ಶ್ರೀನಿವಾಸಪುರ ಅಂಚೆ ನೌಕರ ಶಾಂಭಮೂರ್ತಿಗೆ ಬೀಳ್ಕೊಡುಗೆ
ಕೋಲಾರ; ಶ್ರೀನಿವಾಸಪುರದ ಅಂಚೆ ಕಚೇರಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಗೊಂಡ ಅಂಚೆ ಪೇದೆ ಎಸ್.ಶಾಂಭಮೂರ್ತಿ ಅವರನ್ನು ಇಲಾಖೆಯ ನೌಕರರ ವರ್ಗ ಸನ್ಮಾನಿಸಿ ಬೀಳ್ಕೊಡುಗೆ ನೀಡಿತು.
ಶ್ರೀನಿವಾಸಪುರ ಪಟ್ಟಣದ ಅಂಚೆ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶನಿವಾರ ನಿವೃತ್ತಿಯಾದ ಶಾಂಭಮೂರ್ತಿ ಅವರ ವಿಶ್ರಾಂತ ಜೀವನ ಸುಗಮವಾಗಿರಲಿ ಎಂದು ಹಾರೈಸಲಾಯಿತು. ಈ ವೇಳೆ ಮಾತನಾಡಿದ ಪೋಸ್ಟ್ ಮಾಸ್ಟರ್ ವೆಂಕಟರಮಣಪ್ಪ, ಕರ್ತವ್ಯನಿಷ್ಠೆಗೆ ಹೆಸರಾಗಿದ್ದ ಶಾಂಭಮೂರ್ತಿ, ಪ್ರತಿನಿತ್ಯದ ಅಂಚೆ ಪತ್ರಗಳನ್ನು ಅದೇ ದಿನ ಬಟವಾಡೆ ಮಾಡಿ ಜನತೆಯ ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಅಂಚೆ ಸಹಾಯಕ ಗಂಗಾಧರ್ ಮಾತನಾಡಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಂಭಮೂರ್ತಿ, ತಾವು ಕೋಲಾರ ತಾಲೂಕಿನ ಜನ್ನಘಟ್ಟದಲ್ಲಿ 10 ವರ್ಷ ಬಿಪಿಎಂ ಆಗಿ, ತೊಟ್ಲಿ ಗ್ರಾಮದಲ್ಲಿ 6 ವರ್ಷ ಹಾಗೂ ಸುಗಟೂರಿನಲ್ಲಿ ಒಂದು ವರ್ಷ ಅಂಚೆ ಪೇದೆಯಾಗಿ ನಂತರ ಶ್ರೀನಿವಾಸಪುರದಲ್ಲಿ 19 ವರ್ಷ ಸೇವೆ ಸಲ್ಲಿಸಿದ್ದನ್ನು ಸ್ಮರಿಸಿಕೊಂಡರು. ತಮ್ಮ ಕರ್ತವ್ಯದ ಅವಧಿಯಲ್ಲಿ ತಮಗೆ ಸಹಕಾರ ನೀಡಿದ ಎಲ್ಲಾ ನೌಕರರಿಗೂ, ಸಾರ್ವಜನಿಕರಿಗೆ ಕೃತಜ್ಞೆತೆ ಸಲ್ಲಿಸಿದರು.
ವಿಮಾ ಏಜೆಂಟರಾದ ಗೋಪಿನಾಥರಾವ್, ಸೌಂದರ್ಯ ಲಕ್ಷ್ಮೀ ಮತ್ತಿತರರು ಕಾರ್ಯಕ್ರಮದಲ್ಲಿ ಇದ್ದರು. ಗಂಗಾಧರ್ ಸ್ವಾಗತಿಸಿ, ಅಂಚೆ ಪೇದೆ ಸುರೇಂದ್ರನಾಥ್ ವಂದಿಸಿದರು.
ಬ್ರಾಹ್ಮಣ ಸಂಘದಿಂದ ಸಾಮೂಹಿಕ ಉಪನಯನ
ಕೋಲಾರ: ನಗರದ ಬ್ರಾಹ್ಮಣ ಸಂಘದ ವತಿಯಿಂದ ಪ್ರತಿವರ್ಷದಂತೆ ಈ ಬಾರಿಯೂ ಸಾಮೂಹಿಕ ಧರ್ಮೋಪನಯನಗಳನ್ನು ಹಮ್ಮಿಕೊಳ್ಳಲಾಗಿತ್ತು.
ನಗರದ ಗಾಯಿತ್ರಿ ಪ್ರಾರ್ಥನಾ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ 15ಕ್ಕೂ ಹೆಚ್ಚು ವಟುಗಳಿಗೆ ಧರ್ಮೋಪನಯನ ನಡೆಯಿತು.
ವಿಪ್ರ ಬಾಂಧವರ ಅನುಕೂಲಕ್ಕಾಗಿ ಹಲವಾರು ವರ್ಷಗಳಿಂದ ಈ ಉಚಿತ ಉಪನಯನಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಇದರಿಂದ ಬಡವರಿಗೆ ಅನುಕೂಲವಾಗುತ್ತಿದೆ ಎಂದು ಬ್ರಾಹ್ಮಣರ ಸಂಘದ ಅಧ್ಯಕ್ಷ ರಾಮಪ್ಪ ತಿಳಿಸಿದರು. ಉಪನಯನದ ನಂತರ ವಟುಗಳಿಂದ ಶೋಭಾ ಯಾತ್ರೆ ನಡೆಯಿತು ಮತ್ತು ಅಶ್ವತ್ಥಪೂಜೆಯನ್ನು ವಟುಗಳಿಂದ ನೆರವೇರಿಸಲಾಯಿತು. ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ರಾಮಪ್ಪ,ಕಾರ್ಯದರ್ಶಿ ಜಯತೀರ್ಥ, ಡಾ.ಕೃಷ್ಣಮೂರ್ತಿ, ಚಂದ್ರಪ್ರಕಾಶ್, ಸೀಸಂದ್ರ ಕಿಟ್ಟಪ್ಪ, ಹಿರಿಯ ಪತ್ರಕರ್ತ ಕೆ. ಪ್ರಹ್ಲಾದರಾವ್, ಬ್ರಾಹ್ಮಣರ ಸಂಘದ ವಲಯ ಉಪಾಧ್ಯಕ್ಷ ಅಚ್ಚುತಾ, ಸಂಘದ ಮುಖಂಡರಾದ ಹಾಬಿ ರಮೇಶ್, ಚಿನ್ಮಯ ಶಾಲೆಯ ರವಿಶಂಕರ್ ಅಯ್ಯರ್, ನರಸಿಂಹಪ್ರಸಾದ್, ರವೀಂದ್ರಭಟ್, ಶೇಷಾದ್ರಿ, ಸುರೇಶ್ ಮತ್ತಿತರರು ನೇತೃತ್ವ ವಹಿಸಿದ್ದರು.