ಮಳಿಗೆಗಳ ಹರಾಜು: ನಗರಸಭೆಗೆ 1.86 ಕೋಟಿ ವರಮಾನ
ಕೋಲಾರ: ನಗರದ ಹಳೇ ಬಸ್ ನಿಲ್ದಾಣದಲ್ಲಿ ಐಡಿಎಸ್‌ಎಂಟಿ ಯೋಜನೆಯಡಿ ನೂತನವಾಗಿ ನಿರ್ಮಿಸಿರುವ 18 ಮಳಿಗೆಗಳನ್ನು ಬುಧವಾರ ಹರಾಜು ಮೂಲಕ ವಿಲೇವಾರಿ ಮಾಡಲಾಯಿತು. ನಗರಸಭೆ ಅಧ್ಯಕ್ಷ ಮುಬಾರಕ್ ಅಧ್ಯಕ್ಷತೆಯಲ್ಲಿ ನಡೆದ ಮಳಿಗೆಗಳ ಹರಾಜು ಪ್ರಕ್ರಿಯೆಯಲ್ಲಿ 181 ಮಂದಿ ಬಿಡ್‌ದಾರರು ಭಾಗವಹಿಸಿದ್ದರು, ಒಟ್ಟು 1.86 ಕೋಟಿ ರು. ಮುಂಗಡ ಹಣ (ಅಡ್ವಾನ್ಸ್ ಹರಾಜು ಮೂಲಕ ಸಂಗ್ರಹಣೆಯಾಗಿದ್ದು ಈ ಹಣ ನಗರಸಭೆಯ ಅಭಿವೃದ್ಧಿ ಕಾರ್ಯಗಳಿಗೆ ಅನುಕೂಲವಾಗುತ್ತದೆ ಎಂದು ಅಧ್ಯಕ್ಷರ ಆಶಯವಾಗಿದೆ. 2011ರಲ್ಲಿ ಈ ಮಳಿಗೆಗಳನ್ನು ನಿರ್ಮಿಸಲಾಗಿತ್ತಾದರೂ ಕಾರಣಾಂತರಗಳಿಂದ ಹರಾಜು ಆಗಿರಲಿಲ್ಲ, ಜಿಲ್ಲಾಧಿಕಾರಿ ಡಿ.ಕೆ. ರವಿಯವರು ಆದಷ್ಟು ಬೇಗನೆ ಮಳಿಗೆಗಳನ್ನು ಹರಾಜು ಹಾಕಿ ಅದರಿಂದ ಬರುವ ವರಮಾನದಿಂದ ಜನರಿಗೆ ಮೂಲ ಸೌಕರ್ಯ ಕಲ್ಪಿಸುವಂತೆ 7.1.2014ರಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸಲಹೆ ನೀಡಿದರಲ್ಲದೆ 31.1.2014ರಲ್ಲಿ ಹರಾಜಿಗೆ ಅನುಮತಿ ನೀಡಿದ್ದರು. ಆದರೆ, ಲೋಕಸಭಾ ಚುನಾವಣೆ ಇನ್ನಿತರ ಕಾರಣಗಳಿಂದ ಹರಾಜು ಪ್ರಕ್ರಿಯೆ ನಡೆಸಲು ಆಗಿರಲಿಲ್ಲ. ಇದೀಗ ಮಳಿಗೆಗಳ ವಿಲೇವಾರಿಗೆ ಮುಹೂರ್ತ ಕೂಡಿ ಬಂದ ಹಿನ್ನಲೆಯಲ್ಲಿ ಬುಧವಾರ 18 ಮಳಿಗೆಗಳನ್ನು ಯಾವುದೇ ಗೊಂದಲ,ವಿವಾದಕ್ಕೆ ಆಸ್ಪದವಿಲ್ಲದ ರೀತಿಯಲ್ಲಿ ಬಿಡ್‌ದಾರರ ಸಮ್ಮುಖದಲ್ಲಿ ಹರಾಜು ಮಾಡಲಾಯಿತು.