ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಮತದಾನಕ್ಕೆ ಸರ್ಕಾರಿ ರಜೆ ಘೋಷಣೆಗೆ ಆಗ್ರಹ

Srinivasa Murthy VN
Updated On : 4 Jun 2014, 11:59 am

ಕೋಲಾರ: ಇದೇ ತಿಂಗಳು ಜೂ.20ರಂದು ನಡೆಯುವ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಮತದಾನ ಹೆಚ್ಚಳಕ್ಕಾಗಿ ಸರ್ಕಾರಿ ರಜೆ ಘೋಷಣೆ ಮಾಡಬೇಕೆಂದು ವಿಧಾನ ಪರಿಷತ್ತಿನ ಹಾಲಿ ಸದಸ್ಯ ಹಾಗೂ ಮರು ಆಯ್ಕೆಯಾಗಿ ಮತ್ತೊಮ್ಮೆ ಬಿಜೆಪಿ ಅಭ್ಯರ್ಥಿ ಆಗಿರುವ ಡಾ.ಎ.ಎಚ್. ಶಿವಯೋಗಿಸ್ವಾವು ಚುನಾವಣಾ ಆಯೋಗವನ್ನು ಒತ್ತಾಯಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿ, ಆಗ್ನೇಯ ಪದವೀಧರ ಚುನಾವಣೆ ಪ್ರತಿ ಬಾರಿ ಭಾನುವಾರ ನಡೆಯುತ್ತಿತ್ತು. ಆದರೆ ಈ ಬಾರಿ ಶುಕ್ರವಾರ ಚುನಾವಣೆ ನಡೆಯುವುದರಿಂದ ಮತದಾನ ಪ್ರಮಾಣ ಕಡಿಮೆ ಆಗುವ ಸಾಧ್ಯತೆ ಇದೆ ಎಂದು ಅನುಮಾನ ವ್ಯಕ್ತಪಡಿಸಿದರು.
ಮತದಾನ ದಿನದಂದು ಸರ್ಕಾರಿ ರಜೆ ಘೋಷಣೆ ಮಾಡಿದಲ್ಲಿ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ತಮ್ಮ ಹಕ್ಕು ಚಲಾಯಿಸಲು ಅನುಕೂಲವಾಗುತ್ತದೆ. ಈ ಸಂಬಂಧ ತಾವು ಚುನಾವಣಾ ಆಯೋಗಕ್ಕೆ ಪತ್ರ ಮುಖೇನವೂ ಮನವಿ ಮಾಡುವುದಾಗಿ ತಿಳಿಸಿದರು.
ಚುನಾವಣೆ ಮತದಾನದ ಸಮಯವನ್ನು ಬೆಳಗ್ಗೆ 8 ಗಂಟೆಯಿಂದ 4 ಗಂಟೆವರೆಗೆ ನಿಗದಿಪಡಿಸಿದ್ದು, ಮತದಾನದ ಅವಧಿಯನ್ನು ಬೆಳಗ್ಗೆ 8 ರಿಂದ ಸಂಜೆ 6 ಗಂಟೆಯವರೆಗೆ ವಿಸ್ತರಿಸುವಂತೆಯೂ ಒತ್ತಾಯಿಸಿದರು.
ಸಾಧನೆಗಳೇ ಶ್ರೀರಕ್ಷೆ: ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿ ಇದ್ದ ಸಂದರ್ಭದಲ್ಲಿ ಜಾರಿಗೆ ತಂದ ಜನಪರ ಯೋಜನೆಗಳು ಹಾಗೂ ಶಿಕ್ಷಕರ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ನೆನಗುದಿಗೆ ಬಿದ್ದ ಹಲವಾರು ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿರುವುದರಿಂದ ತಮಗೆ ಮತದಾರರು ಬೆಂಬಲ ನೀಡಲಿದ್ದಾರೆಂದು ತಿಳಿಸಿದರು.
1987 ರಿಂದ 1994-95ರವರೆಗೆ ಆರಂಭಿಸಲಾದ ಶಿಕ್ಷಣ ಸಂಸ್ಥೆಗಳನ್ನು ಅನುದಾನಕ್ಕೆ ಒಳಪಡಿಸಲು ಪ್ರಾಮಾಣಿಕವಾಗಿ ಶ್ರಮಿಸಿದ್ದೇನೆ, 1268 ಜೆಓಸಿ ಬೋದಕ, ಬೋಧಕೇತರ ಸಿಬ್ಬಂದಿಗೆ ಸೇವಾಭದ್ರತೆ ಕಲ್ಪಿಸಿ, ಸರ್ಕಾರಿ ಸೇವೆಯಲ್ಲಿ ವಿಲೀನಗೊಳಿಸಲು ಹೋರಾಟ ನಡೆಸಿದ್ದೇನೆ. ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿರುವ 1642 ಜೆಓಸಿ ಸಿಬ್ಬಂದಿ ಸೇವಾಭದ್ರತೆಗೆ ವಿಧಾನ ಪರಿಷತ್ತಿನಲ್ಲಿ ದನಿ ಎತ್ತಿ ನ್ಯಾಯ ದೊರಕಿಸಿದ್ದೇನೆ ಎಂದರು.
ಕಳೆದ 6 ವರ್ಷಗಳಲ್ಲಿ 6.92 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಇದರಲ್ಲಿ ಕೋಲಾರ ಜಿಲ್ಲೆಗೆ 82.50 ಲಕ್ಷ, ಚಿಕ್ಕಬಳ್ಳಾಪುರಕ್ಕೆ 1.03 ಕೋಟಿ, ಚಿತ್ರದುರ್ಗಕ್ಕೆ 1.24 ಕೋಟಿ, ತುಮಕೂರಿಗೆ 1.76 ಕೋಟಿ ಮತ್ತು ದಾವಣಗೆರೆಗೆ 1.90 ಕೋಟಿ ಹಣವನ್ನು ತಮ್ಮ ಅನುದಾನದಲ್ಲಿ ನೀಡಲಾಗಿದೆ ಎಂದ ಅವರು, ಇದರಲ್ಲಿ ಸಾಕಷ್ಟು ಅನುದಾನವನ್ನು ಶಾಲೆಗಳಲ್ಲಿ ಶೌಚಾಲಯಗಳ ನಿರ್ಮಾಣಕ್ಕೆ ನೀಡಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪ್ರಸ್ತಕ ಕಾಲ್ಪನಿಕ ಬಡ್ತಿಗೆ ಸರ್ಕಾರ ಭರವಸೆ ನೀಡಿ 285 ಕೋಟಿ ರು.ಗಳನ್ನು ಬೋಧಕೇತರ ಸಿಬ್ಬಂದಿಗೆ ಬಿಡುಗಡೆ ಮಾಡಿತು. ಆದರೆ ಇದನ್ನು ನೀಡಲು ವಿಳಂಬ ಮಾಡುತ್ತಿರುವುದನ್ನು ಮನಗಂಡು ವಿಧಾನ ಪರಿಷತ್ತಿನ ಸದಸ್ಯರು ಶಿಕ್ಷಣ ಸಚಿವರನ್ನು ಭೇಟಿ ಮಾಡಿ ಕೂಡಲೇ ಹಣ ಬಿಡುಗಡೆ ಮಾಡುವಂತೆ ಮನವಿ ಮಾಡಲಾಯಿತು.ಆದರೆ ಆಯುಕ್ತರು ಪುನಃ ತಡೆಹಿಡಿದಿದ್ದು, ಕೂಡಲೇ ಸಚಿವರು ಈ ಬಗ್ಗೆ ಗಮನ ಹರಿಸಿ ಹಣವನ್ನು ಬಿಡುಗಡೆ ಮಾಡಬೇಕೆಂದು ಅವರು ಒತ್ತಾಯಿಸಿದರು.
ಕಳೆದ 6 ವರ್ಷಗಳಲ್ಲಿ ಸಾಕಷ್ಟು ಅಭಿವೃದ್ಧಿ ಯೋಜನೆ ಮತ್ತು ಶಿಕ್ಷಕರ ಸಮಸ್ಯೆಗಳನ್ನು ಈಡೇರಿಸಿರುವುದರಿಂದ ಈ ಬಾರಿಯೂ ಮತದಾರರು ತಮಗೆ ಮೊದಲ ಪ್ರಾಶಸ್ತ್ಯ ಮತವನ್ನು ನೀಡಿ ಗೆಲುವಿಗೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಜಿ.ಪಂ. ಸದಸ್ಯ ಎಂ.ಎಸ್. ಆನಂದ್, ನಗರ ಬಿಜೆಪಿ ಅಧ್ಯಕ್ಷ ಜಯಂತಿಲಾಲ್, ಮುಖಂಡರಾದ ವೆಂಕಟೇಶ್ ಮೌರ್ಯ, ಪ್ರಮೀಳ ಮಲ್ಲಿಕಾರ್ಜುನ್, ನರಸಿಂಹರಾಜು, ಚಿನ್ನಾಪುರ ನಾರಾಯಣಸ್ವಾಮಿ, ಮಾಗೇರಿ ನಾರಾಯಣಸ್ವಾಮಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement