ಸಾಮಾಜಿಕ ಕಾರ್ಯಕ್ಕೆ ಆದ್ಯತೆ ನೀಡಿ
ಮಾಲೂರು: ಹಣ ಗಳಿಕೆಯೊಂದಿಗೆ ಇತರೆ ಸಾಮಾಜಿಕ ಕಾರ್ಯಗಳಿಗೂ ಕಾರ್ಖಾನೆಯ ಲಾಭಾಂಶವನ್ನು ವಿನಿಯೋಗ ಮಾಡುತ್ತಿದ್ದು, ಅದರಲ್ಲೂ ಗ್ರಾಮೀಣ ಭಾಗದ ಶೈಕ್ಷಣಿಕ ಅಬಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆ ಎಂದು ಸೌತ್ ಇಂಡಿಯಾ ಸ್ವಾಂಜ್ ಐರನ್ ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ವ್ಯವಸ್ಥಾಪಕ ಪ್ರದೀಪ್ ಹೇಳಿದರು.
ತಾಲೂಕಿನ ತಾಳಕುಂಟೆ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೌತ್ ಇಂಡಿಯಾ ಸ್ವಾಂಜ್ ಐರನ್ ಕಂಪನಿಯು ಶಾಲಾ ಮಕ್ಕಳಿಗೆ ಉಚಿತ ಶೈಕ್ಷಣಿಕ ಪರಿಕರಗಳನ್ನು ವಿತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿ, ನಮ್ಮ ಉದ್ಯಮಕ್ಕೆ ಸ್ಥಳಾವಕಾಶ ಮಾಡಿಕೊಟ್ಟಿರುವ ಈ ಪ್ರದೇಶದ ಅಭಿವೃದ್ಧಿಗೆ ನಾವೂ ಸಹಕರಿಸಬೇಕಾಗಿರುವುದು ನಮ್ಮ ಕರ್ತವ್ಯ. ಅಭಿವೃದ್ಧಿಗೆ ಶಿಕ್ಷಣವೇ ಮುಖ್ಯ ಆಧಾರವಾಗಿರುವುದರಿಂದ 5 ವರ್ಷದಿಂದ ಇಲ್ಲಿನ ಶಾಲೆಗಳಿಗೆ ಶೈಕ್ಷಣಿಕ ಪರಿಕರ ಉಚಿತವಾಗಿ ವಿತರಿಸಲಾಗುತ್ತಿದ್ದು ಮುಂದಿನ ವರ್ಷದಿಂದ ಕಂಪ್ಯೂಟರ್‌ಗಳನ್ನು ನೀಡಲು ಉದ್ದೇಶಿಸಲಾಗಿದೆ ಎಂದರು. ಕಂಪನಿ ಜನರಲ್ ಮ್ಯಾನೇಜರ್ ಸುಮನ್ ಸಹ ಶಾಲಾ ಮಕ್ಕಳಿಗೆ ಪುಸ್ತಕ, ಲೇಖನ ಸಾಮಾಗ್ರಿ, ಬ್ಯಾಗ್, ಸಮವಸ್ತ್ರ ಹಾಗೂ ಶೂಗಳನ್ನು ವಿತರಿಸಿದರು. ಶಾಲೆಯ ಪ್ರಭಾರ ಮುಖ್ಯಶಿಕ್ಷಕಿ ಎನ್.ನಿರ್ಮಲ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಗೋಪಾಲಪ್ಪ, ಸದಸ್ಯರಾದ ವೇಣು ಗೋಪಾಲ್, ಮಂಜುನಾಥ್ ಇದ್ದರು. ತಾರಾಮಣಿ ಸ್ವಾಗತಿಸಿ, ವಿ. ಶ್ರೀನಿವಾಸ್ ನಿರೂಪಿಸಿ, ಶಾರದಮ್ಮ ವಂದಿಸಿದರು.
ಗೆಳೆಯರ ಬಳಗದಿಂದ ಸಮವಸ್ತ್ರ ವಿತರಣೆ
ಕೋಲಾರ: ತಾಲೂಕಿನ ಅರಾಭಿಕೊತ್ತನೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಶಿಕ್ಷಕ ಗೆಳೆಯರ ಬಳಗದಿಂದ ಸಮವಸ್ತ್ರವನ್ನು ವಿತರಿಸಲಾಯಿತು.
ಬೆಂಗಳೂರಿನ ಪ್ಯೂಚರ್ ಇಂಡಿಯಾ ಟ್ರಸ್ಟ್, ಸ್ಯಾಮಸಂಗ್, ಅಡಿಡಾಸ್, ಸ್ಪಿನಾಪ್ಟೀಸ್ ಮತ್ತಿತರ ಕಂಪನಿಗಳು ತಾಲೂಕಿನ ಮಕ್ಕಳಿಗೆ ನೀಡಿರುವ ಉಚಿತ ಸಮವಸ್ತ್ರಗಳನ್ನು ಅರಾಭಿಕೊತ್ತನೂರು ಶಾಲಾ ಮಕ್ಕಳಿಗೆ ಶಿಕ್ಷಕ ಬಳಗದ ಪದಾಧಿಕಾರಿಗಳು ವಿತರಿಸಿದರು.
ಈ ಸಂದರ್ಭದಲ್ಲಿ ಬಳಗದ ಅಧ್ಯಕ್ಷ ನಾರಾಯಣ ಸ್ವಾಮಿ, ಕಾರ್ಯದರ್ಶಿ ವೀರಣ್ಣಗೌಡ, ಉಪಾಧ್ಯಕ್ಷ ಬೈರೇಗೌಡ, ಖಜಾಂಚಿ ಚಂದ್ರಪ್ಪ, ಸಂಘಟನಾ ಕಾರ್ಯದರ್ಶಿ ವೆಂಕಟಾಚಲಗೌಡ, ಮುಖ್ಯ ಶಿಕ್ಷಕಿ ಸುನೀತಾ ಕುಮಾರಿ, ಶಿಕ್ಷಕರಾದ ಭಾರತಿ, ಸಿ. ರೇಖಾ ಸುಮಿತ್ರ ವೆಸ್ಲಿ ಮತ್ತಿತರರು ಇದ್ದರು.