ನಗರಸಭೆ ಅವ್ಯವಹಾರ ತನಿಖೆಗೆ ಆಗ್ರಹ
ನಗರಸಭಾ ಕಚೇರಿಯಲ್ಲಿ ಅವ್ಯವಹಾರ ಹೆಚ್ಚಾಗಿದೆ. ಅನುದಾನ ಖರ್ಚಿನ ಅನುಮೋದನೆಗೆ ಒಂದು ಲೆಕ್ಕ ತೋರಿಸಲಾಗುತ್ತಿದೆ. ಅಸಲಿಗೆ ಬಿಲ್ ಗಳನ್ನು ಬೇರೆ ರೀತಿಯಲ್ಲಿ ಮಾಡಲಾಗುತ್ತಿದೆ ಎಂದು ನಗರಸಭಾ ಸದಸ್ಯೆ ಜಯಮ್ಮ ಆರೋಪಿಸಿದರು. ನಗರಸಭೆಯ ಜೆಸಿಬಿ ವಾಹನ, ಕಾಂಪ್ಯಾಕ್ಟರ್ ದುರಸ್ತಿ ಮತ್ತು ಎಂಜಿನ್ ಆಯಿಲ್ ಸರ್ವೀಸ್ ಹಾಗೂ ದುರಸ್ತಿಗೆ 20,025 ರು.ಗಳನ್ನು ಕೊಟ್ಟಿರುವುದಕ್ಕೆ ಅನುಮೋದನೆ ನೀಡಲಾಗಿದೆ. ವಾಸ್ತವವಾಗಿ ಬಿಲ್ ಮಾಡಿರುವುದು 90 ಸಾವಿರ ರು.ಗಳಿಗೆ. ಇಂತಹ ಅವ್ಯವಹಾರಗಳು ನಿರಂತರವಾಗಿ ನಡೆಯುತ್ತಲೇ ಇದೆ. ಇವುಗಳನ್ನು ಬಯಲಿಗೆಳೆದರೆ ನಗರಸಭೆಗೆ ಉಂಟಾಗಿರುವ ಲಕ್ಷಾಂತರ ರು ನಷ್ಟ ತಿಳಿಯುತ್ತದೆ. ಇದಕ್ಕೆ ಅಧಿಕಾರಿಗಳೇ ಹೊಣೆ. ಈ ಬಗ್ಗೆ ಸಂಪೂರ್ಣ ತನಿಖೆಯಾಗಬೇಕೆಂದು ಅವರು ಒತ್ತಾಯಿಸಿದರು.
ಕಡ್ಲೇ ಪುರಿ ತಿನ್ನಕ್ಕಲ್ಲ
ಸಭೆಯಲ್ಲಿ ಕೇಳಿದ ಪ್ರಶ್ನೆಗಳಿಗೆಲ್ಲಾ ಮಾಹಿತಿಯನ್ನು ತರಿಸಿಕೊಡುವುದಾಗಿ ಹೇಳಿ ನುಣುಚಿಕೊಳ್ಳುತ್ತಿರುವುದಕ್ಕೆ ಅಧಿಕಾರಿಗಳನ್ನು ಸದಸ್ಯರು ತರಾಟೆಗೆ ತೆಗೆದುಕೊಂಡರು. ಸಾಮಾನ್ಯ ಸಭೆಯಲ್ಲಿ ಚರ್ಚಿಸುವ ಸಲುವಾಗಿ ಸಹಾಯಕ ಕಾರ್ಯಪಾಲಕ ಅಭಿಯಂತರರಿಗೆ ಮಾಹಿತಿಯನ್ನು ಕೇಳಿದ್ದರೂ ಸಹ ಕೊಟ್ಟಿಲ್ಲ. ಒಳ ಚರಂಡಿ ಸಂಪರ್ಕ ಕಾಮಗಾರಿ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರುತ್ತಿದ್ದಾರೆ. ಅವರಿಗೆ ಉತ್ತರವನ್ನು ಹೇಳೋದಿಕ್ಕಾಗುತ್ತಿಲ್ಲ. ಈಗಲಾದರೂ ಮಾಹಿತಿ ಕೊಡಿ ಎಂದು ಸದಸ್ಯ ಶ್ರೀನಿವಾಸ್ ಒತ್ತಾಯಿಸಿದರು. ಮಾಹಿತಿ ತರಿಸಿ ಕೊಡುವ ಉತ್ತರ ಅಧಿಕಾರಿಗಳಿಂದ ಕೇಳಿ ಬರುತ್ತಿದ್ದಂತೆ ಇಲ್ಲಿ ಕಡ್ಲೇಪುರಿ ತಿನ್ನುವುದಕ್ಕೆ ನಾವು ಬಂದಿಲ್ಲ, ಇನ್ಯಾವಾಗ ಕೊಡೋದು ಎಂದು ಖಾರವಾಗಿ ತರಾಟೆಗೆ ತೆಗೆದುಕೊಂಡರು. ಇದಕ್ಕೆ ಧ್ವನಿಗೂಢಿಸಿದ ಸದಸ್ಯರು ಎಲ್ಲರಿಗೂ ಮಾಹಿತಿಯನ್ನು ನೀಡದಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಅಧ್ಯಕ್ಷೆ ಮೌನ
ಸಾಮಾನ್ಯ ಸಭೆಯಲ್ಲಿ ಸದಸ್ಯರು ಸಮಸ್ಯೆಗಳನ್ನು ಪ್ರಸ್ತಾಪಿಸಿ ಉತ್ತರ ನೀಡುವಂತೆ ಕೋರುತ್ತಿದ್ದ ಸಂದರ್ಭದಲ್ಲಿ ಮೌನಿಯಾಗಿಯೇ ಕುಳಿತುಕೊಂಡಿದ್ದ ಅಧ್ಯಕ್ಷೆ ಲೀಲಾವತಿಯವರ ವರ್ತನೆಗೆ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಪ್ರತಿಯೊಂದು ಪ್ರಶ್ನೆಗೂ ಅಧ್ಯಕ್ಷರ ಬದಲಿಗೆ ಹಿರಿಯ ಸದಸ್ಯ ಎಸ್ .ಎಂ.ರಫಿಕ್ ಉತ್ತರಿಸುತ್ತಿದ್ದರು. ಪ್ರಶ್ನೆಯನ್ನು ಕೇಳುವುದು, ಹಾಗೆಯೇ ಉತ್ತರವನ್ನು ನೀಡುವುದರಲ್ಲಿ ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುತ್ತಿದ್ದರು. ಇದರಿಂದ ಅಸಮಾಧಾನಗೊಂಡ ಸದಸ್ಯರು, ಅಧ್ಯಕ್ಷರು ಮೌನಿಯಾಗಿ ಕುಳಿತುಕೊಂಡರೆ ಹೇಗೆ, ಸ್ವಯಂ ಅಧ್ಯಕ್ಷರೇ ಉತ್ತರ ಕೊಡಬೇಕೆಂದು ಪಟ್ಟು ಹಿಡಿದರು. ಆದರೂ ಅಧ್ಯಕ್ಷರು ಸಭೆ ಮುಗಿಯವರೆಗೂ ಮೌನ ಮುರಿಯಲಿಲ್ಲ.