ವೈದ್ಯರ ನಿರ್ಲಕ್ಷಕ್ಕೆ ತಾಯಿ, ಮಗು ಬಲಿ: ಪ್ರತಿಭಟನೆ
ಚಿಂತಾಮಣಿ: ಹೆರಿಗೆಗೆ ದಾಖಲಾಗಿದ್ದ ಮಹಿಳೆ ಹಾಗೂ ಆಕೆಯ ಮಗು ಸಾವಿಗೆ ವೈದ್ಯಾಧಿಕಾರಿಯೇ ಕಾರಣ ಎಂದು ಆರೋಪಿಸಿ ಮೃತರ ಕುಟುಂಬಸ್ಥರು ಶನಿವಾರ ಧರ್ಮಾಸ್ಪತ್ರೆ ಮುಂದೆ ಶವವಿಟ್ಟು ಪ್ರತಿಭಟನೆ ನಡೆಸಿದರು.
ನಗರದ ಬೊಂಬು ಬಜಾರಿನ ಲಕ್ಷ್ಮಿ(24) ಹೆರಿಗೆಗಾಗಿ ಸರ್ಕಾರಿ ಆಸ್ಪತ್ರೆಗೆ ಎರಡು ದಿನಗಳ ಹಿಂದೆ ದಾಖಲಾಗಿದ್ದರು. ಆದರೆ, ವೈದ್ಯಾಧಿಕಾರಿ ಡಾ. ಜಯಂತಿ ಹೆರಿಗೆ ಸಮಯದಲ್ಲಿ ಹಣಕ್ಕಾಗಿ ಪೀಡಿಸಿ ಸರಿಯಾಗಿ ಚಿಕಿತ್ಸೆ ನೀಡದೆ ನಿರ್ಲಕ್ಷಿಸಿದ್ದಾರೆ. ಇದರಿಂದ ಹೆರಿಗೆ ವೇಳೆ ತಾಯಿ- ಮಗು ಇಬ್ಬರೂ ಮೃತಪಟ್ಟಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ವೈದ್ಯಾಧಿಕಾರಿ ಅಮಾನತು ಮಾಡುವಂತೆ ಒತ್ತಾಯಿಸಿದರು. ಸ್ಥಳಕ್ಕೆ ಶಾಸಕ ಜೆ.ಕೆ. ಕೃಷ್ಣಾರೆಡ್ಡಿ ಭೇಟಿ ನೀಡಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.