ವಾಣಿಜ್ಯ ಸಂಕೀರ್ಣದಲ್ಲಿ ಶೌಚ ಶುಚಿತ್ವಕ್ಕೆ ಆದ್ಯತೆ
ಮಾಲೂರು: ಇಲ್ಲಿನ ಐಡಿ ಸಮಿತಿಯ ವಾಣಿಜ್ಯ ಸಂಕೀರ್ಣಕ್ಕೆ ಪುರಸಭೆ ಅಧ್ಯಕ್ಷೆ ಭಾರತಮ್ಮ ನಂಜುಂಡಪ್ಪ ಪುರಸಭೆ ಮುಖ್ಯಾಧಿಕಾರಿ ರೇಣುಕಾ ಅವರೊಡನೆ ಬುಧವಾರ ಭೇಟಿ ನೀಡಿ ಇಲ್ಲಿನ ಮೂಲ ಸೌಕರ್ಯಗಳನ್ನು ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪುರಸಭೆ ಮುಖ್ಯಾಧಿಕಾರಿ ರೇಣುಕಾ ಇಲ್ಲಿನ ವಾಣಿಜ್ಯ ಸಂಕೀರ್ಣದಲ್ಲಿ ಮಹಿಳೆಯರಿಗಾಗಿ ಶೌಚಾಲಯ, ಚರಂಡಿ ವ್ಯವಸ್ಥೆ ಮಾಡಲಾಗುವುದು. ಇದಲ್ಲದೇ ಸಂಕೀರ್ಣದ ಮೊದಲ ಅಂತಸ್ತಿನಲ್ಲಿ ಮಳಿಗೆ ನಿರ್ಮಿಸುವ ಇರಾದೆ ಇದೆ ಎಂದರು. ಯಾವೂದಾದರೂ ಖಾಸಗಿ ಬ್ಯಾಂಕ್ ಮುಂದೆ ಬಂದಲ್ಲಿ ಬ್ಯಾಂಕ್ ಕಟ್ಟಡವನ್ನು ಸಹ ಮೊದಲ ಅಂತಸ್ತಿನಲ್ಲಿ ನಿರ್ಮಿಸಿಕೊಡಲಾಗುವುದು ಎಂದರು. ಸಾರ್ವಜನಿಕರು ಓಡಾಡುವ ಸಂಕೀರ್ಣದ ಕಾರ್‌ಡಾರ್‌ನಲ್ಲಿ ಅಕ್ರಮವಾಗಿ ದ್ವಿಚಕ್ರ ವಾಹನ ಸೇರಿದಂತೆ ಇತರೆ ವಸ್ತುಗಳನ್ನು ಇಟ್ಟರೆ ಒಂದು ಸಾವಿರ ರು. ದಂಡ ವಿಧಿಸಲಾಗುವುದು ಎಂದರು. ಪುರಸಭೆ ಅಧ್ಯಕ್ಷೆ ಭಾರತಮ್ಮ ನಂಜುಂಡಪ್ಪ ಮಾತನಾಡಿ ಸಂಕೀರ್ಣ ನಿರ್ಮಿಸಿ ಹದಿನೈದು ವರ್ಷಗಳ ಮೇಲಾದರೂ ಇದುವರೆಗೂ ಮೂಲ ಸೌಕರ್ಯ ಕಲ್ಪಿಸಿ ಕೊಡದಿರುವುದು ಖೇದಕರ. ಇಲ್ಲಿ ಮಹಿಳಾ ಶೌಚಾಲಯ ಸೇರಿದಂತೆ ಶುಚಿತ್ವಕ್ಕೆ ಪ್ರಾಧಾನ್ಯತೆ ನೀಡಲಾಗುವುದು ಎಂದರು. ಇಲ್ಲಿನ ಸಂಕೀರ್ಣಕ್ಕೆ ಕಾವಲುಗಾರರನ್ನು ನೇಮಿಸಿ ಇಲ್ಲಿನ ಶುಚಿತ್ವ ಹಾಗೂ ರಕ್ಷಣೆಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದರು. ಉಪಾಧ್ಯಕ್ಷೆ ಶ್ರೀವಲ್ಲಿ ರಮೇಶ್, ಅಭಿಯಂತರ ಮಂಜುನಾಥ್, ಕಂದಾಯ ಅಧಿಕಾರಿ ಜ್ಯೋತಿ, ಬಾಬು ಇದ್ದರು.
ಅಕ್ರಮ ಮರಳು ಸಾಗಣೆ: ಆಯುಕ್ತರ ದಾಳಿ
ಕೋಲಾರ: ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಅಮ್ಮೇರಹಳ್ಳಿ ಕೆರೆಯಿಂದ ಮಣ್ಣು ಮತ್ತು ಮರಳು ಅಕ್ರಮವಾಗಿ ಸಾಗಣೆ ಮಾಡುತ್ತಿರುವ ಖಚಿತ ಮಾಹಿತಿ ಆಧರಿಸಿ, ನಗರಸಭೆಯ ಆಯುಕ್ತರು ಮತ್ತು ಸಿಬ್ಬಂದಿ ಬುಧವಾರ ದಾಳಿ ಮಾಡಿ, ಎರಡು ಟ್ರ್ಯಾಕ್ಟರ್ ಹಾಗೂ ಒಂದು ಜೆಸಿಬಿಯನ್ನು ವಶಪಡಿಸಿಕೊಂಡು ಗ್ರಾಮಾಂತರ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಆಯುಕ್ತ ಕೆ.ಎನ್.ಜಗದೀಶ್, ಆರೋಗ್ಯ ನಿರೀಕ್ಷಕ ರಮೇಶ್, ಕಂದಾಯ ಅಧಿಕಾರಿ ಚಲಪತಿ ಹಾಗೂ ಇನ್ನಿತರ ಸಿಬ್ಬಂದಿ ಬೆಳಿಗ್ಗೆ ಅಮ್ಮೇರಹಳ್ಳಿ ಕೆರೆಯಲ್ಲಿ ದಾಳಿ ಮಾಡಿದರು. ಗುತ್ತಿಗೆದಾರ ಸೊಣ್ಣೇಗೌಡ ಎಂಬುವರ ಸಂಬಂಧಿಗಳಾದ ಶಿವು ಮತ್ತು ಮಂಜು ಅವರು ಕೆರೆಯಲ್ಲಿ ಮಣ್ಣು ಮತ್ತು ಮರಳು ಸಾಗಿಸುತ್ತಿದ್ದರು. ಆರೋಪಿಗಳು ಅಧಿಕಾರಿಗಳನ್ನು ನೋಡಿ ವಾಹನಗಳನ್ನು ಬಿಟ್ಟು ಪರಾರಿಯಾಗಿದ್ದಾರೆ. ನಗರದ ಹೊರವಲಯದ ಕೋಡಿಕಣ್ಣೂರು ಕೆರೆ, ಅರಹಳ್ಳಿ ಕೆರೆಯ ಮೇಲೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.