ಪತ್ರಕರ್ತರಲ್ಲಿ ಇಚ್ಛಾ ಶಕ್ತಿ ಕೊರತೆ
ಬಂಗಾರಪೇಟೆ: ಸಮಾಜದ ತಪ್ಪುಗಳನ್ನು ತಿದ್ದುವ ಪತ್ರಕರ್ತರು ವರದಿ ಮಾಡುವ ಮುನ್ನ ವರದಿಯ ಸತ್ಯಾಸತ್ಯತೆ ಪರಿಶೀಲಿಸಿ ಪ್ರಕಟಿಸಬೇಕು ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳಿದರು.
ಪಟ್ಟಣದ ಕಾರ್ಯನಿರತ ಪತ್ರಕರ್ತರ ಸಂಘದ ಹಾಗೂ ಲಯನ್ಸ್ ಕ್ಲ್ಲಬ್ ಆಶ್ರಯದಲ್ಲಿ ನಡೆದ ಪತ್ರಿಕಾ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಪತ್ರಕರ್ತರಲ್ಲಿ ಇಚ್ಚಾಶಕ್ತಿ ಕೊರತೆಯಿಂದ ಪರಸ್ಪರ ಕೆಸರೆರೆಚಾಟದಲ್ಲಿ ತೊಡಗಿರುವುದು ಶೋಚನೀಯ ಎಂದರು. ಕಳೆದ 12ವರ್ಷಗಳಿಂದ ಪತ್ರಕರ್ತರ ಸಂಘದ ಭವನ ಇದ್ದರೂ ಚಟುವಟಿಕೆ ಇಲ್ಲದೆ ನಿಷ್ಕ್ರಿಯವಾಗಿದ್ದು, ಇನ್ನು ಮುಂದಾದರೂ ಕ್ರಿಯಾಶೀಲರಾಗಿರಬೇಕು. ಶಾಸಕರ ನಿಧಿಯಿಂದ ರು. 2ಲಕ್ಷ ನೀಡುವುದಾಗಿ ಭರವಸೆ ನೀಡಿದರು. ಕೋಲಾರ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ. ಗೋಪಿನಾಥ್ ಮಾತನಾಡಿ, ಪತ್ರಕರ್ತರು ರಾಜಕೀಯ ಮಾಡಬಾರದು. ಯಾವುದೇ ಪಕ್ಷದ ಜೊತೆ ಗುರುತಿಸಿಕೊಳ್ಳಬಾರದು. ಎಲ್ಲಿ ಅನ್ಯಾಯ ನಡೆದರೂ ಅಲ್ಲಿಗೆ ತೆರಳಿ ಅನ್ಯಾಯಕ್ಕೊಳಗಾದವರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಬೇಕು ಎಂದರು. ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ತಾಲೂಕು ಕೇಂದ್ರದಲ್ಲಿ ಪತ್ರಕರ್ತರ ಭವನ ನಿರ್ಮಿಸಿದ ಕೀರ್ತಿ ಪಟ್ಟಣ ಪತ್ರಕರ್ತರಿಗೆ ಸಲ್ಲುತ್ತದೆ. ಆದರೆ ಅಂದಿನಿಂದ ಹೊಂದಾನಿಕೆಯ ಕೊರತೆಯಿಂದ 12ವರ್ಷ ಭವನಕ್ಕೆ ಬೀಗ ಜಡಿದಿರುವುದು ದುರಂತವಾಗಿದೆ ಎಂದರು. ಪ್ರಧಾನ ಕಾರ್ಯದರ್ಶಿ ಕೆ.ಎಸ್. ಗಣೇಶ್, ರಾಜ್ಯ ಸಮಿತಿ ಸದಸ್ಯ ವಾಸುದೇವ ಹೊಳ್ಳ, ಖಜಾಂಚಿ ಮುನಿರಾಜು ಮಾತನಾಡಿದರು. ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಚಂದ್ರಾರೆಡ್ಡಿ, ಕನ್ನಡಸಂಘದ ಅಧ್ಯಕ್ಷ ಪಲ್ಲವಿಮಣಿ, ತಾಪಂ ಅಧ್ಯಕ್ಷೆ ವೆಂಕಟರತ್ನಮ್ಮ, ಉಪಾಧ್ಯಕ್ಷ ಶಾಂತಕುಮಾರಿ, ಎಪಿಎಂಸಿ ಅಧ್ಯಕ್ಷ ಬಿ.ವಿ. ಮಹೇಶ್ ಇದ್ದರು.
ಉನ್ನತ ಚಿಂತನೆಯಿಂದ ಅತ್ಯುನ್ನತ ಸ್ಥಾನ
ಮುಳಬಾಗಲು: ಶೈಕ್ಷಣಿಕವಾಗಿ ಉನ್ನತ ಶ್ರೇಣಿ ಪಡೆಯುವುದು ಎಷ್ಟು ಮುಖ್ಯವೋ, ಪಾಲಕರ ಕಷ್ಟ ಸುಖಗಳಿಗೆ ಸ್ಪಂದಿಸುವುದು ಅಷ್ಟೇ ಮುಖ್ಯ ಎಂದು ಹೈಕೋರ್ಟ್ ನ್ಯಾಯಾಧೀಶ ಎಚ್.ಎನ್. ನಾಗಮೋಹನ ದಾಸ್ ಹೇಳಿದರು.
ಸಂತೆ ಮೈದಾನದ ಸಾಯಿ ಶಕ್ತಿನಗರದಲ್ಲಿರುವ ಶ್ರೀಶಿರಡಿ ಸಾಯಿಬಾಬಾ ದೇವಾಲಯದಲ್ಲಿ ಆಯೋಜಿಸಿದ್ದ ಎರಡನೇ ವಾರ್ಷಿಕೋತ್ಸವದಲ್ಲಿ ಭಾನುವಾರ ಭಾಗವಹಿಸಿ ಮಾತನಾಡಿದರು. ವಿದ್ಯಾರ್ಥಿಗಳು ಉನ್ನತ ಚಿಂತನೆಗಳನ್ನು ಮೈಗೂಡಿಸಿಕೊಂಡರೆ ಉನ್ನತ ಸ್ಥಾನ ಪಡೆಯಬಹುದೆಂದರು. ಕರ್ನಾಟಕ ಭೂ ಅಭಿವೃದ್ಧಿ ಬ್ಯಾಂಕ್ ಮ್ಯಾನೇಜಿಂಗ್ ಡೈರೆಕ್ಟರ್ ಎಂ.ವಿ. ಸಾವಿತ್ರಿ ಮಾತನಾಡಿ, ಗ್ರಾಮೀಣ ಪ್ರಾಂತ್ಯದ ಮಕ್ಕಳು ಈಚಿನ ದಿವಸಗಳಲ್ಲಿ ಉತ್ತಮ ಅಂಕಗಳನ್ನು ಗಳಿಸುತ್ತಿರುವುದು ಸಂತಸದ ವಿಷಯವೆಂದರು.ಡಿವೈಎಸ್ಪಿ ಸಿದ್ದೇಶ್ವರ್, ಯುವ ಮುಖಂಡ ಕಲ್ಲುಪಲ್ಲಿ ಪ್ರಕಾಶ್, ಶಾರದಾ ಕಾಲೇಜು ಪ್ರಾಂಶುಪಾಲ ಪ್ರಕಾಶ್, ನಂಗಲಿ ಮಧುಸೂದನ್, ಶಿಕ್ಷಕರ ಸಂಘದಜಗನ್ನಾಥ್ ಮುಂತಾದವರು ಭಾಗವಹಿಸಿದ್ದರು. ದೇವಾಲಯದಲ್ಲಿ ವಿಶೇಷ ಪಂಚಾಮೃತಾಭಿಷೇಕ, ಮಹಾಮಂಗಳಾರತಿ ನಡೆಯಿತು.