ಆಂಧ್ರಪ್ರದೇಶ ವ್ಯಕ್ತಿ ಕೊಂದು ನೀಲಗಿರಿ ತೋಪಲ್ಲಿ ಹೂತರು
ಕೆಜಿಎಫ್: ಆಂಧ್ರ ಮೂಲದ ವ್ಯಕ್ತಿಯನ್ನು ಕೊಲೆಗೈದು ರಾಜ್ಯದ ಗಡಿ ಪ್ರದೇಶದ ನೀಲಗಿರಿ ತೋಪಿನಲ್ಲಿ ಶವವನ್ನು ಹೂತಿರುವ ಘಟನೆ ಆಂಡ್ರಸನ್ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಚಿತ್ತೂರು ಜಿಲ್ಲೆಯ ರಾಮಕುಪ್ಪಂ ಮಂಡಲ್ನ ಚಿನ್ನರೆಡ್ಡಿಪಲ್ಲಿ ಗ್ರಾಮದ ನಿವಾಸಿ ಕೇಶವ(30) ಎಂಬುವನೇ ಕೊಲೆಯಾದ ದುರ್ದೈವಿ. ಕಳೆದ ವಾರ ರಾಮಕುಪ್ಪಂನಿಂದ ಕೆಜಿಎಫ್ಗೆ ಹೋಗಿಬರುತ್ತೇನೆ ಎಂದು ಮನೆಯಲ್ಲಿ ಹೇಳಿ ಬಂದವನು ಎರಡು ದಿನಗಳಾದರೂ ಮನೆಗೆ ಹಿಂತಿರುಗದ ಕಾರಣ ಮನೆಯವರು ರಾಳ್ಳಬೂದಗೂರು ಪೊಲೀಸ್ ಠಾಣೆಯಲ್ಲಿ ಕೇಶವ ಕಾಣೆಯಾಗಿರುವ ಬಗ್ಗೆ ದೂರು ನೀಡಿದ್ದರು.
ಕಳೆದ ಶನಿವಾರ ರಾಮಕೃಷ್ಣರೆಡ್ಡಿ ಅವರು ತಮ್ಮ ನೀಲಗಿರಿ ತೋಪಿಗೆ ಬಂದಿದ್ದಾಗ, ನೆಲದಲ್ಲಿ ಯಾರದೋ ಮನುಷ್ಯತ ತಲೆಯ ಕೂದಲು ಇರುವುದನ್ನು ಕಂಡಿದ್ದಾರೆ. ಅವರು ಕೂಡಲೇ ಆಂಡ್ರಸನ್ಪೇಟೆ ಪೊಲೀಸ್ ಠಾಣೆಗೆ ವಿಷಯ ತಿಳಿಸಿದ್ದರು. ಡಿವೈಎಸ್ಪಿ ಎ.ಕೆ.ವಿವೇಕಾನಂದ, ಇನ್ಸ್ಪೆಕ್ಟರ್ ಲಕ್ಷ್ಮೀನಾರಾಯಣ ಪಿಎಸ್ಐ ಎಲ್.ಆಂಜಪ್ಪ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಬಂಗಾರಪೇಟೆ ತಹಸೀಲ್ದಾರ್ ಏಕೇಶಬಾಬು ಸಮ್ಮುಖದಲ್ಲಿ ಶವವನ್ನು ಹೊರತೆಗೆದಾಗ ಕೊಲೆಯಾದ ವ್ಯಕ್ತಿ ಕೇಶವನೆಂದು ಅವರ ಸಂಬಂಧಿಕರು ಪತ್ತೆಹಚ್ಚಿದ್ದರಿಂದ ಅಲ್ಲೆ ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ಕುಟುಂಬಸ್ಥರಿಗೆ ಒಪ್ಪಿಸಲಾಗಿದೆ. ಆಂಡ್ರಸನ್ಪೇಟೆ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ತನಿಖೆ ಕೈಗೊಂಡಿದ್ದಾರೆ.
ವಿದ್ಯುತ್ ತಗುಲಿ ಖಾಸಗಿ ಬಸ್ ಕ್ಲೀನರ್ಗೆ ಗಾಯ
ಕೆಜಿಎಫ್: ಖಾಸಗಿ ಬಸ್ ಕ್ಲೀನರ್ಗೆ ವಿದ್ಯುತ್ ತಗುಲಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಬೇತಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕಂಗಾಂಡ್ಲಹಳ್ಳಿ ಗ್ರಾಮದ ನಿವಾಸಿ ನವೀನ್(17) ಎಂಬುವನು ಕೆಜಿಎಫ್ನ ಖಾಸಗಿ ಬಸ್ನಲ್ಲಿ ಕ್ಲೀನರ್ ಆಗಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದಾನೆ. ಸೋಮವಾರ ಬೆಳಗ್ಗೆ ಕಣ್ಣೂರು ಗ್ರಾಮದಲ್ಲಿ ಬಸ್ ನಿಂತಾಗ, ಬಸ್ ಟಾಪ್ ಮೇಲೆ ಹಾಕಿದ್ದ ಲಗೇಜ್ನ್ನು ಇಳಿಸಲು ಹತ್ತಿದ್ದಾರೆ. ಆಗ ವಿದ್ಯುತ್ ತಂತಿ ತಗುಲಿದೆ. ಅವರ ಮುಖ, ಎದೆ ಭಾಗದಲ್ಲಿ ಸುಟ್ಟುಗಾಯಗಳಾಗಿದ್ದು ಕೂಡಲೇ ಅವರನ್ನು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.