ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಹೈಟೆಕ್ ಮಾರುಕಟ್ಟೆ ನಿರ್ಮಾಣ ಶೀಘ್ರ

Srinivasa Murthy VN
Updated On : 2 Jun 2014, 1:45 am

-ರೂಪಸಿ ರಮೇಶ್
ಶಿಡ್ಲಘಟ್ಟ: ಅರ್ಧ ಶತಮಾನದ ಹಿನ್ನೆಲೆ ಹೊಂದಿ ದೇಶದಲ್ಲೆ ಹೆಸರು ಪಡೆದ ಮಾರುಕಟ್ಟೆಗೆ ಹೈಟೆಕ್ ಸ್ಪರ್ಷ ನೀಡಲು ರಾಜ್ಯ ರೇಷ್ಮೆ ಇಲಾಖೆ ನಿರ್ಧರಿಸಿದ್ದು, ಈಗಾಗಲೇ ಕೋಟ್ಯಂತರ ರುಪಾಯಿ ಬಿಡುಗಡೆಯಾಗಿದೆ.
ಕಾಲಕ್ಕೆ ತಕ್ಕಂತೆ ಸ್ಥಳ ಬದಲಾಯಿಸಿದ ಇಲ್ಲಿನ ಜನರ ಜೀವನಾಡಿಯಾದ ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆ 50 ವರ್ಷಗಳ ತನ್ನ ಇತಿಹಾಸದಲ್ಲಿ 3 ಬಾರಿ ಸ್ಥಳಾಂತರವಾಗಿದ್ದು, ಇದೀಗ ಅಂತಿಮವಾಗಿ 4ನೇ ಬಾರಿ ಸ್ಥಳಾಂತವಾಗಲು ಸನ್ನದ್ದವಾಗುತ್ತಿದೆ.
50 ವರ್ಷಗಳ ಹಿಂದೆ ಪಟ್ಟಣದ ಅಶೋಕ ರಸ್ತೆಯ ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಸುತ್ತಲಿದ್ದ ಖಾಸಗಿ ಅಂಗಡಿಗಳಲ್ಲಿ ಹಾಗೂ ಕೆಲವು ಮನೆಗಳಲ್ಲಿ ರೇಷ್ಮೆ ಗೂಡಿನ ವಿಕ್ರಯ ನಡೆಯುತ್ತಿತ್ತು. ಖಾಸಗಿ ದಲ್ಲಾಳಿಗಳ ಕಪಿ ಮುಷ್ಟಿಯಲ್ಲಿದ್ದ ರೇಷ್ಮೆ ವಹಿವಾಟು ರಾಷ್ಟ್ರೀಕರಣವಾದ ನಂತರ ಈಗಿನ ಟಿ.ಬಿ. ರಸ್ತೆಯ ಮಾಧ್ಯಮಿಕ ಶಾಲೆಯ ಹಿಂಬಾದಲ್ಲಿ ಪ್ರಾರಂಬಿಸಲಾಯಿತು.
ಮಾರುಕಟ್ಟೆ ರಾಷ್ಟ್ರೀಕರಣವಾದ ನಂತರ ರೈತರ ಶೋಷಣೆಗೆ ತಡೆ ಬಿದ್ದು, ನ್ಯಾಯವಾದ ಬೆಲೆ, ಸರಿಯಾದ ತೂಕ, ಸಮಯಕ್ಕೆ ಸರಿಯಾಗಿ ಹಣ ಪಾವತಿಯಿಂದ ರಾಜ್ಯದ ಮೂಲೆ ಮೂಲೆಯಿಂದ ರೇಷ್ಮೆಗೂಡನ್ನು ತರಲಾರಂಬಿಸಿದ ಕಾರಣ ಜಾಗ ಸಾಕಾಗದೆ ಸರ್ಕಾರಿ ರೇಷ್ಮೆ ಫಿಲೇಚರ್ ಇದ್ದ ಜಾಗಕ್ಕೆ(ಹಳೆ ಪೂಜಮ್ಮನ ಗುಡಿ) ಸ್ಥಳಾಂತರಿಸಲಾಯಿತು. ಸುಮಾರು 20 ವರ್ಷಗಳ ನಂತರ ಬೃಹತ್ತಾಗಿ ಬೆಳೆದ ರೇಷ್ಮೆ ವಲಯದಿಂದಾಗಿ ರೇಷ್ಮೆ ಗೂಡಿನ ಉತ್ಪಾದನೆ ಹೆಚ್ಚಾದ ಕಾರಣ ಜಾಗ ಸಾಕಾಗದೆ ತೊಂದರೆಯಾಗುತ್ತಿದ್ದ ಕಾರಣ ಫಿಲೇಚರ್ ಕಾರ್ಖಾನೆಯ ಪಕ್ಕದಲ್ಲೇ ವಿಶಾಲವಾದ ಪೀಲೇಚರ್ ಬಡಾವಣೆಗೆ ಬದಲಾಯಿಸಲಾಯಿತು.
30 ವರ್ಷಗಳ ನಂತರ ಈದೀಗ ರೈತರ ವಿಶ್ರಾಂತಿ ಭವನ, ಉಪಹಾರ ಮಂದಿರ ರೇಷ್ಮೆ ಗೂಡಿನ ಪ್ರಯೋಗಾಲಯ ಮುಂತಾದ ಆಧುನಿಕ ಸೌಲಭ್ಯಗಳನ್ನು ಒಳಗೊಂಡ ಬೃಹತ್ ಕಟ್ಟಡಕ್ಕೆ ಯೋಜನೆ ಸಿದ್ಧಪಡಿಸಿದ ರೇಷ್ಮೆ ಇಲಾಖೆ ರು. 15 ಕೋಟಿ ವೆಚ್ಚದಲ್ಲಿ ಸುಮಾರು 5 ಎಕರೆ ವಿಸ್ತೀರ್ಣವುಳ್ಳ ಸ್ಥಳದಲ್ಲಿ ಪಟ್ಟಣದಿಂದ 3 ಕಿಮೀ ದೂರದ ಹಿತ್ತಲಹಳ್ಳಿ ಸಮೀಪದ ಸರ್ಕಾರಿ ಜಾಗದಲ್ಲಿ ನಿರ್ಮಾಣ ಮಾಡಲು ಒಪ್ಪಿಗೆ ಸೂಚಿಸಿದೆ.
ದೈನಂದಿನ ವಹಿವಾಟು 2 ಕೋಟಿಯವರೆಗೂ ವಹಿವಾಟು ನಡೆಸುವ ರೇಷ್ಮೆ ಗೂಡಿನ ಮಾರುಕಟ್ಟೆಯಿಂದ ಶೇ.1 ರಂತೆ ಇಲಾಖೆಗೆ ಪ್ರತಿದಿನ ಲಕ್ಷಾಂತರ ರು.ಗಳ ಕಮೀಷನ್ ಸಂದಾಯವಾಗುತ್ತಿದ್ದರೂ ರೈತರಿಗಾಗಲಿ ರೀಲರ್‌ಗಳಿಗಾಗಲಿ ಯಾವುದೇ ಸೌಲಭ್ಯಗಳು ದೊರೆಯುತ್ತಿರಲಿಲ್ಲ. ಕೆಲವು ರೀಲರ್ ಹಾಗೂ ಕೆಲ ಮಾರುಕಟ್ಟೆ ಸಿಬ್ಬಂದಿಯ ಒಳ ಒಪ್ಪಂದದಿಂದ ಹರಾಜು ಪ್ರಕ್ರಿಯೆಯಲ್ಲಿ ರೈತರಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಇದರಿಂದ ರೈತರ ಹಿತದೃಷ್ಟಿ ಗಮನದಲ್ಲಿಟ್ಟುಕೊಂಡು ಎಲೆಕ್ಟ್ರಾನಿಕ್ ತೂಕದ ಯಂತ್ರಗಳಿಂದ ತೂಕ, ಹರಾಜಾದ ಕೆಲವೇ ಗಂಟೆಗಳಲ್ಲಿ ಹಣ ಪಾವತಿ ಮುಂತಾದ ಸೌಲಭ್ಯಗಳ ಕಾರಣದಿಂದ ರೈತರು ಮಾರುಕಟ್ಟೆಗೆ ್ಡಹೆಚ್ಚಿನ ಸಂಖ್ಯೆಯಲ್ಲಿ ಬರಲಾರಂಬಿಸಿದರು.
ಪ್ರತಿದಿನ ಎರಡು ಸಾವಿರ ರೇಷ್ಮೆ ಬೆಳೆಗಾರರು, ಸರಿ ಸುಮಾರು ಇದೇ ಪ್ರಮಾಣದಲ್ಲಿ ಇವರ ಸಹಾಯಕರು ಹಾಗೂ ರೇಷ್ಮೆ ರೀಲರ್‌ಗಳು ಸೇರಿದಂತೆ 5 ಸಾವಿರಕ್ಕೂ ಹೆಚ್ಚು ಜನರಿಂದ ತುಂಬಿ ತುಳುಕುತ್ತಿದ್ದ ರೇಷ್ಮೆಗೂಡಿನ ಮಾರುಕಟ್ಟೆ ಯಾವುದೇ ಸೌಲಭ್ಯಗಳಿಂದ ವಂಚಿತವಾಗಿತ್ತು.
ರೇಷ್ಮೆ ರೀಲರ್‌ಗಳಿಗಾಗಿ ರೇಷ್ಮೆ ಗೂಡಿನ ಪರೀಕ್ಷಾ ಕೊಠಡಿ, ಹಣಕಾಸು ವ್ಯವಹಾರಕ್ಕೆ ಬ್ಯಾಂಕಿಂಗ್ ಸೌಲಭ್ಯ, ವಾಹನಗಳಿಗೆ ಪ್ರತ್ಯೇಕ ನಿಲ್ದಾಣ, ಹಮಾಲಿಗಳಿಗಾಗಿ ವಿಶ್ರಾಂತಿ ಕೊಠಡಿ, ಆರೋಗ್ಯ ಕೇಂದ್ರ ಮುಂತಾದ ಬೇಡಿಕೆಗಳು ಭರವಸೆಗಳಾಗಿಯೇ ಉಳಿದಿವೆ. ಇದಕ್ಕೆ ಉತ್ತರ ಎಂಬಂತೆ ರಾಜ್ಯ ಸರ್ಕಾರ 15 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಮಾರುಕಟ್ಟೆ ಕಾರ್ಯರೂಪಕ್ಕೆ ಬರಲಿದೆ. ಮಾರುಕಟ್ಟೆ ಸಲಹಾ ಸಮಿತಿಯಲ್ಲಿ ಈ ಬಗ್ಗೆ ಚರ್ಚೆ ನಡೆದು ಬದಲಾವಣೆಗೆ ಒಪ್ಪಗೆ ನೀಡಿತ್ತಾದರೂ ಬಹುತೇಕ ರೀಲರ್‌ಗಳು ಗೂಡು ಸಾಗಿಸಲು ಖರ್ಚು ಬರುತ್ತದೆಂಬ ನೆಪ ಹೇಳಿ ವಿರೋಧ ವ್ಯಕ್ತಪಡಿಸಿದ್ದಕ್ಕೆ ರೈತ ಮುಖಂಡರು ಬೇಸರ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement