ಎಡಿಜಿಪಿ ಡಾ. ರವೀಂದ್ರನಾಥ ಪರ ಪ್ರತಿಭಟನೆ
ಕೋಲಾರ: ಹಿರಿಯ ಪೊಲೀಸ್ ಅಧಿಕಾರಿ ಡಾ.ರವೀಂದ್ರನಾಥ್ ವಿರುದ್ಧ ಷಡ್ಯಂತ್ರ ರೂಪಿಸಿ ಅಪಮಾನಗೊಳಿಸಿರುವ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು, ಕಾಫಿ ಬಾರ್ನಲ್ಲಿ ನಡೆದ ಘಟನೆಯನ್ನು ಸಿಬಿಐಗೆ ಒಪ್ಪಿಸಬೇಕೆಂದು ಆಗ್ರಹಿಸಿ ಕರ್ನಾಟಕ ದಲಿತ ಸಿಂಹ ಸೇನೆಯಿಂದ ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಯಿತು. ನಗರದ ಬಂಗಾರಪೇಟೆ ವೃತ್ತದಲ್ಲಿನ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪ್ರತಿಭಟನೆ ಆರಂಭಿಸಿದ ಸಂಘಟನೆಯ ಕಾರ್ಯಕರ್ತರು ದಕ್ಷ ಪೊಲೀಸ್ ಅಧಿಕಾರಿಯಾಗಿರುವ ಡಾ. ರವೀಂದ್ರನಾಥ್ ಅವರ ಹೆಸರಿಗೆ ಮಸಿ ಬಳೆಯುವ ಕೆಲಸ ಪೊಲೀಸ್ ಇಲಾಖೆಯಲ್ಲಿ ಆಗಿದ್ದು ಸರ್ಕಾರ ಪ್ರಕರಣವನ್ನು ಗಂಬೀರವಾಗಿ ಪರಿಗಣಿಸಿ ನೊಂದಿರುವ ಅಧಿಕಾರಿಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿದ್ದಾರೆ. ಕರ್ನಾಟಕ ದಲಿತ ಸಿಂಹಸೇನೆ ರಾಜ್ಯಾಧ್ಯಕ್ಷ ಹೂಹಳ್ಳಿ ಪ್ರಕಾಶ್, ಜಿಲ್ಲಾಧ್ಯಕ್ಷ ತಿಪ್ಪಸಂದ್ರ ಶ್ರೀನಿವಾಸ, ಉಪಾಧ್ಯಕ್ಷ ಸಿ.ನಾಗೇಶ್, ಅರಾಭಿಕೊತ್ತನೂರು ಮುನಿರಾಜು, ಅರಳೇರಿ ನಾರಾಯಣಸ್ವಾಮಿ, ಮಾರಸಂದ್ರ ಮಂಜುನಾಥ, ಅಮ್ಮೇರಹಳ್ಳಿ ಆಂಜಿ, ಬೈಯಪ್ಪನಹಳ್ಳಿ ರವಿ, ನಾಗನಾಳ ರಮೇಶ್ ಪ್ರತಿಭಟನೆಯಲ್ಲಿ ಇದ್ದರು.
ಉಚಿತ ತರಬೇತಿಗೆ ಆಹ್ವಾನ
ಕೆಜಿಎಫ್: ಕ್ರಿಶ್ಚಿಯನ್ ಸಮುದಾಯದ ಅಭ್ಯರ್ಥಿಗಳಿಗೆ ಉದ್ಯೋಗ ತರಬೇತಿಯನ್ನು ನೀಡಲಾಗುವುದು. ಎಸ್ಎಸ್ಎಲ್ಸಿ ಅಥವಾ ಐಟಿಐ ಉತ್ತೀರ್ಣರಾದ ಅರ್ಹ ಅಭ್ಯರ್ಥಿಗಳಿಗೆ ಮೂರು ತಿಂಗಳ ತರಬೇತಿ ನೀಡಲಾಗುತ್ತದೆ. ಅರ್ಜಿಯನ್ನು ಜೂ. 16ರೊಳಗೆ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಗೆ ಕೋಲಾರ ಅಥವಾ ಎಸಿಸಿಪಿಎಲ್ ಟ್ರೈನಿಂಗ್ ತರಬೇತಿ ವಿಭಾಗ, ಫರ್ಪೆಕ್ಟ್ ಇನ್ಸ್ಸ್ಟಿಟೂಟ್ ಆಫ್ ಕಂಪ್ಯೂಟರ್, ರೂಪಾ ಕಾಂಪ್ಲೆಕ್ಸ್, ಸಲ್ಡಾನ ವೃತ್ತ ಕೆಜಿಎಫ್ಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ 9141896930, 8453577388, 08153-271231 ಸಂಪರ್ಕಿಸಿ.
ವೃದ್ಧರ ಮೇಲೆ ಹಲ್ಲೆ: ಆರೋಪಿ ಸೆರೆ
ಕೆಜಿಎಫ್: ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ವೃದ್ಧರ ಹಲ್ಲೆ ನಡೆಸಿದ ಆರೋಪಿಯನ್ನು ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಘಟನೆ ಮಾರಿಕುಪ್ಪಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬೈನೇಹಳ್ಳಿ ಗ್ರಾಮದ ನಿವಾಸಿ ಸ್ವಾಮಿ ವಿವೇಕಾನಂದ ಎಂಬುವರು ಜಮೀನು ವಿವಾದಕ್ಕೆ ಸಂಬಂಧಿಸಿ ತಮ್ಮ ಸ್ವಂತ ತಂದೆಯ ಅಣ್ಣನಾದ ಅಂದರೆ, ದೊಡ್ಡಪ್ಪ ರಾಮಸ್ವಾಮಿ(75) ದೊಡ್ಡಮ್ಮ ಮುನಿಯಮ್ಮ(70) ಎಂಬುವರ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾನೆ. ಈ ವೃದ್ಧರಿಬ್ಬರು ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಂಗನವಾಡಿ ಹುದ್ದೆಗೆ ಅರ್ಜಿ ಆಹ್ವಾನ
ಗುಡಿಬಂಡೆ: ತಾಲೂಕಿನ ಶಿಶು ಅಭಿವೃದ್ಧಿ ಯೋಜನೆಯ ವ್ಯಾಪ್ತಿಯಲ್ಲಿನ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿಯಿರುವ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಸಲ್ಲಿಸುವವರು 10ನೇ ತರಗತಿ ಉತ್ತೀರ್ಣರಾಗಿದ್ದು, 18 ರಿಂದ 35 ವರ್ಷದ ವಯೋವುತಿಯೊಳಗಿರಬೇಕು. ಜೂನ್ 30ರ ಸಂಜೆ 5.30 ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಶಿಶು ಅಭಿವೃದ್ಧಿ ಯೋಜನಾ ಇಲಾಖೆಯನ್ನು ಸಂಪರ್ಕಿಸಲು ತಿಳಿಸಿದೆ.
ಖಾಸಗಿ ಸಂಸ್ಥೆ ದುಬಾರಿ ಶುಲ್ಕ ವಸೂಲಿ
ಚಿಂತಾಮಣಿ: ಖಾಸಗಿ ಶಿಕ್ಷಣ ಸಂಸ್ಥೆಗಳು ನಿಯಮ ಮೀರಿ ಲಕ್ಷಾಂತರ ರುಪಾಯಿ ಡೊನೇಷನ್ ಪಡೆಯುತ್ತಿವೆ. ಆದರೆ, ಸ್ಥಳೀಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಹಲವು ಪ್ರಗತಿಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ವಿದ್ಯಾರ್ಥಿಗಳನ್ನು ಸೆಳೆಯಲು ಅನೇಕ ಶಿಕ್ಷಣ ಸಂಸ್ಥೆಗಳು ಭಾರಿ ಪ್ರಚಾರ ಕೈಗೊಳ್ಳುತ್ತಿವೆ. ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತೇವೆ ಎಂದು ಲಕ್ಷಾಂತರ ರುಪಾಯಿ ಡೊನೇಷನ್ ಪಡೆಯುತ್ತಿವೆ. ಎಲ್ಲವೂ ಗೊತ್ತಿದ್ದರೂ ಗೊತ್ತಿಲ್ಲದಂತೆ ಸ್ಥಳೀಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ವರ್ತಿಸುತ್ತಿದೆ ಎಂದು ಜೈ ಕರ್ನಾಟಕ, ಮಾತರ, ಕರವೇ, ರೈತ ಸಂಘಟನೆ ಆರೋಪಿಸಿವೆ. ದಾಖಲಾತಿ ವೇಳೆ ಸಂಗ್ರಹಿಸಬೇಕಾದ ಶುಲ್ಕ, ಪಾಲಿಸಬೇಕಾದ ನೀತಿ ನಿಯಮಗಳು ಕುರಿತು ರಾಜ್ಯ ಸಾರ್ಕರ ಶಿಕ್ಷಣ ಇಲಾಖೆಯ ಆಯುಕ್ತ ಕಚೇರಿಯ ಮೂಲಕ ಸುತ್ತೋಲೆ ಹೊರಡಿಸಿದೆ. ಆದರೆ, ಖಾಸಗಿ ಶಿಕ್ಷಣ ಸಂಸ್ಥೆಗಳು ಮಾತ್ರ ನಿಯಮ ಮೀರಿ ವರ್ತಿಸುತ್ತಿವೆ ಎಂದು ಪೋಷಕರು ಮತ್ತು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಇನ್ನೊಂದೆಡೆ ಸರ್ಕಾರಿ ಕಾಲೇಜಿನಲ್ಲಿ ಕೆಲಸ ಮಾಡುವ ಪ್ರಾಧ್ಯಾಪಕರು ತಮ್ಮದೇ ಖಾಸಗಿ ಕಾಲೇಜುಗಳಲ್ಲಿ ಪಾಲುದಾರರಾಗಿದ್ದಾರೆ. ಖಾಸಗಿ ಕಾಲೇಜುಗಳಲ್ಲಿ ಬೋಧಿಸುವ ಮೂಲಕ ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಸಂಘಟನೆಗಳು ದೂರಿವೆ. ಕೂಡಲೇ ಖಾಸಗಿ ಶಿಕ್ಷಣ ಸಂಸ್ಥೆಗಳ ಈ ಅನ್ಯಾಯವನ್ನು ತಡೆಯಬೇಕೆಂದು ಆಗ್ರಹಿಸಿವೆ.
ಚುನಾವಣೆಗಳ ಲೆಕ್ಕಪತ್ರ ನೀಡಲು ಸೂಚನೆ
ಕೋಲಾರ: ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಚುನಾವಣಾ ವೆಚ್ಚ ಲೆಕ್ಕಪತ್ರಗಳನ್ನು ನಿಗದಿತ ನಮೂನೆಯಲ್ಲಿ ನೀಡಬೇಕಾಗಿರುವುದರಿಂದ ಎಲ್ಲಾ ಅಭ್ಯರ್ಥಿಗಳು ಮತ್ತು ಏಜೆಂಟರುಗಳಿಗಾಗಿ ಜೂ.13ರಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ತರಬೇತಿಯನ್ನು ಏರ್ಪಡಿಸಲಾಗಿದೆ. ಜಿಲ್ಲಾ ಅಪರ ಜಿಲ್ಲಾಧಿಕಾರಿ ನವೀನ್ ಕುಮಾರ್ ರಾಜು, ಸಹಾಯಕ ನಿಯಂತ್ರಕ ಶಿವಣ್ಣ ಹಾಗೂ ಆಡಿಟ್ ಅಧಿಕಾರಿಗಳಾದ ತಿಪ್ಪೇಸ್ವಾಮಿ ತರಬೇತಿ ನೀಡಲಿದ್ದಾರೆ. ಅಭ್ಯರ್ಥಿಗಳು ಲೆಕ್ಕಪತ್ರಗಳನ್ನು ಜೂ.13 ರೊಳಗಾಗಿ ಕಡ್ಡಾಯವಾಗಿ ಸಲ್ಲಿಸುವಂತೆ ಹಾಜರಿದ್ದ ಅಭ್ಯರ್ಥಿಗಳು ಮತ್ತು ಅವರ ಏಜೆಂಟರ್ಗಳಿಗೆ ತಿಳಿಸಲಾಗಿದೆ. ಒಂದು ವೇಳೆ ಲೆಕ್ಕಪತ್ರಗಳು ಸಮರ್ಪಕವಾಗಿ ಇಲ್ಲದಿದ್ದಲ್ಲಿ ಕಾನೂನು ರೀತ್ಯಾ ಉಂಟಾಗುವ ಪರಿಣಾಮ ಮತ್ತು ಸಲ್ಲಿಸದ ಪಕ್ಷದಲ್ಲಿ ಅನರ್ಹಗೊಳಿಸುವ ಅವಕಾಶಗಳಿವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಪ್ರಥಮ ಪದವಿ ಪ್ರವೇಶ ಆರಂಭ
ಕೋಲಾರ: ಸರ್ಕಾರಿ ಬಾಲಕರ ಕಾಲೇಜಿನಲ್ಲಿ 2014-15ನೇ ಶೈಕ್ಷಣಿಕ ಸಾಲಿಗೆ ಪ್ರಥಮ ಪದವಿ ಪ್ರವೇಶ ಪ್ರಕ್ರಿಯೆಯು ಆರಂಭವಾಗಿದ್ದು, ಪ್ರವೇಶ ಬಯಸುವ ವಿದ್ಯಾರ್ಥಿಗಳು ಲಭ್ಯವಿರುವ ಕೋರ್ಸ್ಗಳಿಗೆ ಸೇರಬಹುದು ಎಂದು ಪ್ರಾಂಶುಪಾಲ ಮಧುಲತಾ ಮೋಸೆಸ್ ತಿಳಿಸಿದ್ದಾರೆ. ಕಾಲೇಜಿನಲ್ಲಿ ವಿವಿ ಸಂಯೋಜನೆಯೊಂದಿಗೆ ಹಾಲಿ ಮುಂದುವರೆದು ಪ್ರವೇಶಕ್ಕೆ ಲಭ್ಯವಿರುವ ಕಲಾ ವಿಭಾಗ (ಬಿ.ಎ) ಎಚ್.ಇ.ಎಸ್, ಎಚ್.ಇ.ಪಿ, ಎಚ್.ಇ.ಕೆ, ಎಚ್.ಇ.ಯು, ಎಚ್.ಟಿ.ಜೆ, ಎಚ್.ಜೆ.ಇ., ವಿಜ್ಞಾನ ವಿಭಾಗ ಪಿಸಿಎಂ, ಸಿಬಿಜೆಡ್, ಸಿಬಿಬಿಟಿ. ವಾಣಿಜ್ಯ ವಿಭಾಗ ಬಿ.ಕಾಂ., ಬಿ.ಬಿ.ಎಂ. ಕೋರ್ಸ್ಗಳಿಗೆ ಸೇರಲು ಅವಕಾಶವಿದೆ ಎಂದು ತಿಳಿಸಿದ್ದಾರೆ.
ವೇಶ್ಯಾವಾಟಿಕೆ ನಾಲ್ವರ ಬಂಧನ
ಚಿಂತಾಮಣಿ: ವೇಶ್ಯಾವಾಟಿಕೆ ನಡೆಯುತ್ತಿದ್ದ ಮನೆಯೊಂದರ ಮೇಲೆ ದಾಳಿ ನಡೆಸಿದ ಪೊಲೀಸರು ಮೂವರು ಮಹಿಳೆಯರು ಹಾಗೂ ಒಬ್ಬ ಪುರುಷನನ್ನು ಬಂಧಿಸಿರುವ ಘಟನೆ ನಗರದಲ್ಲಿ ಇಂದು ಮಧ್ಯಾಹ್ನ ನಡೆದಿದೆ. ನಗರದ ಅಂಜನಿ ಬಡಾವಣೆಯಲ್ಲಿ ರತ್ನಮ್ಮ ಎಂಬವರ ಮನೆಯಲ್ಲಿ ಹಲವು ದಿನಗಳಿಂದ ವೇಶ್ಯಾವಾಟಿಕೆ ನಡೆಸುತ್ತಿದ್ದು, ಖಚಿತ ಮಾಹಿತಿ ಮೇರೆಗೆ ನಗರ ಠಾಣೆಯ ಪಿಎಸ್ಐ ಮುರಳಿ ಮತ್ತು ಸಿಬ್ಬಂದಿ ದಾಳಿ ನಡೆಸಿ, ಒಟ್ಟು ನಾಲ್ವರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ಪ್ರಗತಿ ಪರಿಶೀಲನಾ ಸಭೆ ಇಂದು
ಚಿಕ್ಕಬಳ್ಳಾಪುರ: ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜೂ.5 ರಂದು ಬೆಳಗ್ಗೆ 10 ಗಂಟೆಗೆ ಅಬಕಾರಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯನ್ನು ಏರ್ಪಡಿಸಲಾಗಿದೆ. ಜಿಲ್ಲೆಯ ಎಲ್ಲಾ ಉಪವಿಭಾಗಗಳ ಅಬಕಾರಿ ಉಪ ಅಧೀಕ್ಷಕರು ಮತ್ತು ವಲಯಗಳ ಅಬಕಾರಿ ನಿರೀಕ್ಷಕರು ಹಾಗೂ ಉಪನಿರೀಕ್ಷಕರು ಸಭೆಯಲ್ಲಿ ಭಾಗವಹಿಸಲಿದ್ದು, ಜಿಲ್ಲಾಧಿಕಾರಿ ಆರ್ .ವಿಶಾಲ್ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಸಭೆಯಲ್ಲಿ 2013-14ನೇ ಸಾಲಿನ ಗುರಿ ಮತ್ತು ಸಾಧನೆ, ರಾಜಸ್ವ ಸಂಗ್ರಹಣೆ, ದಾಖಲಿಸಿದ ಘೋರ ಹಾಗೂ ಸಾಮಾನ್ಯ ಪ್ರಕರಣಗಳು ಕುರಿತಂತೆ ಚರ್ಚೆ ನಡೆಯಲಿದೆ.