ಮಲಾಲ ಮಾದರಿಯಲ್ಲಿ ಹೋರಾಡಿ
ಕೋಲಾರ: ಪ್ರತಿಯೊಬ್ಬ ವಿದ್ಯಾರ್ಥಿನಿ ಮಲಾಲ ರೀತಿಯಲ್ಲಿ ಸಮಾನತೆಗಾಗಿ ಚಿಂತಿಸಬೇಕು,ಸಂಘಟಿತರಾಗಿ ಹೋರಾಡಬೇಕೆಂದು ನಗರಸಭೆಯ ಅಧ್ಯಕ್ಷ ಬಿ.ಎಂ. ಮುಬಾರಕ್ ಕರೆ ನೀಡಿದರು.
ನಗರದ ಸರ್ಕಾರಿ ಬಾಲಕಿಯರ ಕಿರಿಯ ಕಾಲೇಜಿನಲ್ಲಿ ಎಸ್‌ಎಫ್‌ಐನಿಂದ ಸೋಮವಾರ ಹಮ್ಮಿಕೊಂಡಿದ್ದ ಹೆಣ್ಣು ಮಕ್ಕಳ ಶಿಕ್ಷಣ ಹೋರಾಟಗಾರ್ತಿ ಯೂಸುಫ್ ಮಲಾಲ ಜನ್ಮ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಸವಾಲುಗಳು ಎಂಬ ಉಪನ್ಯಾಸ ಕಾರ್ಯಕ್ರಮನ್ನು ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿನಿಯರು ಶಿಸ್ತು ಬದ್ಧ ಜೀವನ ಮತ್ತು ಉನ್ನತ ಯೋಚನೆಗಳ ಮೂಲಕ ರಾಷ್ಟ್ರಕ್ಕೆ ವಿಶೇಷವಾದ ಸೇವೆ ಸಲ್ಲಿಸಬೇಕೆಂದು ತಿಳಿಸಿದರು.
ಮಲಾಲ ಹೆಣ್ಣು ಮಕ್ಕಳ ಶಿಕ್ಷಣದ ಹಕ್ಕಿಗಾಗಿ ಹೋರಾಡಿದ್ದು ಕೇವಲ ಪಾಕಿಸ್ತಾನಕ್ಕೆ ಸೀಮಿತವಾಗಿ ಅಲ್ಲ, ಇಡೀ ಜಗತ್ತಿನಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಎಂದು ಪ್ರತಿಪಾದಿಸಿದರು.
ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಿಸಲು ಪೋಷಕರು ಮುಂದೆ ಬರುತ್ತಿಲ್ಲ, ಇದಕ್ಕೆ ಸಾಮಾಜಿಕ ಮತ್ತು ಸಮಾಜದಲ್ಲಿ ನಡೆಯುವ ಘಟನೆಗಳು ಕಾರಣವಾಗಿದ್ದು ವಿದ್ಯಾರ್ಥಿ ಸಂಘಟನೆಗಳು ಜಾತಿ,ಧರ್ಮಕ್ಕಿಂತ ಮಾನವೀಯ ಮೌಲ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಬಯಸಿದರು.
ಮಹಿಳಾ ಕಾಲೇಜಿನ ಉಪನ್ಯಾಸಕ ಡಾ.ಶಿವಪ್ಪ ಮಾತನಾಡಿ, ಎಲ್ಲ ರಂಗಗಳಲ್ಲಿ ಹೆಣ್ಣು ಮಕ್ಕಳು ಮುಂದುವರೆಯಬೇಕು. ಈ ನಾಗರೀಕ ಸಮಾಜ ಸ್ತ್ರೀ ಸಮಾನತೆ ಬಗ್ಗೆ ಇನ್ನೂ ಮಾತನಾಡುತ್ತಿರುವುದು ನಾಚಿಕೆಗೇಡು, ಪ್ರತಿಯೊಬ್ಬರು ವೈಚಾರಿಕ ಚಿಂತನೆಯೊಂದಿಗೆ ಸಮಾಜದ ಅನಿಷ್ಟ ಪದ್ಧತಿಗಳನ್ನು ತೊಲಗಿಸಲು ಹೋರಾಡಬೇಕೆಂದರು.
ಎಸ್.ಎಫ್.ಐ ಜಿಲ್ಲಾಧ್ಯಕ್ಷ ವಾಸುದೇವರೆಡ್ಡಿ ಮಾತನಾಡಿ, ಧಾರ್ಮಿಕ ಮೂಲಭೂತವಾದದ ವಿರುದ್ಧ ಮಲಾಲ ಹೋರಾಟ ಎಲ್ಲಾ ಗಡಿಗಳನ್ನು ಮೀರಿದ್ದು. ಒಂದು ಸಮಾಜವನ್ನು ಬಾಂಬು, ಬಂದೂಕು, ಹಿಂಸೆಯಿಂದ ಬದಲಾವಣೆ ಮಾಡಲು ಸಾಧ್ಯವಿಲ್ಲ. ಜಗತ್ತನ್ನು ಬದಲಿಸಲು ಶಿಕ್ಷಣವೊಂದು ಪರಿಣಾಮಕಾರಿ ಅಸ್ತ್ರ. ಅದು ಎಲ್ಲರಿಗೂ ಸಮಾನಾಗಿ ಸಿಗಬೇಕೆಂದು ಮಲಾಲ ಹೋರಾಟ ನಡೆಸಿದರು ಎಂದರು.
ಪ್ರಾಂಶುಪಾಲ ಕೆ.ಎಸ್. ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಾನೂನು ಪರಿವೀಕ್ಷಣಾಧಿಕಾರಿ ಎ.ಓ ಅನಿತಾ, ಎಸ್.ಎಫ್.ಐ ನ ಜಿಲ್ಲಾ ಸಹ ಕಾರ್ಯದರ್ಶಿ ಸಿ.ಅಮರೇಶ್, ಜಿಲ್ಲಾ ಉಪಾಧ್ಯಕ್ಷರಾದ ವೈ.ಅಮಿತ್, ಅಂಬಿಕಾ, ಕಾಲೇಜು ಘಟಕದ ಪವಿತ್ರ, ಸೌಮ್ಯ, ಸ್ವರ್ಣಾಂಜಲಿ, ರಜನಿ ಇದ್ದರು. ವಿದ್ಯಾರ್ಥಿನಿ ಗಾಯಿತ್ರಿ ಸ್ವಾಗತಿಸಿ, ಮುಸ್ತಾಫ್ ನಿರೂಪಿಸಿದರು.