ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಬೇತಮಂಗಲ ಕೆರೆಗೆ ಮರಳು ದಂಧೆ ಅಮಂಗಲ

Srinivasa Murthy VN
Updated On : 15 Jul 2014, 1:12 am

-ಕೆ.ರಮೇಶ್
ಬಂಗಾರಪೇಟೆ: ಜಿಲ್ಲೆಯ ಅತಿ ದೊಡ್ಡ ಕೆರೆಗಳಲ್ಲಿ ಒಂದಾದ ತಾಲೂಕಿನ ಬೇತಮಂಗಲ ಕೆರೆಯಲ್ಲಿ ದಿನ ನಿತ್ಯ ಅಕ್ರಮ ಮರಳುಗಾರಿಕೆ ನಿರಂತರವಾಗಿ ನಡೆಯುತ್ತಿದ್ದರೂ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಳ್ಳದೆ ಮೌನಕ್ಕೆ ಶರಣಾಗಿರುವುದರಿಂದ ಕೆರೆ ದಿನೇ ದಿನೆ ತನ್ನ ಅಸ್ತಿತ್ವ ಕಳೆದುಕೊಳ್ಳುವಂತಾಗಿದೆ.
ಬೇತಮಂಗಲ ಗ್ರಾಮದ ಪೊಲೀಸ್ ಠಾಣೆ ಸಮೀಪದಲ್ಲೇ ಕೆರೆಯಿದ್ದು ಪ್ರತಿದಿನ ಹತ್ತಾರು ಲಾರಿಗಳಲ್ಲಿ ಮರಳನ್ನು ಬೆಂಗಳೂರಿಗೆ ಸಾಗಿಸುತ್ತಿದ್ದರೂ ಪೊಲೀಸರಾಗಲಿ ಅಥವಾ ತಾಲೂಕು ಆಡಳಿತವಾಗಲಿ ತಡೆಯುವ ಕಾರ್ಯಕ್ಕೆ ಕೈ ಹಾಕದಿರುವುದು ದುರಂತವೇ ಸರಿ. ಸತತ ಬರಗಾಲಕ್ಕೆ ಸಿಲುಕಿರುವ ತಾಲೂಕಿನಲ್ಲಿ ಹನಿ ನೀರಿಗೂ ಹಾಹಾಕಾರ ಉಂಟಾಗಿ ಜನರು ನರಕಯಾತನೆ ಅನುಭವಿಸುವಂತಾಗಿದೆ. ಇದನ್ನು ತಡೆಯಲು ಜಿಲ್ಲಾಡಳಿತ ಮರಳು ಲೂಟಿ ತಡೆಯಬೇಕು ಎಂದು ಬೊಬ್ಬೆ ಹೊಡೆಯುತ್ತಿದ್ದರೂ ತಾಲೂಕು ಮಟ್ಟದ ಅಧಿಕಾರಿಗಳು ಕಿವಿ ಕೊಡುತ್ತಿಲ್ಲ ಎಂಬುದಕ್ಕೆ ಬೇತಮಂಗಲ ಕೆರೆಯಲ್ಲಿ ನಡೆಯುತ್ತಿರುವ ಮರಳು ಲೂಟಿಯೇ ಸಾಕ್ಷಿ.
ಬ್ರಿಟಿಷರ ಕಾಲದಲ್ಲಿ ಚಿನ್ನದ ನಾಡಿನ ಜನರಿಗೆ ಕುಡಿಯುವ ನೀರು ಪೂರೈಸಲು ಅಂದಿನ ಮಸೂರು ಮಹಾರಾಜರು ಪಾಲಾರ್ ನದಿಗೆ ಅಡ್ಡವಾಗಿ ಅನೇಕ ಕೆರೆಗಳನ್ನು ನಿರ್ಮಾಣ ಮಾಡಿದ್ದರು. ಸುಮಾರು 1ಸಾವಿರಕ್ಕೂ ಹೆಚ್ಚು ವಿಸ್ತೀರ್ಣ ಹೊಂದಿರುವ ಬೇತಮಂಗಲ ಕೆರೆಯನ್ನು ನಿರ್ಮಾಣ ಮಾಡಿ ಕೆಜಿಎಫ್ ಜನರಿಗೆ ನೀರು ಸರಬರಾಜು ಮಾಡುತ್ತಿದ್ದರು. ಕೆರೆಯಲ್ಲಿ ಸಂಗ್ರಹವಾಗುವ ನೀರಿನ ನಿರ್ವಹಣೆಯನ್ನು ಮೊದಲು ಆರೋಗ್ಯ ಇಲಾಖೆಗೆ ವಹಿಸಲಾಗಿತ್ತು,ನಂತರ ಒಳ ಚರಂಡಿ ಮಂಡಳಿಗೆ ನೀಡಲಾಯಿತು. ದಶಕದಿಂದ ಕೆರೆಯಲ್ಲಿ ನೀರಿಲ್ಲದ ಕಾರಣ ಮಂಡಳಿ ಕೆರೆಯನ್ನು ಸಂಪೂರ್ಣವಾಗಿ ನಿರ್ಲಲಕ್ಷಿಸಿತು. ಇದರಿಂದ ಕೆರೆಗೆ ಹರಿದು ಬರುತ್ತಿದ್ದ ಪಾಲಾರ್ ನದಿಯ ರಾಜಾಕಾಲುವೆ ಒತ್ತುವರಿದಾರರ ಕಪಿಮುಷ್ಟಿಗೆ ಸಿಲುಕಿತು.
ಕಳೆದ ಮೂರು ವರ್ಷಗಳಿಂದ ಪಾಲಾರ್ ರಾಜಾಕಾಲುವೆಯಲ್ಲಿ ಮರಳು ಲೂಟಿಕೋರರು ಆಕ್ರಮಿಸಿಕೊಂಡು ಕೋಟ್ಯಂತರ ರು. ಮರಳನ್ನು ಮಾರಾಟ ಮಾಡಿದ್ದಾರೆ. ಈ ದಂಧೆಗೆ ಸ್ಥಳೀಯ ಪೊಲೀಸರು ಹಾಗೂ ಕೆಲ ಅಧಿಕಾರಿಗಳ ಸಹಕಾರವಿದೆ ಎಂಬುದು ರೈತ ಸಂಘದ ಅಧ್ಯಕ್ಷ ಮರಗಲ್ ಶ್ರೀನಿವಾಸ್ ನೇರವಾಗಿ ಆರೋಪಿಸಿದ್ದಾರೆ. ಸರ್ಕಾರದ ಮರಳು ನೀತಿ ಪ್ರಕಾರ ಪಾಲಾರ್ ನದಿ ಹೊಳೆಯಲ್ಲಿ ಮರಳನ್ನು ತೆಗೆಯುವಂತಿಲ್ಲ.
 ಆದರೂ ನಿತ್ಯ ಸಾಗಾಟ ನಡೆಯುತ್ತಿರುವುದರಿಂದ ಪಾಲಾರ್ ಹೊಳೆ ಬರಡಾಗಿದೆ. ಮಳೆ ಬಂದರೂ ನೀರು ಮಾತ್ರ ನಿಲ್ಲುತ್ತಿಲ್ಲ ಹೊಳೆ ಉದ್ದಕ್ಕೂ ಹೊಂಡಗಳು ನಿರ್ಮಾಣವಾಗಿದೆ. ಇದರ ಪರಿಣಾಮವಾಗಿ ಬೇತಮಂಗಲ ಕೆರೆಗೆ ನೀರು ಹರಿಯದೆ ಕೆರೆ ಸಹ ಒಣಗಿದೆ. ಮರಳು ಲೂಟಿಯನ್ನು ತಡೆಯುವ ಜವಾಬ್ದಾರಿ ಹೊತ್ತಿರುವ ಅಧಿಕಾರಿಗಳ ಕಣ್ಣ ಮುಂದೆಯೇ ಲೂಟಿಯಾಗುತ್ತಿದ್ದರೂ ಮೌನಕ್ಕೆ ಶರಣಾಗಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
ಎಲ್ಲ ಕೆರೆಗಳದ್ದೂ ಇದೇ ಕತೆ: ಬರೀ ಬೇತಮಂಗಲ ಕೆರೆ ಕತೆ ಅಲ್ಲ ಇದು ತಾಲೂಕಿನ ಎಲ್ಲಾ ಕೆರೆಗಳಲ್ಲಿ ನಿರಂತರವಾಗಿ ಮರಳು ಲೂಟಿ ಸಾಗುತ್ತಿದೆ,ಇದರಿಂದ ಸರ್ಕಾರ ಕೋಟ್ಯಂತರ ರು. ವೆಚ್ಚದಲ್ಲಿ ನಿರ್ಮಾಣ ಮಾಡಿರುವ ರಸ್ತೆಗಳೂ ಬಹುಬೇಗ ಹಾಳಾಗುವ ಮೂಲಕ ಲುಕ್ಸಾನೆ ಉಂಟಾಗುತ್ತಿದೆ. ಇನ್ನಾದರೂ ತಾಲೂಕು ಅಧಿಕಾರಿಗಳು ಎಚ್ಚೆತ್ತುಕೊಂಡು ಈ ಮರಳು ಲೂಟಿಯನ್ನು ನಿಯಂತ್ರಿಸಲು ಮುಂದಾಗುವರೆ ಕಾದು ನೋಡಬೇಕು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement