ಪಂಕ್ಚರ್ ಹಾಕಲು ಹೋದವ ನಾಪತ್ತೆ
ಕೆಜಿಎಫ್: ಕಾರಿಗೆ ಪಂಕ್ಚರ್ ಹಾಕಲು ಹೋಗಿದ್ದ ವ್ಯಕ್ತಿ ಇದೀಗ ನಾಪತ್ತೆಯಾಗಿದ್ದು, ಬೇತಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ದೊಡ್ಡಕಾರಿ ಗ್ರಾಮದ ನಿವಾಸಿ ಪನ್ನೀರ್ ಸೆಲ್ವಂ ಎಂಬುವರು ಬೇತಮಂಗಲ-ವಿ.ಕೋಟ ರಸ್ತೆಯಲ್ಲಿ ಪಂಚರ್ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದರು. ತಮ್ಮ ಮಹೇಂದ್ರ ಕಾರ್ ಪಂಚರಾಗಿದೆ ಎಂದು ಹೇಳಿಕೊಂಡು ಅನಾಮಧೇಯ ವ್ಯಕ್ತಿ ಅಂಗಡಿ ಬಳಿ ಬಂದು ತಿಳಿಸಿದ್ದು ಪನ್ನೀರ್ ಸೆಲ್ವಂ ತಮ್ಮ ದ್ವಿಚಕ್ರ ವಾಹನದಲ್ಲಿ ಅನಾಮಧೇಯ ವ್ಯಕ್ತಿಯನ್ನು ಕುಳ್ಳರಿಸಿಕೊಂಡು ಹೋದವರು ಮತ್ತೆ ಅಂಗಡಿಗೆ ಬಾರದೆ ಮನೆಗೂ ಬಾರದೆ ನಾಪತ್ತೆಯಾಗಿದ್ದಾರೆ.ಈ ಬಗ್ಗೆ ಸೆಲ್ವಂ ಅಣ್ಣ ಶ್ರೀನಿವಾಸ್ ದೂರು ದಾಖಲಿಸಿದ್ದಾರೆ.
ಮುರುಗೇಂದ್ರಪ್ಪ ಇಂದು ನಾಮಪತ್ರ ಸಲ್ಲಿಕೆ
ತುಮಕೂರು: ಆಗ್ನೇಯ ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯ ಹಾಗೂ ಕಾಲೇಜು ಅಧ್ಯಾಪಕರ ಸಂಘಗಳ ಒಕ್ಕೂಟದ ರಾಜ್ಯಾಧ್ಯಕ್ಷರೂ, ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾನಿಲಯ ಖಾಸಗಿ ಕಾಲೇಜು ಅಧ್ಯಾಪಕರ ಸಂಘದ ಅಧ್ಯಕ್ಷರೂ ಆದ ಪ್ರೊ.ಸಿ.ಎಚ್. ಮುರುಗೇಂದ್ರಪ್ಪ ಅವರು ಸ್ಪರ್ಧಿಸುತ್ತಿದ್ದು, ಇದೇ ಸೋಮವಾರ ಅವರು ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಲಿದ್ದಾರೆ. ಜೂನ್ 2 ರಂದು ಬೆಳಗ್ಗೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಕಾನೂನು ಸಚಿವ ಟಿ.ಬಿ.ಜಯಚಂದ್ರ ಸೇರಿದಂತೆ ಐದು ಜಿಲ್ಲೆಗಳ ಕಾಂಗ್ರೆಸ್ ಶಾಸಕರು, ಟಿ.ಎಸ್. ನಿರಂಜನ್ ಸೇರಿದಂತೆ ಜಿಲ್ಲಾ ಮುಖಂಡರು ಹಾಗೂ ಅಪಾರ ಬೆಂಬಲಿಗರೊಂದಿಗೆ ಬೆಂಗಳೂರಿನ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಚುನಾವಣಾಧಿಕಾರಿಗಳಿಗೆ ತಮ್ಮ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಪಕ್ಷದ ವಕ್ತಾರ ಮೋಹನ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವೈ.ಎಸ್.ಹುಚ್ಚಯ್ಯಗೆ ಜಿಪಂ ಅಧ್ಯಕ್ಷ ಸ್ಥಾನ ನೀಡಲು ಒತ್ತಾಯ
ಪಾವಗಡ: ಕುಣಿಗಲ್ ತಾಲೂಕಿನ ಜೆಡಿಎಸ್ ಹಿರಿಯ ಮುಖಂಡ ಹಾಗೂ ಜಿಪಂ ಸದಸ್ಯ ವೈ.ಎಸ್.ಹುಚ್ಚಯ್ಯ ಅವರಿಗೆ ತುಮಕೂರು ಜಿಪಂ ಅಧ್ಯಕ್ಷ ಸ್ಥಾನ ನೀಡುವಂತೆ ತಾ.ಮಾದಿಗ ದಂಡೋರ ಅಧ್ಯಕ್ಷ ವಳ್ಳೂರು ನಾಗೇಶ್ ಹಾಗೂ ಇತರೆ ದಲಿತ ಸಂಘಟನೆಗಳು ಮನವಿ ಮಾಡಿವೆ. ಈ ಕುರಿತು ಮಾತನಾಡಿದ ನಾಗೇಶ್ ಜೂ. 3ರಂದು ತುಮಕೂರು ಜಿಪಂ ಅಧ್ಯಕ್ಷರ ಆಯ್ಕೆ ಚುನಾವಣೆ ನಡೆಯಲಿದ್ದು ಜಿಲ್ಲೆಯ ಕುಣಿಗಲ್ ತಾಲೂಕಿನ ವಾಸಿ ಹಾಗೂ ಜಿಪಂ ಸದಸ್ಯ ವೈ.ಎಸ್. ಹುಚ್ಚಯ್ಯ ಅವರಿಗೆ ಜಿಪಂ ಅಧ್ಯಕ್ಷರ ಸ್ಥಾನ ಕಲ್ಪಿಸುವಂತೆ ಮುಖಂಡರು ಮತ್ತು ಜಿಪಂ ಸದಸ್ಯರಲ್ಲಿ ಒತ್ತಾಯಿಸಿದ್ದಾರೆ. ಕುಣಿಗಲ್ ತಾಲೂಕಿನ ಹುತ್ರಿದುರ್ಗ ಜಿಪಂ ಕ್ಷೇತ್ರದಿಂದ ಮೂರು ಬಾರಿ ಜಿಪಂ ಸದಸ್ಯರಾಗಿ ಅಯ್ಕೆಯಾದ ವೈ.ಎಸ್ ಹುಚ್ಚಯ್ಯ ಅವರು ಜನಪರ ಕಾಳಜಿಯುಳ್ಳವರು ಮತ್ತು ಸರಳತೆಗೆ ಹೆಸರಾಗಿದ್ದು ಬಡವರ ಏಳಿಗೆಗೆ ಶ್ರಮಿಸುತ್ತಿರುವವರು ಎಂದರು. ಹುಚ್ಚಯ್ಯ ಅವರಿಗೆ ಜಿಪಂ ಅಧ್ಯಕ್ಷ ಸ್ಥಾನ ನೀಡುವ ಮೂಲಕ ಸಾಮಾಜಿಕ ನ್ಯಾಯ ಕಲ್ಪಿಸಲು ಮನವಿ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಜೆಡಿಎಸ್‌ನ ಕಡಮಲಕುಟಂಟೆ ಹನುಮಂತರಾಯ, ಬಳಸಮುದ್ರ ವೆಂಕಟೇಶ್, ಓಬಳಾಪುರ ನೀಲಾ ನಾಗರಾಜ್, ಟಿ.ಎನ್ ಪೇಟೆ ರಮೇಶ್ ಇತರರು ಇದ್ದರು.
ಅಪಘಾತದಲ್ಲಿ ಹೆಬ್ಬಾಕ ರಮೇಶ್ ನಿಧನ
ತುಮಕೂರು: ತುಮಕೂರು ಸಮೀಪದ ಹೆಗ್ಗೆರೆ ಬಳಿ ನಡೆದ ರಸ್ತೆ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ ದಲಿತ ಮುಖಂಡ ಹೆಬ್ಬಾಕ ರಮೇಶ್ (78) ಸಾವನ್ನಪ್ಪಿದ್ದಾರೆ. ಸರಕು ಸಾಗಣೆ ವಾಹನ ಟಾಟಾ ಏಸ್ ಹಾಗೂ ಲೂನಾ ನಡುವೆ ಭಾನುವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ನಡೆದ ಅಪಘಾತದಲ್ಲಿ ರಮೇಶ್ ಸಾವನ್ನಪ್ಪಿದ್ದಾರೆ. ಹೆಬ್ಬಾಕ ರಮೇಶ್ ಹಾಲಿ ದಲಿತ ಸೇನೆಯ ರಾಜ್ಯ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಕುವೆಂಪು ಶ್ರೀ ಪ್ರಶಸ್ತಿಗೆ ಅರ್ಜಿ
ಮೈಸೂರು: ವಿಶ್ವಮಾನವ ವಿದ್ಯಾರ್ಥಿ ವೇದಿಕೆಯು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೀಡಲಿರುವ ಕುವೆಂಪು ಶ್ರೀ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಿದೆ. 2013- 14ನೇ ಸಾಲಿನ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಶೇ.80ಕ್ಕೂ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ವಿಶ್ವಮಾನವ ಪ್ರತಿಭಾ ಪುರಸ್ಕಾರ ನೀಡಲಾಗುವುದು. ಈ ಎರಡು ಪರೀಕ್ಷೆಗಳಲ್ಲಿ ಕನ್ನಡದ ವಿಷಯದಲ್ಲಿ ಶೇ.100ಕ್ಕೆ 100 ಅಂಕ ಪಡೆದಿರುವ ವಿದ್ಯಾರ್ಥಿಗಳಿಗೆ ಕುವೆಂಪು ಶ್ರೀ ಪ್ರಶಸ್ತಿ ನೀಡಲಾಗುವುದು ಎಂದು ವೇದಿಕೆ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು ಭುಜಗನಪುರ ತಿಳಿಸಿದ್ದಾರೆ. ಮೈಸೂರು, ಚಾಮರಾಜನಗರ, ಹಾಸನ, ಕೊಡಗು ಹಾಗೂ ಮಂಡ್ಯ ಜಿಲ್ಲೆಗಳ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಆಸಕ್ತರು 2 ಭಾವಚಿತ್ರ, ಕಾಲೇಜಿನ ವಿವರ ಹಾಗೂ ಅಂಕಪಟ್ಟಿಯ ನಕಲು ಪ್ರತಿಯೊಂದಿಗೆ ಅರ್ಜಿಯನ್ನು ಎಂ.ಜೆ. ಸುರೇಶ್‌ಗೌಡ, ಸಂಸ್ಥಾಪಕ ಅಧ್ಯಕ್ಷರು, ವಿಶ್ವಮಾನವ ವಿದ್ಯಾರ್ಥಿ ವೇದಿಕೆ, ನಂ.2618, ವಾಲ್ಮೀಕಿ ರಸ್ತೆ, ಒಂಟಿಕೊಪ್ಪಲ್, ಮೈಸೂರು -2 ಈ ವಿಳಾಸಕ್ಕೆ ಸಲ್ಲಿಸಬಹುದು. ಮೊ. 9986151966 ಸಂಪರ್ಕಿಸಬಹುದು.