ವಹಿವಾಟಿಗೆ ವ್ಯಾಟ್‌ಆ್ಯಪ್ ಬಳಸಿ
ಕ.ಪ್ರ.ವಾರ್ತೆ ಕೋಲಾರ ಜೂ.4
ವಾರ್ಷಿಕ 50 ಲಕ್ಷಕ್ಕಿಂತ ಹೆಚ್ಚಿನ ವ್ಯಾಪಾರ ವಹಿವಾಟು ನಡೆಸುವ ಪ್ರತಿ ವಾಣಿಜ್ಯೋದ್ಯಮಿ ಕಡ್ಡಾಯವಾಗಿ ವ್ಯಾಟ್‌ಆ್ಯಪ್ ತಂತ್ರಾಂಶ ಬಗ್ಗೆ ಜ್ಞಾನ ಹೊಂದಿರಬೇಕು. ಆ ಮೂಲಕ ತೆರಿಗೆ ಸಮಸ್ಯೆಯಿಂದ ಪಾರಾಗಬೇಕೆಂದು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕ ವೆಂಕಟಸ್ವಾಮಿ ಸಲಹೆ ನೀಡಿದರು.
ನಗರದ ಚೊಕ್ಕ ಹಾಲ್‌ನಲ್ಲಿ ಮಂಗಳವಾರ ಜಿಲ್ಲಾ ವಾಣಿಜ್ಯ ತೆರಿಗೆ ಇಲಾಖೆ ಮತ್ತು ಜಿಲ್ಲಾ ವಾಣಿಜ್ಯ ಸಂಸ್ಥೆಯ ಜಂಟಿ ಆಶ್ರಯದಲ್ಲಿ ವಾಣಿಜ್ಯೋದ್ಯಮಿಗಳಿಗಾಗಿ ಹಮ್ಮಿಕೊಂಡಿದ್ದ ವ್ಯಾಟ್‌ಆ್ಯಪ್ ತಂತ್ರಾಂಶಕ್ಕೆ ಸಂಬಂಧಿಸಿದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
50 ಲಕ್ಷಕ್ಕಿಂತ ಹೆಚ್ಚಿನ ವ್ಯಾಪಾರ ವಹಿವಾಟುಗಳು ನಡೆಸುತ್ತಿದ್ದಲ್ಲಿ ಖರೀದಿ, ಮಾರಾಟ, ತೆರಿಗೆ ಹಾಗೂ ಇತರೆ ಖರ್ಚು-ವೆಚ್ಚಗಳ ದಾಖಲೆಗಳನ್ನು ಗಣಕಯಂತ್ರಗಳ ವ್ಯಾಟ್‌ಆ್ಯಪ್ ಸಾಫ್ಟ್‌ವೇರ್‌ನಲ್ಲಿ ಕಡ್ಡಾಯವಾಗಿ ನಮೂದಿಸಬೇಕು. ಇದರಿಂದ ವ್ಯಾಪಾರಿಗಳು ಮತ್ತು ಗ್ರಾಹಕರು ತೆರಿಗೆ ಇಲಾಖೆಗೆ ಅಲಿಯುವುದು ತಪ್ಪುತ್ತದೆ ಎಂದರು. ಈ ಸಾಫ್ಟ್‌ವೇರ್‌ನಲ್ಲಿ ಎಲ್ಲಾ ಮಾಹಿತಿ ದೊರೆಯುವುದರಿಂದ ತೆರಿಗೆಯ ಮರುಪಾವತಿಗೆ ಸುಲಭವಾಗುತ್ತದೆ. ಮಾನವ ಸಂಗ್ರಹಿಸಿಡುವ ದಾಖಲೆಗಳಿಗಿಂತ ಗಣಕ ಯಂತ್ರ ವ್ಯಾಟ್ ಸಾಫ್ಟ್‌ವೇರ್‌ಗಳಲ್ಲಿ ಮಾಹಿತಿ ದಾಖಲಿಸಿದರೆ ಪರಿಶೀಲಿಸಲು ಸುಲಭವಾಗುವುತ್ತದೆ. ಪ್ರತಿಯೊಬ್ಬರು ಮಾಹಿತಿಗಳನ್ನು ತಮಗೆ ಬೇಕಾದಾಗ ಸುಲಭ ರೀತಿಯಲ್ಲಿ ಪಡೆಯಬಹುದು ಎಂದು ತಿಳಿಸಿದರು. ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಬಿ.ಸುರೇಶ್ ಮಾತನಾಡಿ, ಹಳೆ ವ್ಯವಸ್ಥೆಯಿಂದ ಹೊಸ ಪದ್ಧತಿಗೆ ಹೋಗುವಾಗ ಸಮಸ್ಯೆಗಳು ಸಾಮಾನ್ಯ, ಈ ಹಿಂದೆ ವ್ಯಾಟ್ ಪದ್ಧತಿ ಜಾರಿಯಾದಾಗ ಎಲ್ಲೆಡೆ ವಿರೋಧ ವ್ಯಕ್ತವಾಗಿತ್ತು. ಈ ಸಾಫ್ಟ್‌ವೇರ್‌ವೂ ಹಾಗೆಯೇ. ಈ ವ್ಯಾಟ್‌ಆ್ಯಪ್‌ನಿಂದ ಸಾಕಷ್ಟು ಅನುಕೂಲವಿದೆ. ಹಾಗಾಗಿ ಇದನ್ನು ವ್ಯಾಪಾರಿಗಳು ಬಳಸಿಕೊಳ್ಳಬೇಕು ಎಂದು ಹೇಳಿದರು.
ಲೆಕ್ಕ ಪರಿಶೋಧಕ ದೇವರಾಜ್, ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೃಷ್ಣಾರೆಡ್ಡಿ ಮಾತನಾಡಿದರು. ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಉಪಾಧ್ಯಕ್ಷ ಎ.ಚಲಪತಿ, ವಾಣಿಜ್ಯ ಸಹಾಯಾಧಿಕಾರಿ ಮಹ್ಮದ್ ಇದ್ದರು. ಇಲಾಖೆಯ ಅಧಿಕಾರಿ ಪುರುಷೋತ್ತಮ್ ಸ್ವಾಗತಿಸಿ, ನಿರೂಪಿಸಿದರು.