ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ವಂಚನೆ ಆರೋಪ: ವ್ಯಕ್ತಿ ಬಂಧನ

Srinivasa Murthy VN
Updated On : 10 Jul 2014, 1:11 am

ಚಿಕ್ಕಬಳ್ಳಾಪುರ: ಚಿನ್ನಾಭರಣಗಳ ಪಾಲಿಶ್ ಹೆಸರಿನಲ್ಲಿ ಜನರನ್ನು ವಂಚಿಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಮಹಾರಾಷ್ಟ್ರ ಮೂಲದ ಶಿವಕುಮಾರ್ (32). ನಗರದ ಕೆಳಗಿನ ತೋಟದ ಬಡಾವಣೆಯಲ್ಲಿ ಚಿನ್ನಾಭರಣಗಳನ್ನು ಪಾಲಿಶ್ ಮಾಡಿಕೊಡುವುದಾಗಿ ಈತ ತನ್ನ ಗೆಳೆಯನೊಂದಿಗೆ ಮನೆ ಮನೆಗೆ ಹೋಗಿ ಕೇಳುತ್ತಿದ್ದ.  ಭವ್ಯ ಎಂಬುವರು ತಮ್ಮ ಕೊರಳಿನಲ್ಲಿದ್ದ ಚಿನ್ನದ ಸರವನ್ನು ಕೊಟ್ಟಿದ್ದಾರೆ. ಪಾಲಿಶ್  ಮಾಡಿದ ನಂತರ 12 ಗ್ರಾಂ ಚಿನ್ನದ ಸರ 7 ಗ್ರಾಂ ಕಡಿಮೆಯಾಗಿದೆ. ಆಗ ಆಕೆನೆರೆಹೊರೆಯವರಿಗೆ ವಿಷಯ ತಿಳಿಸಿದ್ದು ಶಿವಕುಮಾರ್‌ನನ್ನು ಜನರು ಹಿಡಿದುಕೊಂಡು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಮತ್ತೊಬ್ಬ ಪರಾರಿಯಾಗಿದ್ದಾನೆ.  ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮಳವಳ್ಳಿ ತಾಪಂ ಅಧ್ಯಕ್ಷ ಚುನಾವಣೆ 17 ರಂದು
ಮಳವಳ್ಳಿ: ತಾಲೂಕು ಪಂಚಾಯತಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಜುಲೈ 17 ರಂದು ಚುನಾವಣೆ ನಡೆಯಲಿದ್ದು  ಕಾಂಗ್ರೆಸ್ ಸದಸ್ಯರ ನಡುವೆ  ನೇರ ಪೈಪೋಟಿ ಪ್ರಾರಂಭವಾಗಿದ್ದು ಇದನ್ನೆ ಅಸ್ತ್ರವನ್ನಾಗಿ ಮಾಡಿಕೊಂಡು ಜೆಡಿಎಸ್ ಕೂಡ ಅಧಿಕಾರ ಹಿಡಿಯಲು ತೆರೆ ಮರೆಯಲ್ಲಿ ಯತ್ನ ನಡೆಸುತ್ತಿದೆ.25 ಸದಸ್ಯ ಬಲದ ಮಳವಳ್ಳಿ ತಾಲೂಕು ಪಂಚಾಯತಿಯಲ್ಲಿ 12 ಕಾಂಗ್ರೆಸ್, 11 ಜೆಡಿಎಸ್, 1 ಬಿಜೆಪಿ ಹಾಗೂ 1 ಪಕ್ಷೇತರ ಸದಸ್ಯರುಗಳಿದ್ದು ಕ್ಷೇತ್ರದ ಶಾಸಕ ಪಿ.ಎಂ ನರೇಂದ್ರಸ್ವಾಮಿ ಬೆಂಬಲಿತ ಕಾಂಗ್ರೆಸ್ ಸದಸ್ಯರೇ ಅಧಿಕಾರ ಹಿಡಿದಿದ್ದು ಈವರೆಗೆ ಕಾಂಗ್ರೆಸ್‌ನ ಸುಮಿತ್ರಾ, ರಾಧಾ ಹಾಗೂ ಬಸವರಾಜ್ ಅಧ್ಯಕ್ಷರಾದರೆ ಉಪಾಧ್ಯಕ್ಷ ಸ್ಥಾನವೂ ಕಾಂಗ್ರೆಸ್ ಪಾಲಾಗಿಯೆ ಉಳಿದಿತ್ತು. ಇನ್ನುಳಿದ 20 ತಿಂಗಳ ಅವಧಿಗೆ ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಪ್ರವರ್ಗ 2ಎಗೆ ಮೀಸಲಾಗಿದ್ದು ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ನಿಗದಿಯಾಗಿದೆ. ನಿರ್ಗಮಿತ ಅಧ್ಯಕ್ಷ ಬಸವರಾಜ್ ಅವರ ಅವಧಿ ಕೊನೆಗೊಂಡ ಹಿನ್ನೆಲೆಯಲ್ಲಿ ಪ್ರಭಾರ ಅಧ್ಯಕ್ಷರಾಗಿರುವ ದುಗ್ಗನಹಳ್ಳಿ ಕ್ಷೇತ್ರದ ಬಂಡೂರು ಗ್ರಾಮದ ಚಿಕ್ಕಲಿಂಗಯ್ಯ ಹಾಲಿ ಪ್ರಭಾರ ತಾಲೂಕು ಪಂಚಾಯತಿ ಅಧ್ಯಕ್ಷರಾಗಿದ್ದು ಕ್ಷೇತ್ರದ ಶಾಸಕ ನರೇಂದ್ರಸ್ವಾಮಿಯ ಆತ್ಮೀಯರು. ಕುರುಬ ಸಮಾಜದ ಹಿರಿಯ ಮುಖಂಡ ಹಾಗೂ ತಾಲೂಕಿನ ಎಲ್ಲ ವರ್ಗಗಳ ಜೊತೆ ಒಡನಾಟವನ್ನಿಟ್ಟುಕೊಂಡಿರುವ ಹಾಲಿ ಪ್ರಭಾರ ಅಧ್ಯಕ್ಷರಾದ ಚಿಕ್ಕಲಿಂಗಯ್ಯ ಅವರೆ ಮುಂದಿನ ಅಧ್ಯಕ್ಷರಾಗುವುದು ಬಹುತೇಕ ಖಚಿತವಾಗಿದೆ.ಆದರೆ ಕಾಂಗ್ರೆಸ್ ಪಕ್ಷದವರೆ ಆದ ಬಿ.ಜಿ.ಪುರ ಕ್ಷೇತ್ರದ ಗುರುಸ್ವಾಮಿ, ಹುಸ್ಕೂರು ಕ್ಷೇತ್ರದ ಮಹದೇವ್ ಹಾಗೂ ಚಿಕ್ಕಲಿಂಗಯ್ಯ ನಡುವೆ ತೀವ್ರ ಪೈಪೋಟಿ ನಡೆದು ರಾಜಕೀಯ ಅಧಿಕಾರ ಕಿತ್ತಾಟದಲ್ಲಿ ಮೂವರ ಜಗಳ ಮತ್ತೊಬ್ಬರಿಗೆ ಲಾಭ ಎಂಬುದನ್ನು ಇಲ್ಲಿ ಅಲ್ಲಗಳೆಯುವಂತಿಲ್ಲ. ಅಲ್ಲದೆ ತಾ.ಪಂ ನಲ್ಲಿ ಜೆಡಿಎಸ್ 11 ಸದಸ್ಯರ ಪ್ರಾಬಲ್ಯ ಹೊಂದಿದ್ದು ಸಣ್ಣ ಪುಟ್ಟ ಒಡಕುಗಳನ್ನು ರಾಜಕೀಯವಾಗಿ ಉಪಯೋಗಿಸಿಕೊಂಡರೂ ಅಚ್ಚರಿ ಇಲ್ಲ. ಹೀಗಾಗಿ ಅಧ್ಯಕ್ಷ, ಉಪಾಧ್ಯಕ್ಷ ಗದ್ದುಗೆ ಯಾವ ಕಡೆ ವಾಲುವುದು ಎಂಬುದನ್ನು ಜುಲೈ 17ರಂದೆ ನಿರ್ಧರಿಸಬೇಕಾಗಿದೆ. ಜುಲೈ 17ರಂದು ಬೆಳಗ್ಗೆ 11 ಗಂಟೆಗೆ ಉಮೇದುವಾರಿಕೆ ಅರ್ಜಿ ಸಲ್ಲಿಸಬಹುದಾಗಿದ್ದು ಮಧ್ಯಾಹ್ನ 1 ಗಂಟೆಗೆ ಚುನಾವಣೆ ನಡೆಯಲಿದೆ. ಚುನಾವಣಾಧಿಕಾರಿಗಳಾಗಿ ಮಂಡ್ಯ ಉಪವಿಭಾಗಾಧಿಕಾರಿ ಶಾಂತ ಹುಲ್ಮನಿ ಕಾರ್ಯನಿರ್ವಹಿಸಲಿದ್ದಾರೆ.

ಮೀನುಗಾರರ ಮಹಾ ಮಂಡಳಿಗೆ ಚನ್ನಪ್ಪ ಆಯ್ಕೆ
ಮಂಡ್ಯ: ರಾಜ್ಯ ಮೀನುಗಾರರ ಮಹಾ ಮಂಡಳಿ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯಿಂದ ನಿರ್ದೇಶಕರಾಗಿ ಆಯ್ಕೆಯಾದ ಚನ್ನಪ್ಪ ಅವರನ್ನು ಮಾಜಿ ಶಾಸಕ ಲಾಲ್‌ಜಿ ಆರ್. ಮೆಂಡನ್ ಸನ್ಮಾನಿಸಿದರು. ನಂತರ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರದಲ್ಲಿ ಸಿಗುವ ಎಲ್ಲಾ ಸೌಲತ್ತುಗಳನ್ನು ಮೀನುಗಾರರು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಆರ್ಥಿಕ ಸ್ವಾವಲಂಭಿಗಳಾಗುವಂತೆ ಕರೆ ನೀಡಿದರು.ರಾಜ್ಯದ ಕೆಲವೆಡೆ ಬಂಡವಾಳ ಶಾಹಿಗಳು ಮೀನುಗಾರರ ಸಹಕಾರ ಸಂಘಗಳನ್ನು ಸ್ಥಾಪಿಸಿ ಹುಟ್ಟು ಮೀನುಗಾರರಿಗೆ ಮರಣ ಶಾಸನ ಬರೆಯಲು ಮುಂದಾಗಿದ್ದಾರೆ. ಸರ್ಕಾರದ ಸೌವಲತ್ತುಗಳನ್ನು ಅವರೇ ಬಳಕೆ ಮಾಡಿಕೊಳ್ಳುವ ಮೂಲಕ ನೈಜ ಫಲಾನುವಿಗಳಿಗೆ ಸೌಲಭ್ಯಗಳು ದೊರಕದಂತೆ ಮಾಡುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.ಇಂತಹ ನಕಲಿ ಸಂಘಗಳಿಂದ ನೈಜ ಮೀನುಗಾರರಿಗೆ ತೊಂದರೆಯಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ. ಆದ್ದರಿಂದ ಸಂಘಗಳನ್ನು ಗುರುತಿಸಿ ವಜಾ ಮಾಡುವಂತೆ ಮುಖ್ಯಮಂತ್ರಿಗಳು ಹಾಗೂ ಮೀನುಗಾರಿಕಾ ಸಚಿವರನ್ನು ಒತ್ತಾಯಿಸಿದರು.ಈ ಹಿಂದೆ ಒಂದು ಎಕರೆ ಗುತ್ತಿಗೆ ಪಡೆಯಲು 150 ರು. ಇದ್ದ ದರವನ್ನು ದಿಢೀರ್ 500 ರು.ಗಳಿಗೆ ಹೆಚ್ಚಳ ಮಾಡಲಾಗಿದೆ. ಇದರಿಂದ ಬಡ ಮೀನುಗಾರರ ಹೊಟ್ಟೆ ಮೇಲೆ ಬರೆ ಎಳೆದಂತಾಗಿದೆ ಎಂದು ಆಸಮಾಧಾನ ವ್ಯಕ್ತಪಡಿಸಿದರು. ಸರ್ಕಾರದ ವತಿಯಿಂದ ಮೀನುಗಾರರಿಗೆ ಸಿಗುವ ವಸತಿ ಯೋಜನೆಯನ್ನು ಸಹಕಾರ ಸಂಘಗಳ ಮೂಲಕವೇ ನೀಡಬೇಕು ಎಂದು ಒತ್ತಾಯಿಸಿದರು. ತಾಪಂ ಮಾಜಿ ಅಧ್ಯಕ್ಷ ಮಾಧು, ರಾಜ್ಯ ಸಂಘಟನಾ ಕಾರ್ಯದರ್ಶಿ ಹಾಡ್ಯ ಉಮೇಶ್, ಬಿ. ಪುಟ್ಟಸ್ವಾಮಿ, ಎಲ್‌ಐಸಿ ಚಂದ್ರಶೇಖರ್, ಜಯರಾಂ, ಶ್ರೀಧರ್ ಮತ್ತಿತರರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement