ಗೊಂದಲ ಗೂಡಾದ ಪುರಸಭೆ
ಕುಡಿಯುವ ನೀರು ಪೂರೈಸುವಲ್ಲಿ ಆಡಳಿತ ಸಂಪೂರ್ಣ ವಿಫಲ
ಅಧ್ಯಕ್ಷರ ವಿರುದ್ಧ ಬಿಜೆಪಿ, ಜೆಡಿಎಸ್ ಸದಸ್ಯರ ತೀವ್ರ ವಾಗ್ದಾಳಿ
ಬಂಗಾರಪೇಟೆ: ಪುರಸಭೆ ಸಾಮಾನ್ಯ ಸಭೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಕುಡಿಯುವ ನೀರು ಪೂರೈಸುವಲ್ಲಿ ಪುರಸಭೆ ಆಡಳಿತ ಮಂಡಳಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಅಧ್ಯಕ್ಷರ ವಿರುದ್ಧ ಮಾತಿನ ವಾಗ್ದಾಳಿ ನಡೆಸಿದರಿಂದ ಸಭೆ ಕೆಲಕಾಲ ಗೊಂದಲದ ಗೂಡಾಗಿ ಮಾರ್ಪಟ್ಟಿತ್ತು.
ಪುರಸಭೆಯ ಹೊಸ ಆಡಳಿತ ಮಂಡಳಿಗೆ ಅಧ್ಯಕ್ಷ ಉಪಾಧ್ಯಕ್ಷರಾಗಿ ಆಯ್ಕೆಯಾದ ನಂತರ ಬುಧವಾರ ಅಧ್ಯಕ್ಷ ಗಂಗಮ್ಮ ರಂಗರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಮೊದಲ ಸಾಮಾನ್ಯ ಸಭೆ ಪ್ರಾರಂಭವಾಗುತ್ತಿದ್ದಂತೆ ಬಿಜೆಪಿಯ ಬಿ.ಸಿ. ಮೂರ್ತಿ, ಜೆಡಿಎಸ್ನ ರವಿಪ್ರಕಾಶ್, ಸುಹೇಲ್ ಮತ್ತು ವೇಲುಮುರುಗನ್ ಪಟ್ಟಣದಲ್ಲಿ ಪುರಸಭೆ ಮೂರು ತಿಂಗಳಿಗೊಮ್ಮ ಕುಡಿಯುವ ನೀರು ಪೂರೈಸುತ್ತಿದೆ. ಇದರಿಂದ ವಾರ್ಡುಗಳಿಗೆ ಸದಸ್ಯರು ಕಾಲಿಡಲು ಆಗುತ್ತಿಲ್ಲ. ಪುರಸಭೆ ಏನು ಮಾಡುತ್ತಿದೆ ಯಾಕೆ ಸಮಯಕ್ಕೆ ನೀರು ಸರಬರಾಜು ಮಾಡುತ್ತಿಲ್ಲ, ಎರಡು ತಿಂಗಳಲ್ಲಿ ಮೂರು ಬಾರಿ ವಿಶೇಷ ಸಭೆ ಕರೆದಿದ್ದರೂ ಸಮಸ್ಯೆ ಯಾಕೆ ನೀಗಿಲ್ಲ ಎಂದು ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳಿ ಅಧ್ಯಕ್ಷರು ಉತ್ತರ ನೀಡದಂತೆ ಗೊಂದಲ ಸೃಷ್ಟಿಸಿದರು. ಅಧ್ಯಕ್ಷೆ ಗಂಗಮ್ಮ ಮಾತನಾಡಿ ಮಳೆ ಅಭಾವದಿಂದಾಗಿ ಸಮಸ್ಯೆ ಸೃಷ್ಟಿಯಾಗಿದೆ, 11ಸಾವಿರ ಮನೆಗಳಿಗೆ ಹಾಗೂ 50ಸಾವಿರ ಜನಸಂಖ್ಯೆ ಇರುವ ಪಟ್ಟಣದಲ್ಲಿ ಬಹುತೇಕ ಬೋರ್ಗಳು ಬತ್ತಿವೆ, ಖಾಸಗಿ ಟ್ಯಾಂಕರ್ ಮಾಲೀಕರಿಂದ ನಿತ್ಯ ಕೇವಲ 150 ಲೋಡ್ ಬರುತ್ತಿದೆ. ಮತ್ತೊಂದೆಡೆ ಜಿಲ್ಲಾಧಿಕಾರಿಗಳು ಹೊಸ ಬೋರ್ ಕೊರೆಸಲು ಅನುಮತಿ ನೀಡುತ್ತಿಲ್ಲ ಆದರು ಸಮಸ್ಯೆ ನೀಗಿಸಲು ನಮ್ಮ ಪ್ರಯತ್ನ ಮುಂದುವರೆದಿದೆ ನಾವು ಏನು ಮಾಡಲು ಸಾಧ್ಯವಿಲ್ಲ ಮಳೆಯೊಂದೆ ಸಮಸ್ಯೆಗೆ ಪರಿಹಾರ ಎಂದು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದರು. ಸದಸ್ಯರ ಪ್ರಶ್ನೆಗಳಿಗೆ ಅಧ್ಯಕ್ಷರು ಉತ್ತರಿಸುವುದಕ್ಕೆ ಮೊದಲೇ ಮಾಜಿ ಅಧ್ಯಕ್ಷ ಚಂದ್ರಾರೆಡ್ಡಿ ಉತ್ತರಿಸಲು ಮುಂದಾದಾಗ ವಿರೋಧ ಪಕ್ಷದ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ನೈರ್ಮಲ್ಯ ಕಾಪಾಡಲು ಪ್ರತಿ ಮನೆಗೆ ಸ್ವಸಹಾಯಕ ಗುಂಪಿನ ಸದಸ್ಯೆಯರು ಬಂದು ಕಸ ಸಂಗ್ರಹಿಸುವ ಕಾರ್ಯಕ್ಕೆ ಮಾಸಿಕ 20 ರು. ನಿಗದಿ ಮಾಡಿದ್ದು ಆ ಹಣವನ್ನು ಕೊಡಲು ಮನೆ ಮಾಲೀಕರು ಹಿಂದೇಟು ಹಾಕುತ್ತಿರುವುದರಿಂದ ಪಟ್ಟಣದಲ್ಲಿ ಕಸ ತ್ವರಿತವಾಗಿ ವಿಲೇವಾರಿಯಾಗುತ್ತಿಲ್ಲ ಎಂದು ಮುಖ್ಯಾಧಿಕಾರಿಗಳು ಸಭೆ ಗಮನಕ್ಕೆ ತಂದರು. ಹಣ ನೀಡದವರಿಗೆ ನೀರು ಪೂರೈಕೆ ಸ್ಥಗಿತಗೊಳಿಸಿ ಎಂದು ಸಭೆ ನಿರ್ಣಯ ತೆಗೆದುಕೊಂಡಿತು. ಇಲ್ಲಿರುವ ದನದ ಮಾಂಸದ ಅಂಗಡಿಗಳಿಗೆ ಪರವಾನಿಗೆ ನವೀಕರಿಸುವ ವಿಷಯ ಸದಸ್ಯರಲ್ಲಿ ಗೊಂದಲ ಉಂಟಾಗಿ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಮಧ್ಯಸ್ಥಿಕೆಯಲ್ಲಿ ಸಮಸ್ಯೆ ಇತ್ಯರ್ಥವಾಗಿ ನವೀಕರಿಸಲು ಸಭೆ ಒಪ್ಪಿಗೆ ನೀಡಿತು. ಇದೇ ವೇಳೆ ಸ್ಥಾಯಿ ಸಮಿತಿ ಅಧ್ಯಕ್ಷರನ್ನಾಗಿ ಕೆ. ಚಂದ್ರಾರೆಡ್ಡಿಯವರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷ ರಮೇಶ್ ಮುಖ್ಯಾಧಿಕಾರಿ ಜಹೀರ್ ಅಬ್ಬಾಸ್ ಮತ್ತಿತರರು ಇದ್ದರು.