ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಡಿಡಿಪಿಐಗೆ ನೋಟಿಸ್ ಜಾರಿ ಮಾಡಲು ಆದೇಶ

Srinivasa Murthy VN
Updated On : 12 Jun 2014, 1:35 am

ಕೋಲಾರ: ಶಿಕ್ಷಣ ಇಲಾಖೆ ಕಾರ್ಯವೈಖರಿ ತೃಪ್ತಿ ತಂದಿಲ್ಲ,ಇಲಾಖೆಯ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕೆಡಿಪಿಗೆ ಸಭೆಗೆ ಮಾಹಿತಿ ನೀಡಲು ವಿಫಲರಾಗಿರುವ ಡಿಡಿಪಿಐಗೆ ಶೋಕಾಸ್ ನೋಟಿಸ್ ಜಾರಿ ಮಾಡಿ, ಸೂಕ್ತವಾದ ಉತ್ತರ ಬರದಿದ್ದರೆ ಕ್ರಮಕ್ಕೆ ಸರ್ಕಾರಕ್ಕೆ ಶಿಫಾರಸ್ಸು ಮಾಡುವಂತೆ ಜಿಲ್ಲಾ ಪಂಚಾಯಿತಿ ಪ್ರಭಾರ ಅಧ್ಯಕ್ಷ ಜಿ.ಕೆ. ನಾಗರಾಜ್ ಜಿಪಂ ಸಿಇಒಗೆ ಸೂಚಿಸಿದರು.
ನಗರದ ಜಿ.ಪಂ.ಸಭಾಂಗಣದಲ್ಲಿ ಬುಧವಾರ ನಡೆದ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಕೆಡಿಪಿ ಸಭೆಗೆ ಬರುವಾಗ ಸಮಗ್ರ ಮಾಹಿತಿಯೊಂದಿಗೆ ಬನ್ನಿ ಎಂದು ಸೂಚಿಸಿದ್ದರೂ ನಿಯಮ ಪಾಲನೆ ಮಾಡಿಲ್ಲ, ಡಿಡಿಪಿಐ ಅವರು ತಮ್ಮ ಕರ್ತವ್ಯವನ್ನು ಸರಿಯಾಗಿ ಪಾಲಿಸದೆ ನಿರ್ಲಕ್ಷ್ಯ ತೋರಿದ್ದಾರೆಂದು ಗುಡುಗಿದರು.
ಸರ್ಕಾರ ತನ್ನ ಬಜೆಟ್‌ನಲ್ಲಿ ಶಿಕ್ಷಣ ಇಲಾಖೆಗೆ ಹೆಚ್ಚಿನ ಅನುದಾನ ಒದಗಿಸಿದೆ, ಜಿಲ್ಲೆಗೆ ಬಿಡುಗಡೆ ಆಗಿರುವ ಅನುದಾನ, ವೆಚ್ಚಗಳ ಮಾಹಿತಿ ನೀಡಲು ಆಗದಿದ್ದ ಮೇಲೆ ಸಭೆಗೆ ಏಕೆ ಬಂದಿದ್ದೀರಿ ಎಂದು ಡಿಡಿಪಿಐ ಪದ್ಮನಾಭ್ ಅವರನ್ನು ತರಾಟೆಗೆ ತೆಗೆದುಕೊಂಡರು. ಕಳೆದೆರೆಡು ದಿನಗಳಿಂದ ಬೆಂಗಳೂರಿನಲ್ಲಿ ನಿರಂತರವಾಗಿ ಸಭೆಗಳು ನಡೆಯುತ್ತಿದೆ, ಹಾಗಾಗಿ ಮಾಹಿತಿ ನೀಡಲಾಗಿಲ್ಲ ಎಂದು ಡಿಡಿಪಿಐ ಉತ್ತರಿಸಿದಾಗ ಕುಪಿತರಾದ ಪ್ರಭಾರ ಅಧ್ಯಕ್ಷ ನಾಗರಾಜ್, ಸಾಬೂಬು ಹೇಳಬೇಡಿ, ಜೂ.5 ರೊಳಗೆ ಇಲಾಖೆಯ ಪ್ರಗತಿಯ ಮಾಹಿತಿಯನ್ನು ನೀಡುವಂತೆ ಸಿಇಒ ಕಡೆಯಿಂದ ಸೂಚಿಸಲಾಗಿದೆ. ಕರ್ತವ್ಯ ನಿರ್ವಹಿಸಲಾಗದೆ ಸುಳ್ಳು ಹೇಳುತ್ತಿದ್ದೀರಾ ಎಂದು ಸಿಡಿಮಿಡಿಗೊಂಡರು.
2013-14ನೇ ಸಾಲಿನ ಕರ್ನಾಟಕ ದರ್ಶನ ಕಾರ್ಯಕ್ರಮದಡಿಯಲ್ಲಿ ವಿದ್ಯಾರ್ಥಿಗಳನ್ನು ಪ್ರವಾಸ ಕರೆದುಕೊಂಡು ಹೋಗಲು ಸರ್ಕಾರದಿಂದ ಸುಮಾರು 33 ಲಕ್ಷ ಬಿಡುಗಡೆಯಾಗಿದೆ. ಆದರೆ ಇದುವರೆಗೂ ಕರೆದುಕೊಂಡು ಹೋಗಿಲ್ಲವೆಂದು ಆರೋಪಿಸಿದರು. ಸರ್ಕಾರ ಫೆಬ್ರವರಿಯಲ್ಲಿ ಹಣ ಬಿಡುಗಡೆ ಮಾಡಿದ್ದು, ಜೂನ್ ಕಳೆಯುತ್ತಾ ಬರುತ್ತಿದ್ದರೂ ವಿದ್ಯಾರ್ಥಿಗಳನ್ನು ಪ್ರವಾಸ ಕರೆದುಕೊಂಡು ಹೋಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಿ.ಪಂ. ಸಿಇಒ ವಿನೋತ್‌ಪ್ರಿಯಾ ಮಾತನಾಡಿ, ಜೂ.15 ರೊಳಗೆ ಮಕ್ಕಳನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗುವುದಾಗಿ ನೀವು ತಿಳಿಸಿದ್ದು, ಇದುವರೆಗೂ ರಸ್ತೆಯ ನಕ್ಷೆ, ವಿದ್ಯಾರ್ಥಿಗಳ ಹೆಸರು, ಪೋಷಕರ ಹೆಸರನ್ನು ನೀಡಿಲ್ಲವೆಂದು ದೂರಿದರು. ಎಸ್ಸಿ,ಎಸ್ಟಿ ವಿದ್ಯಾರ್ಥಿಗಳಿಗೆ ಪ್ರತಿಷ್ಥಿತ ಶಾಲೆಗಳಲ್ಲಿ ಅವಕಾಶ ಕಲ್ಪಿಸಿಕೊಡಬೇಕೆಂಬ ಸರ್ಕಾರದ ನಿಯಮವಿದ್ದು, ಎಷ್ಟು ಮಕ್ಕಳಿಗೆ ಅವಕಾಶ ಕಲ್ಪಿಸಿದ್ದೀರಿ, ಮಕ್ಕಳ ಸಂಪೂರ್ಣ ಮಾಹಿತಿಯನ್ನು ನೀಡಬೇಕೆಂದು ಸೂಚಿಸಿದರು. ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎಸ್.ಆನಂದ್ ಮಾತನಾಡಿ, ಜಿಲ್ಲೆಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳಿಂದ ಡೊನೇಷನ್ ಹಾವಳಿ ಹೆಚ್ಚಾಗಿದ್ದು, ಇವರ ಮೇಲೆ ಸೂಕ್ತ ಕೈಗೊಳ್ಳಬೇಕೆಂದರು.
ಡಿಡಿಪಿಐ ಪದ್ಮನಾಭ್ ಮಾತನಾಡಿ, ಈಗಾಗಲೇ ಎಲ್ಲಾ ಶಾಲೆಗಳಿಗೆ ಭೇಟಿ ನೀಡಿ ಸರ್ಕಾರ ನಿಗದಿ ಮಾಡಿರುವ ಶುಲ್ಕ ಪಟ್ಟಿಯನ್ನು ಶಾಲೆಗಳ ಮುಂದೆ ಪ್ರಕಟಿಸುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು. ಜಿಲ್ಲೆಯಲ್ಲಿ 52 ವಾರ್ಡನ್‌ಗಳಿಗೆ 27 ಜನವಿದ್ದರೆ, ಮ್ಯಾನೇಜರ್ ಇಲ್ಲ, ತಾಲೂಕು ಅಧಿಕಾರಿಗಳ ಕೊರತೆಯಿದೆ ಎಂದು ಇಲಾಖೆಯ ಸಮಸ್ಯೆಯನ್ನು ಬಿಸಿಎಂ ಅಧಿಕಾರಿ ಅಧ್ಯಕ್ಷರ ಗಮನಕ್ಕೆ ತಂದರು. ಕೃಷಿ, ತೋಟಗಾರಿಕೆ, ಆರೋಗ್ಯ ಇಲಾಖೆಯ ಪ್ರಗತಿ ಪರಿಶೀಲನೆ ಮಾಡಲಾಯಿತು. ಜಿ.ಪಂ. ಮುಖ್ಯ ಯೋಜನಾಧಿಕಾರಿ ಆರೋಕ್ಯ ಸ್ವಾಮಿ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement