ಹಸಿರು ಗ್ರಾಮಗಳಿಂದ ಪರಿಸರ ರಕ್ಷಣೆ
ಗೌರಿಬಿದನೂರು: ಹಸಿರು ಶಾಲೆ ಮತ್ತು ಹಸಿರು ಗ್ರಾಮಗಳು ಹೆಚ್ಚಾದಾಗ ಮಾತ್ರ ಪರಿಸರ ಹಾಗೂ ಅಂತರ್ಜಲ ಉಳಿಸಲು ಸಾಧ್ಯ ಎಂದು ಜಲತಜ್ಞ ಹಾಗೂ ರಾಜ್ಯ ಪ್ರಶಸ್ತಿ ವಿಜೇತ ಪರಿಸರ ಪ್ರೇಮಿ ಕೆ. ನಾರಾಯಣಸ್ವಾಮಿ ತಿಳಿಸಿದರು.
ಗೌರಿಬಿದನೂರು ತಾಲೂಕು ನಕ್ಕಲಹಳ್ಳಿ ಗ್ರಾಮದಲ್ಲಿ ಅವರು ಶಾಲಾ ದಾಖಲಾತಿ ಆಂದೋಲನ ಹಾಗೂ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪರಿಸರವನ್ನು ಉಳಿಕೆ ಹೊಣೆಗಾರಿಕೆ ಬಗ್ಗೆ ಮುಂದಿನ ಪೀಳಿಗೆಗೆ ಅರಿವು ಮೂಡಿಸಬೇಕು. ಈ ಶಾಲೆಗೆ ಈಗಾಗಲೇ ಹಸಿರು ಶಾಲೆ ಪ್ರಶಸ್ತಿ ಬಂದಿದೆ ಗ್ರಾಮವೂ ಹಸಿರುಮಯವಾದಾಗ ನಮ್ಮ ಉದ್ದೇಶ ಸಾರ್ಥಕವಾಗುತ್ತದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಬೈಯ್ಯಪ್ಪರೆಡ್ಡಿ, ಶಾಲೆಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ, ವಿದ್ಯಾರ್ಥಿಗಳಿಗೆ ಹಲವಾರು ಬಗೆಯ ಸವಲತ್ತುಗಳನ್ನು ನೀಡುತ್ತಿದ್ದು ಇದನ್ನು ಬಳಿಸಿಕೊಂಡು ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆಯಬೇಕು ಹಾಗೂ ಪರಿಸರದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದರು.
ಬಿಆರ್ಪಿ ಪದ್ಮಪ್ರಭ, ಎಸ್ಡಿಎಂಸಿ ಅಧ್ಯಕ್ಷ ಚಂದ್ರಾರೆಡ್ಡಿ, ನಿವೃತ್ತ ಶಿಕ್ಷಕ ನಾರಾಯಣಪ್ಪ, ಹಾಲಿ ಶಿಕ್ಷಕ ಮಲ್ಲೇಶ್ ಗೌಡ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರಾದ ನೂರುಲ್ಲಾ ಸಾಬ್, ಥಿಯಾಸಪಿಕಲ್ ಸೊಸೈಟಿಯ ಅಶ್ವತ್ಥರೆಡ್ಡಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಮಕ್ಕಳಿಗೆ ಪಠ್ಯಪುಸ್ತಕಗಳನ್ನು ವಿತರಿಸಲಾಯಿತು.