ಖಾಸಗಿ ಬಸ್ ನಿಲ್ದಾಣ ನಿರ್ಮಾಣ ಮಾಹಿತಿ ನೀಡಿ
ಚಿಕ್ಕಬಳ್ಳಾಪುರ: ಗೌರಿಬಿದನೂರು ಪಟ್ಟಣದಲ್ಲಿ ಖಾಸಗಿ ಬಸ್ ನಿಲ್ದಾಣ ನಿರ್ಮಿಸಲು ಅಂದಾಜು 2.5 ಕೋಟಿ ಅವಶ್ಯಕವಿದೆ. ಈ ಸಮಗ್ರ ಯೋಜನಾ ವರದಿ ಸಿದ್ಧಪಡಿಸುವಂತೆ ಜಿಲ್ಲಾಧಿಕಾರಿ ಡಾ.ಆರ್.ವಿಶಾಲ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಡೆಪ್ಯುಟಿ ಸ್ಪೀಕರ್ ಎನ್.ಎಚ್.ಶಿವಶಂಕರರೆಡ್ಡಿ ಅಧ್ಯಕ್ಷತೆಯಲ್ಲಿ ನಡೆದ ಗೌರಿಬಿದನೂರು ತಾಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಈ ಸೂಚನೆ ನೀಡಿದರು. ಬಸ್ ನಿಲ್ದಾಣ ನಿರ್ಮಾಣಕ್ಕೆ ತಗುಲುವ ವೆಚ್ಚ, ಕೈಗೊಳ್ಳಬೇಕಾದ ಕಾಮಗಾರಿ, ನಿಲ್ದಾಣದ ರೂಪುರೇಷೆ ಸೇರಿದಂತೆ ಸಮಗ್ರ ಯೋಜನೆಯನ್ನು ತಯಾರಿಸಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳು ತಿಳಿಸಿದರು.
ಗೌರಿಬಿದನೂರು ಪಟ್ಟಣದಲ್ಲಿ ರಾಜ್ಯ ಸಾರಿಗೆ ಸಂಸ್ಥೆಯ ಬಸ್ ಮತ್ತು ಖಾಸಗೀ ಬಸ್ ಸಿಬ್ಬಂದಿ ನಡುವೆ ಪದೇ ಪದೇ ಗಲಾಟೆಗಳಾಗುತ್ತಿದ್ದು, ಬಹುತೇಕ ಖಾಸಗಿ ಬಸ್ಗಳು ಸಂಚಾರ ದಟ್ಟಣೆಯಿರುವ ರಸ್ತೆಯಲ್ಲಿ ನಿಂತುಕೊಂಡಿರುತ್ತವೆ. ಹಾಗಾಗಿ, ನೂತನ ಮಳಿಗೆಗಳ ಜೊತೆಗೆ ಖಾಸಗಿ ಬಸ್ ನಿಲ್ದಾಣವನ್ನು ನಿರ್ಮಿಸಬೇಕಾಗಿದೆ ಎಂದು ಸಭೆಯ ಗಮನ ಸೆಳೆದರು.
ಜಮೀನು ವಿವಾದ: ಪಟ್ಟಣದ ಮಾರನಹಳ್ಳಿಯಲ್ಲಿ 1 ಎಕರೆ ಜಮೀನು ಹಂಚಿಕೆ ಸಂಬಂಧ ವಿವಾದ ಉಂಟಾಗಿದ್ದು, ಕೆಲವು ದಲಿತ ಮುಖಂಡರು ಆ ಜಾಗದಲ್ಲಿ ನಿವೇಶನಗಳನ್ನು ವಿಂಗಡಿಸಿ, ವಸತಿ ಹೀನರಿಗೆ ಒದಗಿಸಬೇಕೆಂದು ಹೋರಾಟಗಳನ್ನು ನಡೆಸುತ್ತಿದ್ದಾರೆ. ಆದರೆ, ಬಡ ಜನರಿಗೆ ವಸತಿಗಳನ್ನು ನೀಡಲು ಬೇರೆ ಕಡೆ 7 ಎಕರೆ ಪ್ರದೇಶವನ್ನು ಗುರುತಿಸಲಾಗಿದೆ. ಪ್ರಸ್ತುತ ವಿವಾದದ ಸ್ಥಳವನ್ನು ಉದ್ಯಾನವನ ಮತ್ತು ಮೈದಾನಕ್ಕೆ ಉಪಯೋಗಿಸಿಕೊಳ್ಳಬಹುದು. ಈ ಬಗ್ಗೆ ಸಂಬಂಧಪಟ್ಟವರ ಗಮನಕ್ಕೆ ತಂದು ವಿವಾದವನ್ನು ಬಗೆಹರಿಸಬೇಕಾಗಿದೆ ಎಂದು ಎನ್.ಹೆಚ್.ಶಿವಶಂಕರೆಡ್ಡಿ ಅಧಿಕಾರಿಗಳಿಗೆ ತಿಳಿಸಿದರು.
ಇನ್ನೂ ತಾಲೂಕಿನ ಸೊಣಗಾನಹಳ್ಳಿಯ ಅಂಬೇಡ್ಕರ್ ಕಾಲೋನಿ ಮತ್ತು ಹೊಸೂರು ತಾಲೂಕಿನ ಲಕ್ಷ್ಮೀಪುರಂ ನಲ್ಲಿ ಬಡ ಜನರು ಮನೆಗಳನ್ನು ನಿರ್ಮಾಣ ಮಾಡಿದ್ದು, ಇದೀಗ ಆ ಜಾಗ ತಮಗೆ ಸರ್ಕಾರದಿಂದ ಮಂಜೂರಾಗಿದೆ ಎಂದು ಕೆಲವರು ತಕರಾರರು ತೆಗೆದಿದ್ದಾರೆ. ಬಡಜನರು ತೊಂದರೆಯನ್ನು ಅನುಭವಿಸುತ್ತಿದ್ದಾರೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಆರ್.ವಿಶಾಲ್, ಸರ್ಕಾರಿ ಜಾಗದಲ್ಲಿ ಮನೆಗಳನ್ನು ಕಟ್ಟಿಕೊಂಡಿರುವವರ ಪಟ್ಟಿಯನ್ನು ತಮಗೆ ಕಳುಹಿಸಿದರೆ ಆಶ್ರಯ ವಸತಿ ಯೋಜನೆಯಲ್ಲಿ ಸೇರಿಸಿ ಸಕ್ರಮಗೊಳಿಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಜಿ.ಪಂ.ಅಧ್ಯಕ್ಷ ಕೇಶವರೆಡ್ಡಿ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನೀಲಾ ಮಂಜುನಾಥ್ ಮುಂತಾದವರು ಉಪಸ್ಥಿತರಿದ್ದರು.
ಪಟ್ಟಣದ ಸಮಗ್ರ ಅಭಿವೃದ್ಧಿ ಯೋಜನೆ
ಗೌರಿಬಿದನೂರು ಪಟ್ಟಣದ ಸಮಗ್ರ ಅಭಿವೃದ್ಧಿ ಗೆ ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದು ವಿಧಾನಸಭಾ ಉಪಾಧ್ಯಕ್ಷ ಎನ್.ಎಚ್.ಶಿವಶಂಕರರೆಡ್ಡಿ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಟ್ಟಣದಲ್ಲಿ 1962 ರಿಂದಲೂ ರಸ್ತೆ ಅಗಲೀಕರಣ ವಿವಾದ ಇದೆ. ಕೆಲವರು ಸ್ವಯಂ ಪ್ರೇರಣೆಯಿಂದ ಒತ್ತುವರಿಯನ್ನು ತೆರವುಗೊಳಿಸಿದರೆ, ಕೇವಲ ಏಳೆಂಟು ಮಂದಿ ನ್ಯಾಯಾಲಯದ ಮೆಟ್ಟಿಲೇರಿದರು. ಆದರೆ, ನ್ಯಾಯಾಲಯ ಒತ್ತುವರಿಯನ್ನು ತೆರವುಗೊಳಿಸುವಂತೆ ಸೂಚನೆ ನೀಡಿದ್ದು, ಅದರಂತೆ ರಸ್ತೆ ಅಗಲೀಕರಣ ಕಾರ್ಯ ಮತ್ತೆ ನಡೆಯಲಿದೆ. ರಸ್ತೆಗಾಗಿ ತಮ್ಮ ಜಾಗವನ್ನು ಕಳೆದುಕೊಳ್ಳುವರಿಗೆ ಸೂಕ್ತ ಪರಿಹಾರವನ್ನು ವಿತರಿಸಲಾಗುತ್ತದೆಯಾದರೂ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡವರಿಗೆ ಪರಿಹಾರವನ್ನು ನೀಡಲಾಗುವುದಿಲ್ಲ.ನಿರ್ದಾಕ್ಷಿಣ್ಯವಾಗಿ ರಸ್ತೆ ಅಗಲೀಕರಣಕ್ಕೆ ಆ ಜಾಗವನ್ನು ಸ್ವಾಧೀನಪಡಿಸಿಕೊಳ್ಳಲಾಗುವುದು ಎಂದರು.