ಅಂಡರ್‌ಪಾಸ್ ಕಳಪೆ ಕಾಮಗಾರಿ ಮಳೆ ಬಂತೆಂದರೆ ತೊಂದರೆ ಭಾರಿ
ಕ.ಪ್ರ.ವಾರ್ತೆ ಶಿಡ್ಲಘಟ್ಟ ಜೂ.4
ಒಂದು ವರ್ಷದ ಹಿಂದೆ ನಿರ್ಮಿಸಲಾದ ರೇಲ್ವೆ ಅಂಡರ್‌ಪಾಸ್ ಕಳಪೆ ಕಾಮಗಾರಿಯಿಂದ ಕೂಡಿದ್ದು, ಜನರ ಸಂಚಾರಕ್ಕೆ ತೀವ್ರ ತೊಂದೆಯಾಗಿದೆ. ಕೂಡಲೇ ಅಂಡರ್‌ಪಾಸ್ ದುರಸ್ತಿ ಮಾಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಎಲ್. ಮುತ್ತುಕದಹಳ್ಳಿ ಸೇರಿ 8 ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ರೇಲ್ವೆ ಅಂಡರ್‌ಪಾಸ್ ನಿರ್ಮಿಸಲಾಗಿದೆ. ಆದರೆ, ಕಾಮಗಾರಿ ಕಳಪೆಯಾಗಿರುವುದರಿಂದ ಮಳೆ ಬಂದಾಗ ಮೊಣಕಾಲುವರೆಗೂ ನೀರು ನಿಲ್ಲುತ್ತದೆ. ಇದರಿಂದ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ. ರೈತರು ಇದೇ ಅಂಡರ್‌ಪಾಸ್ ಬಳಸಿ ಮಾರುಕಟ್ಟೆಗೆ ತೆರಳಿದರೆ, ಶಾಲಾಮಕ್ಕಳು ಇದೇ ರಸ್ತೆಯನ್ನು ಬಳಸುತ್ತಾರೆ. ಮಳೆ ಬಂತೆಂದರೆ ಈ ಅಂಡರ್‌ಪಾಸ್ ಅಕ್ಷರಶಃ ನಿರುಪಯೋಗಿಯಾಗುತ್ತದೆ. ಅಂಡರ್‌ಪಾಸ್‌ನ ಸುತ್ತಲೂ ಇರುವ ತಡೆಗೋಡೆಗಳು ಶೀಥಿಲಗೊಂಡಿದ್ದು, ಎಲ್ಲ ಕಡೆಯಿಂದ ಹರಿದು ಬರುವ ನೀರು ಅಂಡರ್‌ಪಾಸ್ ಕೆಳಗಡೆ ಶೇಖರಣೆಯಾಗುತ್ತದೆ. ಇಲ್ಲಿ ಸಮಪರ್ಕದ ವಿದ್ಯುತ್ ದೀಪಗಳನ್ನೂ ಅಳವಡಿಸಿಲ್ಲ. ರಾತ್ರಿ ವೇಳೆ ಎಷ್ಟೋ ಬಾರಿ ಅಪಘಾತಗಳು ಸಂಭವಿಸಿವೆ. ರಸ್ತೆಯಲ್ಲಾ ಕಿತ್ತುಹೋಗಿದ್ದು, ಹಾಕಿದ್ದ ಜಲ್ಲಿಕಲ್ಲುಗಳು ಮೇಲೆದ್ದು ಬಂದಿವೆ. ಅಂಡರ್‌ಪಾಸ್ ಸರಿಪಡಿಸುವಂತೆ ಹಾಲಿ ಸಂಸದ ಕೆ.ಎಚ್.ಮುನಿಯಪ್ಪ ಮತ್ತು ಶಾಸಕ ಎಂ.ರಾಜಣ್ಣ ಅವರಿಗೂ ಮನವಿ ಮಾಡಲಾಗಿತ್ತು. ಆದರೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಈ ರಸ್ತೆಯಲ್ಲಿ ಸಂಚರಿಸುವುದು ಪ್ರಾಣಕ್ಕೆ ಸಂಚಕಾರ ತಂದುಕೊಂಡಂತೆಯೇ ಸರಿ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು, ಆಗಿರುವ ಕಳಪೆ ಕಾಮಗಾರಿಯನ್ನು ಸರಿಪಡಿಸಬೇಕು.
ರಾಜಣ್ಣ ಲಕ್ಕಹಳ್ಳಿ ನಿವಾಸಿ.
ಮಳೆಬಂದರೆ ಈ ರಸ್ತೆಯಲ್ಲಿ ಓಡಾಡಲು ಸಾಧ್ಯವಾಗಲ್ಲ. ಮೊಣಕಾಲುದ್ದ ನೀರು ನಿಂತುಕೊಂಡು ಇಲ್ಲಿನ ಜನತೆಗೆ ತುಂಬಾ ತೊಂದರೆಯಾಗುತ್ತಿದೆ. ಯಾವ ಅಧಿಕಾರಿಗಳಿಗೆ ಮನವಿ ಕೊಟ್ಟರೂ ಯಾವುದೇ ಪ್ರಯೋಜನವಾಗುತ್ತಿಲ್ಲ.
ಕರಗಪ್ಪ ಎಲ್.ಮುತ್ತುಕದಹಳ್ಳಿ ನಿವಾಸಿ.