ಇಒ ವಿರುದ್ಧ ಸಿಡಿದೆದ್ದ ಪಿಡಿಒಗಳು
ಚಿಂತಾಮಣಿ: ತಾಲೂಕು ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿ ವಸಂತ್ಕುಮಾರ್ ಹಣಕ್ಕಾಗಿ ಪೀಡಿಸುತ್ತಾರೆ. ದೈಹಿಕವಾಗಿ ಮತ್ತು ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಶುಕ್ರವಾರ ಗ್ರಾಮ ಪಂಚಾಯ್ತಿ ಅಧಿಕಾರಿಗಳು ಕಾರ್ಯ ಕಲಾಪ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.
ತಾಲೂಕಿನ 34 ಗ್ರಾಮ ಪಂಚಾಯ್ತಿಗಳ ಅಭಿವೃದ್ಧಿ ಅಧಿಕಾರಿಗಳು ಹಾಗೂ ಕಾರ್ಯದರ್ಶಿಗಳು, ತಾಲೂಕು ಕಚೇರಿ ಮುಂಭಾಗದಿಂದ ಪ್ರತಿಭಟನೆ ನಡೆಸಿ, ನಂತರ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ನಿವಾಸದವರೆಗೂ ಸಾಮೂಹಿಕವಾಗಿ ಪಾದಯಾತ್ರೆ ತೆರಳಿ ಮನವಿ ಸಲ್ಲಿಸಿದರು.
ಈ ವೇಳೆ ಗ್ರಾಪಂ ಅಧಿಕಾರಿಗಳು ಹಾಗೂ ಸಿಬ್ಬಂದಿ ಶಾಸಕ ದೂರಿನಲ್ಲಿ ತಿಳಿಸಿರುವಂತೆ ಇಒ ವಸಂತಕುಮಾರ್ ಹಣಕ್ಕಾಗಿ ನಮ್ಮ ಪೀಡಿಸುತ್ತಿದ್ದಾರೆ. ಅವರಿದಂ ನಾವು ಮಾನಸಿಕವಾಗಿ ಹಿಂಸೆ ಅನುಭವಿಸುತ್ತಿದ್ದೇವೆ. ದಿನ ನಿತ್ಯದ ಕಲಾಪ ನಡೆಸುವುದು ಕಷ್ಟ. ಹಣ ನೀಡದಿದ್ದರೆ, ಶಿಸ್ತುಕ್ರಮಕ್ಕೆ ಶಿಫಾರಸು ಮಾಡುವುದಾಗಿ ಬೆದರಿಸುತ್ತಾರೆ. ತಮ್ಮ ಮೊಬೈಲ್ಗೆ 500 ಕರೆನ್ಸಿ ಹಾಕಿಸುವಂತೆ ಬೇಡಿಕೆ ಇಡುತ್ತಾರೆ. ಅಲ್ಲದೆ, ಅವರ ಸ್ವಂತ ಕೆಲಸಕ್ಕಾಗಿ ಟ್ಯಾಕ್ಸಿ ಕಳುಹಿಸುವಂತೆ ಕೋರುತ್ತಾರೆ. ರಾತ್ರಿ 11 ಗಂಟೆ ನಂತರ ಮಹಿಳಾ ನೌಕರರಿಗೆ ಕರೆ ಮಾಡಿ ಅಸಭ್ಯ ರೀತಿಯಲ್ಲಿ ಮಾತನಾಡುತ್ತಾರೆ. ಸಾರ್ವಜನಿಕರ ಮುಂದೆ ಹಾಗೂ ಸಭೆಯಲ್ಲಿ ಹಣ ನೀಡದ ನೌಕರರನ್ನು ಉದ್ದೇಶ ಪೂರ್ವಕವಾಗಿ ಅವಾಚ್ಯವಾಗಿ ನಿಂದಿಸುತ್ತಾರೆ. ಆದ್ದರಿಂದ ಕೂಡಲೇ ಅವರನ್ನು ವರ್ಗ ಮಾಡಬೇಕು ಇಲ್ಲವೇ ಅಮಾನತುಗೊಳಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಶಾಸಕರು ಮನವಿ ಸ್ವೀಕರಿಸಿ, ಈ ಬಗ್ಗೆ ಗ್ರಾಮೀಣಾಭಿವೃದ್ಧಿ ಸಚಿವರಿಗೆ ಈಗಾಗಲೇ ಮೌಖಿಕವಾಗಿ ಹಾಗೂ ಲಿಖಿತ ರೂಪದಲ್ಲಿ ಮಾಹಿತಿ ನೀಡಲಾಗಿದೆ. ಅವರ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡುತ್ತೇನೆ ಎಂದು ಭರವಸೆ ನೀಡಿದರು.
ಈ ವೇಳೆ, ಸರ್ಕಾರಿ ನೌಕರರ ಸಂಘ ಅಧ್ಯಕ್ಷ ನಂಜರೆಡ್ಡಿ, ಪಿಡಿಓ ಪ್ರಶಾಂತ್, ಮಂಜುನಾಥ್, ಶಿವಣ್ಣ, ಮೋಹನ್ಕುಮಾರ್, ರವಿ, ಲಕ್ಷ್ಮಿನಾರಾಯಣ, ಸುರೇಶ್, ಕಾರ್ಯದರ್ಶಿಗಳಾದ ಧ್ರುವರಾಜ್, ಭಾಗ್ಯಮ್ಮ, ಕೆ.ಸಿ.ರೇಣುಕಾ, ಮದ್ದಿರೆಡ್ಡಿ, ರಾಮಚಂದ್ರಪ್ಪ, ವೆಂಕಟೇಶ್, ಲಕ್ಷ್ಮಣ್, ಕೃಷ್ಣಪ್ಪ, ನಾರಾಯಣಸ್ವಾಮಿ,ನಾಗರಾಜಗೌಡ, ಚೌಡಪ್ಪ ತಾಲೂಕಿನ ಎಲ್ಲಾ ಪಿಡಿಒಗಳು, ಕಾರ್ಯದರ್ಶಿಗಳು, ಬಿಲ್ಕಲೆಕ್ಟರ್ಗಳು ಸೇರಿದಂತೆ ಎಲ್ಲ ಸಿಬ್ಬಂದಿ ಹಾಜರಿದ್ದರು.
ಪ್ರಗತಿ ಪರಿಶೀಲನಾ ಸಭೆ ಬಹಿಷ್ಕಾರ
ಚಿಂತಾಮಣಿ: ತಾಪಂ ಇಒ ವಸಂತಕುಮಾರ್ ಅವರ ಕಾರ್ಯವೈಖರಿಗೆ ಬೇಸತ್ತು ತಾಲೂಕಿನ ಪಿಡಿಒಗಳು ಹಾಗೂ ಕಾರ್ಯದರ್ಶಿಗಳು ಶುಕ್ರವಾರ ನಡೆದ ಪ್ರಗತಿ ಪರಿಶೀಲನಾ ಸಭೆಗೆ ಹಾಜರಾಗದೆ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ತಾಪಂ ಮುಂಭಾಗದಲ್ಲಿ ಇಓ ವಸಂತ್ಕುಮಾರ್ ವಿರುದ್ಧ ದಿಕ್ಕಾರ ಕೂಗಿ, ವಸಂತಕುಮಾರ್ ವರ್ಗಾವಣೆಗೆ ಮಾಡಬೇಕು ಇಲ್ಲವೇ ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದರು.
ಈ ವೇಳೆ ಮಾತನಾಡಿದ ತಾಲೂಕು ನೌಕರರ ಸಂಘಧ ಅಧ್ಯಕ್ಷ ನಂಜರೆಡ್ಡಿ ಅವರು, ದಿನ ನಿತ್ಯ ಗ್ರಾಪಂ ಗಳಲ್ಲಿ ಕೆಲಸ ಕಾರ್ಯ ಮನಸ್ಪೂರ್ವಕವಾಗಿ ಕೆಲಸ ಮಾಡಲು ಬಿಡುತ್ತಿಲ್ಲ. ಆದ್ದರಿಂದ ಪ್ರತಿ ದಿನ ಒಂದಲ್ಲಾ ಒಂದು ರೀತಿಯಲ್ಲಿ ಮಾನಸಿಕ ಹಿಂಸೆ ಕೊಡುತ್ತಿರುವ ಇವರನ್ನು ಕೂಡಲೇ ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿದರು. ಅಲ್ಲಿಯವರೆಗೂ ತಾಲೂಕಿನ 31 ಗ್ರಾಪಂ ಪಿಡಿಒಗಳು ಹಾಗೂ ಕಾರ್ಯದರ್ಶಿಗಳು ಸರ್ಕಾರಿ ಕೆಲಸವನ್ನು ಸಾಮೂಹಿಕವಾಗಿ ಬಹಿಷ್ಕರಿಸಲಿದ್ದಾರೆ ಎಂದು ತಿಳಿಸಿದರು. ನಂತರ ಪಿಡಿಓ ರವಿ ಮಾತನಾಡಿದರು.
ನಂತರ ತಾಪಂ ಕಚೇರಿಯಿಂದ ಹೊರ ಬಂದ ಎಲ್ಲ ಪಿಡಿಒಗಳು ತಾಪಂ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು.
ಈ ವೇಳೆ, ಪಿಡಿಓ ಶಿವಣ್ಣ, ರವಿಕುಮಾರ್, ವಸಂತ್ಕುಮಾರ್, ಕೆ.ಸಿ.ರೇಣುಕಾ, ಭಾಗ್ಯಮ್ಮ, ಮದ್ದಿರೆಡ್ಡಿ, ಧ್ರವರಾಜ್, ರಾಮಚಂದ್ರಪ್ಪ, ಲಕ್ಷ್ಮಿನಾರಾಯಣ, ಲಕ್ಷ್ಮಣ್, ದೇವರಾಜ್, ಮೋಹನ್ಕುಮಾರ್ ಸೇರಹಿದಂತೆ ಇನ್ನೂ ಹಲವರು ಇದ್ದರು.