ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಬೇತಮಂಗಲಕ್ಕೆ ಯಾವಾಗ ತಾಲೂಕು ಭಾಗ್ಯ?

Srinivasa Murthy VN
Updated On : 12 Jun 2014, 1:37 am

ಬಂಗಾರಪೇಟೆ: ಬೇತಮಂಗಲ ಹೋಬಳಿಯನ್ನು  ತಾಲೂಕು ಕೇಂದ್ರವನ್ನಾಗಿ ರಚಿಸುವಂತೆ ತಾಲೂಕು ಹೋರಾಟ ಸಮಿತಿ ಹೋರಾಟ ಮಾಡುತ್ತಿದ್ದರೂ ಸರ್ಕಾರ ಕಿವಿ ಕೊಡುತ್ತಿಲ್ಲ.
ಬೇತಮಂಗಲ ಹಾಗೂ ಕ್ಯಾಸಂಬಳ್ಳಿ ಹೋಬಳಿಗಳು ಘಟಾನುಘಟಿಗಳನ್ನೇ ರಾಜಕೀಯ ಕ್ಷೇತ್ರಕ್ಕೆ ಕೊಡುಗೆಯಾಗಿ ನೀಡಿವೆ. ರಾಜ್ಯದ ಪ್ರಥಮ ಮುಖ್ಯಮಂತ್ರಿ ಕೆ.ಸಿ. ರೆಡ್ಡಿ, ಕೇಂದ್ರದ ಮಾಜಿ ಸಚಿವ ಎಂ.ವಿ. ಕೃಷ್ಣಪ್ಪ, ಮಾಜಿ ಶಾಸಕರಾದ ಎಂ.ನಾರಾಯಣಸ್ವಾಮಿ, ದೊರೆಸ್ವಾಮಿನಾಯ್ಡು ಸೇರಿದಂತೆ ಅನೇಕ ಪ್ರಭಾವಿ ರಾಜಕಾರಣಿಗಳಿದ್ದಾರೆ. ಇಷ್ಟೆಲ್ಲಾ ಇದ್ದರೂ ಪ್ರತ್ಯೇಕ ತಾಲೂಕು ಕೇಂದ್ರವನ್ನಾಗಿ ರಚಿಸಲು ಸಾಧ್ಯವಾಗಿಲ್ಲ. ಇದಕ್ಕೆ ಜನಪ್ರತಿನಿಧಿಗಳ ಇಚ್ಚಾಶಕ್ತಿ ಕೊರತೆಯೇ ಕಾರಣ. 2008ರಲ್ಲಿ ಕ್ಷೇತ್ರಗಳ ಮರುವಿಂಗಡನೆಯಲ್ಲಿ ಬೇತಮಂಗಲ ವಿಧಾನಸಭೆ ಕ್ಷೇತ್ರ ಮಾಯವಾಗಿ ಬಂಗಾರಪೇಟೆ ರಚನೆಯಾಯಿತು. ಬೇತಮಂಗಲ, ಕ್ಯಾಸಂಬಳ್ಳಿ ಹೋಬಳಿಗಳು ಕೆಜಿಎಫ್ ವಿಧಾನಸಭೆ ಕ್ಷೇತ್ರಕ್ಕೆ ಸೆರ್ಪಡೆಯಾಯಿತು.
ಈ ವೇಳೆ ಬೇತಮಂಗಲವನ್ನು ಪ್ರತ್ಯೇಕ ತಾಲೂಕು ಕೇಂದ್ರವನ್ನಾಗಿ ಮಾಡಿ ಎಂಬ ಕೂಗು ಕೇಳಿ ಬಂದರೂ ಫಲಕಾರಿಯಾಗಿಲ್ಲ. ಎಲ್ಲಾ ಪ್ರಮುಖ ಇಲಾಖೆಗಳ ಕಚೇರಿಗಳೂ ಪಟ್ಟಣದಲ್ಲೇ ಇರುವುದರಿಂದ ಜನರು ಅಲೆಯುವುದು ತಪ್ಪಿಲ್ಲ. ಬೇತಮಂಗಲ ಪ್ರತ್ಯೇಕ ತಾಲೂಕು ಕೇಂದ್ರ ಬೇಕೆಂದು ಹೋರಾಟ ಸಮಿತಿ ಹಲವು ಬಾರಿ ಬೇತಮಂಗಲ ಬಂದ್ ಆಚರಣೆ ಮಾಡಿ  ಮುಖ್ಯಮಂತ್ರಿಗಳಿಗೆ ಪತ್ರ ಚಳವಳಿ ಕೈಗೊಂಡಿದ್ದರೂ ಸರ್ಕಾರದ ಕಿವಿಗೆ ತಲುಪಿಲ್ಲ. ಎರಡು ವರ್ಷಗಳ ಹಿಂದೆ ಬೆಳಗಾವಿ ಜಿಲ್ಲೆಯ ಕಿತ್ತೂರನ್ನು ಪ್ರತ್ಯೇಕ ತಾಲೂಕು ಕೇಂದ್ರ ಮಾಡಿದಾಗಲೂ ಇಲ್ಲಿನ ಜನರು ಬೇತಮಂಗಲ ತಾಲೂಕು ಕೇಂದ್ರಕ್ಕಾಗಿ ಹೋರಾಟ ಮಾಡಿದರೂ ಸರ್ಕಾರ ಕಣ್ಣು ತೆರೆದಿಲ್ಲ. ಈ ಭಾಗದ ಶಾಸಕರು ಹಾಗೂ ಸಂಸದ ಕೆ.ಎಚ್. ಮುನಿಯಪ್ಪ ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಲೆ ಒತ್ತಡ ಹೇರಿ ಪ್ರತ್ಯೇಕ ತಾಲೂಕು ಕೇಂದ್ರವನ್ನಾಗಿ ಬೇತಮಂಗಲವನ್ನು ರಚಿಸುವಂತೆ ಕ್ರಮ ಕೈಗೊಳ್ಳುಬೇಕೆಂದು ಜನರು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement