ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಬಾಗೇಪಲ್ಲಿಯಲ್ಲಿ ಕನ್ನಡ ಹಬ್ಬ

Srinivasa Murthy VN
Updated On : 15 Jul 2014, 1:12 am

ಚಿಕ್ಕಬಳ್ಳಾಪುರ: ಆಂಧ್ರದ ಗಡಿಭಾಗದಲ್ಲಿರುವ ಬಾಗೇಪಲ್ಲಿ ಪಟ್ಟಣದಲ್ಲಿ ಜು.18 ಮತ್ತು 19 ರಂದು ಎರಡು ದಿನಗಳ ಕಾಲ ನಡೆಯಲಿರುವ ಚಿಕ್ಕಬಳ್ಳಾಪುರ ಜಿಲ್ಲೆಯ 4 ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಭರದ ಸಿದ್ಧತೆ ಕೈಗೊಳ್ಳಲಾಗುತ್ತಿದೆ.
ಬಾಗೇಪಲ್ಲಿಯಲ್ಲಿ ಕನ್ನಡ ಹಬ್ಬದ ವಾತಾವರಣ ನಿರ್ಮಾಣವಾಗುತ್ತಿದ್ದು, ಈಗಾಗಲೇ ಕಸಾಪ ಮತ್ತು ಬಾಗೇಪಲ್ಲಿ  ಶಾಸಕ ಎಸ್.ಎನ್ .ಸುಬ್ಬಾರೆಡ್ಡಿ ನೇತೃತ್ವದಲ್ಲಿ ಸಮ್ಮೇಳನಕ್ಕಾಗಿ ಸಕಲ ಸಿದ್ಧತೆಗಳನ್ನು ಕೈಗೊಳ್ಳಲು ಚರ್ಚಿಸಿದ್ದು, ಸಮಿತಿ ರಚಿಸಿ ಆಯಾ ಜವಾಬ್ದಾರಿಯನ್ನು ಹಂಚಲಾಗಿದೆ. ಸಾಹಿತಿಗಳು, ಕಸಾಪ ಪದಾಧಿಕಾರಿಗಳು ಸಮ್ಮೇಳನದ ಅಧ್ಯಕ್ಷರಾಗಿರುವ ಡಾ. ಆರ್ .ಶೇಷಶಾಸ್ತ್ರಿಯವರಿಗೆ ವೀಳ್ಯದೆಲೆ ನೀಡಿ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಿಕೊಡುವಂತೆ ಆಹ್ವಾನ ಕೊಡಲಾಗಿದೆ. ಬಾಗೇಪಲ್ಲಿಯಲ್ಲಿ ತೆಲುಗು ಭಾಷೆ ಪ್ರಭಾವ ಹೆಚ್ಚು. ಇಲ್ಲಿ ಎಲ್ಲಾ ಜನರನ್ನು ಸೇರಿಸಿಕೊಂಡು ಸಮ್ಮೇಳನದಿಂದ ಕನ್ನಡ ಕಂಪು ಪಸರಿಸಲು ಶ್ರಮಿಸಲಾಗುತ್ತಿದೆ. ಬಾಗೇಪಲ್ಲಿ ಪಟ್ಟಣದ ಡಿ.ವಿ.ಜಿ.ರಸ್ತೆಯಲ್ಲಿರುವ ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಆವರಣದಲ್ಲಿನ ಎಚ್ .ಎನ್. ಸಭಾಂಗಣದಲ್ಲಿ ನಿರ್ಮಿಸಲಾಗುವ ಶ್ರೀ ಜಚನಿ ಪ್ರಧಾನ ವೇದಿಕೆಯಲ್ಲಿ ಸಮ್ಮೇಳನ ನಡೆಯಲಿದೆ. ಜು.18 ರಂದು ಬೆಳಿಗ್ಗೆ 8 ಗಂಟೆಗೆ ಜಿಲ್ಲಾಧಿಕಾರಿ ಆರ್ .ವಿಶಾಲ್ ರಾಷ್ಟ್ರಧ್ವಜ, ಶಾಸಕ ಎಸ್ .ಎನ್ .ಸುಬ್ಬಾರೆಡ್ಡಿ ನಾಡಧ್ವಜ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವೈ.ಎಲ್. ಹನುಮಂತರಾವ್  ಪರಿಷತ್ತಿನ ಧ್ವಜಾರೋಹಣ ನೆರವೇರಿಸಲಿದ್ದಾರೆ. ಆ ನಂತರ ಚಿತ್ರಾವತಿ ನದಿ ದಡದಿಂದ ಪ್ರಾರಂಭವಾಗಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಮ್ಮೇಳನಾಧ್ಯಕ್ಷ ಶೇಷಶಾಸ್ತ್ರಿ ಹಾಗೂ ಕನ್ನಡ ತಾಯಿ ಭುವನೇಶ್ವರಿ ಮಾತೆಯ ಮೆರವಣಿಗೆ ನಡೆಯಲಿದೆ. ಇದಕ್ಕೆ ಡೊಳ್ಳು ಕುಣಿತ, ವೀರಗಾಸೆ, ಕಂಸಾಳೆ, ಪಟಕುಣಿತ ಮತ್ತು ಸೋಮನ ಕುಣಿತದ ಜಾನಪದ ತಂಡಗಳು ಸಾಥ್  ನೀಡಲಿವೆ.
ಉದ್ಘಾಟನೆ ಸಮಾರಂಭ
ಕಾರ್ಯಕ್ರಮ ನಡೆಯುವ ಸ್ಥಳದಲ್ಲಿನ ಗುಮ್ಮನಾಯಕನಪಾಳ್ಯ ಮಹಾದ್ವಾರಕ್ಕೆ ಮೆರವಣಿಗೆ ಆಗಮಿಸಿದ ನಂತರ ಬೆಳಿಗ್ಗೆ 11 ಗಂಟೆಗೆ ಶ್ರೀಜಚನಿ ವೇದಿಕೆಯಲ್ಲಿ ನಡೆಯುವ ಕಾರ್ಯಕ್ರಮದ ಸಾನ್ನಿಧ್ಯವನ್ನು ನಿಡುಮಾಮಿಡಿ ಮಹಾಮಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ವೀರಭದ್ರ ಚನ್ನಮಲ್ಲ ದೇಶಿಕೇಂದ್ರ ಮಹಾಸ್ವಾಮಿ ವಹಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಆರ್ .ರೋಷನ್  ಬೇಗ್  ಜ್ಯೋತಿ ಬೆಳಗಿಸಲಿದ್ದು, ಕಸಾಪ ರಾಜ್ಯಾಧ್ಯಕ್ಷ ಪುಂಡಲೀಕ ಹಾಲಂಬಿ ಆಶಯ ನುಡಿ, ನಿಕಟಪೂರ್ವ ಸಮ್ಮೇಳನಾಧ್ಯಕ್ಷೆ ಗುಡಿಬಂಡೆ ಪೂರ್ಣಿಮಾ ಮತ್ತು ಸಮ್ಮೇಳನಾಧ್ಯಕ್ಷ ಆರ್ .ಶೇಷಶಾಸ್ತ್ರಿ ತಮ್ಮ ನುಡಿಗಳನ್ನಾಡಲಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಅವರು ಕಲಾವಿದ ಟಿ.ಎನ್.ನಾಗರಾಜ್ ಅವರ ನಾರುಬೇರು ಕಲಾಕೃತಿಗಳ ಪ್ರದರ್ಶನ ಮತ್ತು ಭವಾನಿ ಲಕ್ಷ್ಮೀನಾರಾಯಣ್ ಸೆರೆ ಹಿಡಿದಿರುವ ಡಾ. ರಾಜ್‌ಕುಮಾರ್  ಚಿತ್ರಗಳ ಪ್ರದರ್ಶನವನ್ನು ಸಂಸದ ಕೆ.ಎಚ್ .ಮುನಿಯಪ್ಪ ಉದ್ಘಾಟಿಸಲಿದ್ದಾರೆ. ಎ.ಸ್ವಾಮಿ ಅವರ ನಂದಿಗೆ ನೀ ಭಾರವೇ ಧ್ವನಿಸುರುಳಿ, ಎಂ.ವಿ.ಶಂಕರಾನಂದರವರ ದುರ್ಗೆಶ್ ನಂದಿನಿ ಕಾದಂಬರಿ ಬಿಡುಗಡೆಯಾಗಲಿದೆ.
ಆಕರ್ಷಕ ಕಾರ್ಯಕ್ರಮ
ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು, ವಿಚಾರಗೋಷ್ಠಿ ನಡೆದು ಜನರನ್ನು ಸೆಳೆಯಲಿದೆ. ಜು.18 ರಂದು ಮಧ್ಯಾಹ್ನ 12 ಗಂಟೆಗೆ ಕನ್ನಡ ಸಾಹಿತ್ಯಕ್ಕೆ ಜಿಲ್ಲೆಯ ಕೊಡುಗೆ, ಜಿಲ್ಲೆಯ ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಚಿಂತನೆ, ಜಿಲ್ಲೆಯ ಜಾನಪದ ವೈವಿಧ್ಯ, ಸಂಜೆ 4 ಗಂಟೆಗೆ ಕೈವಾರ ತಾತಯ್ಯನವರ ಕೃತಿಗಳ ಚಿಂತನೆ ಮತ್ತು ಗಾಯನ, ನಿಡುಮಾಮಿಡಿ ಶ್ರೀಗಳ ಸಾಹಿತ್ಯ ಮತ್ತು ಸಾಮಾಜಿಕ ಕ್ರಾಂತಿ, ಸಂಜೆ 5 ಗಂಟೆಗೆ ಹುಲಿಕಲ್ ನಟರಾಜ್‌ರಿಂದ ಪವಾಡ ರಹಸ್ಯ ಬಯಲು ಕಾರ್ಯಕ್ರಮ, ಸಂಜೆ 6 ಗಂಟೆಗೆ ರಿಚರ್ಡ್ ಲೂಯಿಸ್ ತಂಡದಿಂದ ನಗೆಹಬ್ಬ, ರೂಪಕಲಾ ನೃತ್ಯ ಶಾಲೆಯಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಜು.19 ರಂದು ಬೆಳಿಗ್ಗೆ 10 ಗಂಟೆಗೆ ಶಾಶ್ವತ ನೀರಾವರಿಯ ಅನಿವಾರ್ಯತೆ, ಔದ್ಯೋಗಿಕ ಸಮಸ್ಯೆಗಳು ಮತ್ತು ಪರಿಹಾರಗಳು, ಜಾನಪದ ಸಾಹಿತ್ಯ ಮತ್ತು ಜೀವನ ಮೌಲ್ಯ, ಸಾಮಾಜಿಕ ಚಳವಳಿಗಳು ಮತ್ತು ಕನ್ನಡ ಸಾಹಿತ್ಯ, ಮಧ್ಯಾಹ್ನ 12 ಗಂಟೆಗೆ ಆಧುನಿಕ ಸಮಾಜ ಮಹಿಳಾ ಸಮಸ್ಯೆಗಳು ಮತ್ತು ಪರಿಹಾರ, ದೇಶಿ ಸಂಸ್ಕೃತಿಗಳ ಸಂರಕ್ಷಣೆಯಲ್ಲಿ ಮಹಿಳೆ ಪಾತ್ರ, ಮಧ್ಯಾಹ್ನ 1 ಗಂಟೆಗೆ ಕವಿಗೋಷ್ಠಿ. 2.15 ಕ್ಕೆ ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ, ಸಂಜೆ 4 ಗಂಟೆಗೆ ಸಮಾರೋಪ ಮತ್ತು ಸನ್ಮಾನ ಸಮಾರಂಭ, ವಿದ್ಯಾರ್ಥಿಗಳಿಗೆ ಪುರಸ್ಕಾರ, ಸಂಗ್ಯಾ ಬಾಳ್ಯ ನಾಟಕ ನಡೆಯಲಿದೆ. ಸಮ್ಮೇಳನದಲ್ಲಿ ಮನದೊಳಗಿನ ಕಿಚ್ಚು, ಮೊದಲ ಹೆಜ್ಜೆ, ಕೋಲ್ಮಿಂಚು, ಕವನ ಕುಸುಮ, ಸ್ವರ್ಗಕ್ಕೆ ಅಡ್ಡದಾರಿ ಇಲ್ಲ, ಗುಪ್ತಗಾಮಿನಿ, ಜೀವನಚಕ್ರ ಕೃತಿಗಳು ಬಿಡುಗಡೆಯಾಗಲಿವೆ.
ವಂತಿಗೆ ನೀಡಬೇಡಿ: ಶಾಸಕ
ಬಾಗೇಪಲ್ಲಿ: ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಹೆಸರಿನಲ್ಲಿ ಯಾವುದೇ ವ್ಯಕ್ತಿಗಳಿಗೆ ವೈಯಕ್ತಿಕವಾಗಿ ಅಥವಾ ಇಲಾಖೆಯಿಂದ ಯಾವುದೇ ಕಾರಣಕ್ಕೂ ವಂತಿಕೆ ನೀಡಬೇಡಿ. ಸಮ್ಮೇಳನದ ಯಶಸ್ಸಿಗೆ ಅಗತ್ಯವಿರುವ ಸಹಕಾರವನ್ನು ನೀಡಿ. ಸಮ್ಮೇಳನ ನಡೆಯುವ ಸ್ಥಳದಲ್ಲಿ ತಮ್ಮ ತಮ್ಮ ಇಲಾಖೆಗಳಿಂದ ಜನರಿಗೆ ಸಿಗುವ ಸವಲತ್ತುಗಳ ಬಗ್ಗೆ ಜನರಿಗೆ ಪ್ರಚಾರ ಕೈಗೊಂಡು ಅನುಕೂಲ ಮಾಡಿಕೊಡಿ ಸಾಕು ಎಂದು ಶಾಸಕ ಎಸ್. ಎನ್. ಸುಬ್ಬಾರೆಡ್ಡಿ ತಾಲೂಕು ಮಟ್ಟದ ಅಧಿಕಾರಿಗಳಿಗೆ ಆದೇಶಿಸಿದರು.
ಪಟ್ಟಣದ ತಾ.ಪಂ ಸಭಾಂಗಣದಲ್ಲಿ ನಾಲ್ಕನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಬಾಗೇಪಲ್ಲಿ ತಾಲೂಕಿನಲ್ಲಿ ಜಿಲ್ಲಾ ನಾಲ್ಕನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುತ್ತಿರುವುದು ಸಂತಸ ತಂದಿದೆ. ಈ  ಹಬ್ಬವನ್ನು ಅದ್ಧೂರಿಯಾಗಿ, ವಿಜೃಂಭಣೆಯಿಂದ ಆಚರಿಸೋಣ ಎಂದರು. ಕಸಾಪದಿಂದ ಸಮ್ಮೇಳನಕ್ಕೆ 5 ಲಕ್ಷ ನೀಡಿದ್ದು, ಉಳಿದಂತೆ ಅಗತ್ಯವಿರುವ ಹಣವನ್ನು ನಾನೇ ಭರಿಸುತ್ತೇನೆ. ಯಾವುದೇ ಇಲಾಖೆಯಿಂದ ಹಣವನ್ನು ಪಡೆದುಕೊಳ್ಳುವ ಅವಶ್ಯಕತೆ ಇಲ್ಲ ಎಂದರು. ಪ್ರತಿ ಇಲಾಖೆಯ ಅಧಿಕಾರಿಗಳು ಸೇರಿದಂತೆ ಸಿಬ್ಬಂದಿ ವರ್ಗದವರು ಕಡ್ಡಾಯವಾಗಿ ಭಾಗವಹಿಸಬೇಕು. ಇಲ್ಲದಿದ್ದರೆ ಅಂತಹ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಸರ್ಕಾರಕ್ಕೆ ಶಿಫಾರಸ್ಸು ಮಾಡುವುದಾಗಿ ಎಚ್ಚರಿಕೆ ನೀಡಿದರು.
ಕಾರ್ಯಕ್ರಮ ನಡೆಯುವ ಶಾಲಾ ಆವರಣಕ್ಕೆ ಅಂಟಿಕೊಂಡಿರುವ ಅಂಗಡಿಗಳನ್ನು ತೆರವುಗೊಳಿಸುವುದು ಸೇರಿದಂತೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಒದಗಿಸಲು ಪುರಸಭೆಯ ಮುಖ್ಯಾಧಿಕಾರಿ ಆರ್. ಶ್ರೀಕಾಂತ್‌ಗೆ ಸೂಚಿಸಿದರು. 2 ದಿನ  ನಡೆಯುವ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಕರೆಂಟ್  ತೆಗೆಯದಂತೆ ನೋಡಿಕೊಳ್ಳಬೇಕೆಂದು ಬೆಸ್ಕಾಂ ಇಲಾಯ ಅಧಿಕಾರಿ ಬಾಲಾಜಿಗೆ ಸೂಚಿಸಿದರು.  ಈ ಸಂದರ್ಭದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಹನುಮಂತ ರಾವ್, ತಾಲೂಕು ಅಧ್ಯಕ್ಷ ಬಿ.ಆರ್. ಕೃಷ್ಣ, ತಹಸೀಲ್ದಾರ್  ನಾಗರಾಜ್, ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಶ್ರೀನಿವಾಸ್, ಜಿ.ಪಂ ತಾಂತ್ರಿಕ ಉಪವಿಭಾಗದ ಅಧಿಕಾರಿ ನಾಗಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಕೆ. ವೆಂಕಟೇಶ್  ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಮುಳಬಾಗಲು ಸಾಹಿತ್ಯ ಸಮ್ಮೇಳನ ನಾಳೆ
ಮುಳಬಾಗಲು: ಪಟ್ಟಣದ ಡಿವಿಜಿ ರಂಗ ಮಂದಿರದಲ್ಲಿ ಜು.16ರಿಂದ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ.
ಸಮ್ಮೇಳನ ದಿನದ ಬೆಳಗ್ಗೆ ತಹಸೀಲ್ದಾರ್ ಕೆ.ಏಕೇಶಬಾಬು ರಾಷ್ಟ್ರ ಧ್ವಜ ಮತ್ತು ತಾಲೂಕು ಕಸಾಪ ಅಧ್ಯಕ್ಷ ಇ.ಶ್ರೀನಿವಾಸ್ ಗೌಡ ಅವರು ಪರಿಷತ್ ಧ್ವಜಾರೋಹಣ ಮಾಡುವವರು. ಕೆ.ಆರ್.ಶಿವರಾಜ್, ಪಿ.ಎಂ.ನಾರಾಯಣಸ್ವಾಮಿ ನಿರ್ವಹಣೆ ಮಾಡುವವರು. ಬೆಳಿಗ್ಗೆ 9 ಗಂಟೆಗೆ ಸಮ್ಮೇಳನಾಧ್ಯಕ್ಷರ ಮೆರವಣೆಗೆಯನ್ನು ಶಾಸಕ ಕೊತ್ತೂರು ಡಾ. ಜಿ.ಮಂಜುನಾಥ್ ಮತ್ತು ಪುರಸಭೆ ಅಧ್ಯಕ್ಷೆ ಷಾಹಿನ್ ತಾಜ್ ನೆರವೇರಿಸುವವರು. ಕೋಲಾರ ಜಿಲ್ಲಾ ಕಸಾಪ ಅಧ್ಯಕ್ಷ ಜೆ.ಜೆ.ನಾಗರಾರ್ ಅವರು ಆಶಯ ನುಡಿಯಾಡಿಲದ್ದಾರೆ. ಸಮ್ಮೇಳನವನ್ನು ಡಾ.ಸಂಧ್ಯಾರೆಡ್ಡಿ ಉದ್ಘಾಟಿಸುವವರು. ಜಾನಪದ ಕಲಾವಿದ ಸಮ್ಮೇಳನಾಧ್ಯಕ್ಷ ಎಚ್.ಗೊಲ್ಲಹಳ್ಳಿ ವೆಂಕಟಮುನಿಯಪ್ಪ, ನಿಕಟಪೂರ್ವ ಅಧ್ಯಕ್ಷ ಎಚ್.ಎ.ಪುರುಷೋತ್ತಮರಾವ್ ಭಾಗವಹಿಸುವರು. ನಂತರ ಶಾಸಕ ಕೊತ್ತೂರು ಡಾ.ಜಿ.ಮಂಜುನಾಥ್ ಅವರು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡುವವರು. ತಹಶೀಲ್ದಾರ್ ಕೆ.ಏಕೇಶಬಾಬು ಪುಸ್ತಕಗಳ ಬಿಡುಗಡೆ ಮಾಡುವರು. ಸಾಧಕರಾದ ಹೈಕೋರ್ಟ್‌ನ ನಿವೃತ್ತ ನ್ಯಾ. ಎಚ್.ಎನ್.ನಾಗಮೋಹನದಾಸ್, ನಿವೃತ್ತ ಐಎಎಸ್ ಅಧಿಕಾರಿ ಪಿ.ಎನ್.ಶ್ರೀನಿವಾಸಾಚಾರಿ, ಡಾ.ಬಿ.ವಿ.ವೆಂಕಟರವಣಪ್ಪ  ಅವರನ್ನು ಸನ್ಮಾನಿಸಲಾಗುವುದು. ಮಧ್ಯಾಹ್ನ ನಡೆಯುವ 'ನಮ್ಮ ನಡುವಿನ ಸಮಸ್ಯೆಗಳು' ಗೋಷ್ಠಿಯ ಅಧ್ಯಕ್ಷತೆಯನ್ನು ಕೆ.ರಾಜಕುಮಾರ್ ವಹಿಸುವರು. 'ಬದುಕಿನ ಭಾಷೆ ಕನ್ನಡ'ದ ಕುರಿತು ಡಾ.ರಾಜಕುಮಾರ್, ಮಹಿಳಾ ದೌರ್ಜನ್ಯಗಳ ಕುರಿತು ಮಂಜು ಕನ್ನಿಕಾ, ಬುದ್ಧ ನಮಗೆ ಏಕೆ ಬೇಕು? ಕುರಿತು ಕೆ.ಎಸ್.ಗಣೇಶ್, ಹಾಗೂ ಪ್ರೊಫೆಸರ್ ದೇವರಾಜ್ ಕನ್ನಡ ಭಾಷೆ ಮತ್ತು ಹಳ್ಳಿಗಳು ಕುರಿತು ಮಾತನಾಡುವರು.  ಇವರೊಂದಿಗೆ ಸಂವಾದವನ್ನು ಸರ್ಕಲ್ ಇನ್ಸ್‌ಪೆಕ್ಟರ್ ಕೃಷ್ಣಪ್ಪ, ನಾರಾಯಣಪ್ಪ, ಅವಣೆ ನಾಗರಾಜ್, ಶ್ರೀಮತಿ ರಾಧಾ, ಡಾ.ಪ್ರಕಾಶ್, ಯು.ವಿ.ನಾರಾಯಣಾಚಾರ್ ನೆಡೆಸಿಕೊಡುವವರು.  ಕವಿಗೋಷ್ಠಿ ಅಧ್ಯಕ್ಷತೆಯನ್ನು ಕೆ. ನರಸಿಂಹಮೂರ್ತಿ ವಹಿಸಲಿದ್ದಾರೆ. ಉಪನ್ಯಾಸಕ ಬಿ.ಮರಿಯಪ್ಪ ಭಾಗವಹಿಸುವರು. ಕವಿಗಳಾದ ಎಸ್.ಕವಿತಾ, ರಾಧಿಕಾ, ಶ್ರೀನಿವಾಸ್, ಎನ್.ಸಿ.ರಾಜೇಶ್ವರಿ, ಸುಮಿತ್ರ, ಪ್ರಭಾವತಿ, ನಂಗಲಿ ನಾಗರಾಜ್, ಡಾ.ರಮಾನಂದ್, ಆರ್.ಎನ್.ಪುಷ್ಪಾ, ನಾ.ವೆಂಕಟರವಣ, ಸುಬ್ರಮಣಿ, ವರದರಾಜ್ ಅವರು ಭಾಗವಹಿಸುವವರು. ಸಮಾರೋಪ ಸಮಾರಂಭ ಹಾಗೂ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಜ್ಞಾನ ಲೇಖಕ ಜೆ.ಬಾಲಕೃಷ್ಣ ವಹಿಸುವರು. ಸಮಾರೋಪ ನುಡಿಯನ್ನು  ವಿಮರ್ಶಕ ನಂಗಲಿ ಡಾ.ಚಂದ್ರಶೇಖರ್ ಆಡುವವರು.

ಶಿಕ್ಷಕನಾಗಿ ಸೇವೆ ಸಲ್ಲಿಸಿದ ತಮಗೆ ಜನರಿಗೆ ಹಲವು ಸಂದೇಶ ನೀಡಲು ಉತ್ತಮ ವೇದಿಕೆ ಸಿಕ್ಕಂತಾಗಿದೆ. ಇಂದು ಕಣ್ಮರೆಯಾಗುತ್ತಿರುವ ಮಾನವೀಯ ಮೌಲ್ಯಗಳು ಕ್ರಿಯಾಶೀಲವಾಗಬೇಕಿದೆ. ಯುವ ಜನರಲ್ಲಿ ನೈತಿಕ ಮೌಲ್ಯಗಳು ಬೆಳೆಯಬೇಕು ಹಾಗೂ ನಮ್ಮ ಮೂಲ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸಲು ಪ್ರಯತ್ನಿಸುವೆ
- ವೆಂಕಟಮುನಿಯಪ್ಪ. ಮುಳಬಾಗಲು ತಾಲೂಕು ಸಾಹಿತ್ಯ ಸಮ್ಮೇಳನ ನಿಯೋಜಿತ ಅಧ್ಯಕ್ಷ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement