ಜಲಮೂಲ ಸ್ವಚ್ಛಗೊಳಿಸಿ, ಬರ ಅಳಿಸಿ ಬಂಗಾರಪೇಟೆ(ಪಾಲಾರ್ ವೇದಿಕೆ)
ನಮ್ಮ ಕೆರೆ ಕುಂಟೆ, ನದಿಗಳನ್ನು ಸ್ವಚ್ಛ ಮಾಡಿಕೊಳ್ಳುವ ಮೂಲಕ ನೀರಿನ ಮೂಲಗಳನ್ನು ಹೆಚ್ಚಿಸಿಕೊಳಬೇಕು. ಆಗ ಮಾತ್ರ ನಮಗೆ ಹತ್ತು ವರ್ಷದಲ್ಲಿ ನೀರು ಸಿಗುತ್ತದೆ. ಇಲ್ಲದೆ ಹೋದರೆ ಮರಳು ಭೂಮಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ರಾಜ್ಯ ಕರ್ನಾಟಕ ಜಾನಪದ ಅಕಾಡಿಮೆ ಅಧ್ಯಕ್ಷ ಹಾಗೂ 4ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಪಿಚ್ಚಹಳ್ಳಿ ಶ್ರೀನಿವಾಸ್ ಹೇಳಿದರು.
ಬೇತಮಂಗಲ ಗ್ರಾಮದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಬೇತಮಂಗಲ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಸಹಕಾರದೊಂದಿಗೆ ಏರ್ಪಡಿಸಿದ್ದ 4ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದರು. 5 ವರ್ಷಗಳಿಗೊಮ್ಮೆ ಬರುವ ಚುನಾವಣೆಗಳ ಸಂದರ್ಭದಲ್ಲಿ ಶಾಶ್ವತ ನೀರಾವರಿ ಬಗ್ಗೆ ಮಾತನಾಡಿ ಆಶ್ವಾಸನೆ ನೀಡುತ್ತಾರೆ. ಆದರೆ, ಜಾರಿಗೆ ಅದರ ಸಾಧಕ ಬಾಧದಕಗಳನ್ನು ಯೋಚಿಸುವುದಿಲ್ಲ.
ಇದರ ಬದಲಿಗಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಬೆಟ್ಟದಿಂದ ಸಾಕಷ್ಟು ನೀರು ಪೋಲಾಗಿ ಆಂಧ್ರಕ್ಕೆ ಹೋಗುತ್ತದೆ. ಆದುದರಿಂದ ನಮ್ಮ ಕೆರೆ, ಕುಂಟೆಗಳಿಗೆ ಬೇರೆ ಜಿಲ್ಲೆಗಳಿಂದ ನೀರನ್ನು ತರುವುದು ಅಷ್ಟು ಸುಲಭದ ವಿಷಯವಲ್ಲ. ಆದ್ದರಿಂದ ನಮ್ಮ ಊರಿನ ಬಾವಿ, ನದಿ ಕಾಲುವೆಗಳನ್ನು ಸ್ವಚ್ಛಮಾಡಿಕೊಂಡು ಉಳಿಸಿ ಬೆಳೆಸಿಕೊಳ್ಳುವ ಕೆಲಸ ಮಾಡಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಪಾಲಾರ್ ಉತ್ಸವ ಮಾಡುವ ಆಸೆ ನನಗೂ ಇದೆ ಇದನ್ನು ಮುಂದಿನ ದಿನಗಳಲ್ಲಿ ತಪ್ಪದೇ ಮಾಡಲಾಗುವುದೆಂದರು. ನೆಲದ ಮೂಲ ಸಂಸ್ಕೃತಿಯನ್ನು ಜನರಿಗೆ ತಲುಪಿಸುವ ಕೆಲಸ ಮಾಡುತ್ತೀದ್ದೇನೆ. ನನ್ನನ್ನು ಗುರ್ತಿಸಿ ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡಿದಕ್ಕೆ ಅಭಿನಂದನೆ ಎಂದರು.
ಹಾಡು ಹಾಡಿದರು: ಪ್ರತಿ ವಿಷಯವನ್ನು ಪ್ರಸ್ತಾಪ ಮಾಡುವಾಗ ಜನಪದ ಶೈಲಿಯಲ್ಲಿ ಹಾಡುಗಳನ್ನು ಹಾಡಿ ಕನ್ನಾಡಾಭಿಮಾನಿಗಳಿಗೆ ಸಿಹಿ ಊಣಿಸಿದರು. ಮೊದಲಿಗೆ ಶರಣು ಶರಣಯ್ಯ, ಗುರುವೇ ನಿನ್ನಾಟವನ್ನು ಬಲ್ಲವರ್ಯಾರು, ಬಿದುರು ನೀನಾರಿಗಲ್ಲದವಳು, ಭಿನ್ನ ಭೇದವ ಮಾಡದಿರಿ ಎಂದು ಜನಪದ ಹಾಡು ಹಾಡಿದರು.
ಭವನ ನಿರ್ಮಿಸಲು ಕೈಜೋಡಿಸಿ
ಬಂಗಾರಪೇಟೆ: ಗ್ರಾಮೀಣ ಪ್ರದೇಶದ ಜನರಿಗೆ ಸಾಹಿತ್ಯದ ಬಗ್ಗೆ ಅಭಿರುಚಿ ಮೂಡಿಸಲು ಸಾಹಿತ್ಯ ಪರಿಷತ್ ಶ್ರಮಿಸುತ್ತಿದೆ. ಜನಪ್ರತಿನಿಧಿಗಳು ಇದಕ್ಕೆ ಪೂರಕವಾಗಿ ಹೋಬಳಿ ಮಟ್ಟದಲ್ಲಿ ಸಾಹಿತ್ಯ ಭವನ ನಿರ್ಮಿಸಲು ಕೈಜೋಡಿಸಬೇಕು ಎಂದು ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಜೆ.ಜಿ.ನಾಗರಾಜ್ ಹೇಳಿದರು.
ತಾಲೂಕಿನ ಬೇತಮಂಗಲ ಗ್ರಾಮೀಣ ಪ್ರೌಢಶಾಲೆಯ ಆವರಣದಲ್ಲಿ ಪಾಲಾರ್ ವೇದಿಕೆಯಲ್ಲಿ ಏರ್ಪಡಿಸಿದ್ದ 4ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಕನ್ನಡ ಭಾಷೆಯಲ್ಲಿ ಐಎಎಸ್ ಪರೀಕ್ಷೆ ಬರೆದು ಕರ್ನಾಟಕ ರಾಜ್ಯಕ್ಕೆ ಮೊದಲನೇ ರಾಂಕ್ ಪಡೆದ ಗುರುದತ್ತ ಹೆಗಡೆ ಅವರ ಸಾಧನೆಯನ್ನು ಅವರ ಪ್ರಶಂಸಿದರು. ಗ್ರಾಮೀಣ ಭಾಗದಲ್ಲಿ ಸಮ್ಮೇಳನವನ್ನು ಆಯೋಜಿಸಿದ ಹೋಬಳಿ ಘಟಕ ಹಾಗೂ ತಾಲೂಕು ಘಟಕವನ್ನು ಅಭಿನಂದಿಸಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಆರ್.ಅಶ್ವತ್ಥ, ಜಿಲ್ಲಾ ಕಸಾಪ ಕಾರ್ಯದರ್ಶಿ ಎ.ಅಶ್ವತ್ಥ ರೆಡ್ಡಿ ಆಶಯ ನುಡಿ ಆಡಿದರು. ವೇದಿಕೆಯಲ್ಲಿ ಗ್ರಾಪಂ ಅಧ್ಯಕ್ಷೆ ಗೋವಿಂದಮ್ಮ, ಬೇತಮಂಗಲ ಹೋಬಳಿ ಕಸಾಪ ಅಧ್ಯಕ್ಷ ಎಲ್.ಎ. ವಿಜಯಕುಮಾರ್, ನಾಗನಂದ ಕೆಂಪರಾಜ್, ವೆಂಕಟಮುನಿಯಪ್ಪ, ಬಾಲಕೃಷ್ಮೇಗೌಡ, ಸಿ.ಅಪ್ಪಯ್ಯಗೌಡ, ಶ್ರೀಹರಿ, ರಾಜಗೋಪಾಲಗೌಡ, ಚಿನ್ನಿವೆಂಕಟೇಶ್, ಶ್ಯಾಮಲಾ, ನಿಕಟಪೂರ್ವ ಅಧ್ಯಕ್ಷ ಕೋಗಿಲಹಳ್ಳಿ ಕೃಷ್ಣಪ್ಪ, ಜೆ.ಜಿ.ವಿಶ್ವನಾಥ್, ಶಂಕರಪ್ಪ, ಉಷಾ, ವೀರ ವೆಂಕಟಪ್ಪ, ಮದುಸೂಧನ್, ಕೃಷ್ಣಪ್ಪ, ಯರ್ರಿಸ್ವಾಮಿ, ಜನಾರ್ದನ, ಮುನಿವೆಂಕಟೇಗೌಡ ಸೇರಿ ಮೊದಲಾದವರು ಇದ್ದರು.
ಪುಸ್ತಕಗಳ ಬಿಡುಗಡೆ
ಕೋಗಿಲಹಳ್ಳಿ ಕೃಷ್ಣಪ್ಪ ಅವರ 'ಕವಿಗಳ ಕೈಪಿಡಿ' ಪುಸ್ತಕವನ್ನು ಮಾಜಿ ಶಾಸಕ ವೈ ಸಂಪಂಗಿ ಬಿಡುಗಡೆ ಮಾಡಿ ಮಾತನಾಡಿ, 'ಕನ್ನಡಿಗರಾದ ನಾವು ಪ್ರತಿ ದಿನ ಕನ್ನಡ ಪತ್ರಿಕೆಗಳನ್ನು, ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ತಾಳ್ಮೆ ಸಹನೆ ಗುಣಗಳನ್ನು ಬೆಳೆಸಿಕೊಳ್ಳಬೇಕು. ಗಡಿಭಾಗದಲ್ಲಿ ಕನ್ನಡವನ್ನು ಮಾತೃಭಾಷೆಯಾಗಿ ಉಳಿಸಿ ಬೆಳೆಸಬೇಕಾಗಿದೆ ಎಂದರು.
ಕವಿ ಕ.ಚ.ಕೃಷ್ಣಪ್ಪ ಬರೆದಿರುವ ನನ್ನ ಜನ, ಕಿಡಿನುಡಿ ಪುಸ್ತಕವನ್ನು ಬಂಗಾರಪೇಟೆ ಕನ್ನಡ ಸಂಘದ ಅಧ್ಯಕ್ಷ ಪಲ್ಲವಿ ಮಣಿ ಬಿಡುಗಡೆ ಮಾಡಿದರು. ಕವಿ ಮಂಜು ಕನ್ನಿಕಾ ಬರೆದಿರುವ ದಿಂಡಿಯನ್ ಗರ್ಲ್, ಮತ್ತೆ ನೀ ಜಾರದಿರು, ಕಾನೂನು ಲೇಖನಗಳು ಪುಸ್ತಕವನ್ನು ಕ್ಷೇತ್ರ ಶಿಕ್ಷಣಾದಿಕಾರಿ ಕೆ.ಜಯರಾಜ್ ಲೋಕಾರ್ಪಣೆ ಮಾಡಿದರು.
ನೆನಪಿನ ಕಾಣಿಕೆ ಬಿಡುಗಡೆ
ಸಾಹಿತ್ಯ ಕರಗ ನೆನಪಿನ ಕಾಣಿಕೆಯನ್ನು ಜಿಪಂ ಸದಸ್ಯ ಆ.ಮು.ಲಕ್ಷ್ಮೀನಾರಾಯಣ ಬಿಡುಗಡೆ ಮಾಡಿ ಮಾತನಾಡಿ ಪಾಲಾರ್ ಉತ್ಸವ ಮಾಡುವ ಅಭಿಲಾಷೆ ಇದ್ದು ಸಮ್ಮೇಳನಾಧ್ಯಕ್ಷರು ಮನಸ್ಸು ಮಾಡಿ ಈ ಸಾಳಿನಿಂದ ಪಾಲಾರ್ ಉತ್ಸವ ಮಾಡಲು ಸಹಕಾರ ನೀಡಬೇಕೆಂದು ಮನವಿ ಮಾಡಿದರು.