ಕೋಲಾರದ ಸಿ.ಎಸ್.ಶ್ರೀಲತಾಗೆ ಇನ್ಸ್ಪೈರ್ ವಿದ್ಯಾರ್ಥಿ ವೇತನ
ಕೋಲಾರ: ಮೂಲ ವಿಜ್ಞಾನವೆಂದರೆ ಹಿಂಜರಿಯುವ ವಿದ್ಯಾರ್ಥಿಗಳು ಇರುವಾಗ ವಿದ್ಯಾರ್ಥಿನಿಯೊಬ್ಬರು ನಗರದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಬಿಎಸ್ಸಿಗೆ ದಾಖಲಾಗಿ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ನೀಡಲ್ಪಡುವ 1.20 ಲಕ್ಷ ರು.ಗಳ ಇನ್ಸ್ಪೈರ್ ವಿದ್ಯಾರ್ಥಿ ವೇತನ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ನಗರದ ಸರ್ಕಾರಿ ಮಹಿಳಾ ಕಾಲೇಜಿನ ದ್ವಿತೀಯ ಬಿಎಸ್ಸಿ ವಿದ್ಯಾರ್ಥ್ಥಿನಿಯಾಗಿರುವ ಕೋಲಾರ ಜಯನಗರದ ಸಿ.ಎಲ್. ಶ್ರೀನಿವಾಸಲು, ಡಿ.ಎನ್. ಲಕ್ಷ್ಮಿ ದಂಪತಿ ಪುತ್ರಿ ಸಿ.ಎಸ್.ಶ್ರೀಲತಾ ಈ ಸಾಧನೆ ಮಾಡಿರುವ ವಿದ್ಯಾರ್ಥಿನಿ. ಇತ್ತೀಚಿನ ದಿನಗಳಲ್ಲಿ ಪೋಷಕರು ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಶಿಕ್ಷಣಕ್ಕೆ ತಮ್ಮ ಮಕ್ಕಳನ್ನು ಸೇರಿಸುವುದೇ ಘನತೆಯೆಂದು ಮೂಲವಿಜ್ಞಾನ ಹಾಗೂ ಇತರೆ ಪದವಿ ಶಿಕ್ಷಣದಿಂದ ದೂರವಾಗುತ್ತಿರುವಾಗ ಶ್ರೀಲಲಿತಾ ಮೂಲ ವಿಜ್ಞಾನದಲ್ಲೇ ಪದವಿ ಮಾಡುವ ಹಂಬಲದೊಂದಿಗೆ ಬೃಹತ್ ಮೊತ್ತದ ವಿದ್ಯಾರ್ಥಿ ವೇತನಕ್ಕೂ ಬಾಜನಳಾಗಿದ್ದಾಳೆ. ಸರ್ಕಾರಿ ಮಹಿಳಾ ಕಾಲೇಜಿನ ಇತಿಹಾಸದಲ್ಲೇ ಮೊದಲ ಬಾರಿಗೆ ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಇನ್ಸ್ಪೈರ್ನ ಉನ್ನತ ಶಿಕ್ಷಣ ವಿದ್ಯಾರ್ಥಿ ವೇತನಕ್ಕೆ ಶ್ರೀಲತಾ ಅರ್ಹಳಾಗಿದ್ದು, ಮೂಲ ವಿಜ್ಞಾನವನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಇನ್ಸ್ಪೈರ್ ವಿದ್ಯಾರ್ಥಿ ವೇತನವನ್ನು ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳ ಸಾಧನೆ ಮಾಡಿ ಮೂಲವಿಜ್ಞಾನಕ್ಕೆ ಸೇರಿದ ಇಡೀ ರಾಜ್ಯದ ಶೇ.1 ರಷ್ಟು ಮಂದಿಗೆ ನೀಡುತ್ತಿದ್ದು, ಇದರಲ್ಲಿ ಕೋಲಾರದ ಈ ವಿದ್ಯಾರ್ಥಿನಿಯೂ ಸೇರಿರುವುದರ ಕುರಿತು ಮಹಿಳಾ ಕಾಲೇಜಿನ ಪ್ರಾಂಶುಪಾಲ ಆಂಜಿನಪ್ಪ ಸಂತಸ ವ್ಯಕ್ತಪಡಿಸಿದ್ದಾರೆ.