ಒತ್ತೆ ಹಣಕ್ಕಾಗಿ ಆಭರಣ ವ್ಯಾಪಾರಿ ಅಪಹರಣ
ಬೆಂಗಳೂರು: ಹಣಕ್ಕಾಗಿ ಆಭರಣ ವ್ಯಾಪಾರಿಯನ್ನು ಅಪಹರಿಸಿ 1 ಕೋಟಿಗೆ ಬೇಡಿಕೆ ಇಟ್ಟಿದ್ದ ದುಷ್ಕರ್ಮಿಗಳನ್ನು ಎಚ್‌ಎಎಲ್ ಪೊಲೀಸರು ಸಿನಿಮೀಯ ಶೈಲಿ ಕಾರ್ಯಾಚರಣೆ ನಡೆಸಿ ಬಂಧಿಸಿ, ಅಪಹೃತ ವ್ಯಕ್ತಿಯನ್ನು ರಕ್ಷಿಸಿದ್ದಾರೆ.
ದೊಡ್ಡನೆಕ್ಕುಂದಿಯಲ್ಲಿ ಸುಗುಣ ಆಭರಣ ಮಳಿಗೆ ನಡೆಸುತ್ತಿರುವ ರಾಮ್‌ದಯಾಳ್ (35) ಅಪಹರಣಗೊಂಡಿದ್ದ ವ್ಯಕ್ತಿ. ಗುರುವಾರ ರಾತ್ರಿ ಮಳಿಗೆ ಬಾಗಿಲು ಹಾಕಿದ ರಾಮ್‌ದಯಾಳ್ 10 ಗಂಟೆ ಸುಮಾರಿಗೆ ಮನೆಗೆ ಮರಳುತ್ತಿದ್ದರು. ಮಾರ್ಗ ಮಧ್ಯೆ ಕಾರಿನಲ್ಲಿ ಮಾರಕಾಸ್ತ್ರಗಳೊಂದಿಗೆ ಆಗಮಿಸಿದ ನಾಲ್ವರು ದುಷ್ಕರ್ಮಿಗಳು ಬೆದರಿಸಿ ಹಣ ನೀಡುವಂತೆ ರಾಮ್‌ದಯಾಳ್‌ಗೆ ಒತ್ತಾಯಿಸಿದ್ದಾರೆ. ತಮ್ಮ ಬಳಿ ಹಣ ಇಲ್ಲ ಎಂದಾಗ ಅವರನ್ನು ಕಾರಿನಲ್ಲಿ ಅಪಹರಿಸಿದ್ದಾರೆ.
ಅಲ್ಲಿಂದ ಕಾಡುಬೀಸನಹಳ್ಳಿ, ಬೆಳ್ಳಂದೂರು ಮತ್ತು ಕೆ.ಆರ್.ಪುರ ಮುಂತಾದ ಕಡೆ ಸುತ್ತಾಡಿಸಿದ್ದಾರೆ. ತಡರಾತ್ರಿ ರಾಮ್‌ದಯಾಳ್ ಕುಟುಂಬ ಸದಸ್ಯರ ದೂರವಾಣಿ ಸಂಖ್ಯೆ ಪಡೆದು ಕರೆ ಮಾಡಿ ಒಂದು ಕೋಟಿ ಹಣ ನೀಡಬೇಕು. ಇಲ್ಲದಿದ್ದರೆ ರಾಮ್‌ದಯಾಳ್ ಕೊಲೆ ಮಾಡುವುದಾಗಿ ಬೆದರಿಸಿದ್ದಾರೆ. ಆದರೆ, ಕುಟುಂಬ ಸದಸ್ಯರು ತಮ್ಮ ಬಳಿ ಅಷ್ಟು ಹಣ ಇಲ್ಲ ಎಂದಾಗ 50 ಲಕ್ಷ, 20, 10 ಕೇಳಿ ಕೊನೆಗೆ 2 ಲಕ್ಷಕ್ಕೆ ಒಪ್ಪಿಕೊಂಡಿದ್ದಾರೆ. ಹಣವನ್ನು ಅವಲಹಳ್ಳಿ ಸೇತುವೆ ಬಳಿ ತರಬೇಕು. ಪೊಲೀಸರಿಗೆ ತಿಳಿಸಿದರೆ ರಾಮ್‌ದಯಾಳ್ ಕೊಲೆ ಮಾಡುವುದಾಗಿ ಬೆದರಿಸಿದ್ದರು.
ಕ್ಷಿಪ್ರ ಕಾರ್ಯಾಚರಣೆ
ಅಪಹರಣ ವಿಚಾರವನ್ನು ರಾಮ್‌ದಯಾಳ್ ಸಹೋದರ ದೀನದಯಾಳ್ ಎಚ್‌ಎಎಲ್ ಪೊಲೀಸರಿಗೆ ತಿಳಿಸಿದ್ದರು. ಕೂಡಲೇ ಕಾರ್ಯಾಚರಣೆಗೆ ಇಳಿದ ಪೊಲೀಸರು ಮಫ್ತಿಯಲ್ಲಿ ವಿವಿಧ ತಂಡಗಳನ್ನು ಮಾಡಿಕೊಂಡು ಆರೋಪಿಗಳ ಬಂಧನಕ್ಕೆ ಮುಂದಾದರು.
ದುಷ್ಕರ್ಮಿಗಳು ಸೂಚಿಸಿದಂತೆ ಅವಲಹಳ್ಳಿ ಸೇತುವೆ ಬಳಿ ಬಂದ ಕುಟುಂಬ ಸದಸ್ಯರು ದುಷ್ಕರ್ಮಿಗಳೊಂದಿಗೆ ಮಾತನಾಡಿದ್ದಾರೆ. ಆಗ, ಹಣವನ್ನು ಸೇತುವೆ ಮೇಲಿಂದ ಕೆಳಗೆ ಬಿಸಾಡುವಂತೆ ದುಷ್ಕರ್ಮಿಗಳು ಹೇಳಿದ್ದಾರೆ. ಸೂಟ್‌ಕೇಸ್ ಕೆಳಗೆ ಬಿಸಾಡುತ್ತಿದ್ದಂತೆ ಹಣವನ್ನು ಎತ್ತಿಕೊಳ್ಳಲು ದುಷ್ಕರ್ಮಿಗಳು ಮುಂದಾದಾಗ ಪೊಲೀಸರು ಅವರನ್ನು ಬಂಧಿಸಲು ಹೋಗಿದ್ದಾರೆ. ಈ ವೇಳೆ ಮೂವರು ಕತ್ತಲಲ್ಲಿ ಸ್ಥಳದಿಂದ ಪರಾರಿಯಾಗಿದ್ದಾರೆ.
ಆದರೆ, ಸ್ವಲ್ಪ ದೂರದಲ್ಲಿ ರಾಮ್‌ದಯಾಳ್ ಅವರನ್ನು ಕಾರಿನಲ್ಲಿ ಕೂರಿಸಿಕೊಂಡು ಕಾಯುತ್ತಿದ್ದ ಅಪಹರಣಕಾರ ಮಧುಕುಮಾರ್ (25) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಕಾರಿನಲ್ಲಿದ್ದ ರಾಮ್‌ದಯಾಳ್ ಅವರನ್ನು ರಕ್ಷಿಸಿದ್ದಾರೆ.
ಕೋಲಾರ ಮೂಲದ ಆರೋಪಿ ಮಧುಕುಮಾರ್ ಬಾರ್‌ಟೆಂಡರ್ ಆಗಿ ಕೆಲಸ ಮಾಡುತ್ತಿದ್ದ. ಶೀಘ್ರ ಹಣ ಸಂಪಾದಿಸಲು ಸ್ನೇಹಿತರನ್ನು ಕಟ್ಟಿಕೊಂಡು ಶ್ರೀಮಂತರ ಅಪಹರಣ ಮಾಡುವ ಯೋಜನೆ ರೂಪಿಸಿದ್ದ.
ಕೋಲಾರದಿಂದ ಸ್ನೇಹಿತರೊಂದಿಗೆ ಕಾರಿನಲ್ಲಿ ಬಂದ ಮಧು, ಹಣವಂತರ ಹುಡುಕುತ್ತಿದ್ದಾಗ ರಾಮ್‌ದಯಾಳ್ ಸರಿಯಾದ ವ್ಯಕ್ತಿ ಎಂದು ಗುರುತಿಸಿದ್ದಾರೆ. ಅಪಹರಿಸುವ ಮುನ್ನ ಕಳೆದ ಕೆಲ ದಿನಗಳಿಂದ ರಾಮ್‌ದಯಾಳ್ ಚಲನವಲನಗಳ ಬಗ್ಗೆ ಮಾಹಿತಿ ಸಂಗ್ರಹಿಸಿದ್ದರು ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ.
ನಾಪತ್ತೆಯಾಗಿರುವ ಉಳಿದ ಮೂವರ ಬಗ್ಗೆ ಮಾಹಿತಿ ಸಿಕ್ಕಿದ್ದು, ಶೀಘ್ರದಲ್ಲೇ ಬಂಧಿಸುವುದಾಗಿ ಡಿಸಿಪಿ ಟಿ.ಡಿ.ಪವಾರ್ ತಿಳಿಸಿದರು.