ಪ್ರತಿಭಟನೆ ಕಾಮನ್
ಬಾಗೇಪಲ್ಲಿ: ತಾಲೂಕಿನ ಪಾತಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯ ನೀರಘಂಟಪಲ್ಲಿ ಗ್ರಾಮದ ಬಳಿ ಅಪ್ರಾಪ್ತ ಬಾಲಕಿಯ ಮೇಲೆ ನಡೆಸಿರುವ ಅತ್ಯಾಚಾರವನ್ನು ಖಂಡಿಸಿ ತಾಲೂಕು ಎಸ್.ಎಫ್.ಐ ಕಾರ್ಯಕರ್ತರು ಹಾಗೂ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಡಾ.ಹೆಚ್.ಎನ್ ವೃತ್ತದಿಂದ ಪಟ್ಟಣದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆಯಲ್ಲಿ ಸಾಗಿ ತಾಲೂಕು ಕಚೇರಿಯ ಮುಂದೆ ಧರಣಿ ಕುಳಿತರು. ಪತ್ರಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಎಸ್ಎಫ್ಐ ಜಿಲ್ಲಾಧ್ಯಕ್ಷ ಎಸ್. ರಾಜಶೇಖರ್ ಮಾತನಾಡಿ, ರಾಜ್ಯದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ನಿರಂತರವಾಗಿ ನಡೆಯುತ್ತಿದ್ದರೂ ಮಹಿಳೆಯರ ಮೇಲೆ ದೌರ್ಜನ್ಯವೆಸಗುವಂತಹ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಲ್ಲಿ ರಾಜ್ಯ ಸರ್ಕಾರ ನಿರ್ಲಕ್ಷ್ಯ ತೋರುತ್ತಿದೆ ಎಂದು ಆರೋಪಿಸಿದರು. ರಾಜ್ಯದಲ್ಲಿ ಒಂದು ವಾರದಲ್ಲಿ ಸುಮಾರು 26ಕ್ಕೂ ಅಧಿಕ ಅತ್ಯಾಚಾರ ಪ್ರಕರಣಗಳು ನಡೆದಿವೆ.ಕಳೆದ ಎರಡು ದಿನಗಳ ಹಿಂದೆ ತಾಲೂಕಿನ ಪಾತಪಾಳ್ಯ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ 13 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆದಿರುವುದು ಖಂಡನೀಯ. ಎಳೆಯ ಬಾಲಕಿಯರಿಂದ ಹಿಡಿದು 85ವರ್ಷದ ವೃದ್ಧರ ಮೇಲೆ ಅತ್ಯಾಚಾರಗಳು ನಡೆಯುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇತ್ತೀಚೆಗೆ ರಾಜ್ಯದಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿನಿಯರನ್ನು ವೇಶ್ಯಾವಾಟಿಕೆ ಕೂಪದಲ್ಲಿ ತೊಡಗಿಸುತ್ತಿದ್ದಾರೆ. ಕಳೆದ 4 ವರ್ಷಗಳಲ್ಲಿ ಸುಮಾರು 2964 ಅತ್ಯಾಚಾರ ಪ್ರಕರಣಗಳು ನಡೆದಿದೆ ಎಂದ ಅವರು,ಆರೋಪಿಗಳ ವಿರುದ್ಧ ಯಾವುದೇ ಕ್ರಮಜರುಗಿಸಿದ ಕಾರಣ ಮಹಿಳೆಯರು ಹಗಲಲ್ಲಿಯೂ ಬೀದಿಗಳಲ್ಲಿ ಓಡಾಡಲು ಭಯಬೀಳುವಂತಹ ವಾತಾವರಣ ಸೃಷ್ಟಿಯಾಗಿದೆ. ಇದರಿಂದ ಪೋಷಕರು ತಮ್ಮ ಮಕ್ಕಳನ್ನು ಶಾಲಾ ಕಾಲೇಜುಗಳಿಗೆ ಕಳುಹಿಸಲು ಹಿಂದೆ ಮುಂದೆ ನೋಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು. ಜಿ.ಪಂ. ಸದಸ್ಯೆ ಬಿ. ಸಾವಿತ್ರಮ್ಮ, ಶ್ರೀಕಾಂತ್, ಹರಿಕೃಷ್ಣಾ, ಮಧು, ಸೌಮ್ಯ, ಅನಿತ, ಮನು, ಗಜೇಂದ್ರ,ಮಹೇಶ್ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಇದು ಸರ್ಕಾರದ ವೈಫಲ್ಯದ ಫಲ
ಬಾಗೇಪಲ್ಲಿ: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಮಾನವ ಹಕ್ಕುಗಳ ಜಾಗೃತಿ ಸಮಿತಿಯ ರಾಜ್ಯ ಸಂಘಟನಾ ಕಾರ್ಯದರ್ಶಿ ಎಸ್ . ವೆಂಕಟಕೃಷ್ಣಮೂರ್ತಿ ಆರೋಪಿಸಿದರು.
ಪಟ್ಟಣದಲ್ಲಿ ಅತ್ಯಾಚಾರ ಪ್ರಕರಣಕ್ಕೆ ಪ್ರತ್ಯೇಕವಾಗಿ ಪ್ರಬಲ ಗೂಂಡಾ ಕಾಯ್ದೆ ಜಾರಿಗಾಗಿ ಒತ್ತಾಯಿಸಿ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ ಮಾನವ ಹಕ್ಕುಗಳ ಜಾಗೃತಿ ಸಮಿತಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ, ಅತ್ಯಾಚಾರಗಳು ನಿರಂತರವಾಗಿ ಪ್ರತಿನಿತ್ಯ ನಡೆಯುತ್ತಿದ್ದರೂರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ ಮಾತ್ರ ಮಹಿಳೆಯರ ದೌರ್ಜನ್ಯದ ಬಗ್ಗೆ ಯಾವುದೇ ಸಂಬಂಧ ಇಲ್ಲ ಎನ್ನುವಂತೆ ಮೌನಕ್ಕೆ ಶರಣಾಗಿದ್ದಾರೆ ಎಂದರು.
ರಾಜ್ಯ ಮಹಿಳಾ ಸಂಘಟನಾ ಕಾರ್ಯದರ್ಶಿ ಮಂಜುಳಾ ಮಾತನಾಡಿದರು. ಸಮಿತಿಯ ಗೌರವಾಧ್ಯಕ್ಷ ಎನ್ .ಎಸ್ .ಚಲಪತಿ ತಹಶೀಲ್ದಾರ್ ನಾಗರಾಜ್ ರವರಿಗೆ ಮನವಿ ಸಲ್ಲಿಸಿದರು. ಇದಕ್ಕೂ ಮೊದಲು ಸ್ಥಳೀಯ ವಿಕಾಸ್ ಕಾಲೇಜು, ವರದಾದ್ರಿ, ಕಾಲೇಜು, ಬ್ಲೂಮ್ಸ್ ಕಾಲೇಜು ವಿದ್ಯಾರ್ಥಿಗಳ ಸಹಯೋಗದಲ್ಲಿ ಪಟ್ಟಣದ ಮುಖ್ಯ ರಸ್ತೆಯಲ್ಲಿ ಡಾ.ಎಚ್.ಎನ್. ವೃತ್ತದವರೆಗೂ ಬೃಹತ್ ಪ್ರತಿಭಟನೆ ನಡೆಸಲಾಯಿತು. ತಾಲೂಕು ಅಧ್ಯಕ್ಷ ಟಿ. ಷಪೀವುಲ್ಲಾ, ಉಪಾಧ್ಯಕ್ಷ ವಿ.ವೆಂಕಟೇಶ್ವರಲು, ಪ್ರಧಾನ ಕಾರ್ಯದರ್ಶಿ ಕೆ. ಶ್ರೀನಾಥ್, ಜಂಟಿ ಕಾರ್ಯದರ್ಶಿ ಸೂರಿ, ಖಜಾಂಚಿ ಕಿಶೋರ್ ಬಾಬು, ಚನ್ನಾರೆಡ್ಡಿ, ಸಂಘಟನಾ ಕಾರ್ಯದರ್ಶಿ ಕೆ.ನರಸಿಂಹರೆಡ್ಡಿ, ಸಿದ್ದಿಕ್ ಆಲಿ, ಎನ್ .ಓ. ನರಸಿಂಹರೆಡ್ಡಿ ಸೇರದಂತೆ ಇತರರು ಇದ್ದರು.
ಸಿಐಟಿಯು, ಎಐಜೆಎಂಎಸ್ ರಸ್ತೆತಡೆ
ಗುಡಿಬಂಡೆ: ರಾಜ್ಯದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ ಮತ್ತು ದೌರ್ಜನ್ಯಗಳನ್ನು ತಡೆಯುವಲ್ಲಿ ಸರ್ಕಾರ ವಿಫಲವಾಗಿದೆಯೆಂದು ಆರೋಪಿಸಿ ಸಿಐಟಿಯು ಮತ್ತು ಎಐಜೆಎಂಎಸ್ ಸಂಘಟನೆ ಕಾರ್ಯಕರ್ತರು ಪಟ್ಟಣದ ತಾಲೂಕು ಕಚೇರಿ ಮುಂಭಾಗ ರಸ್ತೆತಡೆ ನಡೆಸಿ ಪ್ರತಿಭಟಿಸಿದರು. ಸೆಂಟರ್ ಅಫ್ ಇಂಡಿಯಾ ಟ್ರೇಡ್ ಯೂನಿಯನ್ ತಾಲೂಕು ಕಾರ್ಯದರ್ಶಿ ಎಸ್.ಭಾಗ್ಯಮ್ಮ ಮಾತನಾಡಿ, ನಮ್ಮ ರಾಜ್ಯದಲ್ಲಿ ಎಂದಿಗೂ ಕಾಣದಂತಹ ಅತ್ಯಾಚಾರಗಳು ಮಹಿಳೆಯರ ಮೇಲೆ ನಡೆಯುತ್ತಿವೆ. ಇಂಥ ದೌರ್ಜನ್ಯಗಳನ್ನು ನೋಡಿದರೆ ದೇಶದಲ್ಲೇ ನಮ್ಮ ರಾಜ್ಯ ಎರಡನೇ ಸ್ಥಾನವನ್ನು ಪಡೆದಿರುವಂತಹದು ನಾಚಿಕೆಯ ಸಂಗತಿಯಾಗಿದೆ. ನಮ್ಮ ರಾಜ್ಯ ಮತ್ತು ದೇಶ ಅಭಿವೃದ್ಧಿ ಹಿನ್ನಡೆಯಲ್ಲಿದ್ದರೂ ಅತ್ಯಾಚಾರಗಳಲ್ಲಿ ಮಾತ್ರ ಮೊದಲನೇ ಸ್ಥಾನಗಳಲ್ಲಿ ಇವೆ ಎಂದು ಆರೋಪಿಸಿದರು. ಪಟ್ಟಣದ ಮುಖ್ಯ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದ್ದರಿಂದ ಸುಮಾರು ಹೊತ್ತು ರಸ್ತೆ ಸಂಚಾರ ಸ್ಥಗಿತಗೊಂಡಿತ್ತು. ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ತಹಸೀಲ್ದಾರ್ ನಂಜಪ್ಪ ಅವರಿಗೆ ಮನವಿ ಸಲ್ಲಿಸಿದರು. ಸಿಐಟಿಯು ತಾಲೂಕಾಧ್ಯಕ್ಷೆ ವೆಂಕಟರತ್ನಮ್ಮ, ಖಜಾಂಚಿ ರತ್ನಮ್ಮ, ಕಾರ್ಯಕರ್ತೆಯರಾದ ಪ್ರಮೀಳಾ, ಸುಜಾತಾ, ಆರುಣ, ಶಾಂತಮ್ಮ, ಶುಭಾ, ಮಂಜುಳಾ ಸೇರಿದಂತೆ ತಾಲೂಕಿನ ಅಂಗನವಾಡಿ ಕಾರ್ಯಕರ್ತೆರು ಭಾಗವಹಿಸಿದ್ದರು.
ಪಂಜಿನ ಮೆರವಣಿಗೆ ಆ.1ಕ್ಕೆ
ಕೋಲಾರ: ಜಿಲ್ಲಾ ಮಹಿಳಾ ಮತ್ತು ಮಕ್ಕಳ ದೌರ್ಜನ್ಯ ವಿರೋಧಿ ಒಕ್ಕೂಟವು ನಗರದ ಪ್ರವಾಸಿ ಮಂದಿರದಲ್ಲಿ ಸಭೆ ಸೇರಿ ಮಹಿಳೆಯರ ಮತ್ತು ಮಕ್ಕಳ ಮೇಲಿನ ಅತ್ಯಾಚಾರ ಘಟನೆಗಳನ್ನು ಖಂಡಿಸಿ ಆ.1ರಂದು ನಗರದಲ್ಲಿ ಸಂಜೆ ಪಂಜಿನ ಮೆರವಣಿಗೆ ಹಮ್ಮಿಕೊಳ್ಳಲು ತೀರ್ಮಾನಿಸಿದೆ. ಸಭೆಯಲ್ಲಿ ಒಕ್ಕೂಟದ ಮುಖಂಡರು ಮಾತನಾಡಿ, ಅತ್ಯಾಚಾರ ಪ್ರಕರಣಗಳ ನಿಯಂತ್ರಣ ಮತ್ತು ನಿರ್ವಹಣೆಯಲ್ಲಿ ಜಿಲ್ಲಾಡಳಿತ ತೋರುತ್ತಿರುವ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿದರು. ಪ್ರಗತಿ ಪರ ಸಂಘಟನೆಗಳು ಪ್ರತಿಭಟನೆಗಳು ನಡೆಸಿ ಜಿಲ್ಲಾ ಬಂದ್ ನಡೆಸಿದರೂ ಜಿಲ್ಲಾಡಳಿತ ಕುಂಬಕರ್ಣ ನಿದ್ರಾವಸ್ಥೆಯಿಂದ ಎಚ್ಚೆತ್ತುಕೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲಾಡಳಿತಕ್ಕೆ ಜಾಗೃತಿಯ ಅರಿವು ಮೂಡಿಸಲು ಇನ್ನಷ್ಟು ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಚುರುಕುಗೊಳಿಸುವ ಸಲುವಾಗಿ ಮೊದಲಿಗೆ ಪಂಜಿನ ಮೆರವಣಿಗೆಯನ್ನು ಹಮ್ಮಿಕೊಳ್ಳಬೇಕೆಂದು ಮುಖಂಡರು ನಿರ್ಧರಿಸಿದರು. ಸಭೆಯಲ್ಲಿ ಮುಖಂಡರಾದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಟಿ.ವಿಜಯಕುಮಾರ್, ಡಿವೈಎಫ್ಐ ಸಂಘಟನೆಯ ಪಿ.ವಿ.ರಮಣ, ರೈತ ಸಂಘದ ನಾಗರಾಜ್, ಕೆ.ಶ್ರೀನಿವಾಸಗೌಡ, ವಿಮೋಚನಾ ಸಂಸ್ಥೆಯ ಶಾಂತಮ್ಮ, ಅಂಗನವಾಡಿ ಕಾರ್ಯಕರ್ತೆಯರ ಸಂಘದ ಶಿವಣ್ಣ, ಗೌರಮ್ಮ, ಪದ್ಮಾವತಿ, ವಕೀಲರಾದ ಧನರಾಜ್, ಶಾರದಮ್ಮ, ಎಸ್.ನಾರಾಯಣಸ್ವಾಮಿ, ಉಮಾ, ಗೌರಿ, ಪಾಪಮ್ಮ, ಚೈತನ್ಯ, ನಾಗವೇಣಿ, ಜಮುನಾ, ಗ್ರೇಸ್ ಸಂತೋಷಕುಮಾರಿ ಭಾಗವಹಿಸಿದ್ದರು.
ಅತ್ಯಾಚಾರ ಖಂಡಿಸಿ ಶಿಡ್ಲಘಟ್ಟ ಬಂದ್ 31ಕ್ಕೆ
ಶಿಡ್ಲಘಟ್ಟ: ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರಗಳನ್ನು ಖಂಡಿಸಿ ಜು.31 ರಂದು ಬಂದ್ ಕರೆ ನೀಡಿದ್ದು ಸಾರ್ವಜನಿಕರು, ಸಂಘ ಸಂಸ್ಥೆಗಳು ಸಹಕರಿಸಬೇಕು ಎಂದು ಸಿಐಟಿಯು ಜಿಲ್ಲಾ ಪ್ರಧಾನಕಾರ್ಯದರ್ಶಿ ಲಕ್ಷ್ಮೀದೇವಮ್ಮ ಮನವಿ ಮಾಡಿದ್ದಾರೆ. ಪಟ್ಟಣದ ಪ್ರವಾಸಿ ಮಂದಿರಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ದಕ್ಷ ಆಡಳಿತ ನೀಡುವ ಭರವಸೆ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಆತ್ಯಾಚಾರದ ಬಗ್ಗೆ ಮಾದ್ಯಮಗಳು ಪ್ರಶ್ನೆ ಮಾಡಿದರೆ ಹಾರಿಕೆಯ ಉತ್ತರ ನೀಡುತ್ತಿದ್ದಾರೆ, ಚರ್ಚೆ ನಡೆಯುವ ಸಂಧರ್ಭದಲ್ಲಿ ಸದನದಲ್ಲಿ ನಿದ್ದೆ ಮಾಡುತ್ತಿದ್ದಾರೆ, ಇವರ ಆಡಳಿತ ವೈಖರಿಗೆ ಪೊಲೀಸ್ ಇಲಾಖೆ ರಕ್ಷಣೆ ನೀಡುವಲ್ಲಿ ವಿಫಲವಾಗಿದೆ. ಜು.31ರಂದು ಬಂದ್ಗೆ ಕರೆ ನೀಡಿದ್ದು, ಸಾರಿಗೆ ವ್ಯವಸ್ಥೆ, ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ನಾಗರಿಕರು ಸಹಕರಿಸಬೇಕು ಎಂದರು. ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಎಂ.ಪಿ. ಮುನಿವೆಂಕಟಪ್ಪ, ಜಿಪಂ ಮಾಜಿ ಉಪಾಧ್ಯಕ್ಷೆ ಸಾವಿತ್ರಮ್ಮ, ಡಿವೈಎಫ್ಐನ ಫಯಾಜ್ಅಹ್ಮದ್, ತಾಲೂಕು ಸಂಚಾಲಕ ಸದಾನಂದ, ಅಪ್ಪು ಇದ್ದರು.
ಅಶ್ಲೀಲ ಪೋಸ್ಟರ್ ತೆರವಿಗೆ ಆಗ್ರಹ
ಶಿಡ್ಲಘಟ್ಟ: ಇತ್ತಿಚೆಗೆ ರಾಜ್ಯದಲ್ಲಿ ಮಹಿಳೆಯರ ಮೇಲೆ ಹೆಚ್ಚುತ್ತಿದ್ದರೆ, ಇದಕ್ಕೆ ಪುಷ್ಟಿ ನೀಡುವಂತೆ ಚಿತ್ರಮಂದಿಗಳು ಅರೆನಗ್ನ ಪೋಸ್ಟರ್ಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಹಾಕಿ ನಾಗರಿಕರ ಆಕ್ರೋಶಕ್ಕೆ ಎಡೆಯಾಗಿದೆ. ಪಟ್ಟಣದ ಮೂಲೆ ಮೂಲೆಯಲ್ಲೂ ಇಂತಹ ಪೋಸ್ಟರ್ಗಳು ರಾರಾಜಿಸುತ್ತಿದ್ದು, ಸಾರಿಗೆ ಬಸ್ ನಿಲ್ದಾಣ, ಹೋಟೆಲ್, ರೈಲ್ವೆ ನಿಲ್ದಾಣದ ಸಮೀಪ ಸೇರಿಜನಸಂದಣಿ ಪ್ರದೇಶಗಳಲ್ಲಿ ಅರೆನಗ್ನ ಸಿನಿಮಾ ಪೋಸ್ಟರ್ಗಳನ್ನು ಹಾಕಿರುವುದರಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳು ಮುಜುಗರಕ್ಕೀಡಾಗುತ್ತಿದ್ದಾರೆ. ಈ ಬಗ್ಗೆ ಬಹಳಷ್ಟು ಬಾರಿಗೆ ಪುರಸಭೆಗೆ ದೂರು ನೀಡಿ ಅಶ್ಲೀಲ ಪೋಸ್ಟರ್ಗಳನ್ನು ತೆರವುಗೊಳಿಸಿ, ಇಂತಹ ಪೋಸ್ಟರ್ಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಹಾಕದಂತೆ ನಿರ್ಬಂಧ ಹೇರಬೇಕು ಎಂದು ಮನವಿ ಮಾಡಿದ್ದರೂ ಪುರಸಭಾ ಅಧಿಕಾರಿಗಳು ಕ್ರಮ ತೆಗೆದುಕೊಂಡಿಲ್ಲ. ಪೊಲೀಸ್ ಇಲಾಖೆ ಹಾಗೂ ಪುರಸಭೆಯ ಅಧಿಕಾರಿಗಳು ಕೂಡಲೇ ಸಾರ್ವಜನಿಕ ಸ್ಥಳಗಳಲ್ಲಿ ಅಶ್ಲೀಲ ಪೋಸ್ಟರ್ಗಳನ್ನು ಅಂಟಿಸದಂತೆ ಕ್ರಮವಹಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಅತ್ಯಾಚಾರ ತಡೆ ಜಾಗೃತಿ ಅಗತ್ಯ: ವಿವೇಕಾನಂದ
ಕೆಜಿಎಫ್: ಇತ್ತೀಚೆಗೆ ರಾಜ್ಯದಲ್ಲಿ ಹಾಗೂ ಕೋಲಾರ ಜಿಲ್ಲೆಯಲ್ಲಿ ನಿರಂತರವಾಗಿ ನಡೆಯುತ್ತಿರುವ ಅತ್ಯಾಚಾರ ಹಾಗೂ ಲೈಂಗಿಕ ಕಿರುಕುಳ ಪ್ರಕರಣಗಳಿಂದ ಸಮಾಜ ತಲೆತಗ್ಗಿಸುವ ಪರಿಸ್ಥಿತಿ ಉಂಟಾಗಿದೆ. ಇಂಥ ಸಮಯದಲ್ಲಿ ವಿದ್ಯಾರ್ಥಿಗಳು, ಮಹಿಳೆಯರು ಮತ್ತು ಯುವತಿಯರು ಹೆಚ್ಚು ಜಾಗೃತರಾಗಬೇಕಾಗಿ ಎಂದು ಕೆಜಿಎಫ್ ಜಿಲ್ಲಾ ಪೊಲೀಸ್ ಉಪರಕ್ಷಣಾಧಿಕಾರಿ ಎ.ಕೆ.ವಿವೇಕಾನಂದ ಹೇಳಿದರು. ಉರಿಗಾಂ ಪೊಲೀಸ್ ವೃತ್ತ ಕಚೇರಿವತಿಯಿಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಏರ್ಪಡಿಸಿದ್ದ ಮಕ್ಕಳ ಹಾಗೂ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳ ಕುರಿತು ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಿಪಿಐ ಪವನ್ಕುಮಾರ್, ಪಿಎಸ್ಐ ನಾರಾಯಣಸ್ವಾಮಿ, ಪ್ರಾಂಶುಪಾಲ ಕೃಷ್ಣಕುಮಾರ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರೊ.ಎನ್.ಸುಬ್ರಮಣಿ, ಪಿ.ಜಿ.ರೇವತಿ, ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಪೋಷಕರು, ಕಾಲೇಜು ಮತ್ತು ಪೊಲೀಸ್ ಸಿಬ್ಬಂದಿ ಹಾಜರಿದ್ದರು.