ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಲು ಹಿಂದೇಟು: ಆರೋಪ
ಚಿಕ್ಕಬಳ್ಳಾಪುರ: ಸರ್ಕಾರಿ ಆಸ್ಪತ್ರೆಗಳಲ್ಲಿ ಗರ್ಭಿಣಿಯರಿಗೆ ಹೆರಿಗೆ ಮಾಡಿಸದೇ ಖಾಸಗಿ ಆಸ್ಪತ್ರೆಗಳಿಗೆ ಕಳುಹಿಸಲಾಗುತ್ತಿದೆ. ಈ ಆಸ್ಪತ್ರೆಗಳಲ್ಲಿ ಹೆರಿಗೆಗೆ ಸಿಜೇರಿಯನ್ ಮಾಡುತ್ತಿದ್ದು ಮಹಿಳೆಯರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಜಿ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷೆ ರಜನಿ ವೇಣುಗೋಪಾಲ ರೆಡ್ಡಿ ಆರೋಪಿಸಿದರು.
ಜಿ.ಪಂ. ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ಏನೂ ಸಮಸ್ಯೆ ಇಲ್ಲದಿದ್ದರೂ ಸಹ ಬೆಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ಸಾಗ ಹಾಕುತ್ತಿದ್ದಾರೆ. ಅಲ್ಲಿನ ಖಾಸಗಿ ಆಸ್ಪತ್ರೆಗಳವರು ರು. 25 ಸಾವಿರದಿಂದ 45 ಸಾವಿರದವರೆಗೆ ಬಿಲ್ ಮಾಡಿ ಹೆರಿಗೆ ಮಾಡಿಸುತ್ತಿದ್ದಾರೆ ಎಂದು ಆರೋಪಿಸಿದರು. ಇದಕ್ಕೆ ಧ್ವನಿಗೂಡಿಸಿದ ಜಿ.ಪಂ. ಅಧ್ಯಕ್ಷ ಕೇಶವರೆಡ್ಡಿ, ಸರ್ಕಾರಿ ವೈದ್ಯರು ತಮ್ಮ ಮೇಲೆ ಜವಾಬ್ದಾರಿ ಬೀಳಬಾರದು. ಸುಮ್ಮನೆ ಏಕೆ ರಿಸ್ಕ್ ತೆಗೆದುಕೊಳ್ಳಬೇಕೆಂಬ ಭಾವನೆಯಲ್ಲಿ ಈ ರೀತಿ ವರ್ತಿಸುತ್ತಿದ್ದಾರೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಂಗಸ್ವಾಮಿ, ಸಾರ್ಕರಿ ಆಸ್ಪತ್ರೆಗಳಲ್ಲಿ ಹೆರಿಗೆ ಮಾಡಿಸಲಾಗುತ್ತಿದೆ. ಆದರೂ ಸಹ ಕೆಲವೆಡೆ ಸ್ತ್ರೀ ರೋಗ ತಜ್ಞರು ಇಲ್ಲದ ಕಾರಣ ಈ ರೀತಿಯ ಸಮಸ್ಯೆ ಉಂಟಾಗುತ್ತಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಕ್ಯಾಮೆರಾ ಅಳವಡಿಸಿ
ಸರ್ಕಾರಿ ಆಸ್ಪತ್ರೆಗಳಲ್ಲಿ ಅವ್ಯವಹಾರಗಳು, ಗೊಂದಲಗಳು ನಡೆಯುತ್ತಿರುವುದರ ಬಗ್ಗೆ ಆರೋಪಗಳು ಹೆಚ್ಚಿಗೆ ಕೇಳಿ ಬರುತ್ತಿದ್ದು ಇವುಗಳ ನಿಯಂತ್ರಣಕ್ಕೆ ತಾಲೂಕು ಆಸ್ಪತ್ರೆಗಳಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸಬೇಕೆಂದು ಜಿ.ಪಂ.ಅಧ್ಯಕ್ಷ ಕೇಶವರೆಡ್ಡಿ ಸೂಚನೆ ನೀಡಿದರು.
ತಾಲೂಕು ಆಸ್ಪತ್ರೆಗಳಲ್ಲಿ ಕೆಲ ಮಧ್ಯವರ್ತಿಗಳಿಂದ ಸಮಸ್ಯೆಯಾಗುತ್ತಿದೆ. ಜನರು ಸಹ ಸುಲಿಗೆ ಗುರಿಯಾಗುತ್ತಿರುವುದರ ಜೊತೆಗೆ ವೈದ್ಯರು ಸಹ ಕಿರಿಕಿರಿಯನ್ನು ಅನುಭವಿಸುತ್ತಿದ್ದಾರೆ. ರೋಗಿಗಳು ಮಾತ್ರವಲ್ಲ, ಆಸ್ಪತ್ರೆಯಲ್ಲಿ ತಮ್ಮ ಅವ್ಯವಹಾರ ನಡೆಸಿ ಲಾಭವನ್ನು ಪಡೆದುಕೊಳ್ಳಲು ಕೆಲವರು ಬರುತ್ತಿರುತ್ತಾರೆ. ವೈದ್ಯರ ಬಳಿಗೆ ಕರೆದುಕೊಂಡು ಹೋಗಿ ಬೇಗ ಚಿಕಿತ್ಸೆಯನ್ನು ಕೊಡಿಸುವುದಾಗಿ ಹೇಳಿ ಹಣವನ್ನು ಪಡೆದುಕೊಳ್ಳುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು. ಈ ನಿಟ್ಟಿನಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಗತ್ಯವಿರುವಡೆ ಅಳವಡಿಸಿದರೆ ಇಂತಹ ಬೆಳವಣಿಗೆಗಳು ನಿಯಂತ್ರಣಕ್ಕೆ ಬರುತ್ತದೆ ಎಂದರು.