ಬೆಲೆ ನಿಗದಿ ಯೋಜನೆ ಜಾರಿ
ಬಂಗಾರಪೇಟೆ: ರೈತರು ಬೆಳೆದ ಯಾವುದೇ ಬೆಳೆಗೆ ಸೂಕ್ತ ಮಾರುಕಟ್ಟೆ ಹಾಗೂ ಸೂಕ್ತ ಬೆಲೆ ನಿಗದಿಪಡಿಸುವ ಯೋಜನೆ ಪ್ರಥಮ ಬಾರಿಗೆ ರಾಜ್ಯ ಸರ್ಕಾರ ಜಾರಿಗೆ ತರುತ್ತಿದೆ. ರೈತರು ಇನ್ನು ಮುಂದೆ ಬೆಳೆಗೆ ಬೆಲೆ ಸಿಗಲಿಲ್ಲ ಎಂದು ಕೊರಗುವ ಅಗತ್ಯವಿಲ್ಲ ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳಿದರು. ತಾಲೂಕಿನ ಕುಪ್ಪನಹಳ್ಳಿ ಗ್ರಾಮದಲ್ಲಿ ಕೃಷಿ ಇಲಾಖೆಯಿಂದ ಹಮ್ಮಿಕೊಂಡಿದ್ದ ಭೂಚೇತನ ಯೋಜನೆಯಡಿ ತರಬೇತಿ ಹಾಗೂ ರಾಗಿ ಪ್ರೋತ್ಸಾಹದ ಪರಿಕರಣೆಗಳನ್ನು ವಿತರಿಸಿ ಮಾತನಾಡಿದರು. ತಾಲೂಕನ್ನು ಬರ ಎಂಬ ಭೂತ ಸತತವಾಗಿ ಹಿಂಬಾಲಿಸಿಕೊಂಡು ಬರುತ್ತಿದೆ. ಈ ಪರಿಸ್ಥಿತಿಯಲ್ಲಿ ರೈತರನ್ನು ಕೃಷಿಯತ್ತ ಆಕರ್ಷಿಸಲು ಸರ್ಕಾರ ಹತ್ತಾರು ಯೋಜನೆಗಳನ್ನು ಜಾರಿಗೆ ತಂದಿದೆ. ಈ ಯೋಜನೆಗಳ ಲಾಭವನ್ನು ರೈತರು ಪಡೆದುಕೊಳ್ಳಬೇಕು ಎಂದು ಹೇಳಿದರು. ಕೃಷಿ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜ್ ಭೂಚೇತನ ಯೋಜನೆ ಹಾಗೂ ರಾಗಿ ಪ್ರೋತ್ಸಾಹ ಯೋಜನೆ ಬಗ್ಗೆ ಮಾಹಿತಿ ನೀಡಿದರು. ತಾಪಂ ಅಧ್ಯಕ್ಷೆ ವೆಂಕಟರತ್ನಮ್ಮ, ಉಪಾಧ್ಯಕ್ಷ ಶಾಂತಕುಮಾರಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಾರ್ಥಸಾರಥಿ, ಗ್ರಾಪಂ ಸದಸ್ಯರಾದ ಚೌಡಗೌಡ, ತಾಂತ್ರಿಕ ಅಧಿಕಾರಿ ಸಂಪತ್ ಕುಮಾರ್, ಸಹಾಯಕ ಕೃಷಿ ಅಧಿಕಾರಿ ಮುನುರಾಜು ಮತ್ತಿತರರು ಇದ್ದರು.
ಸಂಕೀರ್ತನಾ ಗಿರಿಪ್ರದಕ್ಷಿಣೆ
ಚಿಂತಾಮಣಿ: ತಾಲೂಕಿನ ಪುರಾಣ ಪ್ರಸಿದ್ಧ ಆಲಂಬಗಿರಿ ಬೆಟ್ಟದ ಪ್ರಕೃತಿಯ ತೊಪ್ಪಲಿನಲ್ಲಿ ಹುಣ್ಣಿಮೆ ಪ್ರಯುಕ್ತ ಸಂಕೀರ್ತನಾ ಗಿರಿಪ್ರದಕ್ಷಿಣೆ ಕಾರ್ಯಕ್ರಮ ನಡೆಯಿತು.
ಪ್ರತಿಮಾಸದ ಹುಣ್ಣಿಮೆಯ ದಿನ ಸಂಜೆ 5 ಗಂಟೆಗೆ ಆಲಂಬಗಿರಿಯ ಬೆಟ್ಟದ ತೊಪ್ಪಲಿನಲ್ಲಿ ಸುಮಾರು 500 ಜನರ ಭಕ್ತರ ದಂಡು ಸೇರುತ್ತಾರೆ. ಇವರಿಂದ ಆಲಂಬಗಿರಿಯ ಬೆಟ್ಟದ ಗಿರಿಪ್ರದಕ್ಷಿಣೆ ನಡೆಯುತ್ತಿದೆ. ಅರ್ಚಕರು ಪೂಜಾ ಕೈಕಂರ್ಯವನ್ನು ನೆರವೇರಿಸಿ, ಸಂಕೀರ್ತನೆಯೊಂದಿಗೆ ಶ್ರದ್ಧಾಭಕ್ತಿಗಳಿಂದ ಗಿರಿಪ್ರದಕ್ಷಿಣೆಗೆ ತೆರಳುವುದು ವಿಶೇಷ. ಹುಣ್ಣಿಮೆ ಗಿರಿಪ್ರದಕ್ಷಿಣೆಯಲ್ಲಿ ಕೈವಾರ ಕ್ಷೇತ್ರದ ಧರ್ಮಾಧಿಕಾರಿಗಳಾದ ಡಾ. ಎಂ.ಆರ್. ಜಯರಾಮ್ ಅವರು ಭಾಗವಹಿಸಿದ್ದರು. ಅವರೊಂದಿಗೆ ಹಲವಾರು ಭಕ್ತರು ಗಿರಿಪ್ರದಕ್ಷಿಣೆ ಮಾಡಿದರು.
ಅದ್ಧೂರಿ ಪುಷ್ಪ ಪಲ್ಲಕ್ಕಿ ಉತ್ಸವ
ಮಾಲೂರು: ಇಲ್ಲಿನ ಶಿರಡಿ ಸಾಯಿ ಸೇವಾ ಟ್ರಸ್ಟ್ ವತಿಯಿಂದ ಗುರುಪೌರ್ಣಿಮೆ ಅಂಗವಾಗಿ ಶನಿವಾರ ಸಂಜೆ ಪಟ್ಟಣದಲ್ಲಿ ಅದ್ಧೂರಿಯ ಶ್ರೀ ಸಾಯಿನಾಥ ಪುಷ್ಪ ಪಲ್ಲಕ್ಕಿ ಉತ್ಸವ ನಡೆಯಿತು. ಪಟ್ಟಣದ ಶ್ರೀ ಶಂಕರನಾರಾಯಣಸ್ವಾಮಿ ದೇವಾಲಯದಲ್ಲಿ ಬೆಳಿಗ್ಗೆ ಸ್ವಾಮಿಗೆ ಪಂಚಾಮೃತ ಅಭಿಷೇಕ ನಡೆಯಿತು.ನಂತರ ಅಖಂಡ ಭಜನೆ, ಕಾಕಡಾರತಿ ನಡೆಯಿತು. ಸಂಜೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬೀಳುತ್ತಿದ್ದ ಮಳೆಯ ನಡುವೆಯೇ ಸಾಯಿನಾಥರ ಅದ್ಧೂರಿ ಪುಷ್ಪ ಪಲ್ಲಕ್ಕಿ ಉತ್ಸವ ನಡೆಯಿತು. ಮಹಿಳಾ ಭಕ್ತ ಮಂಡಳಿ ಹಾಗೂ ಸಾಯಿನಾಥ ಯುವ ಮಂಡಳಿರವರಿಂದ ನೃತ್ಯ-ಭಜನೆ ಮೂಲಕ ಉತ್ಸವ ನಡೆಯಿತು. ಟ್ರಸ್ಟ್ ಗೌರವಾಧ್ಯಕ್ಷ ಸಫಾರಿ ಕೃಷ್ಣಪ್ಪ, ಉಪಾಧ್ಯಕ್ಷ ಮುನಿಕೃಷ್ಣಪ್ಪ, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ರೆಡ್ಡಿ, ಮಂಜುನಾಥ್, ನರಸಿಂಹ, ರಾಘವೇಂದ್ರ, ಜಯಶೀಲನ್, ಲಿಖಿತ್, ವಾಸುದೇವ, ಮಣಿ, ಮಂಜುನಾಥ್ ರೆಡ್ಡಿ, ಮಂಜುನಾಥ್ ಸಿಂಗ್, ಬೇಬಿರಾಣಿ, ಅನುಸೂಯಮ್ಮ, ಭಾಗ್ಯಮ್ಮ, ಅಶೋಕ್ ಇದ್ದರು.
ಸಾಯಿಬಾಬಾ ಪಾದುಕೆ ದರ್ಶನ
ಗುರುಪೌರ್ಣಿಮೆ ಅಂಗವಾಗಿ ಸ್ಥಳೀಯ ಶ್ರೀ ಶಿರಡಿ ಸಾಯಿ ಸೇವಾ ಟ್ರಸ್ಟ್ ಪಟ್ಟಣದ ಶ್ರೀ ಶಂಕರನಾರಾಯಣಸ್ವಾಮಿ ದೇವಾಲಯದ ಸಾಯಿ ಮಂದಿರದಲ್ಲಿ ಶಿರಡಿಯಿಂದ ನೇರವಾಗಿ ಬಂದಿರುವ ಶ್ರೀ ಶಿರಡಿ ಸಾಯಿಬಾಬಾ ಅವರ ಪಾದುಕೆಗಳ ದರ್ಶನವನ್ನು ಭಾನುವಾರ ಏರ್ಪಡಿಸಲಾಗಿತ್ತು. ಶಿರಡಿಯಿಂದ ನೇರವಾಗಿ ಬಂದಿರುವ ಬಾಬಾ ಪಾದುಕೆಗಳನ್ನು ಬೆಳಿಗ್ಗೆ 7ರಿಂದ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಟ್ರಸ್ಟ್ ನ ಸದಸ್ಯರುಗಳು ಬಂದ ಭಕ್ತಾಧಿಗಳಿಗೆ ಸುಗುವ ದರ್ಶನಕ್ಕೆ ವ್ಯವಸ್ಥೆ ಮಾಡಿದರು. ಶಾಸಕ ಮಂಜುನಾಥ್ಗೌಡ ಪಾದುಕೆಗಳ ದರ್ಶನ ಪಡೆದರು.
ಕಾಣೆಯಾದ ಮಹಿಳೆ ಶವವಾಗಿ ಪತ್ತೆ
ಮಾಲೂರು: ಮೂರು ದಿನಗಳ ಹಿಂದೆ ಮನೆಯಿಂದ ಕಾಣೆಯಾಗಿದ್ದ ಮಹಿಳೆಯೂಬ್ಬಳು ತಾಲೂಕಿನ ನೂಸರೆಗೆ ಗ್ರಾಮದ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ವೆಂಕಟಮ್ಮ(54) ಮೃತಪಟ್ಟವಳು. 3 ದಿನಗಳ ಹಿಂದೆ ಮನೆಯಿಂದ ಕಾಣೆಯಾಗಿದ್ದ ವೆಂಕಟಮ್ಮ ಅಂದೇ ಕೆರೆಗೆ ಬಿದ್ದಿರಬಹುದು ಎಂದು ಶಂಕಿಸಲಾಗಿದೆ. ಕಳೆದ ಒಂದು ತಿಂಗಳಲ್ಲಿ ತಂದೆ ಹಾಗೂ ಮಾವನನ್ನು ಕಳೆದುಕೊಂಡಿರುವ ವೆಂಕಟಮ್ಮ ತನ್ನ ಕಣ್ಣಿನ ದೃಷ್ಟಿಯನ್ನು ಕಳೆದುಕೊಂಡಿದ್ದಳು. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ದ್ವಿಚಕ್ರ ವಾಹನಗಳ್ಳನ ಬಂಧನ
ಕೋಲಾರ: ನಗರದಲ್ಲಿ ದ್ವಿಚಕ್ರ ವಾಹನಗಳನ್ನು ಕದ್ದು ತಲೆ ಮರಿಸಿಕೊಂಡಿದ್ದ ಕಳ್ಳನನ್ನು ಜಿಲ್ಲಾ ಕ್ರೈಂ ಬ್ರಾಂಚ್ ಪೊಲೀಸರು ಬಂಧಿಸಿ, ಆರೋಪಿಯಿಂದ 6 ದ್ವಿಚಕ್ರ ವಾಹನಗಳನ್ನು ವಶ ಪಡೆಸಿಕೊಂಡಿದ್ದಾರೆ. ಮೂಲತ- ನಗರದ ಹಾರೋಹಳ್ಳಿಯ ನಿವಾಸಿಯಾಗಿರುವ ಆರೋಪಿ ಚಂದ್ರ(30)ಪ್ರಸ್ತುತ ಇಲ್ಲಿನ ನೂರ್ನಗರದಲ್ಲಿ ವಾಸ ಮಾಡುತ್ತಿದ್ದು ನಗರದ ವಿವಿಧೆಡೆ ದ್ವಿಚಕ್ರ ವಾಹನವನ್ನು ಕಳ್ಳತನ ಮಾಡಿದ್ದ. ಡಿಸಿಐಬಿ ಇನ್ಸ್ಪೆಕ್ಟರ್ ಮೋಹನ್ ಕುಮಾರ್ ಖಚಿತ ಮಾಹಿತಿ ಆಧರಿಸಿ ಶ್ರೀನಿವಾಸಪುರ ವೃತ್ತದ ಬಳಿ ಗಸ್ತು ಮಾಡುತ್ತಿದ್ದಾಗ ಆರೋಪಿ ಚಂದ್ರ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದದ್ದು ಗಮನಿಸಿ ಹಿಡಿಯಲು ಯತ್ನಿಸಿದರು. ಆರೋಪಿ ಪರಾರಿ ಆಗಲು ಯತ್ನಿಸಿದಾಗ ಹಿಮ್ಮೆಟ್ಟಿ ಹಿಡಿದು ವಿಚಾರಿಸಿದಾಗ ನಗರದ ವಿವಿಧೆಡೆ ದ್ವಿಚಕ್ರ ವಾಹನವನ್ನು ಕಳವು ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ನೀಡಿದ ಮಾಹಿತಿಯ ಮೇರೆಗೆ ತನಿಖೆ ಕೈಗೊಂಡು ಕಳವು ಮಾಡಿದ್ದ ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಗಲ್ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ. ಪೊಲೀಸ್ ಸಿಬ್ಬಂದಿ ಮುನಿವೆಂಕಟಸ್ವಾಮಿ, ರಾಘವೇಂದ್ರ, ಮುನಿಸ್ವಾಮಿ, ರಾಘವೇಂದ್ರ, ವಿನಾಯಕ, ಜಾವಿದ್ ಪಾಷ ಕಾರ್ಯಾಚರಣೆಯಲ್ಲಿ ಇದ್ದರು.
ಬೈಕ್ ಡಿಕ್ಕಿ: ಇಬ್ಬರ ಸಾವು
ಕೋಲಾರ: ರಸ್ತೆ ವಿಭಜಕಕ್ಕೆ ದ್ವಿಚಕ್ರ ವಾಹನವೊಂದು ಡಿಕ್ಕಿ ಹೊಡೆದು, ಇಬ್ಬರು ಸ್ಥಳದಲ್ಲೇ ಮೃತಪಟ್ಟು ಒರ್ವ ಗಾಯಗೊಂಡಿರುವ ಘಟನೆ ಭಾನುವಾರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ ಬಳಿಯ ಮಾಲೂರು ಬೈಪಾಸ್ನಲ್ಲಿ ನಡೆದಿದೆ. ಬೈಕ್ನಲ್ಲಿ ಮೂವರು ಪ್ರಯಾಣಿಸುತ್ತಿದ್ದರು. ಈ ಪೈಕಿ ಭಾನುಪ್ರಕಾಶ್(22), ಮಂಜುನಾಥ್(23)ಸ್ಥಳದಲ್ಲೇ ಮೃತರಾಗಿದ್ದು, ಮುರಳಿ(25)ಗಾಯಗೊಂಡವರಾಗಿದ್ದಾರೆ. ಈ ಮೂವರು ಮುಳಬಾಗಿಲು ತಾಲೂಕಿನ ಬೈರಕೂರು ಹೋಬಳಿಯ ವೆಂಕಟಾಪುರ ಗ್ರಾಮಕ್ಕೆ ಸೇರಿದ್ದು ಬೆಂಗಳೂರಿನಲ್ಲಿ ಕಟ್ಟಡದ ಸೆಂಟರಿಂಗ್ ಕಾಮಗಾರಿ ಮುಗಿಸಿ ಊರಿಗೆ ವಾಪಸ್ ಹೋಗುತ್ತಿದ್ದರು. ತಾಲೂಕಿನ ನರಸಾಪುರ ಬಳಿಯ ಮಾಲೂರು ಬೈಸ್ ಬಳಿಯ ರಸ್ತೆ ವಿಭಜಕಕ್ಕೆ ದ್ವಿಚಕ್ರ ವಾಹನ ಡಿಕ್ಕಿಯಾದ್ದರಿಂದ ದುರ್ಘಟನೆ ನಡೆದಿದೆ. ವೇಮಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ. ಸ್ಥಳಕ್ಕೆ ಎಎಸ್ಪಿ ಜಮೀಲ್ ಹಾಗೂ ವೇಗಮಲ್ ಪಿಎಸ್ಐ ಯಶವಂತ್ ಭೇಟಿ ನೀಡಿ ಪರಿಶೀಲಿಸಿದರು.
ಕೈದಿ ಪರಾರಿ: ನಾಲ್ವರು ಅಮಾನತು
ಚಿಕ್ಕಬಳ್ಳಾಪುರ: ಕೈದಿಯೊಬ್ಬ ಪರಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಪೊಲೀಸ್ ಸಿಬ್ಬಂದಿ ಜಿಲ್ಲಾ ರಕ್ಷಣಾಧಿಕಾರಿ ದಿವ್ಯ ಗೋಪಿನಾಥ್ ಅಮಾನತು ಮಾಡಿದ್ದಾರೆ.
ಕರ್ತವ್ಯಲೋಪದ ಮೇಲೆ ಅಮಾನತುಗೊಂಡವರು ಜಿಲ್ಲಾ ಶಸಾಸ್ತ್ರ ಮೀಸಲು ಪಡೆ ಮುಖ್ಯಪೇದೆ ಶಿವಾನಂದ್, ಪೇದೆಗಳಾದ ಗಂಗರಾಜು, ಭೈರಪ್ಪ, ನವೀನ್ ಕುಮಾರ್ ಎಂದು ತಿಳಿದು ಬಂದಿದೆ. ಕಳೆದ ಗುರುವಾರ ವಿಚಾರಣಾಧೀನ ಕೈದಿ ರಾಜಶೇಖರ್(19)ನನ್ನು ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಲು ಡಿಆರ್ ಪೊಲೀಸರು ಕರೆದುಕೊಂಡು ಬಂದಿದ್ದರು. ಆಗ ಆರೋಪಿ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿದ್ದ. ಆ ನಂತರ ಪೊಲೀಸರು ಅಂದು ಸಂಜೆಯೇ ಆರೋಪಿಯನ್ನು ಬಾಗೇಪಲ್ಲಿಯಲ್ಲಿ ಬಂಧಿಸಿದ್ದರು. ಈ ಪ್ರಕರಣದ ಬಗ್ಗೆ ತನಿಖಾ ವರದಿಯನ್ನು ತರಿಸಿಕೊಂಡ ಜಿಲ್ಲಾ ರಕ್ಷಣಾಧಿಕಾರಿಗಳು ಸಂಬಂಧಪಟ್ಟ ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಿದ್ದಾರೆ ಎಂದು ವರದಿಯಾಗಿದೆ.