ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಅದ್ಧೂರಿ ದ್ರೌಪದಮ್ಮ ಕರಗ ಮಹೋತ್ಸವ

Srinivasa Murthy VN
Updated On : 3 Jun 2014, 1:58 am

ಚಿಕ್ಕಬಳ್ಳಾಪುರ: ಕಳೆದ 53 ವರ್ಷಗಳಿಂದಲೂ ಆಚರಿಸಿಕೊಂಡು ಬರುತ್ತಿರುವ ದ್ರೌಪದಮ್ಮ ಕರಗ ಮಹೋತ್ಸವ ಪ್ರತಿ ವರ್ಷದಂತೆ ಈ ಬಾರಿಯೂ ನಗರದಲ್ಲಿ ಅದ್ದೂರಿಯಾಗಿ ನಡೆಯಿತು.
ಮಹಿಳೆ ಕರಗವನ್ನು ಹೊತ್ತಿದ್ದು ವಿಶೇಷವಾಗಿತ್ತು. ಕರಗದ ಪ್ರಯುಕ್ತ ರಾಜ್ಯದ ಪ್ರಮುಖ ಕಲಾ ತಂಡಗಳನ್ನು ಕರೆಸಿ ಕಲಾ ಪ್ರದರ್ಶನ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿತ್ತು. ನಗರದ ಬಾಪೂಜಿ ನಗರದ ಶ್ರೀ ಅರುಂಧತಿ ಹರಿಜನ ಅಭಿವೃದ್ಧಿ ಸಂಘದ ನೇತೃತ್ವದಲ್ಲಿ ಮಹೇಶ್ವರಮ್ಮನ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಮೂಲಕ ಈ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು. ನಗರದ ವಿವಿಧೆಡೆ ವಾದ್ಯಗೋಷ್ಠಿಗಳು ನಡೆದವು. ಇನ್ನೂ ನಗರದ ಪ್ರಮುಖ ಬೀದಿಗಳಲ್ಲಿ ವಿದ್ಯುತ್  ದೀಪಾಲಂಕಾರ ಮಾಡಲಾಗಿತ್ತು. ರಾತ್ರಿ 10.30 ಕಳೆಯುತ್ತಿದ್ದಂತೆ ಕರಗವನ್ನು ಹೊತ್ತು ಮಹಿಳಾ ಪೂಜಾರಿ ನಗರದ ವಿವಿಧೆಡೆ ಸಂಚಿಸಿದರು. ಶ್ರೀ ಮಹೇಶ್ವರಿ ದೇವಾಲಯ ಅಭಿವೃದ್ಧಿ ಸಮಿತಿ ಹಾಗೂ ಕರಗ ಮಹೋತ್ಸವದ ಸಂಚಾಲಕ ಎಂ.ಎಸ್.ಸಂದೀಪ್  ಚಕ್ರವರ್ತಿ, ಮಾಜಿ ಶಾಸಕರಾದ ಎಂ.ಶಿವಾನಂದ್, ಅನುಸೂಯಮ್ಮ ನಟರಾಜ್, ಎಸ್.ಎಂ.ಮುನಿಯಪ್ಪ, ಅಧ್ಯಕ್ಷ ಜಿ.ಮುನಿಯಪ್ಪ, ಕಾರ್ಯದರ್ಶಿ ಸಿ.ನಾರಾಯಣಪ್ಪ, ಬಿ.ವಿ. ವೆಂಕಟೇಶ್  ಮುಂತಾದವರ ನೇತೃತ್ವದಲ್ಲಿ ಕರಗ ಮಹೋತ್ಸವ ಬಹಳ ವಿಜೃಂಭಣೆಯಿಂದ ನಡೆಯಿತು.

ಆಲಿಕಲ್ಲು ಸಹಿತ ಭಾರೀ ಮಳೆ: ಸಿಡಿಲಿಗೆ ಮಹಿಳೆ ಬಲಿ
ಬಂಗಾರಪೇಟೆ: ಸೋಮವಾರ ಸಂಜೆ ತಾಲೂಕಿನಾದ್ಯಂತ ಸುರಿದ ಆಲಿಕಲ್ಲು ಮಳೆಗೆ ಅಲ್ಲಲ್ಲಿ ಮರಗಳು ನೆಲಕ್ಕೆ ಉರುಳಿದರೆ ಕೆಲ ಮನೆಗಳ ಚಾವಣಿಗಳು ಗಾಳಿಗೆ ಹಾರಿ ಹೋಗಿ ಲಕ್ಷಾಂತರ ರುಪಾಯಿ ನಷ್ಟ ಉಂಟಾಗಿದೆ.
ಕೋಲಾರ ಮುಖ್ಯರಸ್ತೆಯಲ್ಲಿ ಬೃಹತ್ ಗಾತ್ರದ ಮರವೊಂದು ಉರುಳಿ ಬಿದ್ದಿದೆ. ಇದರಿಂದ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಬೂದಿಕೋಟೆ ಮಾರ್ಗದಲ್ಲಿ ಮರ ಉರುಳಿ ಬಿದ್ದಿದೆ. ಹುಣನಸನಹಳ್ಳಿ ರೈಲ್ವೆ ಗೇಟ್ ಬಳಿ ಇರುವ ಎಚ್.ಪಿ ಗ್ಯಾಸ್ ಕಚೇರಿಯ ಚಾವಣಿ ಗಾಳಿಗೆ ಹಾರಿ ಹೋದ ಪರಿಣಾಮ ಕಚೇರಿಯೊಳಗೆ ಮಳೆ ನೀರು ನುಗ್ಗಿ ಕಂಪ್ಯೂಟರ್ ಮತ್ತು ಪೀಠೋಪಕರಣಗಳು ಹಾಳಾಗಿದೆ. ಪೋಲೋನಹಳ್ಳಿಯಲ್ಲಿ ರೈತರ ವಿಲ್ಯದೆಲೆ ತೋಟಗಳು ನೆಲಕಚ್ಚಿ ಲಕ್ಷಾಂತರ ರು. ನಷ್ಟವಾಗಿದೆ. ರಸ್ತೆ ಮಧ್ಯೆ ಮರ ಉರುಳಿ ಬಿದ್ದು, ಸಂಚಾರ ಜಾಮ್ ಆಗಿರುವ ವಿಷಯ ತಿಳಿದು ಎಸ್‌ಐ ಯೋಗಾನಂದ ಸೋನಾರ್ ಮತ್ತು ಸಿಐ ವೆಂಕಟಾಚಲಪತಿ ಮಳೆಯಲ್ಲೇ ಸ್ಥಳಕ್ಕೆ ಆಗಮಿಸಿ ಜೆಸಿಬಿ ಮೂಲಕ ಮರ ತೆರವುಗೊಳಿಸಿ ಸಾರ್ವಜನಿಕರ ಪ್ರಸಂಶೆಗೆ ಪಾತ್ರರಾದರು. ತಗ್ಗು ಪ್ರದೇಶದ ಮನೆಗಳಿಗೆ ಮಳೆ ನೀರು ನುಗ್ಗಿ ಸಾರ್ವಜನಿಕರು ಪರದಾಡುವಂತಾಯಿತು. ರಸ್ತೆ ಪಕ್ಕದ ಚರಂಡಿಗಳಲ್ಲಿ ನೀರು ತುಂಬಿ ಹರಿಯುತ್ತಿತ್ತು. ಮಳೆಗಾಗಿ ಪರಿತಪಿಸುತ್ತಿದ್ದ ರೈತರಿಗೆ ಸೋಮವಾರ ಮಳೆ ಸಂಸತ ತಂದಿದೆ.
ಸಿಡಿಲಿಗೆ ಮಹಿಳೆ ಬಲಿ: ಸೋಮವಾರ ಸಂಜೆ ತಾಲೂಕಿನಾದ್ಯಂತ ಸುರಿದ ಆಲಿಕಲ್ಲು ಮಳೆ ವೇಳೆ ಸಿಡಿಲು ಬಡಿದು ಕುರಿ ಕಾಯುತ್ತಿದ್ದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ತಾಲೂಕಿನ ನಾಗಲಾಪುರ ಗ್ರಾಮದ ಹಂಸವೇಣಿ ಮೃತಪಟ್ಟವರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement