ಮಳಿಗೆ ಖಾಲಿ ಪ್ರಕರಣ: ಜಟಾಪಟಿ, ಪೊಲೀಸರ ಮಧ್ಯಪ್ರವೇಶ
ಕುಣಿಗಲ್: ಮಳಿಗೆ ಖಾಲಿ ಮಾಡಿಸುವ ವಿಷಯದಲ್ಲಿ, ಮಳಿಗೆಯನ್ನು ಹೊಸದಾಗಿ ಖರೀದಿಸಿದ್ದ ಮಾಲೀಕರು ಮತ್ತು ಬಾಡಿಗೆದಾರರ ನಡುವೆ ಜಟಾಪಟಿ ನಡೆದು, ತುಮಕೂರು ರಸ್ತೆಯಲ್ಲಿ ಕೆಲಕಾಲ ಗೊಂದಲದ ಸ್ಥಿತಿ ನಿರ್ಮಾಣವಾದ ಘಟನೆ ಶನಿವಾರ ರಾತ್ರಿ ನಡೆದಿದೆ.
ತುಮಕೂರು ರಸ್ತೆಯಲ್ಲಿನ ಪಿಎಲ್ಡಿ ಬ್ಯಾಂಕ್ ಮುಂಭಾಗದಲ್ಲಿನ ಮಳಿಗೆಯೊಂದರಲ್ಲಿ ಗಣೇಶ್ ಎಂಬುವವರು ಕಳೆದ ಹಲವು ದಶಕಗಳಿಂದಲೂ ಬಾಡಿಗೆಗೆ ಇದ್ದು, ಹೋಟೆಲ್ ನಡೆಸುತ್ತಿದ್ದಾರೆ. ಆದರೆ, ಸದರಿ ಮಳಿಗೆಯನ್ನು ತಾವು ಖರೀದಿಸಿದ್ದೇವೆಂದು ಸ್ಥಳೀಯ ವರ್ತಕರೊಬ್ಬರು, ಮಳಿಗೆ ತೆರವುಗೊಳಿಸುವಂತೆ ಬಾಡಿಗೆದಾರರಿಗೆ ಸೂಚಿಸಿದ್ದರು. ಕಳೆದ ಹಲವು ದಶಕಗಳಿಂದ ಬಾಡಿಗೆ ಇದ್ದ ಬಾಡಿಗೆದಾರರು ತಮಗೆ ಬಾಡಿಗೆ ಕೊಟ್ಟಂತಹ ಮೂಲಮಾಲೀಕರು ಯಾವುದೇ ಮಾಹಿತಿ ನೀಡದ ಕಾರಣ, ಮಳಿಗೆ ತೆರವಿಗೆ ಹಿಂದೇಟು ಹಾಕಿದ್ದರು.
ಈ ಮಧ್ಯೆ ಮಳಿಗೆ ಖಾಲಿ ಮಾಡಿಸಲು ವರ್ತಕ, ವಾಮಮಾರ್ಗದ ಮೂಲಕ ಕೆಲ ಬಲಾಢ್ಯರಿಂದ ಬಲ ಪ್ರಯೋಗಿಸಿ, ಶನಿವಾರ ಏಕಾಏಕಿ ಮಳಿಗೆ ತೆರವಿಗೆ ಮುಂದಾಗಿ, ಮಳಿಗೆಯ ಬಾಗಿಲು, ಮಳಿಗೆಯಲ್ಲಿದ್ದ ಕೆಲ ವಸ್ತುಗಳನ್ನು ಜಖಂಗೊಳಿಸಿದರೆಂದು ಆರೋಪಿಸಿದ ಮಳಿಗೆ ಬಾಡಿಗೆದಾರರು, ವರ್ತಕನ ಕಡೆಯವರೊಂದಿಗೆ ಜಟಾಪಟಿಗೆ ಇಳಿದ ಕಾರಣ, ಮಾಲೀಕ ಮತ್ತು ಬಾಡಿಗೆದಾರರ ಗುಂಪು, ಪಟ್ಟಣದ ತುಮಕೂರು ರಸ್ತೆಯಲ್ಲಿ ಜಮಾವಣೆಗೊಂಡು ಗೊಂದಲಮಯ ವಾತಾವರಣಕ್ಕೆ ಕಾರಣರಾದರು. ಈ ಮಧ್ಯೆ ಪುರಸಭೆ ಸದಸ್ಯ, ಬಿಜೆಪಿ ಮುಖಂಡನೊಬ್ಬ ಮಳಿಗೆ ತೆರವಿಗೆ ಕೆಲ ಯುವಕರಿಗೆ ಆಮಿಷ ನೀಡಿ, ಬಲವಂತ ಕ್ರಮಕ್ಕೆ ಮುಂದಾಗಿದ್ದರೆಂದು ಸಹ ಮತ್ತೊಂದು ಗುಂಪು ಆರೋಪದಲ್ಲಿ ತೊಡಗಿದಾಗ ಪರಿಸ್ಥಿತಿ ಮತ್ತಷ್ಟು ಗೊಂದಲಮಯವಾಗಿ, ತುಮಕೂರು ರಸ್ತೆಯಲ್ಲಿ ಜನದಟ್ಟಣೆ ಹೆಚ್ಚಾಗಿ, ವಾಹನ ಸಂಚಾರಕ್ಕೆ ತೊಂದರೆಯಾದ ಹಿನ್ನೆಲೆಯಲ್ಲಿ ನಾಗರಿಕರೊಬ್ಬರು ಪೊಲೀಸರಿಗೆ ವಿಷಯ ತಿಳಿಸಿದ ಮೇರೆಗೆ, ಪಿಎಸೈ ಗುರುಪ್ರಸಾದ್ ಮತ್ತು ಸಿಬ್ಬಂದಿ ಸ್ಥಳಕ್ಕಾಗಮಿಸಿ, ಗುಂಪನ್ನು ಚದುರಿಸಿದ ಮೇಲೆ ಪರಿಸ್ಥಿತಿ ತಿಳಿಗೊಂಡಿತು. ಘಟನೆಗೆ ಸಂಬಂಧಿಸಿದಂತೆ ಮಾಲೀಕ ಮತ್ತು ಬಾಡಿಗೆದಾರರು ಇಬ್ಬರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.