ಹಲವೆಡೆ ಆಲಿಕಲ್ಲು ಮಳೆ: ಲಕ್ಷಾಂತರ ರುಪಾಯಿ ಬೆಳೆ ಹಾನಿ
ಧರೆಗುರುಳಿದ ವಿದ್ಯುತ್ ಕಂಬ, ಮರಗಳು ್ಣ ನಷ್ಟ ಅಂದಾಜು ವರದಿ ಸಿದ್ಧಪಡಿಸಲು ಅಧಿಕಾರಿಗಳಿಗೆ ಸೂಚನೆ
ಬೆಳೆ ಹಾನಿ ವೀಕ್ಷಿಸಿದ ಶಾಸಕ
ಶಿಡ್ಲಘಟ್ಟ: ತಾಲೂಕಿನ ಆನೂರು, ಕೊತ್ತನೂರು, ಮಳಮಾಚನಹಳ್ಳಿ ಮತ್ತು ತುಮ್ಮನಹಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿ ಶನಿವಾರ ಬಿದ್ದ ಆಲಿಕಲ್ಲಿನ ಮಳೆ ಹಾಗೂ ಬಿರುಗಾಳಿಯಿಂದಾಗಿ ಹೆಚ್ಚಿನ ಬೆಳೆ ನಷ್ಟವುಂಟಾಗಿದೆ.
ಶಾಸಕ ಎಂ.ರಾಜಣ್ಣ ಭಾನುವಾರ ಆಲಿಕಲ್ಲಿನ ಮಳೆಯಿಂದಾಗಿ ಬೆಳೆ ನಾಶವಾಗಿರುವ ತೋಟಗಳಿಗೆ ಭೇಟಿ ನೀಡಿ ಪರಿಶೀಲಿಸಿ, ನಷ್ಟಕ್ಕೊಳಗಾದ ರೈತರೊಂದಿಗೆ ಚರ್ಚಿಸಿದರು. ಅಲ್ಲದೆ, ನಷ್ಟ ಅಂದಾಜ ವರದಿಯನ್ನು ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ತಾಲೂಕಿನ ಹುಜಗೂರು, ತುಮ್ಮನಹಳ್ಳಿ, ಆನೂರು, ಗೊರಮಡುಗು, ಬಸವಾಪಟ್ಟಣ ಮುಂತಾದ ಗ್ರಾಮಗಳಲ್ಲಿ ದ್ರಾಕ್ಷಿ, ಟೊಮೇಟೊ, ಬೀನ್ಸ್, ಹಿಪ್ಪುನೇರಳೆಸೊಪ್ಪು, ಸೌತೆಕಾಯಿ, ದಾಳಿಂಬೆ, ಸೀಬೆ, ಮಾವು, ಗೋಡಂಬಿ ಸೇರಿದಂತೆ ಹಲವಾರು ಬೆಳೆಗಳು ನಾಶವಾಗಿವೆ. ರೈತಮುಖಂಡರು ಮತ್ತು ಜನಪ್ರತಿನಿಧಿಗಳೊಂದಿಗೆ ಮುಖ್ಯಮಂತ್ರಿಗಳ ಬಳಿ ಹೋಗಿ ನಷ್ಟಪರಿಹಾರವನ್ನು ಕೋರುತ್ತೇವೆ. ನೀರಿನ ಅಭಾವವಿರುವ ನಮ್ಮ ಭಾಗದಲ್ಲಿ ರೈತರು ಹನಿಹನಿನೀರನ್ನೂ ಬಳಸಿ ಬೆಳೆದ ಬೆಳೆಗಳು ಮಳೆಯಿಂದಾಗಿ ನಾಶವಾಗಿರುವುದನ್ನು, ರೈತರ ಕಷ್ಟವನ್ನೂ ಅವರಿಗೆ ತಿಳಿಸಲು ನಿಯೋಗದೊಂದಿಗೆ ಮುಖ್ಯಮಂತ್ರಿಗಳ ಬಳಿ ಹೋಗುತ್ತೇವೆ ಎಂದು ಶಾಸಕರು ಇದೇ ವೇಳೆ ತಿಳಿಸಿದರು.
12 ಲಕ್ಷ ಬೆಳೆ ನಾಶ: ಅಧಿಕಾರಿ
ಮಾಲೂರು: ಕಳೆದ ವಾರದಿಂದ ತಾಲೂಕಿನಾದ್ಯಂತ ಬೀರುಗಾಳಿ ಸಹಿತ ಅಲಿಕಲ್ಲು ಮಳೆಗೆ 12 ಲಕ್ಷ ಬೆಳೆ ನಷ್ಟವಾಗಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿ ಸುಬ್ರಮಣ್ಯ ತಿಳಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಕಳೆದ ಗುರುವಾರದಿಂದಿ ಇಚೆಗೆ ಬಿದ್ದ ಭಾರಿ ಮಳೆಗೆ ಚಿಕ್ಕಕುಂತೂರಿನ ನಾರಾಯಣಸ್ವಾಮಿಯ ಜಮೀನನಲ್ಲಿ ಬೆಳೆದಿದ್ದ 262 ಬಾಳೆಗಿಡಗಳು, ಅಳಬಾವಿ ಕೊತ್ತೂರು ಗ್ರಾಮದ ವಿಶಾಲಾಕ್ಷಮ್ಮ ಅವರ 5 ಎಕರೆ ಬಾಳೆತೋಟ, 2 ಎಕರೆ ಹುರುಳಿ, ಮೇಡಹಟ್ಟಿ ಗ್ರಾಮದ ಕೃಷ್ಣಪ್ಪ ತೋಟದಲ್ಲಿದ್ದ 8 ಎಕರೆ, ಗೋಪಾಲಪ್ಪ ಎಂಬುವರ 2 ಎಕರೆ, ಚಾಕನಹಳ್ಳಿ ಭೀಮರಾಜ್ ಅವರ 8 ಎಕರೆಯಲ್ಲಿ ಬೆಳೆದಿದ್ದ ಮಾವಿನ ಫಸಲು ಹಾಳಾಗಿದೆ. ಎಲ್ಲ ಸೇರಿ ಒಟ್ಟು 12 ಲಕ್ಷ ನಷ್ಟವಾಗಿದೆ ಎರ್ದು ಅವರು ತಿಳಿಸಿದ್ದಾರೆ.
ಲಕ್ಷಾಂತರ ರುಪಾಯಿ ನಷ್ಟ
ಚಿಂತಾಮಣಿ: ತಾಲೂಕು ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ ಭಾರಿ ಗಾಳಿ ಹಾಗೂ ಮಳೆಯಿಂದ ಲಕ್ಷಾಂತರ ರುಪಾಯಿ ಮೌಲ್ಯದ
ಬೆಳೆ ನಷ್ಟವಾಗಿದ್ದು, ವಿದ್ಯುತ್ ಕಂಬಗಳು ಹಾಗೂ ಮರಗಳು ನೆಲಕ್ಕುರುಳಿ ರಾತ್ರಿ ಪೂರ್ತಿ ಕರೆಂಟ್ ಇಲ್ಲದೇ ಜ ನಜೀವನ ಅಸ್ತವ್ಯಸ್ತಗೊಂಡಿತು.
ತಾಲೂಕಿನ ಕಾಚಹಳ್ಳಿ ಹಾಗೂ ನಗರ ಪ್ರದೇಶಗಳಲ್ಲಿ ಮರಗಳು ಹಾಗೂ ವಿದ್ಯತ್ ಕಂಬಗಳು ನೆಲಕ್ಕುರುಳಿವೆ. ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ನಾಯಿಂದ್ರಹಳ್ಳಿ ಕಾಲೋನಿ ಹತ್ತಿರ ಬೃಹತ್ ಮರ ಉರಳಿದ್ದರೆ, ಕಾಚಹಳ್ಳಿ ಮತ್ತು ಕುರುಟಹಳ್ಳಿ ಹೀರೇಕಾಯಿ ಫಸಲು ನಾಶವಾಗಿ ಗ್ರಾಮದ ರಾಮಣ್ಣ ಅವರಿಗೆ ಲಕ್ಷಾಂತರ ರುಪಾಯಿ ನಷ್ಟವಾಗಿದೆ.
ಮಳೆ, ಗಾಳಿ; ಜನಜೀವನ ಅಸ್ತವ್ಯಸ್ತ
ಟೇಕಲ್: ಟೇಕಲ್ ಸುತ್ತಮುತ್ತ ಶನಿವಾರ ಸಂಜೆ ಸುರಿದ ಆಲಿಕಲ್ಲು ಮಳೆಗೆ ಸಂಚಾರ ಹಾಗೂ ಜನಜೀವನ ಅಸ್ತವ್ಯಸ್ತವಾಯಿತು.
ಮಳೆ ಮತ್ತು ಗಾಳಿಯಿಂದ ಅಂಗಡಿ ಮುಂಗಟ್ಟುಗಳ ಮುಂದಿದ್ದ ಚಪ್ಪರಗಳು ಹಾಗೂ ಗುಡಿಸಲು ಮನೆಗಳ ಮೇಲ್ಚಾವಣಿ ಹಾರಿ ಹೋಗಿವೆ.
ಟೇಕಲ್- ಕೋಲಾರ ರಸ್ತೆ ಮಧ್ಯೆ ಮುದುವತ್ತಿ, ಪಾರ್ಶ್ವಗಾನಹಳ್ಳಿ, ಲಕ್ಷ್ಮೀಸಾಗರ ಬಳಿ ದಾರಿಯಲ್ಲಿದ್ದ ಕೆಲವು ಮರಗಳು ರಸ್ತೆಗೆ ಅಡ್ಡಲಾಗಿ ಬಿದ್ದು, ಸಂಚಾರಕ್ಕೆ ಅಡ್ಡಿಯಾಯಿತು. ಇನ್ನು ಗಾಳಿಯ ರಭಸಕ್ಕೆ ವಿದ್ಯುತ್ ತಂತಿಗಳು ಕೆಲವು ಕಡೆ ಕಡಿತಗೊಂಡು ಸಂಜೆಯಿಂದಲೆ ವಿದ್ಯುತ್ ವ್ಯತ್ಯಯ ಉಂಟಾಯಿತು. ಈ ಮಧ್ಯೆ ಸಾಧಾರಣವಾಗಿ ಬಿದ್ದ ಆಲಿಕಲ್ಲುಗಳಿಂದ ಟೊಮೆಟೋ, ಬೀನ್ಸ್, ಕೊತ್ತಂಬರಿ ಸೊಪ್ಪು, ಚೆಂಡುಮಲ್ಲಿಗೆ ಹೂವುಗಳಿಗೆ ಬಹುತೇಕ ನಷ್ಟವಾಗಿದೆ. ಸುಮಾರು 2 ಗಂಟೆಗೂ ಅಧಿಕ ಕಾಲ ಮಳೆ ಜಡಿಯಿತು.