ಜಕ್ಕಲಮಡಗು ಜಲಾಶಯ ಸಮನ್ವಯ ಸಮಿತಿ ಸಭೆಗೆ ನಗರಸಭೆ ಅಧ್ಯಕ್ಷರಿಗೇ ಅವಕಾಶ ಇಲ್ಲ!
ಚಿಕ್ಕಬಳ್ಳಾಪುರ: ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಜಕ್ಕಲಮಡಗು ಜಲಾಶಯಕ್ಕೆ ಸಂಬಂಧಿಸಿರುವ ಸಮನ್ವಯ ಸಮಿತಿ ಸಭೆಯಲ್ಲಿ ನಗರಸಭಾ ಅಧ್ಯಕ್ಷರನ್ನೇ ಸೇರಿಸಿಕೊಳ್ಳದಿರುವುದಕ್ಕೆ ಇಲ್ಲಿನ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಆಕ್ರೋಶ ವ್ಯಕ್ತವಾಯಿತು. ಅಲ್ಲದೇ ಸಂಗ್ರಹವಾಗುತ್ತಿರುವ ನೀರನ್ನು ಬಳಕೆ ಮಾಡಿಕೊಳ್ಳುತ್ತಿರುವ ಹಂತಕ್ಕೆ ಬಂದಿದ್ದರೂ ಜಲಾಶಯದಲ್ಲಿ ಫ್ಲೋ ಮೀಟರ್ ಅಳವಡಿಸದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಲಾಯಿತು.
ನಗರಸಭಾ ಸಭಾಂಗಣದ ಕಚೇರಿಯಲ್ಲಿ ಬುಧವಾರ ಅಧ್ಯಕ್ಷೆ ಲೀಲಾವತಿ ಅಧ್ಯಕ್ಷತೆಯಲ್ಲಿ ನಡೆದ ಮೊದಲ ಸಾಮಾನ್ಯ ಸಭೆಯಲ್ಲಿ ಒಳಚರಂಡಿ ಸಂಪರ್ಕ ವ್ಯವಸ್ಥೆ, ಕೊಳವೆ ಬಾವಿ ಕೊರೆಸುವುದು, ಎಸ್ಎಫ್ಸಿ ಅನುದಾನದ ಕ್ರಿಯಾ ಯೋಜನೆ, ಕೈಗೊಂಡ ಕೆಲಸ ಕಾರ್ಯಗಳಿಗೆ ತಗುಲಿರುವ ವೆಚ್ಚವನ್ನು ಪಾವತಿಸುವುದು ಸೇರಿದಂತೆ ಪ್ರಮುಖ ವಿಷಯಗಳ ಚರ್ಚೆ ನಡೆಯಿತು.
ಇತ್ತೀಚೆಗೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಕ್ಕಲಮಡಗು ಜಲಾಶಯ ಸಮನ್ವಯ ಸಮಿತಿ ಸಭೆ ನಡೆದಿದ್ದು ದೊಡ್ಡಬಳ್ಳಾಪುರ ಮತ್ತು ಚಿಕ್ಕಬಳ್ಳಾಪುರ ಶಾಸಕರು ಭಾಗವಹಿಸಿದ್ದರು. ಹಿಂದೆ ನಿಯಮಗಳನ್ನು ಉಲ್ಲಂಘಿಸಿ ದೊಡ್ಡಬಳ್ಳಾಪುರ ನಗರಸಭೆ ಕಡೆಯಿಂದ 1.5 ಅಡಿ ಅಳಕ್ಕೆ ಹೆಚ್ಚುವರಿ ಪೈಪ್ನ್ನು ಹಾಕಿ ಹೆಚ್ಚಿನ ನೀರನ್ನು ಪಡೆದುಕೊಂಡಿರುವುದರ ಬಗ್ಗೆ ಸಭೆಯಲ್ಲಿ ಗಮನ ಸೆಳೆಯಲಾಯಿತು. ಆಗ ಇನ್ನು ಮುಂದೆ ಇಂಥ ತಪ್ಪುಗಳಿಗೆ ಅವಕಾಶ ನೀಡುವುದಿಲ್ಲ ಎಂದು ದೊಡ್ಡಬಳ್ಳಾಪುರ ನಗರಸಭೆ ಅಧಿಕಾರಿಗಳು ತಿಳಿಸಿದರು.
ಇದರಿಂದ ಸಮನ್ವಯ ಸಮಿತಿ ಗಮನಕ್ಕೆ ತರದೇ ಯಾವುದೇ ಬದಲಾವಣೆಗಳನ್ನು ಮಾಡಬಾರದು, ತಕ್ಷಣವೇ ಫ್ಲೋ ಮೀಟರ್ ಅಳವಡಿಸಬೇಕೆಂದು ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ ಎಂದು ಕರ್ನಾಟಕ ನೀರು ಮತ್ತು ಒಳಚರಂಡಿ ನಿಗಮದ ಅಧಿಕಾರಿ ತಿಳಿಸಿದ ತಕ್ಷಣ ಸದಸ್ಯರು ಸಮನ್ವಯ ಸಮಿತಿ ಸಭೆಯಲ್ಲಿ ನಗರಸಭಾ ಅಧ್ಯಕ್ಷರನ್ನು ಏಕೆ ಸೇರಿಸಿಕೊಂಡಿಲ್ಲ ಎಂದು ಆಕ್ಷೇಪ ಕೇಳಿ ಬಂತು. ಆಗ ಪೌರಾಯುಕ್ತ ಮುನಿಶಾಮಪ್ಪ, ಆ ಸಭೆಗೆ ಬಂದಿದ್ದ ದೊಡ್ಡಬಳ್ಳಾಪುರ ನಗರಸಭಾ ಅಧ್ಯಕ್ಷರನ್ನೇ ಸಭೆಯಿಂದ ಹೊರಗೆ ಕಳುಹಿಸಲಾಯಿತು. ಸಮಿತಿಯಲ್ಲಿ ನಗರಸಭಾ ಅಧ್ಯಕ್ಷರು ಸದಸ್ಯರಾಗಿರುವುದಿಲ್ಲ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಹಿರಿಯ ಸದಸ್ಯ ಎಸ್ .ಎಂ.ರಫಿಕ್, ಸಿಎಂ ನೇತೃತ್ವದಲ್ಲಿ ಜಕ್ಕಲಮಡಗು ಜಲಾಶಯ ವಿವಾದವನ್ನು ಬಗೆಹರಿಸಿದ ಸಂದರ್ಭದಲ್ಲಿ ನಗರಸಭಾ ಅಧ್ಯಕ್ಷರನ್ನು ಸೇರಿಸಿಕೊಂಡು ಮುಂದಿನ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕೆಂದು ಆಗಲೇ ತಿಳಿಸಲಾಗಿದೆ. ಆದರೆ, ಈಗ ಸಮನ್ವಯ ಸಮಿತಿ ಸಭೆಯಲ್ಲಿ ನಗರಸಭಾ ಅಧ್ಯಕ್ಷರು ಇರಲ್ಲ ಎನ್ನುವುದು ಸರಿಯಲ್ಲ. ನಗರಸಭೆಗೂ ಜವಾಬ್ದಾರಿಯಿದೆ. ಇಲ್ಲಿಂದಲೂ ಅನುದಾನ ನೀಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಮಿತಿಯಲ್ಲಿ ನಗರಸಭಾ ಅಧ್ಯಕ್ಷರನ್ನು ಸೇರಿಸಿಕೊಳ್ಳಬೇಕು. ಇದಕ್ಕೆ ಜಿಲ್ಲಾಧಿಕಾರಿ ಮತ್ತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು. ಅಧ್ಯಕ್ಷರನ್ನು ಸೇರಿಸಿಕೊಳ್ಳದಿದ್ದರೆ ನಗರಸಭೆಯಿಂದ ಅನುದಾನ ಕೊಡುವುದಿಲ್ಲ ಎಂದರು.
ಈ ಬಗ್ಗೆ ಸರ್ಕಾರದ ಗಮನ ಸೆಳೆಯಲು ಸಭೆ ನಿರ್ಧರಿಸಿತು. ಹಾಗೆಯೇ ಜಲಾಶಯದಲ್ಲಿ ಅಕ್ರಮ ಮರಳು ಗಣಿ ರಾಜಾರೋಷವಾಗಿ ನಡೆಯುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳದೇ ಸುಮ್ಮನಿರುವುದಕ್ಕೆ ಟೀಕಿಸಿತು. ಸಭೆಯಲ್ಲಿ ನಗರಸಭಾ ಅಧ್ಯಕ್ಷೆ ಲೀಲಾವತಿ, ಉಪಾಧ್ಯಕ್ಷೆ ಜಬೀನ್ ತಾಜ್, ಸದಸ್ಯರು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ನಗರಸಭೆ ಸದಸ್ಯರಿಗೆ 15 ಅಂಶದ ನೀತಿ ಪಾಠ
ಚಿಕ್ಕಬಳ್ಳಾಪುರ: ನಗರಸಭೆಯ ಮೊದಲ ಸಾಮಾನ್ಯ ಸಭೆಯಲ್ಲಿ ಸದಸ್ಯರಿಗೆ ಸರ್ಕಾರದ ಸುತ್ತೋಲೆಯ ಮೂಲಕ ಪೌರಾಯುಕ್ತ ಮುನಿಶಾಮಪ್ಪ ನೀತಿ ಪಾಠ ಮಾಡಿದರು.
ಸದಸ್ಯರು ಯಾವ ರೀತಿ ನಡೆದುಕೊಳ್ಳಬೇಕು, ಯಾವ ರೀತಿ ನಡೆದುಕೊಳ್ಳಬಾರದೆನ್ನುವುದನ್ನು 15 ಅಂಶಗಳನ್ನೊಳಗೊಂಡ ಸುತ್ತೋಲೆಯನ್ನು ಅವರು ಓದಿ ಹೇಳಿದರು. ನಗರಸಭೆಗಳಲ್ಲಿ ಅವ್ಯವಹಾರ, ಭ್ರಷ್ಟಾಚಾರ, ಕಾನೂನು ನಿಯಮಗಳ ಉಲ್ಲಂಘನೆಯಿಂದ ಕೆಟ್ಟು ಹೆಸರು ಬರುತ್ತಿದೆ. ಇದಕ್ಕೆ ಅವಕಾಶ ನೀಡದೇ ಪಾರದರ್ಶಕ ಆಡಳಿತ ನಡೆಸಲು ಸದಸ್ಯರು ಸರ್ಕಾರದ ಸುತ್ತೋಲೆಯಲ್ಲಿ ತಿಳಿಸಿದಂತೆ ನಿಯಮಗಳಿಗೆ ಅನುಸಾರವಾಗಿ ನಡೆದುಕೊಳ್ಳಲೇ ಬೇಕೆಂದು ಒತ್ತಿ ಹೇಳಿದರು.
ಅಧಿಕಾರಿಗಳ ಮೇಲೆ ಒತ್ತಡವನ್ನು ಹೇರಿ ಕೆಲಸವನ್ನು ಮಾಡಿಸಿಕೊಳ್ಳಲು ಯತ್ನಿಸಬಾರದು. ತಮ್ಮ ಕೆಲಸಗಳನ್ನು ಮುಂದಿಟ್ಟುಕೊಂಡು ಕಚೇರಿಗೆ ಬೀಗ ಹಾಕಿ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಬಾರದು. ಆಸ್ತಿ ತೆರಿಗೆ, ನೀರಿನ ತೆರಿಗೆ ವಿಷಯದಲ್ಲಿ ಹಸ್ತಕ್ಷೇಪ ಮಾಡಬಾರದು. ಗುತ್ತಿಗೆದಾರರೊಂದಿಗೆ ಸೇರಿಕೊಂಡು ಕಳಪೆ ಕಾಮಗಾರಿಗಳನ್ನು ನಿರ್ವಹಿಸಲು ಕಾರಣರಾಗಬಾರದು. ಇಲಾಖೆಯಿಂದ ಕಾಲ ಕಾಲಕ್ಕೆ ಬಂದ ಆದೇಶಗಳನ್ವಯ ಅಭಿವೃದ್ಧಿ ಕೆಲಸಗಳು ನಡೆದುಕೊಂಡು ಹೋಗಲು ಸಹಕರಿಸಬೇಕೆನ್ನುವುದು ಸೇರಿದಂತೆ 15 ಅಂಶಗಳ ಮಾರ್ಗದರ್ಶನ ಸೂತ್ರವನ್ನು ಸದಸ್ಯರಿಗೆ ತಿಳಿಸಿದರು.
ಸರ್ಕಾರದಿಂದ ಬಂದ ಮಾರ್ಗದರ್ಶನ ಸುತ್ತೋಲೆ ಎನ್ನುವುದನ್ನು ಅರಿಯದೇ ಕೆಂಡಾಮಂಡಲರಾದ ಕೆಲ ಸದಸ್ಯರು, ಪೌರಾಯುಕ್ತರು ನಮ್ಮನ್ನು ಅವರ ದಾರಿಯಲ್ಲಿ ನಡೆದುಕೊಂಡು ಹೋಗಲು, ನಮ್ಮನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿರುವುದರ ಅರ್ಥವೇನು ಎಂದು ಪ್ರಶ್ನಿಸಿದರು. ಕೊನೆಗೆ ಇದು ಸರ್ಕಾರದ ಸುತ್ತೋಲೆ ಎಂದು ತಿಳಿದಾಗ ಸುಮ್ಮನಾದರು.
ನಗರದಲ್ಲಿ ನಡೆದ ಒಳಚರಂಡಿ ಸಂಪರ್ಕ ವ್ಯವಸ್ಥೆಯಲ್ಲಿ ಅವ್ಯವಹಾರ, ಕಳಪೆ ಕಾಮಗಾರಿ, ಅನುದಾನ ಖರ್ಚಿನಲ್ಲಿ ಅಧಿಕಾರಿಗಳೇ ತಪ್ಪು ಲೆಕ್ಕ ನೀಡುತ್ತಿದ್ದಾರೆ. ಅವರನ್ನು ಸರಿಮಾಡುವುದರ ಬದಲು ನಮಗೆ ನೀತಿ ಪಾಠ ಹೇಳಲಾಗುತ್ತಿದೆ. ಮೊದಲು ಅವರನ್ನು ಸರಿ ಮಾಡಿ ಎಂದರು.