ಸಂವಿಧಾನದ ಆಶಯ ಬುಡಮೇಲು
ಕನ್ನಡಪ್ರಭವಾರ್ತೆ ಕೋಲಾರ ಫೆ.16
ವಿದ್ಯಾರ್ಥಿಗಳ ಪ್ರಜಾಸತ್ತಾತ್ಮಕ ಹಕ್ಕುಗಳ ಮೇಲೆ ನಡೆಯುತ್ತಿರುವ ಆಕ್ರಮಣ ವಿರುದ್ಧ ಸಂಘಟಿತ ಹೋರಾಟ ನಡೆಯಬೇಕಾಗಿದೆ ಎಂದು ಎಸ್ಎಫ್ಐ ಅಖಿಲ ಭಾರತ ಅಧ್ಯಕ್ಷ ಡಾ.ಶಿವದಾಸನ್ ಕರೆ ನೀಡಿದರು.
ಎಸ್ಎಫ್ಐ 13ನೇ ರಾಜ್ಯ ಸಮ್ಮೇಳನದ ಅಂಗವಾಗಿ ಇಲ್ಲಿನ ಟಿ.ಚೆನ್ನಯ್ಯ ರಂಗಮಂದಿರದಲ್ಲಿ ಭಾನುವಾರ ನಡೆದ ಶಿಕ್ಷಣ ಹಾಗೂ ಪ್ರಜಾಸತ್ತಾತ್ಮಕ ಹಕ್ಕುಗಳು ವಿಚಾರ ಸಂಕಿರಣದಲ್ಲಿ ವಿಷಯ ಮಂಡಿಸಿ ಮಾತನಾಡಿದ ಶಿವದಾಸನ್, ವಿದ್ಯಾರ್ಥಿಗಳ ಹಕ್ಕನ್ನು ನಿರಾಕರಿಸುವ ಮೂಲಕ ರಾಜಕೀಯ ಪಕ್ಷಗಳು ಮತ್ತು ಸರ್ಕಾರಗಳು ಸಂವಿಧಾನದ ಆಶಯವನ್ನೇ ಬುಡಮೇಲು ಮಾಡುತ್ತಿವೆ ಎಂದು ಆರೋಪಿಸಿದರು.
ಸರ್ಕಾರ ಶಿಕ್ಷಣ ವ್ಯವಸ್ಥೆಯ ಉಳಿವಿಗಾಗಿ ವಿದ್ಯಾರ್ಥಿ ಸಮುದಾಯ ತೀವ್ರ ಹೋರಾಟಕ್ಕೆ ಸಜ್ಜಾಗಬೇಕೆಂದ ಅವರು, ವಿದ್ಯಾರ್ಥಿ ಸಂಘಗಳಿಗೆ ಚುನಾವಣೆಗಳನ್ನು ನಡೆಸುವ ವಿಚಾರದಲ್ಲಿ ಸುಪ್ರೀಂಕೋರ್ಟ್ ನಿರ್ದೇಶನದ
ಮೇರೆಗೆ ಲಿಂಗ್ಡೊ ಆಯೋಗ ರಚನೆಯಾದರೂ ಅದರಿಂದ ಹೆಚ್ಚಿನ ಪ್ರಯೋಜನವೇನೂ ಆಗಲಿಲ್ಲ, ನಮ್ಮ ಬೇಡಿಕೆಗಳು ಈಡೇರಿಕೆಗಾಗಿ ಮತ್ತಷ್ಟು ಹೋರಾಟಗಳಾಗಬೇಕಾಗಿದೆ ಎಂದರು.
ಹಣವಂತರ ಪಾಲು ಮಾಡುವ ಹುನ್ನಾರ: ಸ್ವಾಯತ್ತ ಶಿಕ್ಷಣ ಸಂಸ್ಥೆಗಳ ಪರಿಕಲ್ಪನೆ ಇಡೀ ಶಿಕ್ಷಣದಲ್ಲಿ ಹಣವಂತರ ಪಾಲು ಮಾಡುವ ಹುನ್ನಾರವಾಗಿದೆ. ವಿಶ್ವವಿದ್ಯಾಲಯ ಧನ ಸಹಾಯ ಆಯೋಗ, ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಗಳು ಇದಕ್ಕೆ ಪೂರಕ ನೀತಿಗಳನ್ನೇ ಅನುಸರಿಸುತ್ತಿವೆ ಎಂದ ಶಿವದಾಸನ್, ರಾಷ್ಟ್ರೀಯ ಉಚ್ಚತಮ ಶಿಕ್ಷಣ ಅಭಿಯಾನ ಇಡೀ ಶಿಕ್ಷಣವನ್ನು ಹಣವಂತ ಕಂಪನಿಗಳ ಕೈಗೆ ಹಸ್ತಾಂತರಿಸುವ ಗುರಿಯನ್ನು ಹೊಂದಿದೆ ಎಂದು ಅಭಿಪ್ರಾಯಿಸಿದರು.
ಯಾವುದೇ ಶೈಕ್ಷಣಿಕ ಅರ್ಹತೆ ಇಲ್ಲದವರು ವ್ಯಾಪಾರದ ಮೂಲಕ ಹಣ ಕೊಳ್ಳೆ ಹೊಡೆಯುವ ಶ್ರೀಮಂತರು ಖಾಸಗಿ ವಿ.ವಿ.ಗಳ ಕುಲಪತಿಗಳಾಗಿ ಕಾರ್ಯ ನಿರ್ವಹಿಸುವ ಸನ್ನಿವೇಶ ಉನ್ನತ ಶಿಕ್ಷಣದ ಗುಣಮಟ್ಟ ಕುಸಿಯಲು ಹಾದಿ ಮಾಡಿಕೊಟ್ಟಿದೆ ಎಂದರು. ಶಿಕ್ಷಣದ ಖಾಸಗೀಕರಣದಿಂದಾಗಿ ತಳ ಸಮುದಾಯದ ಜನರು ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಎಂದು ನುಡಿದರು.
ಎಸ್.ಎಂ.ಕೃಷ್ಣ ಸರ್ಕಾರ ನಾಂದಿ: ರಾಜ್ಯದಲ್ಲಿ ಎಸ್.ಎಂ.ಕೃಷ್ಣ ಸರ್ಕಾರ ವಿಶ್ವವಿದ್ಯಾಲಯಗಳ ಕಾನೂನಿಗೆ ತಿದ್ದುಪಡಿ ತರುವ ಮೂಲಕ ವಿದ್ಯಾರ್ಥಿಗಳ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಕಸಿಯಲು ನಾಂದಿ ಹಾಡಿದ್ದು, ಆ ಸ್ಥಿತಿ ಇನ್ನು ಮುಂದುವರೆದಿದೆ. ಅದನ್ನು ಬದಲಾಯಿಸಲು ಮುಂದಿನ ದಿನಗಳಲ್ಲಿ ಹೋರಾಟಗಳನ್ನು ರೂಪಿಸುವುದು ಅಗತ್ಯ ಎಂದು ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿದ್ದ ಎಸ್ಎಫ್ಐ ರಾಜ್ಯಾಧ್ಯಕ್ಷ ಎನ್.ಆನಂತನಾಯ್ಕ್ ಪ್ರತಿಪಾದಿಸಿದರು.
ಪ್ರಧಾನಿ ಸ್ಪರ್ಧೆಯಲ್ಲಿರುವ ರಾಹುಲ್ಗಾಂಧಿ, ನರೇಂದ್ರಮೋದಿ ಅವರನ್ನು ಪ್ರತಿನಿಧಿಸುವ ಕಾಂಗ್ರೆಸ್, ಬಿಜೆಪಿ ಪಕ್ಷಗಳು ವಿದ್ಯಾರ್ಥಿ ಯುವಜನರ ಪ್ರಜಾಸತ್ತಾತ್ಮಕ ಹಕ್ಕುಗಳ ಬಗ್ಗೆ ಯಾವುದೇ ಮಾತನಾಡದಿರುವುದು ಖಂಡನೀಯ ಎಂದರಲ್ಲದೇ ಎಬಿವಿಪಿ ವಿದ್ಯಾರ್ಥಿಗಳ ನಡುವೆ ಧರ್ಮಾಂಧತೆ ಬಿತ್ತುತ್ತಿದ್ದು,ಇದರ ವಿರುದ್ಧ ಜಾಗೃತಿ ಮೂಡಿಸಬೇಕಿದೆ ಎಂದು ಹೇಳಿದರು.
ಎಸ್ಎಫ್ಐ ರಾಜ್ಯ ಕಾರ್ಯದರ್ಶಿ ಹುಳ್ಳಿ ಉಮೇಶ್ ಮಾತನಾಡಿದರು. ಜಿಲ್ಲಾ ಮುಖಂಡ ಸಿ.ಅಮರೇಶ್ ಸ್ವಾಗತಿಸಿದರು. ಜಿಲ್ಲಾಧ್ಯಕ್ಷ ವಾಸುದೇವರೆಡ್ಡಿ ನಿರೂಪಿಸಿದರು.ಜಿಲ್ಲಾ ಕಾರ್ಯದರ್ಶಿ ಮಾರ್ಕಂಡಯ್ಯ ವಂದಿಸಿದರು.