ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಮುಸುಕಿನ ಗುದ್ದಾಟ ಇಬ್ಬರ ಮನಸ್ತಾಪದ ಲಾಭ ಪಡೆಯುತ್ತಿದ್ದಾರೆ ಕೆಲವರು ಒಗ್ಗಟ್ಟಿನಿಂದ ಕೆಲಸ ಮಾಡದಿದ್ದರೆ ಜಿಲ್ಲೆಯ ಅಭಿವೃದ್ಧಿಗೆ ಪೆಟ್ಟು

Srinivasa Murthy VN
Updated On : 10 Jul 2014, 1:08 am

-ಪಾ.ಶ್ರೀ.ಅನಂತರಾಮ್
ಕೋಲಾರ: ಜಿಲ್ಲಾಧಿಕಾರಿ ಡಿ.ಕೆ.ರವಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಜಯ್ ಹಿಲೋರಿ ನಡುವೆ ಆಡಳಿತಾತ್ಮಕ ವಿಚಾರಗಳಿಗೆ ಸಂಬಂಧಿಸಿದಂತೆ ಕಳೆದ ಒಂದು ವಾರದಿಂದ ನಡೆಯುತ್ತಿರುವ ಮುಸುಕಿನ ಗುದ್ದಾಟ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ಜಿಲ್ಲೆಯ ಅಭಿವೃದ್ಧಿಯ ರಥವನ್ನು ಯಶಸ್ವಿ ಪಥದತ್ತ ಕೊಂಡೊಯ್ಯಬೇಕಾದ ಜಿಲ್ಲಾಧಿಕಾರಿ ಮತ್ತು ಎಸ್‌ಪಿ ನಡುವೆ ಅಸಮಾಧಾನಕ್ಕೆ ಕಾರಣವೇನು ಎಂಬುದನ್ನು ಮಾಧ್ಯಮಗಳು ಯಾವುದೇ ಪೂರ್ವಗ್ರಹವಿಲ್ಲದೆ ಬೆಳಕಿಗೆ ತಂದ ಮೇಲೆ, ಕೆಲವು ಪಟ್ಟಭದ್ರಹಿತಾಸಕ್ತಿಗಳು ತಮ್ಮ ಬೇಳೆ ಬೇಯಿಸಿಕೊಳ್ಳುವುದಕ್ಕೆ ಹೊರಟಿದ್ದಾರೆ. ಮರಳು ದಂಧೆ, ಪೊಲೀಸ್ ಠಾಣೆಗಳಲ್ಲಿನ ವೈಫಲ್ಯ ಇತ್ಯಾದಿ ವಿಚಾರಗಳ ಕುರಿತು ಜಿಲ್ಲೆಯ ದಂಡಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಸಾರ್ವಜನಿಕರ ಅಭಿಪ್ರಾಯ, ದೂರುಗಳನ್ನು ಆಧರಿಸಿ ತಮ್ಮ ಅಭಿಪ್ರಾಯವನ್ನು ಸರ್ಕಾರಕ್ಕೆ ತಿಳಿಸಿರುವುದು, ಲೋಪಗಳ ಬಗ್ಗೆ ಸ್ಪಷ್ಟನೆ ಕೇಳಿ ಎಸ್ಪಿಯವರಿಗೆ ನೋಟೀಸ್ ಜಾರಿ ಮಾಡಿರುವುದು ಆಡಳಿತಾತ್ಮಕ ವಿಚಾರ. ಇಲ್ಲಿ ಯಾವುದೇ ದ್ವೇಷ ಇಲ್ಲವೆಂಬುದು ಕೆಲವರು ವಾದವಾದರೆ, ಡಿಸಿಯವರು ತಮ್ಮ ವ್ಯಾಪ್ತಿ ಮೀರಿ ವರ್ತಿಸುತ್ತಿದ್ದಾರೆ. ಪೊಲೀಸ್ ಇಲಾಖೆಯ ವಿಚಾರದಲ್ಲಿ ಮೂಗು ತೂರಿಸುತ್ತಿದ್ದಾರೆಂಬುದು ಎಸ್ಪಿ ಅವರನ್ನು ಸಮರ್ಥಿಸಿಕೊಳ್ಳುವವರ ಪ್ರತಿವಾದವಾಗಿದೆ.
ಜಿಲ್ಲೆಯ ಶೇ.90 ಜನರಿಗೆ ಡಿಸಿ ಮತ್ತು ಎಸ್‌ಪಿ ಅವರು ಯಾವ ಜಾತಿಗೆ ಸೇರಿದವರು? ಎಲ್ಲಿನವರು? ಎಂಬುದು ಗೊತ್ತಿರಲಿಲ್ಲ. ಈಗ ಆಡಳಿತಾತ್ಮಕ ವಿಚಾರಗಳಿಗೆ ಸಂಬಂಧಿಸಿದಂತೆ ಡಿಸಿ ಮತ್ತು ಎಸ್ಪಿ ನಡುವೆ ಉಂಟಾಗಿರುವ ಸಣ್ಣ ಮನಸ್ತಾಪಕ್ಕೆ ಕೆಲವರು ಜಾತಿ ಬಣ್ಣ ಹಚ್ಚಿ, ಇಬ್ಬರು ಯುವ ಅಧಿಕಾರಿಗಳು ನಡುವಿನ ಕಂದಕವನ್ನು ಮತ್ತಷ್ಟು ಆಳವಾಗಿಸಿದ್ದಾರೆ. ಐದು ತಿಂಗಳ ಹಿಂದೆ ಜಿಲ್ಲೆಗೆ ಬಂದ ಎಸ್‌ಪಿ ಅವರು ಸಾರ್ವಜನಿಕರ ಜೊತೆ ಬೇರೆಯುತ್ತಿಲ್ಲ. ಕಚೇರಿ ಬಿಟ್ಟು ಹೊರ ಬಂದು ಠಾಣೆಗಳಲ್ಲಿ ಏನಾಗುತ್ತಿದೆ ಎಂಬುದನ್ನು ಪರಿಶೀಲಿಸುತ್ತಿಲ್ಲ. ಮರಳು ದಂಧೆ ನಿಯಂತ್ರಣಕ್ಕೆ ಧೈರ್ಯ ತೋರುತ್ತಿಲ್ಲವೆಂಬುದು ಡಿಸಿ ಮಾತ್ರವಲ್ಲದೆ ಅನೇಕರ ಅಭಿಪ್ರಾಯ. ಎಸ್ಪಿಯನ್ನು ಸಮರ್ಥನೆ ಮಾಡಿಕೊಳ್ಳುತ್ತಿರುವವರು ಐದು ತಿಂಗಳಲ್ಲಿ ಮರಳು ದಂಧೆಗೆ ಸಂಬಂಧಿಸಿದಂತೆ 250 ಪ್ರಕರಣಗಳನ್ನು ದಾಖಲಿಸಿಕೊಂಡು 5 ಲಕ್ಷ ವಸೂಲಿ ಮಾಡಿದ್ದಾರೆ. ಮರಳು ದಂಧೆ ತಡೆಯುವುದು ಕೇವಲ ಪೊಲೀಸ್ ಇಲಾಖೆಯ ಕೆಲಸವಲ್ಲವೆಂದು ಹೇಳುವ ಮೂಲಕ ಜಿಲ್ಲಾ ಆಡಳಿತ ಮತ್ತು ಪೊಲೀಸ್ ಇಲಾಖೆಯ ನಡುವೆ ಹೊಂದಾಣಿಕೆ ಇಲ್ಲದಿರುವುದನ್ನು ಪ್ರತಿಪಾದಿಸುತ್ತಿದ್ದಾರೆ. ಡಿಸಿ ಅವರು ಸರ್ಕಾರಕ್ಕೆ ಎಸ್‌ಪಿ ವಿರುದ್ಧ ಬರೆದಿರುವ ಪತ್ರದ ವಿಚಾರ ಮಾಧ್ಯಮಗಳಲ್ಲಿ ಬಂದಿರುವುದಕ್ಕೂ ಕೆಲವರು ಸಿಟ್ಟಾಗಿರುವುದಲ್ಲದೆ, ಇದೆಲ್ಲಾ ಡಿಸಿಯವರ ಕುಮ್ಮಕ್ಕಿನಿಂದಲೇ ಆಗಿದೆ ಎಂದು ಆರೋಪಿಸುತ್ತಿದ್ದಾರೆ. ಡಿಸಿ ಕಾರ್ಯವೈಖರಿಯನ್ನು ಮೆಚ್ಚಿ ಮತ್ತು ಮರಳು ದಂಧೆಯ ವಿರುದ್ಧ ಹೋರಾಡುತ್ತಿರುವವರು ಸುದ್ಧಿಗೋಷ್ಠಿಯಲ್ಲಿ ವ್ಯಕ್ತಪಡಿಸಿರುವ ಅಭಿಪ್ರಾಯಗಳಿಗೆ ಮತ್ತು ಎಸ್ಪಿಯ ವರ್ತನೆ ಖಂಡಿಸಿ ಜು.10ರಂದು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಇದನ್ನು ವಿರೋಧಿಸಿ ಪ್ರತಿ ಹೇಳಿಕೆ ನೀಡಿರುವ ಕೆಲವರು ಎಸ್ಪಿ ವಿರುದ್ಧ ಹೋರಾಟ ನಡೆಸಿದರೆ ಕೋಲಾರ ಬಂದ್ ಮಾಡಿಸುವುದಾಗಿ ಧಮಕಿ ಹಾಕಿರುವುದು ಜಿಲ್ಲೆಯ ಆಡಳಿತಾತ್ಮಕ ಸಾಮರಸ್ಯಕ್ಕೆ ದೊಡ್ಡ ಹೊಡೆತ ನೀಡುವ ನಿಚ್ಚಳ ಸಂದೇಶ.  ಡಿಸಿ ಮತ್ತು ಎಸ್‌ಪಿ ನಡುವೆ ನಿಜಕ್ಕೂ ಏನು ನಡೆದಿದೆ ಎಂಬುದು ತಿಳಿಯಲಾಗದೆ ಜನತೆ ತಬ್ಬಿಬ್ಬು ಆಗಿದ್ದಾರೆ. ಆಡಳಿತಾತ್ಮಕ ವಿಚಾರಗಳ ಹಿನ್ನಲೆಯಲ್ಲಿ ಉಂಟಾಗಿರುವ ಸಣ್ಣ ಗೊಂದಲದ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ಬಂದಿದ್ದರೂ ಸಮಸ್ಯೆ ನಿವಾರಣೆ ಮಾಡಲು ಏಕೆ ಸಾಧ್ಯವಾಗಿಲ್ಲವೆಂಬುದು ಯಕ್ಷ ಪ್ರಶ್ನೆ. ಒಂದು ವಾರರಿಂದ ತಮ್ಮಿಬ್ಬರ ಬಗ್ಗೆ ಕೇಳಿ ಬರುತ್ತಿರುವ ಮಾತುಗಳಿಗೆ ಡಿಸಿ ಮತ್ತು ಎಸ್‌ಪಿ ಸಹಿತ ಯಾವುದೇ ಪ್ರತಿಕ್ರಿಯೆ ನೀಡದೆ ಮೌನಕ್ಕೆ ಶರಣಾಗಿದ್ದಾರೆ. ಆದರೂ ಬೇರೆ ಬೇರೆ ಸಂಘಟನೆಗಳು ಡಿಸಿ ಮತ್ತು ಎಸ್‌ಪಿ ಪರ ಮತ್ತು ವಿರುದ್ಧ ನೀಡುತ್ತಿರುವ ಹೇಳಿಕೆಗಳು ಜಿಲ್ಲೆಯ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ. ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲೆಯ ಜನಪ್ರತಿನಿಧಿಗಳು ಅದಷ್ಟು ಬೇಗನೆ ಮಧ್ಯ ಪ್ರವೇಶಿಸಿ, ಇಬ್ಬರು ಅಧಿಕಾರಿಗಳ ನಡುವೆ ಉಂಟಾಗಿರುವ ವಿವಾದವನ್ನು ಬಗೆಹರಿಸಲು ಮುಂದಾಗಬೇಕು ಎಂಬುದು ಕೋಲಾರ ಜಿಲ್ಲೆಯ ಜನರ ಆಶಯ.

ಕಾನೂನು ಸುವ್ಯವಸ್ಥೆ ಸದನದಲ್ಲಿ ಚರ್ಚೆ
ಕೋಲಾರ: ಜಿಲ್ಲೆಯಲ್ಲಿ ಹದಗಟ್ಟಿರುವ ಕಾನೂನು ಸುವ್ಯವಸ್ಥೆ, ಸರಣಿ ಕಳ್ಳತನ, ಆತ್ಯಾಚಾರ ಪ್ರಕರಣಗಳು ಮತ್ತು ಜಿಲ್ಲಾ ರಕ್ಷಣಾಧಿಕಾರಿಗಳ ಧೋರಣೆ ಬಗ್ಗೆ ಗುರುವಾರ ಸದನದಲ್ಲಿ ಚರ್ಚಿಸುವುದಾಗಿ ವಿಧಾನ ಪರಿಷತ್ ಸದಸ್ಯ ವೈ.ಎ. ನಾರಾಯಣಸ್ವಾಮಿ ತಿಳಿಸಿದರು. ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕೋಲಾರ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ. ಜನರ ಸಮಸ್ಯೆಗಳನ್ನು ಈಡೇರಿಸುವಲ್ಲಿ ಪೊಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿದೆ ಎಂದು ದೂರಿದರು. ಜಿಲ್ಲಾಧಿಕಾರಿ ಡಿ.ಕೆ. ರವಿ ಒಳ್ಳೆಯ ಕೆಲಸಗಳನ್ನು ಮಾಡಿಕೊಂಡು ಹೋಗುತ್ತಿದ್ದು, ಇವರಂತೆ ಎಸ್ಪಿಯವರು ಚುರುಕಾಗಿ ಕೆಲಸ ಮಾಡುತ್ತಿಲ್ಲವೆಂಬ ದೂರುಗಳು ಕೇಳಿ ಬಂದಿವೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಎಸ್ಪಿಯವರು ಜಿಲ್ಲಾಧಿಕಾರಿಗಳ ಜೊತೆ ಸಮನ್ವಯತೆಯಿಂದ ಕೆಲಸ ಮಾಡದಿದ್ದರೆ ಜಿಲ್ಲೆಯಲ್ಲಿ ಕೆಟ್ಟ ವಾತಾವರಣ ಸೃಷ್ಟಿಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು. ಮರಳು ದಂಧೆಗೆ ಸಂಬಂಧಿಸಿದಂತೆ ತಮ್ಮ ಗಮನಕ್ಕೆ ಬಾರದೆ ಯಾವುದೇ ಎಫ್‌ಐಆರ್‌ಗಳನ್ನು ದಾಖಲು ಮಾಡಬಾರದೆಂದು ಎಸ್ಪಿ ಅವರು ತಮ್ಮ ಅಧೀನದಲ್ಲಿರುವ ಅಧಿಕಾರಿಗಳಿಗೆ ಮೌಖಿಕವಾಗಿ ಆದೇಶ ನೀಡಿರುವುದು ಬೇಸರದ ಸಂಗತಿ. ರಾಜಕೀಯ ಒತ್ತಡಗಳಿಗೆ ಮಣಿಯದೆ ಜನರ ಹಿತವನ್ನು ಕಾಪಾಡಬೇಕೆಂದು ಎಸ್ಪಿಯವರಿಗೆ ಸಲಹೆ ನೀಡಿದರು. ಜಿಲ್ಲೆಯಲ್ಲಿ ಮಹಿಳೆಯರ ಮೇಲೆ ಆತ್ಯಾಚಾರ, ಮರಳು ದಂಧೆ, ಕ್ರೈಂ ಪ್ರಕರಣಗಳು ಹೆಚ್ಚಾಗುತ್ತಿವೆ ಇದನ್ನು ತಹಬದಿಗೆ ತರುವುದನ್ನು ಬಿಟ್ಟು ಪ್ರತಿಷ್ಠೆಗಳನ್ನು ಮುಂದಿಟ್ಟುಕೊಂಡು ಮನೆಯಲ್ಲಿ ಕುಳಿತುಕೊಳ್ಳುವುದು ಸರಿಯಲ್ಲವೆಂದು ಟೀಕಿಸಿದರು. ಹದಗಟ್ಟಿರುವ ಜಿಲ್ಲೆಯ ಕಾನೂನು ಸುವ್ಯವಸ್ಥೆಗೆ  ತಹಬದಿಗೆ ತರುವಂತೆ ಮುಖ್ಯಮಂತ್ರಿ ಮತ್ತು ಗೃಹಮಂತ್ರಿಗಳಲ್ಲಿ ಮನವಿ ಮಾಡುವುದಾಗಿ ತಿಳಿಸಿದರು.

ಅಹಿಂದ ಹಿತೋಪದೇಶ
ಕೋಲಾರ: ಜಿಲ್ಲೆಯ ಅಭಿವೃದ್ಧಿಗೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಒಗ್ಗಟ್ಟಿನಿಂದ ಕೆಲಸ ನಿರ್ವಹಿಸದಿದ್ದರೆ ಜನರಿಗೆ ತೊಂದರೆಯಾಗುತ್ತದೆ. ಇವರಿಬ್ಬರು ಜಿಲ್ಲೆಗೆ ಎರಡು ಕಣ್ಣುಗಳಿದ್ದಂತೆ. ತಮ್ಮಲ್ಲಿರುವ ಪ್ರತಿಷ್ಠೆಯನ್ನು ಬದಿಗೊತ್ತಿ ಸಮನ್ವಯತೆಯಿಂದ ಕೆಲಸ ಮಾಡಬೇಕೆಂದು ಅಹಿಂದ ಜಿಲ್ಲಾಧ್ಯಕ್ಷ ಎನ್.ರಾಜಣ್ಣ ಸಲಹೆ ಹಿತೋಪದೇಶ ನೀಡಿದರು.
ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, “B¶¹ÁÚß ಅಧಿಕಾರಿಗಳು ಏನೇ ಸಮಸ್ಯೆ ಇದ್ದರೂ ಸೌಹಾರ್ದತೆಯಿಂದ ಚರ್ಚಿಸಿ ನಿವಾರಿಸಿಕೊಳ್ಳಬೇಕು. ಅವರಿಬ್ಬರ ವಿಚಾರದಲ್ಲಿ ಬೇರೆಯವರು ಮೂಗು ತೂರಿಸಿ ಜನತೆಯಲ್ಲಿ ಗೊಂದಲ ÑÚäÏoÑÚ·ÛÁÚ¥Úß’ ಎಂದು ಸಲಹೆ ನೀಡಿದರು. ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿದ ವಕೀಲ ಮುನಿಸ್ವಾಮಿಗೌಡ, ಶಿವಪ್ರಕಾಶ್ ಅವರು,  ಡಿಸಿಯನ್ನು ಸಮರ್ಥಿಸಿಕೊಂಡು, ಎಸ್ಪಿ ವಿರುದ್ಧ ಹೋರಾಟ ಮಾಡುವುದಾಗಿ ಹೇಳಿರುವುದು ಅನಗತ್ಯ ಸಂಘರ್ಷಕ್ಕೆ ಎಡೆ ಮಾಡಿದೆ. ಒಂದು ವೇಳೆ ಎಸ್ಪಿ ವಿರುದ್ಧ ಪ್ರತಿಭಟನೆ ನಡೆದರೆ ಅದಕ್ಕೆ ಪರ್ಯಾಯವಾಗಿ ಪ್ರತಿಭಟನೆ ನಡೆಯುವುದರಿಂದ ಹೋರಾಟ ಕೈಬಿಡಬೇಕೆಂದು ಆಗ್ರಹಿಸಿದರು. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ, ಮರಳು ದಂಧೆಯನ್ನು ಡಿಸಿ ಮತ್ತು ಎಸ್ಪಿ ಪರಸ್ಪರ ಸೌಹಾರ್ದತೆಯಿಂದ ಕೆಲಸ ಮಾಡಿದರೆ ಮಾತ್ರ ನಿಯಂತ್ರಣ ಮಾಡಲು ಸಾಧ್ಯ. ಅದನ್ನು ಬಿಟ್ಟು ತಮ್ಮ ಪ್ರತಿಷ್ಠೆಗಳನ್ನು ಮುಂದಿಟ್ಟುಕೊಂಡು ಕೆಲಸ ಮಾಡುವುದರಿಂದ ಕಾನೂನು ಸುವ್ಯವಸ್ಥೆ ಮೇಲೆ ಕಟ್ಟ ಪರಿಣಾಮ ಬಿರುವುದರ ಜತೆಗೆ ಉತ್ತಮ ಆಡಳಿತಕ್ಕೆ ಧಕ್ಕೆಯಾಗಲಿದೆ ಎಂದು ಟೀಕಿಸಿದರು. ದಸಂಸ ಮುಖಂಡ ವಿಜಯ ಕುಮಾರ್ ಮಾತನಾಡಿ, ನಾವು ಯಾರ ಪರವಾಗಿ ವಕಲತ್ತು ವಹಿಸುತ್ತಿಲ್ಲ. ಡಿಸಿ ಮತ್ತು ಎಸ್ಪಿ ಇಬ್ಬರೂ ಸಾಮರಸ್ಯದಿಂದ ಕೆಲಸ ಮಾಡಬೇಕೆಂಬ ಒತ್ತಾಸೆ ನಮ್ಮದು ಎಂದರು. ಮುಖಂಡರಾದ ವಕ್ಕಲೇರಿ ರಾಜಪ್ಪ, ಜಾಫರ್, ಹಾರೋಹಳ್ಳಿ ನಾರಾಯಣಸ್ವಾಮಿ, ಆಟೋ ನಾರಾಯಣಸ್ವಾಮಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement