ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಸ್ವಯಂಸೇವಕರಿಗೆ ತರಬೇತಿ ಕಾರ್ಯಾಗಾರ

Srinivasa Murthy VN
Updated On : 2 Jun 2014, 1:47 am

ಟೇಕಲ್: ಲೋಕಶಿಕ್ಷಣ ಕೇಂದ್ರಗಳಲ್ಲಿ ತರಬೇತಿ ಪಡೆಯುತ್ತಿರುವ ಸ್ವಯಂಸೇವಕರು ಅನಕ್ಷರಸ್ಥರನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಯಶಸ್ವಿಯಾದರೆ ಆ ಕೀರ್ತಿ ಸ್ವಯಂ ಸೇವಕರಿಗೆ ಸಲ್ಲುತ್ತದೆ ಎಂದು ತಾಲೂಕು ಸಂಯೋಜಕ ವಿ.ಬಾಲಕೃಷ್ಣ ತಿಳಿಸಿದರು.
ಟೇಕಲ್‌ನ ಹುಳದೇನಹಳ್ಳಿ ಗ್ರಾಮದಲ್ಲಿ ಲೋಕಶಿಕ್ಷಣ ಸಮಿತಿ ವತಿಯಿಂದ ಏರ್ಪಡಿಸಿದ್ದ 4 ದಿನಗಳ ಕಾಲ ಸ್ವಯಂ ಸೇವಕರಿಗೆ 2ನೇ ಹಂತದ ತರಬೇತಿ ಕಾರ್ಯಾಗಾರವನ್ನು ಕುರಿತು ಮಾತನಾಡಿದರು. ಪ್ರತಿ ಸ್ವಯಂ ಸೇವಕರು ಕಲಿಕಾ ಕೇಂದ್ರಗಳನ್ನು ಪ್ರಾರಂಭಿಸಿ, ಅನಕ್ಷರಸ್ಥರಿಗೆ ಅಕ್ಷರ ಕಲಿಸಬೇಕು. ಕನಿಷ್ಠ 10 ಮಂದಿಗೆ ಕಲಿಸಲು ಸಾಧ್ಯವಾಗದಿದ್ದರೆ 5 ಮಂದಿಗಾದರೂ ಅಕ್ಷರ ಕಲಿಸಬೇಕು ಎಂದು ಅವರು ಹೇಳಿದರು. ಸಾಕ್ಷರ ಎಂದರೆ ಕೇವಲ ಓದು, ಬರಹ ಅಥವಾ ಲೆಕ್ಕಾಚಾರಕ್ಕೆ ಮಾತ್ರ ಸೀಮಿತವಾಗದೆ ಅದರ ಜೊತೆಗೆ ನಮ್ಮ ಸುತ್ತಮುತ್ತ ಲಿರುವ ಪರಿಸರ, ನೀರಿನ ಬಗ್ಗೆ ಹಾಗೂ ಸರ್ಕಾರದಿಂದ ಬರುವ ಯೋಜನೆಗಳ ಬಗ್ಗೆ ತಿಳುವಳಿಕೆಯನ್ನು ಪಡೆದುಕೊಂಡು ಆ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು. ಈ ವೇಳೆ, ಮುಖ್ಯ ಶಿಕ್ಷಕ ಕೆ.ಆರ್.ಅಣ್ಣಯ್ಯಪ್ಪ, ಶಿಕ್ಷಕರಾದ ಎಸ್.ಎಚ್.ನಾರಾಯಣಸ್ವಾಮಿ, ಟಿ.ಎ.ರಾಮಪ್ಪ, ಪ್ರೇರಕಿಯರಾದ ಬೇಬಿ, ಮಂಜುಳಾ ಉಪಸ್ಥಿತರಿದ್ದರು.

ಬಾಲಕಿ ಅಪಹರಣ ಕಾರ್ ಚಾಲಕ ಸೆರೆ
ಕೆಜಿಎಫ್: ಬಾಲಕಿಯನ್ನು ಅಪಹರಿಸಿದ್ದ ಕಾರ್ ಚಾಲಕನನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವ ಘಟನೆ ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
  14 ವರ್ಷ ವಯಸ್ಸಿನ ಸೋಫಿಯಾ(ಹೆಸರು ಬದಲಿಸಾಗಿದೆ) ಅಪಹರಣಕ್ಕಿಡಾದ ಬಾಲಕಿ. ಈಕೆ  ಉರಿಗಾಂಪೇಟೆಯ ತಮ್ಮ ತಾತನ ಮನೆಯಲ್ಲಿದ್ದುಕೊಂಡು ಸ್ಥಳೀಯ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ಪ್ರತಿದಿನ ಮಾರುತಿ ಓಮಿನಿ ಕಾರ್‌ನಲ್ಲಿ ಶಾಲೆಗೆ ಹೋಗಿ ಬರುತ್ತಿದ್ದಳು. ಅದೇ ರೀತಿ ಕಳೆದ ಕಳೆದ ಫ್ರೆಬ್ರುವರಿಯ 12 ನೇ ತಾರೀಖು ಶಾಲೆಗೆ ಹೋಗಿದ್ದಳು. ಆದರೆ, ಮನೆಗೆ ವಾಪಸ್ ಬಂದಿರಲಿಲ್ಲ. ಈಕೆಯನ್ನು ಚಾಲಕ ಬಾಜುಬಾ ಅಲಿಯಾಸ್ ವಾಜೀದ್‌ಪಾಷಾ ಅಪಹರಿಸಿದ್ದ. ಈ ಬಗ್ಗೆ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಹಿನ್ನಲೆಯಲ್ಲಿ ರಾಬರ್ಟ್‌ಸನ್‌ಪೇಟೆ ಠಾಣಾ ಪೊಲೀಸರು ಆರೋಪಿ ವಾಜೀದ್ ಪಾಷಾನನ್ನು ತಮಿಳುನಾಡಿನ ಚೆನ್ನೈನಲ್ಲಿ ಬಂಧಿಸಿ, ಆತನ ವಿರುದ್ದ ಅಪಹರಣ ಮತ್ತು ಪೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರತಿಭಾವಂತ ವಿದ್ಯಾರ್ಥಿಗೆ ಅಗೌರವ: ಆರೋಪ
ಚಿಂತಾಮಣಿ: ಪ್ರತಿಭಾವಂತ ವಿದ್ಯಾರ್ಥಿಯನ್ನು ಸಭೆಗೆ ಕರೆದು ಅಗೌರವಗೊಳಿಸಿರುವ ಖಾಸಗಿ ಸಂಸ್ಥೆಯ ಹಾಗೂ ಸ್ಥಳೀಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯ ವೈಖರಿ ಬಗ್ಗೆ ವಿದ್ಯಾರ್ಥಿಯ ಪೋಷಕರು ತೀವ್ರವಾಗಿ ಖಂಡಿಸಿದ್ದಾರೆ.
ನಗರದ ಫಿಲ್ಟರ್ ಬಡ್ ಬಳಿ ಇರುವ ಖಾಸಗಿ ಶಿಕ್ಷಣ ಸಂಸ್ಥೆಯೊಂದರಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಶನಿವಾರ ಹಮ್ಮಿಕೊಳ್ಳಲಾಗಿತ್ತು. ಕೆಲವರು ಪ್ರತಿಷ್ಠೆಗಾಗಿ ಪ್ರತಿಭಾವಂತರನ್ನು ಆಹ್ವಾನಿಸಿ ಸಭೆಯಲ್ಲಿ ಸನ್ಮಾನಿಸದೇ ಅಗೌರವಿಸಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ವೆಂಕಟಾದ್ರಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿಯಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಯಾದ ಎನ್.ಸಂಜಯ್, ಸಿಇಟಿಯಲ್ಲಿ 427ನೇ ರ್ಯಾಂಕ್ ಪಡೆದಿದ್ದಾರೆ. ಆದರೆ, ತಾಲೂಕು ಹಂತದಲ್ಲಿ ತಮಗಿಂತ ಕಡಿಮೆ ರ್ಯಾಂಕ್ ಗಳಿಸಿದ ವಿದ್ಯಾರ್ಥಿಯನ್ನು ಸನ್ಮಾನಿಸಿರುವುದು ತುಂಬಾ ನೋವು ತಂದಿದೆ ಎಂದು ವಿದ್ಯಾರ್ಥಿ ಸಂಜಯ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೈಕ್‌ಗಳ ಡಿಕ್ಕಿ: ಒಬ್ಬ ಸಾವು
ಹುಣಸೂರು: ಎರಡು ಬೈಕ್‌ಗಳ ಮುಖಾಮುಕಿ ಡಿಕ್ಕಿ ಸಂಭವಿಸಿ ಓರ್ವ ಸ್ಥಳದಲ್ಲೆ ಮೃತಪಟ್ಟು, ಮತ್ತೊಬ್ಬ ತೀವ್ರ ಗಾಯಗೊಂಡಿರುವ ಘಟನೆ ಪಟ್ಟಣದ ಕೆ.ಆರ್.ನಗರ ರಸ್ತೆಯ ಕಲ್ಕುಣಿಕೆ ಬಳಿ ನಡೆದಿದೆ. ಕಲ್ಕುಣಿಕೆ ಅತ್ತಿಮರದ ಮರದ ಬೀದಿಯ ಆನಂದ್ ಅವರ ಪುತ್ರ ಬೀರೇಶ (23) ಮೃತಪಟ್ಟ ಯುವಕ. ಗುರುಗಳಕಟ್ಟೆ ಬೀದಿಯ ಚಂದ್ರು ತೀವ್ರಗಾಯಗೊಂಡು, ಪ್ರಜ್ಞಾಹೀನ ಸ್ಥಿತಿಯಲ್ಲಿ ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ವಿದ್ಯುತ್ ನಿಲುಗಡೆ ಇಂದು, ನಾಳೆ
ಮುಳಬಾಗಲು: ಪಟ್ಟಣದ 66ಕೆವಿ ವಿದ್ಯುತ್ ಲೈನ್ ದುರಸ್ತಿ ಕಾರಣ ಪಟ್ಟಣ ಸೇರಿದಂತೆ ಕೆಲವು ಪ್ರದೇಶದಲ್ಲಿ ಸೋಮವಾರ ಮತ್ತು ಮಂಗಳವಾರದ ಬೆಳಿಗ್ಗೆ 8ರಿಂದ ಸಂಜೆ 8 ಗಂಟೆ ತನಕ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುವುದು ಎಂದು ಬೆಸ್ಕಾಂ ಅಧಿಕಾರಿ ಸತೀಶ್ ಭಾನುವಾರ ತಿಳಿಸಿದ್ದಾರೆ. ಪಟ್ಟಣದ ಮುತ್ಯಾಲಪೇಟೆ, ಶಿವಕೇಶವನಗರ ಮತ್ತು ಸೊನ್ನವಾಡಿ ಹಾಗೂ ತಾಲ್ಲೂಕಿನ ಬೈರಕೂರು ಹೋಬಳಿಯ ಎಲ್ಲಾ ಗ್ರಾಮಗಳಲ್ಲೂ ವಿದ್ಯುತ್ ಪೂರೈಕೆ ಇರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ಸ್ವಯಂ ಸೇವಕರಿಗೆ ತರಬೇತಿ
ಮುಳಬಾಗಲು: ತಾಲೂಕಿನ ಬಲ್ಲ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಯಂ ಸೇವಕರಿಗೆ 4 ದಿನಗಳ ತರಬೇತಿ ಕಾರ್ಯಾಗಾರವನ್ನು ಸಾಕ್ಷರ ಭಾರತ ಹಮ್ಮಿಕೊಂಡಿತ್ತು. ಬಾಳಿಗೆ ಬೆಳಕು ಪ್ರಾಥಮಿಕೆಯನ್ನು ಬೋಧಿಸುವ ವಿಧಾನಗಳನ್ನು ಮುಖ್ಯ ತರಬೇತಿಗಾರ ಸಿಆರ್‌ಪಿ ಜಿ.ವಿ.ವರದರಾಜ್ ತಿಳಿಸಿಕೊಟ್ಟರು. ಅನಕ್ಷರಸ್ಥರನ್ನು ನವಸಾಕ್ಷರಸ್ಥರನ್ನಾಗಿ ಮಾಡಲು ಎಲ್ಲಾ ಇಲಾಖೆಗಳ ಪಾತ್ರವನ್ನು ತರಬೇತುದಾರ ಸಿಆರ್‌ಪಿ ಕೋದಂಡರಾಮಯ್ಯ ವಿವರಿಸಿದರು. ಪಿಡಿಒ ಶ್ರೀನಿವಾಸರೆಡ್ಡಿ, ಮುಖ್ಯ ಶಿಕ್ಷಕ ಆರ್.ಭಾಸ್ಕರ್ ಇತರರು ಭಾಗವಹಿಸಿದ್ದರು.

ಕುಡಿಯುವ ನೀರಿಗೆ ಹಾಹಾಕಾರ
ಚಿಕ್ಕನಾಯಕನಹಳ್ಳಿ: ತಾಲೂಕಿನ ಕಂದಿಕೆರೆಯಲ್ಲಿ ಕುಡಿಯುವ ನೀರಿಗೆ ತೊಂದರೆಯಾಗಿದೆ. ಗ್ರಾಮಪಂಚಾಯ್ತಿ ಆಡಳಿತ, ಬರೀ ಉದ್ಯೋಗ ಖಾತ್ರಿ ಯೋಜನೆ ಕಾಮಗಾರಿಗಳನ್ನು ಮಾಡುವಲ್ಲಿ ತೋರುವ ಆಸಕ್ತಿಯನ್ನು ಜನರ ಕುಂದುಕೊರತೆಗಳನ್ನು ಈಡೇರಿಸುವಲ್ಲಿ ತೋರುತ್ತಿಲ್ಲ. ಈಗಾಗಲೇ ಹಲವಾರು ಬಾರಿ ಮನವಿ ಮತ್ತು ಪ್ರತಿಭಟನೆಗಳನ್ನು ಮಾಡಿದ್ದರು ಯಾವುದೇ ಪ್ರಯೋಜನವಾಗಿಲ್ಲ. ಸಂಬಂಧಪಟ್ಟವರು ಕೂಡಲೇ ನೀರಿನ ಸಮಸ್ಯೆಯನ್ನು ಪರಿಹರಿಸಬೇಕೆಂದು ಗ್ರಾಮಸ್ಥರು ಒತ್ತಾಯ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement