ವ್ಯಾಪಾರಿಯಿಂದ ರು. 10 ಲಕ್ಷ ಅಪಹರಿಸಿದ ಆರೋಪಿಗಳ ಸೆರೆ
ಮುಳಬಾಗಲು: ಆಂಧ್ರಪ್ರದೇಶ ಮೂಲದ ವ್ಯಾಪಾರಿಯಿಂದ ಹತ್ತು ಲಕ್ಷ ರು.ಗಳನ್ನು ಅಪಹರಿಸಿದ್ದ 5 ಮಂದಿ ಆರೋಪಿಗಳನ್ನು ಮುಳಬಾಗಲು ಪೊಲೀಸರು ಶುಕ್ರವಾರ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಆರೋಪಿಗಳಿಂದ ಎಂಟು ಲಕ್ಷರು. ಮತ್ತು ಒಂದು ಬೈಕ್ ವಶಪಡಿಸಿಕೊಂಡಿದ್ದಾರೆ. ಆಂಧ್ರ ಪ್ರದೇಶದ ವಿಜಯವಾಡದ ಚಿಟ್ಟಿನಗರ್ ವಾಸಿ ಶಂಕರ್ ಎಂಬವರಿಗೆ ತಾಲೂಕಿನ ಯಡಹಳ್ಳಿ ಗ್ರಾಮದ ನರಸಿಂಹಪ್ಪ ಎಂಬವರು ತರಕಾರಿ ಮಾರಾಟದ ಮೂಲಕ ಸ್ನೇಹಿತರು.
ನರಸಿಂಹಪ್ಪ ತಮ್ಮ ಕೆಲವು ಸ್ನೇಹಿತರನ್ನು ಶಂಕರ್ಗೆ ಪರಿಚಯಿಸಿದ್ದಾರೆ. ಇವರಿಗೆ ರವಿ ಎಂಬುವರು ಪರಿಚಿತನಾಗಿದ್ದು, ವ್ಯಾಪಾರ ಮಾಡವ ಸಲುವಾಗಿ ಹತ್ತು ಲಕ್ಷ ತಂದಲ್ಲಿ ಅದನ್ನು ಮೂರು ಪಟ್ಟು ಮಾಡಿಸಿಕೊಡುವುದಾಗಿ ನಂಬಿಸಿದ್ದಾನೆ. ಇದನ್ನು ನಂಬಿದ ಶಂಕರ್ ಹತ್ತು ಲಕ್ಷ ಹಾಗೂ ಸ್ಯಾಂಪಲ್ ಆಲೂಗಡ್ಡೆಯೊಂದಿಗೆ ಮುಳಬಾಗಲು ಪಟ್ಟಣಕ್ಕೆ ಫೆ.2ರಂದು ಬಂದಿದ್ದಾರೆ. ಪಟ್ಟಣದ ಹೊರವಲಯಕ್ಕೆ ಶಂಕರ್ ಅವರನ್ನು ಕರೆದೊಯ್ದ ರವಿ ಪೂರ್ವ ಯೋಜನೆಯಂತೆ ಬೈಕಿನಲ್ಲಿ ಬಂದ ಇಬ್ಬರು ಅವರಿಂದ ಹಣ ಕಸಿದು ಪರಾರಿಯಾಗಿದ್ದಾರೆ. ರವಿ ಮೇಲೆ ಅನುಮಾನಗೊಂಡ ಶಂಕರ್ ಮುಳಬಾಗಲು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.
ಪ್ರಕರಣ ದಾಖಲು ಮಾಡಿಕೊಂಡ ಪೊಲೀಸರು ಪಟ್ಟಣದ ಮುತ್ಯಾಲಪೇಟಿಯ ಶಿವಣ್ಣ, ಯಡಹಳ್ಳಿ ರವಿ, ಕೋಲಾರ ಹರಟೆ ಗ್ರಾಮದ ವೆಂಕಟರಾಮ, ಹೈದರಿನಗರದ ಜಬ್ಬಾರ್, ರಹಮತ್ ನಗರದ ಸೈಯದ್ರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಆರೋಪಿಗಳಿಂದ 8 ಲಕ್ಷ ಮತ್ತು ಬೈಕ್ ವಶಪಡಿಸಿಕೊಳ್ಳಲಾಗಿದೆ.
ಹಾಲು ಉತ್ಪಾದಕರ ಸಂಘದ ಚುನಾವಣೆಗೆ ತಡೆ
ಗೌರಿಬಿದನೂರು: ನಾಳೆ ನಡೆಯಬೇಕಿದ್ದ ನಾಮಗೊಂಡ್ಲು ಹಾಲು ಉತ್ಪಾದಕರ ಸಂಘದ ಚುನಾವಣೆಗೆ ಸ್ಥಳೀಯ ಜೆಎಂಫ್ಸಿ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಸಂಘದ ಕಾರ್ಯದರ್ಶಿ ಹಾಗೂ ಚುನಾವಣಾಧಿಕಾರಿ ಉದ್ದೇಶ ಪೂರ್ವಕವಾಗಿ ಎನ್. ಶ್ರೀನಿವಾಸ ಬಿನ್ ಶಾಂಪುರ ನರಸಿಂಹಪ್ಪ ಮತ್ತು ಸುಮ ಕೋ ಶ್ರೀನಿವಾಸ್ ಎಂಬವರ ನಾಮಪತ್ರಗಳನ್ನು ವಜಾಗೊಳಿಸಿ ಈ ಇಬ್ಬರ ಹೆಸರು ಮತದಾರರ ಪಟ್ಟಿಯಲ್ಲಿ ಇಲ್ಲ ಎಂದು ಕಾರಣ ನೀಡಿದ್ದರು. ಆದರೆ ಶ್ರೀನಿವಾಸ್ ಷೇರು ಕಟ್ಟಿ ಹಾಲು ಹಾಕಿದ್ದರೂ ನಾಮಪತ್ರ ವಜಾಮಾಡಿರುವುದು ತಪ್ಪು ಎಂದು ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದಿರುವುದರಿಂದ ನಾಳೆ ನಡೆಯಬೇಕಿದ್ದ ಚುನಾವಣೆ ಸ್ಥಗಿತಗೊಂಡಿದೆ. ಇವರ ಪರ ವಕೀಲ ಕೆ.ಎಸ್. ನರಸಿಂಹಮೂರ್ತಿ ಮತ್ತು ಜಿ.ವಿ. ಗೋಪಾಲ್ ವಾದ ಮಂಡಿಸಿದ್ದರು.