ಸಂಸದ ಮುನಿಯಪ್ಪಗೆ ಘೇರಾವ್
ಮಾಲೂರು: ಬೆಂಗಳೂರಿನ ಕೊಳಚೆ ನೀರನ್ನು ಸಂಸ್ಕರಿಸಿ ಜಿಲ್ಲೆಯ ಕೆರೆಗಳಿಗೆ ಹರಿಸುವಂತೆ ಆಗ್ರಹಿಸಿ ರೈತ ಸಂಘ, ಹಸಿರು ಸೇನೆ ಕಾರ್ಯಕರ್ತರು ಸಂಸದ ಕೆ.ಎಚ್.ಮುನಿಯಪ್ಪ ಅವರಿಗೆ ಘೇರಾವ್ ಹಾಕಿದ ಘಟನೆ ಭಾನುವಾರ ನಡೆಯಿತು.
ಮುನಿಯಪ್ಪ ಅವರಿಗೆ ಗೌರವ ಡಾಕ್ಟರೇಟ್ ದೊರೆತ ಹಿನ್ನೆಲೆಯ್ಲಲಿ ಇಲ್ಲಿನ ತಿರುಮಲ ಕಲ್ಯಾಣ ಮಂಟಪದಲ್ಲಿ ಸ್ಥಳೀಯ ಕಾಂಗ್ರೆಸ್ ಸನ್ಮಾನ ಏರ್ಪಡಿಸಿತ್ತು. ಈ ಹಿನ್ನೆಲೆಯಲ್ಲಿ ಆಗಮಿಸಿದ ಮುನಿಯಪ್ಪ ಅವರನ್ನು ಅಡ್ಡಗಟ್ಟಿದ ಕಾರ್ಯಕರ್ತರು, ಶಾಶ್ವತ ನೀರಾವರಿ ತಡವಾಗುವುದರಿಂದ ಹತ್ತಿರದಲ್ಲಿರುವ ಬೆಂಗಳೂರಿನ ಕೊಳಚೆ ನೀರನ್ನು ಸಂಸ್ಕರಿಸಿ ಜಿಲ್ಲೆಯ ಕೆರೆಗಳಿಗೆ ಹರಿಸುವಂತೆ ಆಗ್ರಹಿಸಿದರು.
ಎತ್ತಿನಹೊಳೆ, ಎಲೆ ಮಲ್ಲಪ್ಪನ ಕೆರೆ, ಮುಗಳೂರು ಏತ ನೀರಾವರಿ, ವರ್ತೂರು ಕೋಡಿ ಯೋಜನೆ ಸೇರಿದಂತೆ ಹಲವು ಯೋಜನೆಗಳನ್ನು ಜನಪ್ರತಿನಿಧಿಗಳು ಒಂದೂಂದು ಬಾರಿ ಹೇಳಿ ಜನತೆಯಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಏಳು ಬಾರಿ ಲೋಕಸಭೆ ಸದಸ್ಯರಾಗಿ ಹಾಗೂ ಕೇಂದ್ರ ಮಂತ್ರಿಗಳಾಗಿ ಕಾರ್ಯ ನಿರ್ವಹಿಸಿದ್ದ ಮುನಿಯಪ್ಪ ಅವರು ತಮ್ಮ ನೇತೃತ್ವದಲ್ಲಿ ಬೆಂಗಳೂರು ಕೊಳಚೆ ನೀರನ್ನು ಸಂಸ್ಕರಿಸಿ ಉಪಯೋಗಿಸುವ ಯೋಜನೆಯನ್ನು ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿದರು.
ಘೇರಾವ್ ಹಾಕಿದ ಕಾರ್ಯಕರ್ತರನ್ನು ಸಮಾಧಾನಗೊಳಿಸಿದ ಮುನಿಯಪ್ಪ, ಶಾಶ್ವತ ನೀರಾವರಿ ಯೋಜನೆಗಳ ಬಗ್ಗೆ ರಾಜ್ಯ ಸರ್ಕಾರ ಎತ್ತಿನಹೊಳೆ ಯೋಜನೆಗೆ ಶಂಕು ಸ್ಥಾಪನೆ ಮಾಡುವ ಮೂಲಕ ಇಚ್ಛಾಶಕ್ತಿ ಪ್ರದರ್ಶಿಸಿದೆ. ಇನ್ನೂ ಬೆಂಗಳೂರಿನ ಕೊಳಚೆ ನೀರನ್ನು ಸಂಸ್ಕರಿಸಿ ಉಪಯೋಗಿಸುವ ಯೋಜನಗೆ 150 ರಿಂದ 200 ಕೋಟಿ ಬೇಕು. ಮುಖ್ಯಮಂತ್ರಿಯೊಂದಿಗೆ ಚರ್ಚಿಸುವುದಾಗಿ ಭರವಸೆ ನೀಡಿದರು.
ಜಿಲ್ಲಾಧ್ಯಕ್ಷ ಅಬ್ಬಣಿ ಶಿವಣ್ಣ, ತಾಲೂಕು ಅಧ್ಯಕ್ಷ ಬೆಂಡಶೆಟ್ಟಿಹಳ್ಳಿ ರಮೇಶ್, ತಿ.ದೇವರಾಜ್, ಕೋಡೂರು ಗೋಪಾಲ್, ನಿದರಮಂಗಲ ನಾಗಪ್ಪ, ವರದಾಪುರ ನಾಗರಾಜ್, ವಿಶ್ವನಾಥ್, ಮಂಜುನಾಥ್, ಹನುಮಂತ್, ವೆಂಕಟೇಶ್, ಸಿದ್ದಪ್ಪ ರೆಡ್ಡಿ ಇದ್ದರು.
ಗಿಮಿಕ್ ರಾಜಕಾರಣ ಮಾಡಬೇಕಾಗಿಲ್ಲ
ಮಾಲೂರು: ಯಾವುದೇ ಅಧಿಕಾರದ ಆಸೆ ಇಲ್ಲದ ನನಗೆ ಗಿಮಿಕ್ ರಾಜಕಾರಣ ಮಾಡಬೇಕಾಗಿರುವ ಪರಿಸ್ಥಿತಿಯೇ ಇಲ್ಲ ಎಂದು ಮಾಜಿ ಶಾಸಕ ಕೃಷ್ಣಯ್ಯ ಶೆಟ್ಟಿ ಹೇಳಿದರು.
ನನ್ನ ಅಧಿಕಾರದ ಒಂಬತ್ತು ವರ್ಷ ಸೇರಿದಂತೆ ಕಳೆದ ಹತ್ತು ವರ್ಷದಿಂದ ರೈಲ್ವೇ ಸೇತುವೆ ಅಗಲೀಕರಣಕ್ಕೆ ಪ್ರಯತ್ನ ಪಟ್ಟಿದೆ. ಆದರೆ ಅದು ಸಾಧು ಆಗಲಿಲ್ಲ. ಈಗ ಸಂಸದರ ಪ್ರಯತ್ನದಲ್ಲಿ ಇಲಾಖೆಯ ಅನುಮತಿ ಪಡೆದು ಬೋಲ್ಡೋಜರ್, ಜಲ್ಲಿ ಪುಡಿಗಳನ್ನು ಉಪಯೋಗಿಸಿ ವೈಜ್ಞಾನಿಕವಾಗಿ ಸೇತುವೆ ಅಗಲೀಕರಣವನ್ನು ಸ್ವತಃ ಖರ್ಚಿನಲ್ಲಿ ಮಾಡಿಕೊಡುವುದಾಗಿ ತಿಳಿಸಿದರು.
ಎತ್ತಿನ ಹೊಳೆ ಯೋಜನೆ ಜಾರಿ ಖಾತ್ರಿ: ಕೆಎಚ್‌ಎಂ
ಮಾಲೂರು: ಉತ್ತಮ ನೀರಾವರಿ ತಜ್ಞರ ವರದಿ ಪ್ರಕಾರ ಎತ್ತಿನ ಹೊಳೆ ಯೋಜನೆಯಿಂದ ಕೋಲಾರವರೆಗೂ ನೀರು ಹರಿದು ಬರುವುದು ಖಾತ್ರಿಯಾಗಿದ್ದು, ಯಾರಿಗೂ ಸಂಶಯ ಬೇಡ ಎಂದು ಸಂಸದ ಕೆ.ಎಚ್. ಮುನಿಯಪ್ಪ ಹೇಳಿದರು.
ಪಟ್ಟಣದ ತಿರುಮಲ ಕಲ್ಯಾಣ ಮಂಟಪದಲ್ಲಿ ಸ್ಥಳೀಯ ಕಾಂಗ್ರೆಸ್ ಘಟಕ ಭಾನುವಾರದಂದು ಆಯೋಜಿಸಿದ್ದ ಕೆ.ಎಚ್. ಮುನಿಯಪ್ಪ ಅವರಿಗೆ ಅಭಿನಂದನಾ ಹಾಗೂ ತಾಲೂಕು ಕಾರ್ಯಕರ್ತರಿಗೆ ಕೃತಜ್ಞತಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಪರಮೇಶ್ವರ್ ಅವರ ಮಾರ್ಗದರ್ಶನದಲ್ಲಿ ರಾಜ್ಯ ಸರ್ಕಾರವು ಬಯಲು ಸೀಮೆ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಇಚ್ಛಾಶಕ್ತಿ ಪ್ರದರ್ಶಿಸುತ್ತಿದೆ. ಶೀಘ್ರವಾಗಿ ಕಾಮಗಾರಿ ಪ್ರಾರಂಭವಾಗಲಿದೆ ಎಂದರು. ಈ ಯೋಜನೆ ಜಾರಿಗೆ ಸಂಬಂಧಿಸಿದಂತೆ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಹಾಗೂ ಪೇಜಾವರ ಸ್ವಾಮಿಗಳೊಂದಿಗೂ ಚರ್ಚಿಸಲಾಗುವುದು ಎಂದರು.
ಮಾಜಿ ಶಾಸಕ ಕೃಷ್ಣಯ್ಯ ಶೆಟ್ಟಿ, ಪ್ರಭಾವಿ ಮುಖಂಡ ಚೆನ್ನಕೇಶವ ಮಾತನಾಡಿದರು. ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಗೌರವ ಪಡೆದ ಸಂಸದ ಕೆ.ಎಚ್. ಮುನಿಯಪ್ಪ ಹಾಗೂ ಅವರ ಪತ್ನಿ ನಾಗರತ್ನ ರವರನ್ನು, ಮಾಜಿ ಶಾಸಕ ಕೃಷ್ಣಯ್ಯ ಶೆಟ್ಟಿ, ಚೆನ್ನಕೇಶವ, ತಾ.ಪಂ.ಅಧ್ಯಕ್ಷೆ ನಾಗವೇಣಿ, ವಕೀಲರ ಸಂಘದ ಅಧ್ಯಕ್ಷ ಟಿ.ಬಿ. ಕೃಷ್ಣಪ್ಪ ಅವರನ್ನು ಸನ್ಮಾನಿಸಲಾಯಿತು.
ಯಲ್ಲಮ್ಮ, ವೆಂಕಟಮುನಿಯಪ್ಪ, ಲಕ್ಷ್ಮಿನಾರಾಯಣ್,ಬೀಸೇಗೌಡ, ಗೋವಿಂದಪ್ಪ, ವೆಂಕಟಾರಾಮ್, ಮಧುಸೂಧನ್, ಪುಟ್ಟಸ್ವಾಮಿ, ಲೋಕೇಶ್, ಬೋರ್ ರಮೇಶ್, ಹೋಟೆಲ್ ವೆಂಕಟಸ್ವಾಮಿ, ಪಾಪಾರೆಡ್ಡಿ ಇದ್ದರು.