರು ತಿಂಗಳಿಂದ ಶಿಕ್ಷಕರು ವೇತನವಿಲ್ಲದೇ ಪರದಾಡುತ್ತಿದ್ದಾರೆ, ಕುಟುಂಬ ನಿರ್ವಹಣೆಯೂ ಕಷ್ಟವಾಗಿದ್ದು, ಇಲಾಖೆ ವೇತನ ಶೀಘ್ರ ಪಾವತಿಗೆ ಸ್ಪಂದಿಸುತ್ತಿಲ್ಲ ಎಂದು ದೂರಿದರು.
ಇಲಾಖೆ ಶಿಕ್ಷಕರ ವೇತನ ಬಿಲ್ಲುಗಳನ್ನು ಪ್ರತಿ ತಿಂಗಳ 25ನೇ ತಾರೀಖು ಖಜಾನೆಗೆ ಸಲ್ಲಿಸಬೇಕು, ತಿಂಗಳ ಕೊನೆ ದಿನ ಖಜಾನೆಯಿಂದ ವೇತನ ಚೆಕ್ ಪಡೆದು ಬ್ಯಾಂಕುಗಳಿಗೆ ವಿಲೇವಾರಿ ಮಾಡಬೇಕೆಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಎಂ.ನಾಗರಾಜ್ ಒತ್ತಾಯಿಸಿದರು.
ವೈದ್ಯಕೀಯ ವೆಚ್ಚದ ಮರುಪಾವತಿಗಾಗಿ ಸರ್ಕಾರದಿಂದ ಬಂದಿರುವ ವಂಟನಾವನ್ನು ಅತಿ ಶೀಘ್ರವಾಗಿ ತಾಪಂನಿಂದ ಖಜಾನೆಗೆ ಹೊಂದಾಣಿಕೆ ಮಾಡಿಸಿ ಬಿಲ್ಲುಗಳನ್ನು ಜೇಷ್ಠತಾ ಆಧಾರದ ಮೇಲೆ ಪಾವತಿಸಬೇಕು ಎಂದು ಒತ್ತಾಯಿಸಿದರು. ಜಿಪಿಎಫ್ ಜುಲೈ ತಿಂಗಳ ಕಂತಿನ ಹಣ ಶಿಕ್ಷಕರ ಖಾತೆಗಳಿಗೆ ಜಮಾ ಮಾಡಿಲ್ಲ ಎಂದು ತಿಳಿಸಿ, ಬಿಸಿಯೂಟ ನಿರ್ವಹಿಸಿದವರಿಗೆ ಸರ್ಕಾರಿ ಆದೇಶದಂತೆ ಗಳಿಕೆ ರಜೆ ಸೇವಾ ಪುಸ್ತಕದಲ್ಲಿ ಹಾಗೂ ಎಚ್ಆರ್ಎಂಎಸ್ನಲ್ಲಿ ನಮೂದಿಸಬೇಕು ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಜಂಟಿ ಕಾರ್ಯದರ್ಶಿ ಎಂ.ಎನ್. ಶ್ರೀನಿವಾಸಮೂರ್ತಿ ಮನವಿ ಮಾಡಿದರಲ್ಲದೆ ಮಾರ್ಚ್ ತಿಂಗಳಲ್ಲಿ ಗಳಿಕೆ ರಜೆ ಬಿಲ್ಲುಗಳನ್ನು ಸಿದ್ಧತೆ ಮಾಡಿಕೊಳ್ಳಬೇಕು, ಉನ್ನತ ಶಿಕ್ಷಣ ಮಾಡಿರುವ ಶಿಕ್ಷಕರ ವಿವರಗಳನ್ನು ಸೇವಾ ಪುಸ್ತಕದಲ್ಲಿ ನಮೂದಿಸಬೇಕು, ವರ್ಗಾವಣೆ, ಬಡ್ತಿ ವಿವರಗಳನ್ನೂ ಎಚ್ಆರ್ಎಂಎಸ್ನಲ್ಲಿ ನಮೂದಿಸಬೇಕು ಎಂದು ತಿಳಿಸಿದರು.
ವಾರ್ಷಿಕ ಬಡ್ತಿಗಳ ಮಂಜೂರಾಗಿರುವ ಶಿಕ್ಷಕರ ಪಟ್ಟಿಯನ್ನು ಸೂಚನಾ ಫಲಕದಲ್ಲಿ ಪ್ರಕಟಿಸಬೇಕು, ಶಿಕ್ಷಕರು ನಿವೃತ್ತಿಯಾಗುವ ಮೂರು ತಿಂಗಳ ಮುನ್ನವೇ ಅವರ ಸೇವಾ ಪುಸ್ತಕ ಮತ್ತು ಅವರಿಗೆ ದೊರಕಬೇಕಾದ ಸೌಲಭ್ಯಗಳನ್ನು ತಪ್ಪಿಲ್ಲದಂತೆ ದಾಖಲಿಸಿ ಅಕೌಂಟೆಂಟಟ್ಜನರಲ್ರ ಕಚೇರಿಗೆ ಕಳುಹಿಸಿಕೊಡಬೇಕೆಂದು ಒತ್ತಾಯಿಸಿದರು.
ಬಿಇಒ ಕಚೇರಿಯಲ್ಲಿ ಟೋಕನ್ ವಿತರಣೆಯದ್ದು ಪ್ರಮುಖ ಸಮಸ್ಯೆಯಾಗಿದ್ದು, ವ್ಯವಸ್ಥಾಪಕರು ಅಥವಾ ಅಧೀಕ್ಷಕರು ಜವಾಬ್ದಾರಿ ವಹಿಸಿ ಸಂಬಂಧಪಟ್ಟ ಬಿಲ್ಲುಗಳು ತಯಾರಾದ ನಂತರ ಟೋಕನನ್ನೀಡಬೇಕು ಎಂದು ಸಂಘದ ತಾಲೂಕು ಉಪಾಧ್ಯಕ್ಷ ಕೆ.ಟಿ. ನಾಗರಾಜ್ ಕೋರಿದರು.
ಬೆಂಗಳೂರಿನಿಂದ ಸೇವಾ ಪುಸ್ತಕಗಳು ವಾಪಸ್ಸಾದ ನಂತರ ಎಚ್ಆರ್ಎಂಎಸ್ನಲ್ಲಿ ನಮೂದಾಗಿರುವ ಮಾಹಿತಿ ಈವರೆಗೂ ತಲುಪಿಲ್ಲ, ಇಲಾಖೆ ಆದೇಶದಂತೆ ಎಲ್ಲಾ ಶಿಕ್ಷಕರ ಹೆಸರನ್ನು ಎಚ್ಆರ್ಎಂಎಸ್ನಲ್ಲಿ ನಮೂದಿಸಬೇಕು ಎಂದು ಆಗ್ರಹಿಸಿದರು. ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಎನ್. ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಅಶೋಕ್, ಖಜಾಂಚಿ ರಂಗಯ್ಯ, ಸಂಘದ ಜಂಟಿ ಕಾರ್ಯದರ್ಶಿ ಮುರಳಿಮೋಹನ್, ಶಿಕ್ಷಕರ ಸಂಘದ ಪ್ರತಿನಿಧಿಗಳಾದ ನಾರಾಯಣಸ್ವಾಮಿ, ಖಾದರ್ ಇಲಾಹಿ, ನರಸಿಂಹಮೂರ್ತಿ, ರಾಮಚಂದ್ರಪ್ಪ, ಆರ್. ನಾಗರಾಜ್, ರಾಮಚಂದ್ರಪ್ಪ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement