ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಕನ್ನಡದ ಆಸ್ತಿ ಮಾಸ್ತಿ ಮಸ್ತ್ ಆಗೋದ್ಯಾವಾಗ?

Srinivasa Murthy VN
Updated On : 4 Jun 2014, 11:58 am

-ಟೇಕಲ್ ಲಕ್ಷ್ಮೀಶ್
ಟೇಕಲ್: 'ಮಾಸ್ತಿ ಕನ್ನಡದ ಆಸ್ತಿ' ಎಂದೇ ಖ್ಯಾತಿರಾಗಿರುವ ಜ್ಞಾನಪೀಠ ಪುರಸ್ಕೃತ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರ 123ನೇ ದಿನಾಚರಣೆಗೆ ಕೋಲಾರ ಜಿಲ್ಲಾಡಳಿತ ಈಗಾಗಲೇ ಸಜ್ಜಾಗಿದೆ. ಆದರೆ, ಅವರ ಹುಟ್ಟೂರಾದ ಮಾಸ್ತಿ ಗ್ರಾಮದಲ್ಲಿ ಇಂದಿಗೂ ಮೂಲಭೂತ ಸೌಕರ್ಯಗಳಿಲ್ಲ. ಮಾಸ್ತಿ ಸ್ಮಾರಕಭವನ, ಅಧ್ಯಯನ ಕೇಂದ್ರಗಳು ನಿರ್ಲಕ್ಷ್ಯಕ್ಕೊಳಗಾಗಿವೆ.
2009ರ ಅಕ್ಟೋಬರ್ 16ರಂದು ಮಾಸ್ತಿ ಅವರ ಪುರಾತನ ಶೈಲಿಯ ಮನೆಯನ್ನು ಗ್ರಂಥಾಲಯವಾಗಿ ಲೋಕಾರ್ಪಣೆ ಮಾಡಲಾಗಿತ್ತು. ಆದರೆ, ಅಂದಿನಿಂದ ಇಂದಿನಿವರೆಗೂ ಈ ಗ್ರಂಥಾಲಯ ತೀವ್ರ ನಿರ್ಲಕ್ಷ್ಯಕ್ಕೊಳಗಾಗಿದೆ. ಸರ್ಕಾರವೂ ಇತ್ತ ಗಮನಹರಿಸಿಲ್ಲ. ಇನ್ನು ಗ್ರಾಮವೂ ಕೂಡಾ ಯಾವುದೇ ಮೂಲಭೂತ ಸೌಕರ್ಯಗಳನ್ನು ಕಂಡಿಲ್ಲ.
ಆಗಬೇಕಾಗಿರುವುದೇನು? ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರ ಪೆರಿಯತ್ ಗ್ರಂಥಾಲಯವನ್ನು ಅಧ್ಯಯನ ಕೇಂದ್ರವಾಗಿ ರೂಪಿಸಬೇಕು. ಕನ್ನಡ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಮಾಸ್ತಿ ಅವರ ಹೆಸರಿನಲ್ಲಿ ರಂಗ ಮಂದಿರ ನಿರ್ಮಾಣವಾಗಬೇಕು. ಮಾಸ್ತಿಗೆ ಆಗಮಿಸಿ ಅಧ್ಯಯನ ಮಾಡಲು ಬಯಸುವವರಿಗೆ ಕನಿಷ್ಠ ಮೂಲಭೂತ ಸೌಲಭ್ಯಗಳು ಹಾಗೂ ವಿಶ್ರಾಂತಿ ಗೃಹಗಳನ್ನು ಒದಗಿಸಬೇಕು. ಮಾಸ್ತಿಯಲ್ಲಿ ಸಾಹಿತ್ಯ ಹಾಗೂ ಇನ್ನಿತರೆ ದಿಗ್ಗಜರ ನೆನಪಿನಲ್ಲಿ ಕಾರ್ಯಕ್ರಮಗಳನ್ನು ಮಾಡಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮುಂದಾಗಬೇಕು. ಅತಿ ಮುಖ್ಯವಾಗಿ ಬೆಂಗಳೂರಿಗೆ ಮಾತ್ರ ಸೀಮಿತವಾದಂತಿರುವ ಮಾಸ್ತಿ ಟ್ರಸ್ಟ್ ಸಹ ತನ್ನ ಕಾರ್ಯಕ್ಷೇತ್ರದ ವ್ಯಾಪ್ತಿಯನ್ನು ಮಾಸ್ತಿಗೂ ವಿಸ್ತರಿಸಬೇಕು. ಮಾಸ್ತಿಯವರು ಬಳಸುತ್ತಿದ್ದ ವಸ್ತುಗಳನ್ನು ಮ್ಯೂಸಿಯಂ ಮಾಡಬೇಕು. ಮಾಸ್ತಿಯವರ ಹೆಸರಿನಲ್ಲಿ ನಡೆಯುತ್ತಿರುವ ಮಾಸ್ತಿ ವಸತಿ ಶಾಲೆಗೆ ಸಮರ್ಪಕ ಕಟ್ಟಡ ನಿರ್ಮಿಸಿಕೊಡಬೇಕು. ಮೂಲಭೂತ ಸೌಕರ್ಯ ಒದಗಿಸಬೇಕು. ಈ ಬೇಡಿಕೆಗಳನ್ನು ಈಡೇರಿಸುವಂತೆ ಜನರು ಸುಮಾರ ವರ್ಷಗಳಿಂದ ಒತ್ತಾಯಿಸುತ್ತಿದ್ದಾರೆ. ಆದರೆ, ಈ ಬಗ್ಗೆ ಟ್ರಸ್ಟ್ ಅಥವಾ ಸರ್ಕಾರವಾಗಲಿ ಅಷ್ಟು ಗಂಭೀರವಾಗಿ ಗಮನಹರಿಸಿಲ್ಲ.

ಸಿಎಂ ಇತ್ತ ಗಮನಹರಿಸಿ
ರಾಜ್ಯದ ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ಅವರು ಮಾಸ್ತಿಯತ್ತ ಕಣ್ಣುತೆರೆದು ನೋಡಬೇಕಿದೆ. ಅಯ್ಯಂಗಾರ್ ಅವರ ಜನ್ಮಸ್ಥಳವನ್ನು ಎಲ್ಲ ರೀತಿಯಿಂದಲೂ ಅಭಿವೃದ್ಧಿಪಡಿಸಬೇಕು ಎಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾದರಿ ಗ್ರಾಮವಾಗಿ ರೂಪಿಸಬೇಕು ಎಂದು ಗ್ರಾಮಸ್ಥರು ವಿನಂತಿಸಿದ್ದಾರೆ.

ಗ್ರಂಥಾಲಯ ವಿಶೇಷವೇನು?
ಈ ಗ್ರಂಥಾಲಯದಲ್ಲಿ ಸುಮಾರು 15 ಸಾವಿರಕ್ಕೂ ಹೆಚ್ಚು ಸಾಹಿತ್ಯಿಕ ಪುಸ್ತಕಗಳಿವೆ. ರೀಡಿಂಗ್ ಟೇಬಲ್, ಕುಶನ್ ಚೇರ್‌ಗಳು, ಅಲ್ಮೆರಾಗಳಿವೆ. ಓದುಗರಿಗೆ ಅನುಕೂಲವಾಗುವ ರೀತಿಯಲ್ಲಿ ಗ್ರಂಥಾಲಯ ವಿನ್ಯಾಸಗೊಳಿಸಲಾಗಿದೆ. ಆದರೆ, ಬಂದು ಹೋಗುವವರಿಗೆ ಸರಿಯಾದ ಕೊಠಡಿ ವ್ಯವಸ್ಥೆ ಇಲ್ಲ. ಮಾಸ್ತಿ ಗ್ರಾಮದಲ್ಲಿ ಜನತೆ ಗ್ರಂಥಾಲಯದ ಸಾಹಿತ್ಯ ಅಭಿರುಚಿಯನ್ನು ಸದುಪಯೋಗಪಡಿಸಿಕೊಳ್ಳಬೇಕಾಗಿದೆ. ಈ ಗ್ರಂಥಾಲಯಕ್ಕೆ ಬಂದು ಹೋಗುವವರ ಜನಸಂಖ್ಯೆ ವಿರಳ ಅದನ್ನು ಹೆಚ್ಚಿಸಬೇಕಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement