ಶಾಸಕ ರಾಜಣ್ಣಗೆ ಮುತ್ತಿಗೆ ಹಾಕಿ ಪ್ರತಿಭಟನೆ
ಚಿಂತಾಮಣಿ: ಕೋರ್ಲಪರ್ತಿ ಗ್ರಾಮ ಪಂಚಾಯ್ತಿ ಕಾರ್ಯಾಲಯದಲ್ಲಿ ಕಳೆದ 4 ತಿಂಗಳಿಂದ ಅಧಿಕಾರಿಗಳಿಲ್ಲದೆ ಗ್ರಾಮೀಣ ಜನತೆ ಕೆಲಸ ಕಾರ್ಯಗಳಿಗೆ ಪರದಾಡುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳುವಲ್ಲಿ ವಿಫಲಗೊಂಡಿದ್ದಾರೆಂದು ಆರೋಪಿಸಿ ಶಿಡ್ಲಘಟ್ಟ ಶಾಸಕ ಎಂ.ರಾಜಣ್ಣನವರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಯಿತು.
ಗ್ರಾಮದಲ್ಲಿ ವಿವಿಧ ಕಾರ್ಯಕ್ರಮಗಳ ಉದ್ಘಾಟನೆಗೆ ಆಗಮಿಸಿದ್ದ ಶಾಸಕ ಎಂ.ರಾಜಣ್ಣನವರಿಗೆ ಗ್ರಾಮಸ್ಥರು ಮುತ್ತಿಗೆ ಹಾಕಿ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಹಾಗೂ ಕಾರ್ಯದರ್ಶಿ ಕಳೆದ 4 ತಿಂಗಳಿಂದ ಗೈರು ಹಾಜರಿಯಾದ ಹಿನ್ನೆಲೆಯಲ್ಲಿ ಗ್ರಾಮೀಣ ಜನತೆ ಪರದಾಡುವಂತಾಗಿದೆಯೆಂದು ಆರೋಪಿಸಿದರು.
ಈ ಬಗ್ಗೆ ತಾಪಂ ಕಾರ್ಯನಿರ್ವಾಹಣಾಧಿಕಾರಿ ವಸಂತ್‌ಕುಮಾರ್‌ಗೆ ಗ್ರಾಪಂ ಅಧ್ಯಕ್ಷ ಹಾಗೂ ಸದಸ್ಯರು ಪಂಚಾಯ್ತಿಯಲ್ಲಿ ಕಾರ್ಯ ನಿರ್ವಹಿಸಲು ಸೂಕ್ತ ಅಧಿಕಾರಿಗಳನ್ನು ನೇಮಿಸಬೇಕೆಂದು ಹಲವು ಬಾರಿ ಮನವಿ ಮಾಡಿದರೂ ಇಲ್ಲಿಯ ತನಕ ಪಂಚಾಯ್ತಿಗೆ ಅಧಿಕಾರಿಗಳನ್ನು ನೇಮಿಸುವಲ್ಲಿ ವಿಫಲಗೊಂಡಿದ್ದಾರೆಂದು ಶಾಸಕರ ಎದುರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ದಿನ ನಿತ್ಯ ಗ್ರಾಮೀಣ ಪ್ರದೇಶದ ರೈತರು, ಮಹಿಳೆ, ವಿದ್ಯಾರ್ಥಿಗಳು ವಿವಿಧ ಕೆಲಸ ಕಾರ್ಯಗಳಿಗೆ ನಗರಕ್ಕೆ ಹೋಗಿ ಬರುವ ಪರಿಸ್ಥಿತಿಯಿದೆ. ಗ್ರಾಮ ಪಂಚಾಯ್ತಿ ಕಾರ್ಯಾಲಯ 4 ತಿಂಗಳಿಂದ ತಟಸ್ಥವಾಗಿದ್ದು, ಇದ್ದು ಇಲ್ಲದಂತಾಗಿದೆ. ನಮ್ಮ ಗೋಳು ಕೇಳುವವರು ಯಾರೆಂದು ಪ್ರಶ್ನಿಸಿದರು.
ಶಾಸಕ ಎಂ.ರಾಜಣ್ಣ ಗ್ರಾಮಸ್ಥರನ್ನು ಸಮಾಧಾನ ಪಡಿಸಿ ಕೂಡಲೇ ಜಿಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.